ಡಿಸಿಎಂ ಸಂಧಾನ ಯಶಸ್ವಿ | ಕಸದ ವಾಹನ ಚಾಲಕರ ಮುಷ್ಕರ ವಾಪಸ್
ನಮ್ಮ ಸರ್ಕಾರ ಪೌರಾಡಳಿತ ಇಲಾಖೆ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಸಾಕಷ್ಟು ಪರಿಹಾರಗಳನ್ನು ನೀಡಿದೆ. ವಿಧಾನಮಂಡಲ ಅಧಿವೇಶನದ ಬಳಿಕ ನಿಮ್ಮ ಎಲ್ಲಾ ಸಂಘಟನೆಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಸ ಎತ್ತದೇ ಮಷ್ಕರ ನಡೆಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಕಸ ಸಂಗ್ರಹಣೆ ವಾಹನಗಳ ಚಾಲಕರು ಮತ್ತು ಸಹಾಯಕರೊಂದಿಗೆ ಮಂಗಳವಾರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತುಕತೆ ನಡೆಸಿದರು.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾನಿರತರನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಸ ಸಂಗ್ರಹಿಸುವ ಹಾಗೂ ವಿಲೇವಾರಿ ಮಾಡುವ ವಾಹನಗಳ ಚಾಲಕರು ಮತ್ತು ಸಹಾಯಕರ ಅಹವಾಲುಗಳನ್ನು ಆಲಿಸಿದರು.
ಮನೆ ಮನೆಗಳಿಂದ ಕಸ ಸಂಗ್ರಹಿಸುವ ಹಾಗೂ ವಿಲೇವಾರಿ ಮಾಡುವ ವಾಹನಗಳ ಚಾಲಕರು ಮತ್ತು ಸಹಾಯಕರು ತಮ್ಮ ಸೇವೆಯನ್ನು ಬಿಬಿಎಂಪಿಯಲ್ಲಿ ಕಾಯಂ ವಿಲೀನ ಮಾಡಿಕೊಳ್ಳುವಂತೆ ಆಗ್ರಹಿಸಿ ಸೋಮವಾರದಿಂದ ಕರ್ನಾಟಕ ಸಂರಕ್ಷಣಾ ಟ್ರೇಡ್ ಯೂನಿಯನ್ ಸಂಘಟನೆಯಡಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ಮಂಗಳವಾರ ಪ್ರತಿಭಟನಾಕಾರರನ್ನು ಭೇಟಿಯಾದ ಡಿಸಿಎಂ, ಪೌರಕಾರ್ಮಿಕರ ಬಗ್ಗೆ ಸಹಾನುಭೂತಿ ಇದೆ, ವಿಧಾನಮಂಡಲ ಅಧಿವೇಶನದ ನಂತರ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನಮ್ಮ ಸರ್ಕಾರ ಪೌರಾಡಳಿತ ಇಲಾಖೆ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಸಾಕಷ್ಟು ಪರಿಹಾರಗಳನ್ನು ನೀಡಿದೆ. ವಿಧಾನಮಂಡಲ ಅಧಿವೇಶನದ ಬಳಿಕ ನಿಮ್ಮಲ್ಲಿರುವ ಎಲ್ಲಾ ಸಂಘಟನೆಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಡಿಕೆ ಶಿವಕುಮಾರ್ ಅವರು ಸ್ಪಷ್ಟ ಭರವಸೆ ನೀಡಿದ ಬಳಿಕ ಧರಣಿಯನ್ನು ಹಿಂಪಡೆದಿದ್ದಾರೆ. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೋರಾಟದಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿತ್ತು. ಸಾವಿರ ಟನ್ಗೂ ಹೆಚ್ಚಿನ ಕಸ ವಿಲೇವಾರಿಯಾಗಿರಲಿಲ್ಲ. ಬುಧವಾರದಿಂದ ಕಸ ಸಂಗ್ರಹ ವಿಲೇವಾರಿ ಕೆಲಸ ಆರಂಭಿಸುವುದಾಗಿ ಮುಖಂಡರು ಹೇಳಿದ್ದಾರೆ.
1976ರಲ್ಲಿ ಸಲ್ಲಿಸಿದ ಐಪಿಡಿ ಸಾಲಪ್ಪ ಸಮಿತಿ ವರದಿ ಅನುಷ್ಠಾನಗೊಳಿಸುವುದು ಪ್ರತಿಭಟನಾನಿರತ ಕಾರ್ಮಿಕರ ಬೇಡಿಕೆಗಳಲ್ಲಿ ಒಂದಾಗಿದೆ. 55 ವರ್ಷ ತುಂಬಿದ ಪೌರಕಾರ್ಮಿಕರ ಸೇವೆಯನ್ನು ಅನುಭವದ ಆಧಾರದಲ್ಲಿ ಕಾಯಂ ವಿಲೀನ ಮಾಡಬೇಕು. 500 ಜನರಿಗೆ ಒಬ್ಬ ಪೌರಕಾರ್ಮಿಕರಂತೆ 32 ಸಾವಿರ ಪೌರಕಾರ್ಮಿಕರನ್ನು ನೇರ ಪಾವತಿಯಡಿ ಹೊಸದಾಗಿ ಕೆಲಸಕ್ಕೆ ನೇಮಿಸಬೇಕು ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಮತ್ತು ರಾಹುಲ್ ಗಾಂಧಿಯವರು ನೀಡಿದ ಭರವಸೆಯಂತೆ ಚಾಲಕರು, ಸಹಾಯಕರು, ಲೋಡರ್ಸ್‌ಗಳ ಸೇವೆಯನ್ನು ಕಾಯಂ ವಿಲೀನಗೊಳಿಸಬೇಕು ಎಂಬ ಬೇಡಿಕೆ ಇದೆ.
"ಪ್ರಸ್ತುತ ಬಿಬಿಎಂಪಿ ನಿರ್ವಹಿಸುವ ಗುತ್ತಿಗೆದಾರರ ಮೂಲಕ ಕೆಲಸ ಮಾಡುತ್ತಿರುವ ಈ ಕಾರ್ಮಿಕರನ್ನು ಪೌರಕಾರ್ಮಿಕರು ಎಂದು ವರ್ಗೀಕರಿಸಲಾಗಿಲ್ಲ, ಅವರಿಗೆ ಉದ್ಯೋಗ ಭದ್ರತೆ ಅಥವಾ ಸಾಕಷ್ಟು ಪ್ರಯೋಜನಗಳಿಲ್ಲ. ಗ್ಲೌಸ್, ಸಮವಸ್ತ್ರ, ಮಾಸ್ಕ್ ಇಲ್ಲದೇ ದಿನವಿಡೀ ದುಡಿಯುವ ನಮಗೆ ಮಾಸಿಕ 9 ಸಾವಿರದಿಂದ 15 ಸಾವಿರ ರೂ. ಆದಾಯವಿದೆ, ರಜೆ ಹಾಕಿದರೆ ಸಂಬಳ ಕಡಿತಗೊಳಿಸಲಾಗುತ್ತಿದೆ" ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು.