ಗೌರಿ ಲಂಕೇಶ್ ಹತ್ಯೆ ಪ್ರಕರಣ : ಮೂವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು
ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಅಮಿತ್ ದಿಗ್ವೇಕರ್, ಕೆ.ಟಿ. ನವೀನ್ ಕುಮಾರ್, ಸುರೇಶ್ ಎಚ್.ಎಲ್. ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಆದೇಶಿಸಿದೆ.
ಕೋರ್ಟ್ ಹಲವು ಷರತ್ತು ವಿಧಿಸಿದ್ದು ಈ ಷರತ್ತು ಪೂರ್ಣಗೊಂಡ ಬಳಿಕ ಮಂಗಳವಾರ ಸಂಜೆ ಅಥವಾ ಬುಧವಾರ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಕಳೆದ 6 ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ಪ್ರಕರಣದ ವಿಚಾರಣೆ ಮುಗಿಯದೇ ಇರುವುದರಿಂದ ದೀರ್ಘ ಕಾಲ ಜೈಲಿನಲ್ಲಿಡುವಂತಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಹಿರಿಯ ವಕೀಲ ಅರುಣ್ ಶ್ಯಾಮ್, ಮಧುಕರ್ ದೇಶಪಾಂಡೆ, ಬಸವರಾಜ ಸಪ್ಪಣ್ಣವರ್ ಆರೋಪಿಗಳ ಪರ ವಾದ ಮಂಡಿಸಿದರು. ಈ ಪ್ರಕರಣದಲ್ಲಿ ಈ ಹಿಂದೆ ಎ -11 ಮೋಹನ್ ನಾಯಕ್‌ಗೆ ಮಾತ್ರ ಜಾಮೀನು ಮಂಜೂರಾಗಿತ್ತು.
ಇಡೀ ಪ್ರಕರಣದಲ್ಲಿ ಜಾಮೀನು ಪಡೆದ ಮೊದಲ ಆರೋಪಿ ಎಂದರೆ ಅದು ಮೋಹನ್ ನಾಯಕ್ ಎನ್ನುವ ವ್ಯಕ್ತಿ. 2023ರ ಡಿಸೆಂಬರ್‌ನಲ್ಲಿ 11ನೇ ಆರೋಪಿಯಾಗಿರುವ ಎನ್. ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಕೊಲೆ ಸಂಚು ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಮೋಹನ್, ಇದೀಗ ಶರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಆದರೆ, ಆರೋಪಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಆರೋಪಿ ಮೋಹನ್ ನಾಯಕ್ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೋಹನ್ ನಾಯಕ್ 11ನೇ ಆರೋಪಿಯಾಗಿದ್ದು, ಕೊಲೆಗೆ ಸಂಚು ರೂಪಿಸಿದ ಆರೋಪ ಆತನ ಮೇಲಿದೆ. ಆತನನ್ನು 2018ರ ಜುಲೈ 18ರಂದು ಬಂಧಿಸಲಾಗಿತ್ತು. ಆರೋಪಿ ಅಂದಿನಿಂಲೂ ನ್ಯಾಯಾಂಗ ಬಂಧನದಲ್ಲಿದ್ದ. ಕೊನೆಗೆ ಜಾಮೀನು ಪಡೆದು ಹೊರಗಿದ್ದಾನೆ.
ಪ್ರಕರಣದ ಹಿನ್ನಲೆ
2017ರ ಸೆಪ್ಟೆಂಬರ್ 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರು ತಮ್ಮ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದರು. ಮನೆಯ ಗೇಟ್ ದಾಟಿಕೊಂಡು ಒಳನಡೆಯುತ್ತಿ್ದಾಗ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದು ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಹಂತಕರಿಗೆ ಹಾಗೂ ಅವರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಮಾಡಿ ಶಿಕ್ಷೆ ನೀಡಬೇಕು ಎಂದು ರಾಜ್ಯಾದ್ಯಂತ ಹೋರಾಟಗಳು ನಡೆದಿದ್ದವು.
2023ರ ಸೆಪ್ಟೆಂಬರ್ 13ರಂದು ಕರ್ನಾಟಕ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ಬ್ಯಾಲಿಸ್ಟಿಕ್ ವರದಿ ಪ್ರಕಾರ, ''2015ರಲ್ಲಿ ಸಾಹಿತಿ ಎಂ ಎಂ ಕಲಬುರ್ಗಿ ಅವರನ್ನು ಕೊಲ್ಲಲು ಬಳಸಿದ ಬಂದೂಕಿನಿಂದಲೇ ಗೌರಿ ಲಂಕೇಶ್ ಹತ್ಯೆಯಾಗಿದೆʼʼ ಎಂದು ಹೇಳಲಾಗಿದೆ. ಹಾಗಾಗಿಯೇ ಗೌರಿ ಲಂಕೇಶ್ ಮತ್ತು ಡಾ.ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಈ ಎರಡೂ ಹತ್ಯೆ ಪ್ರಕರಣಗಳು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲೇ ನಡೆದಿದ್ದವು. ಎರಡು ಪ್ರಕರಣಗಳ ತನಿಖೆಗಾಗಿ ಅವರು ಎಸ್ಐಟಿ ರಚನೆ ಮಾಡಿದ್ದರು. ತನಿಖೆ ಕೂಡ ತೀವ್ರಗತಿಯಲ್ಲಿ ನಡೆಸಲಾಗಿತ್ತು. ವಿಚಾರವಾದಿಗಳಿಬ್ಬರ ಹತ್ಯೆಯ ಹಿಂದೆ ಹಿಂದೂ ಮೂಲಭೂತವಾದಿ ಬಹುರಾಜ್ಯ ಜಾಲ ಕೆಲಸ ಮಾಡಿರುವುದನ್ನು ಬೇಧಿಸಿದ್ದ ಎಸ್ ಐಟಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.
ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಒಟ್ಟು 18 ಆರೋಪಿಗಳ ಪೈಕಿ 17 ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ವಿಕಾಸ್ ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣದ ಕುರಿತು ತನಿಖೆ ನಡೆಸಿದ ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ 1ನೇ ಸೆಷನ್ಸ್ ಕೋರ್ಟಿಗೆ ಒಂದು ವರ್ಷದ ಬಳಿಕ 500ಕ್ಕೂ ಹೆಚ್ಚು ಸಾಕ್ಷಿಗಳು ಹಾಗೂ ಒಂದು ಸಾವಿರಕ್ಕೂ ಹೆಚ್ಚು ಪುರಾವೆಗಳನ್ನು ದಾಖಲಿಸಿರುವ ಸುಮಾರು 10 ಸಾವಿರ ಪುಟಕ್ಕೂ ಹೆಚ್ಚಿನ ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಹತ್ಯೆಯ ಪ್ರಮುಖ ರೂವಾರಿ ಅಮೋಲ್ ಕಾಳೆ. ಪರಶುರಾಮ್ ವಾಗ್ಮೋರೆ ಗುಂಡು ಹಾರಿಸಿದ್ದರೆ, ಬೈಕ್ ಚಲಾಯಿಸಿದ ಆರೋಪ ಗಣೇಶ್ ಮಿಸ್ಕಿನ್ ಮೇಲಿದೆ.
2022ರ ಜೂನ್‌ನಿಂದ ವಿಚಾರಣೆ ಆರಂಭವಾಗಿದೆ, ಆರೋಪಪಟ್ಟಿಯಲ್ಲಿ 520 ಸಾಕ್ಷಿ ಹಾಗೂ 1200 ಪುರಾವೆಗಳಿದ್ದು, ಅವುಗಳಲ್ಲಿ 200 ಸಾಕ್ಷಿಗಳನ್ನು ಕೈಬಿಡಲಾಗಿದೆ. ಉಳಿದ 320 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳಬೇಕಾದರೆ ಸುಮಾರು ಎರಡರಿಂದ ಮೂರು ವರ್ಷ ಸಮಯ ತಗೆದುಕೊಳ್ಳುತ್ತದೆ. ಈಗಾಗಲೇ 6 ವರ್ಷ ಕಳೆದುಹೋಗಿದೆ.