ಕಸದ ಸಮಸ್ಯೆಗೆ ಇಲ್ಲ ಶಾಶ್ವತ ಪರಿಹಾರ | ಉದ್ಯಾನನಗರಿಯಲ್ಲಿ ಕಸವೂ ಜೀವಕಂಟಕ!
x
ಕಸದ ಸಮಸ್ಯೆಗೆ ಜಾಗೃತಿ ಮೂಡಿಸಬೇಕು.

ಕಸದ ಸಮಸ್ಯೆಗೆ ಇಲ್ಲ ಶಾಶ್ವತ ಪರಿಹಾರ | ಉದ್ಯಾನನಗರಿಯಲ್ಲಿ ಕಸವೂ ಜೀವಕಂಟಕ!

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮತ್ತು ನಿರ್ವಹಣೆಗಾಗಿ ಬಿಬಿಎಂಪಿ ಪ್ರತಿ ವರ್ಷ ಬರೋಬ್ಬರಿ ಸಾವಿರ ಕೋಟಿ ಹಣ ಸುರಿಯುತ್ತಿದೆ. ಆದರೆ, ಹಾಗೆ ನೀರಿನಂತೆ ತೆರಿಗೆದಾರರ ಹಣ ಸುರಿದರೂ ನಗರದ ಕಸದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಅಡಿಗಡಿಗೂ ಉದಾಹರಣೆಗಳು ಸಿಗುತ್ತವೆ.


Click the Play button to hear this message in audio format

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮತ್ತು ನಿರ್ವಹಣೆಗಾಗಿ ಬಿಬಿಎಂಪಿ ಪ್ರತಿ ವರ್ಷ ಬರೋಬ್ಬರಿ ಸಾವಿರ ಕೋಟಿ ಹಣ ಸುರಿಯುತ್ತಿದೆ. ಆದರೆ, ಹಾಗೆ ನೀರಿನಂತೆ ತೆರಿಗೆದಾರರ ಹಣ ಸುರಿದರೂ ನಗರದ ಕಸದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಅಡಿಗಡಿಗೂ ಉದಾಹರಣೆಗಳು ಸಿಗುತ್ತವೆ.

ಮಹಾನಗರದ ಹಣ್ಣು-ತರಕಾರಿ ಮಾರುಕಟ್ಟೆಗಳು, ಬಸ್‌ ಮತ್ತು ರೈಲು ನಿಲ್ದಾಣಗಳು ಮತ್ತಿತರ ಜನನಿಭಿಡ ಪ್ರದೇಶಗಳು ಮಾತ್ರವಲ್ಲದೆ, ಫ್ಲೈಓವರ್‌, ಅಂಡರ್‌ ಪಾಸ್‌, ಖಾಲಿ ಸೈಟುಗಳು, ಜನವಸತಿ ಪ್ರದೇಶಗಳ ರಸ್ತೆ ತಿರುವುಗಳಲ್ಲಿ ಪ್ರತಿ ದಿನ ರಾಶಿ ರಾಶಿ ಕಸ ವಿಲೇವಾರಿಯಾಗದೇ ಬಿದ್ದಿರುವುದು, ಅದು ವಾಹನ ಸವಾರರು ಮತ್ತು ನಡೆದಾಡುವ ನಾಗರಿಕರ ಪಾಲಿಗೆ ಕಂಟಕಪ್ರಾಯವಾಗುವುದು ಸಾಮಾನ್ಯವಾಗಿದೆ.

ಕಸ ವಿಲೇವಾರಿಗೆ ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದರೂ, ಜನರು ಸರಿಯಾಗಿ ಸ್ಪಂದಿಸುತ್ತಿಲ್ಲ. ಮುಂಜಾನೆ ಅಥವಾ ಕತ್ತಲಾದ ಬಳಿಕ ರಸ್ತೆ ಬದಿ, ಕಾಲುವೆ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಬಿಸಾಡಿ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹವರನ್ನು ಹಿಡಿದು ದಂಡ ಹಾಕಲೆಂದೇ ನೇಮಕವಾಗಿರುವ ಮಾರ್ಷಲ್‌ಗಳು ಕೂಡ ಉಲ್ಲಂಘನೆಯ ಮೇಲೆ ಸರಿಯಾಗಿ ಕಣ್ಣಿಡುತ್ತಿಲ್ಲ. ಹಾಗಾಗಿ ರಸ್ತೆಯಂಚಲ್ಲಿ, ಮೂಲೆಗಳಲ್ಲಿ, ಮೇಲ್ಸೇತುವೆ, ಕೆಳಸೇತುವೆಗಳಲ್ಲಿ ರಾತ್ರೋರಾತ್ರಿ ಕಸ ರಾಶಿ ಬೀಳುವುದು, ಅಲ್ಲಿ ಬೀದಿ ನಾಯಿಗಳು ಮುತ್ತುವುದು, ವಾಹನ ಸವಾರರು, ಪಾದಚಾರಿಗಳು ನಾಯಿ ಕಡಿತಕ್ಕೆ ಒಳಗಾಗುವುದು, ಇಲ್ಲವೇ ನಾಯಿ ಹಾವಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಿದ್ದು ಗಾಯಗೊಳ್ಳುವುದು ನಗರದ ನಿತ್ಯದ ಸುದ್ದಿಯಾಗಿದೆ.

ಸಾಂಕ್ರಾಮಿಕ ರೋಗದ ಭೀತಿ

ಮನೆಯ ಕಸ, ತ್ಯಾಜ್ಯವನ್ನು ಕವರಿನಲ್ಲಿ ಕಟ್ಟಿ ದ್ವಿಚಕ್ರವಾಹನಗಳಲ್ಲಿ ಬಂದು ರಸ್ತೆಯ ಬದಿಯಲ್ಲಿ ಬಿಸಾಡುತ್ತಿದ್ದಾರೆ. ಕೋಳಿ, ಕುರಿ, ಮೀನು ಮುಂತಾದ ಮೀನು-ಮಾಂಸದಂಗಡಿಗಳ ತ್ಯಾಜ್ಯ ಕೊಳೆತು ದುರ್ವಾಸನೆ ಬೀರುತ್ತಿದೆ. ಇದರ ಜೊತೆಗೆ ಮದ್ಯದ ಖಾಲಿ ಬಾಟಲ್, ಪ್ಲಾಸ್ಟಿಕ್ ಕವರುಗಳನ್ನು ಎಲ್ಲೆಂದರಲ್ಲಿ ಬೀಸಾಕುವುದರಿಂದ ಜನರಿಗೆ ಸಮಸ್ಯೆ ಒಂದಡೆಯಾದರೆ ಕೊಳೆತ ತರಕಾರಿ, ಹಣ್ಣು, ಹೂವು, ಮಾಂಸದ ತುಂಡುಗಳನ್ನು ತಂದು ಸುರಿಯುವುದರಿಂದ ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾಂಕ್ರಮಿಕ ರೋಗದ ಭೀತಿ ಕೂಡ ಹೆಚ್ಚಾಗಿದೆ.

ರಾತ್ರಿ ಹೊತ್ತು ಕಸ ಎಸೆಯುವ ನಿವಾಸಿಗಳು

ನಗರದ ಬನಶಂಕರಿಯ 10ನೇ ಕ್ರಾಸ್‌ ರಸ್ತೆಯಗಳ ಇಕ್ಕೆಲ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಬಿಬಿಎಂಪಿಯ ಗಾಡಿ ನಿತ್ಯ ಕಸ ತೆಗೆದುಕೊಂಡು ಹೋಗಲು ಬರುತ್ತದೆ. ಆದರೂ ಜನರು ಗಾಡಿಗೆ ಕಸವನ್ನು ಕೊಡುವ ಬದಲು ರಾತ್ರಿ ಹೊತ್ತು ಕಸದ ಚೀಲವನ್ನು ತಂದು ರಸ್ತೆ ಬದಿಯಲ್ಲಿ ಬಿಸಾಡುವುದೇ ಪ್ರವೃತ್ತಿಯಾಗಿಬಿಟ್ಟಿದೆ. ಆ ರಸ್ತೆ ಪಕ್ಕದಲ್ಲಿಯೇ ಕೆಲವೊಂದು ಸ್ಟ್ರೀಟ್ ಫುಡ್‌ ಅಂಗಡಿಗಳಿವೆ. ಅಂಗಡಿಗಳ ವರೆಗೆ ಕಸವನ್ನು ಬಿಸಾಕುತ್ತಾರೆ. ಇದರಿಂದ ಆ ರಸ್ತೆಯಲ್ಲಿ ಹೋಗುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.

ಪಾಲಿಕೆಯ ಗಾಡಿಗೆ ಕಸ ನೀಡಲು ನಿರ್ಲಕ್ಷ

ಈ ಬಗ್ಗೆ ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಬನಶಂಕರಿ ನಿವಾಸಿ ಪ್ರವೀಣ್ ನಾಯರ್ ʻʻಬನಶಂಕರಿಯ ಈ ರಸ್ತೆಯಲ್ಲಿ ರಾತ್ರಿ ಹೊತ್ತು ರಸ್ತೆಯ ಎರಡು ಬದಿಯಲ್ಲಿ ಕಸ ತಂದು ಬೀಸಾಕುತ್ತಾರೆ. ಕಸದ ರಾಶಿ ರಸ್ತೆಗೇ ಹರಡುವುದರಿಂದ ಬೈಕ್‌, ಸ್ಕೂಟಿಯಲ್ಲಿ ಹೋಗುವುದು ಬಹಳ ಸಮಸ್ಯೆಯಾಗಿದೆ. ಈ ರಸ್ತೆಯ ಪಕ್ಕದಲ್ಲಿಯೇ ಜಿಲ್ಲಾ ಪಂಚಾಯತ್‌ ಕಟ್ಟಡ ಇದೆ, ಸರಕಾರಿ ಶಾಲೆ ಮತ್ತು ಹಾಸ್ಟೆಲ್‌ಗಳು ಕೂಡ ಇವೆ. ಇಷ್ಟು ಜನಸಂಖ್ಯೆ ಇರುವ, ಜನರು ಓಡಾಡುತ್ತಿರುವ ರಸ್ತೆಗಳಲ್ಲಿ ಈ ರೀತಿಯಾಗಿ ಕಸ ತ್ಯಾಜ್ಯಗಳನ್ನು ಬೀಸಾಡಿ ಹೋಗುವುದರಿಂದ ಇಲ್ಲಿ ನೆಲೆಸಿರುವವರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪಾಲಿಕೆಯ ಗಾಡಿಗಳು ನಿತ್ಯ ಬೆಳಗ್ಗೆ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತವೆ. ಆದರೆ, ನಿರ್ಲಕ್ಷ್ಯ ಹಾಗೂ ನಾನಾ ಕಾರಣಗಳಿಂದ ಕೆಲ ನಿವಾಸಿಗಳು ಗಾಡಿಗಳಿಗೆ ಕಸವನ್ನೇ ನೀಡುವುದಿಲ್ಲ. ಬದಲಿಗೆ ಇಲ್ಲಿ ಬಂದು ಕಸವನ್ನು ಬೀಸಾಕಿ ಹೋಗುತ್ತಾರೆ. ಇನ್ನು ಇಲ್ಲಿ ಡಂಪ್ ಆಗುವ ಕಸವನ್ನು ಬಿಬಿಎಂಪಿ ಕಸ ವಿಲೇವಾರಿ ಕಾರ್ಮಿಕರು ಎರಡು- ಮೂರು ದಿನಗಳಿಗೊಮ್ಮೆ ಬಂದು ಸ್ಪಚ್ಛತೆಗೊಳಿಸುತ್ತಾರೆ. ಅಷ್ಟರಲ್ಲಿ ರಸ್ತೆ ಪೂರ್ತಿ ಕಸ ತುಂಬಿ ಹೋಗಿರುತ್ತವೆ. ಈ ಬಗ್ಗೆ ಬಿಬಿಎಂಪಿ ಸರಿಯಾದ ಕ್ರಮ ಕೈಗೊಳ್ಳಬೇಕುʼʼ ಎನ್ನುತ್ತಾರೆ.

ತ್ಯಾಜ್ಯ ವಿಲೇವಾರಿ ಬಗ್ಗೆ ತಿಳಿವಳಿಕೆ ಇಲ್ಲ

ಜೆಪಿ ನಗರದ ನಿವಾಸಿ ಫನೇಶ್‌ ನಾರಾಯಣ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡುತ್ತಾ, ʼʼಜನರಿಗೆ ಮೊದಲನೆಯದಾಗಿ ತ್ಯಾಜ್ಯ ವಿಲೇವಾರಿ ಬಗ್ಗೆ ತಿಳಿವಳಿಕೆ ಸರಿಯಾಗಿಲ್ಲ. ತೇವ, ಒಣ, ಇ ತ್ಯಾಜ್ಯ ಮತ್ತು ನೈರ್ಮಲ್ಯ ತ್ಯಾಜ್ಯ ಯಾವುದು ಎಂದು ಎಲ್ಲರಿಗೂ ಅರ್ಥವಾಗುವುದಿಲ್ಲ. ಹಾಗಾಗಿ ಮೂಲದಲ್ಲಿ ಪ್ರತ್ಯೇಕಗೊಳಿಸುವುದು ನಡೆಯುತ್ತಿಲ್ಲ. ಬಿಬಿಎಂಪಿ ವಿಲೇವಾರಿ ತಂಡಗಳು ಉತ್ತಮ ವಾಹನಗಳನ್ನು ಹೊಂದಿಲ್ಲ. ಅವರು ಸಂಗ್ರಹಿಸಿದ ತ್ಯಾಜ್ಯದ 10 ಪ್ರತಿಶತವನ್ನು ರಸ್ತೆಯ ಮೇಲೆ ಚೆಲ್ಲುತ್ತಾರೆ .ಇದು ಬಹುತೇಕ ಖಾಲಿ ನಿವೇಶನಗಳು ಭೂಮಿ ತುಂಬಿ ಸಮೀಪದ ನಿವಾಸಿಗಳಿಗೆ ಸಮಸ್ಯೆ ತಂದೊಡ್ಡುತ್ತಿವೆʼʼ ಎಂದು ಹೇಳಿದರು.

ಇನ್ನು ಈ ಕಸವನ್ನು ರಸ್ತೆಗಳಲ್ಲಿ ಮಾತ್ರವಲ್ಲದೆ ಬೆಂಗಳೂರಿನ ನಗರದ ಮೇಲ್ಸೇತುವೆಗಳಲ್ಲಿ ತ್ಯಾಜ್ಯದ ಚೀಲಗಳನ್ನು ಎಸೆಯಲಾಗುತ್ತಿದ್ದು, ವಾಹನ ಸವಾರರ ಸಂಕಷ್ಟಕ್ಕೆ ಕಾರಣವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಮೇಲ್ಸೇತುವೆಗಳು ಡಂಪಿಂಗ್ ಯಾರ್ಡ್ಗಳಾಗಿ ಮಾರ್ಪಟ್ಟಿವೆ. ಫ್ಲೈಓವರ್ ರಾತ್ರಿ ಸಮಯದಲ್ಲಿ ಬಹುತೇಕ ಖಾಲಿ ಇರುವುದರಿಂದ ಕಸ ಎಸೆಯುವುದು ಸುಲಭವಾಗಿದೆ. ರಾತ್ರಿಯಲ್ಲಿ ಕಡಿಮೆ ಬೆಳಕು ಮತ್ತು ಕಡಿಮೆ ಸಂಚಾರವನ್ನು ಹೊಂದಿರುವುದರಿಂದ ಕಸ ಎಸೆಯುವವರಿಗೆ ಸುಲಭವಾಗುತ್ತಿದೆ, ಈಜಿಪುರ ಮೇಲ್ಸೇತುವೆ ಮತ್ತೊಂದು ಕಸ ಎಸೆಯುವ ಸ್ಥಳವಾಗಿದೆ. ನಗರದ ಬಹಳಷ್ಟು ಮೇಲ್ಸೇತುವೆ, ಕೆಳ ಸೇತುವೆಗಳು ಹೀಗೆ ಕಸ ವಿಲೇವಾರಿ ಸ್ಪಾಟ್‌ಗಳಾಗಿ ಬದಲಾಗುತ್ತಿವೆ. ನಾಗರಿಕರಲ್ಲಿ ಶಿಸ್ತು ಮೂಡಿಸಲು ಕೇವಲ ದಂಡ, ಎಚ್ಚರಿಕೆಯಂತಹ ಕ್ರಮಗಳು ಸಾಲದು. ಬದಲಾಗಿ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವಂತೆ ಕೇಸು ದಾಖಲಿಸಿ ದಂಡ ಹಾಕುವುದನ್ನು ಜಾರಿಗೆ ತರಬೇಕಿದೆ ಎನ್ನುತ್ತಾರೆ ಅವರು.

ಜನರಿಗೆ ಜಾಗೃತಿ ಅಗತ್ಯ

ಕಸ ವಿಲೇವಾರಿ ಸಮಸ್ಯೆಯ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಬಿಬಿಎಂಪಿ ವಲಯ ಆಯುಕ್ತರಾದ ಶಿವಾನಂದ ಕಾಪಶಿ ಅವರು ʼʼಬಿಬಿಎಂಪಿಯ ಕಸ ವಿಲೇವಾರಿ ಗಾಡಿಗಳು ಪ್ರತಿ ಏರಿಯಾಗಳಿಗೂ ಬರುತ್ತವೆ. ನಮ್ಮ ಪೌರಕಾರ್ಮಿಕರು ಮನೆ ಮನೆ ಬಂದು ಕಸ ಸಂಗ್ರಹಿಸುತ್ತಾರೆ. ಆದರೆ ಕೆಲವು ಜನರು ಕಸವನ್ನು ವಿಲೆವಾರಿ ಗಾಡಿಗಳಿಗೆ ಕೊಡುವುದಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಕೆಲ ಜನರು ರಾತ್ರಿ ಹೊತ್ತು ಲೇಟಾಗಿ, ಬೆಳಗ್ಗೆ ಬೇಗನೆ ಮನೆಯಿಂದ ಹೊರಡಬೇಕಾದ ಸಂದರ್ಭವಿದ್ದಾಗ ಅವರು ಕಸವನ್ನು ರಸ್ತೆ ಬದಿ ಡಂಪ್ ಮಾಡುತ್ತಾರೆ. ಇನ್ನೂ ಕೆಲವರು ಬೇಕಂತಲೇ ಡಂಪ್ ಮಾಡುತ್ತಾರೆ. ಇನ್ನು ಸಾರ್ವಜನಿಕರಿಗೆ ಕಸ ವಿವೇವಾರಿಯ ಸಮಯದ ಬಗ್ಗೆ ಸಮಸ್ಯೆ ಇದ್ದರೆ ಹೇಳಿಕೊಳ್ಳಬಹುದು. ಅದಕ್ಕೆ ಪರಿಹಾರ ವ್ಯವಸ್ಥೆ ಮಾಡಬಹುದು. ಆದರೆ ಕೆಲ ಜನರು ಬೇಕಂತಲೇ ರಸ್ತೆ ಬದಿಗೆ ಕಸವನ್ನು ಎಸೆಯುತ್ತಾರೆ. ಈ ಕಸಗಳನ್ನು ನಮ್ಮ ಪೌರಕಾರ್ಮಿಕರೇ ವಿಲೇವಾರಿ ಮಾಡುತ್ತಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲವಾಗಬೇಕೇ ಹೊರತು ಬೇರೆ ಯಾವ ರೀತಿಯ ಪರ್ಯಾಯ ಮಾರ್ಗವಿಲ್ಲʼʼ ಎನ್ನುತ್ತಾರೆ.

ಒಟ್ಟಾರೆ, ನಿಯಮಗಳಿದ್ದರೂ ಕಟ್ಟುನಿಟ್ಟಿನ ಜಾರಿ ಇಲ್ಲದೆ, ಸಿಬ್ಬಂದಿ ಇದ್ದರೂ ಸಕಾಲಿಕ ಕಾರ್ಯನಿರ್ವಹಣೆ ಇಲ್ಲದೆ, ಜನರಿಗೆ ಪ್ರಜ್ಞೆ ಇದ್ದರೂ ಜವಾಬ್ದಾರಿ ಇಲ್ಲದೆ, ಬೆಂಗಳೂರು ಮಹಾನಗರ ಉದ್ಯಾನನಗರಿಯ ಬದಲು ದಿನದಿಂದ ದಿನಕ್ಕೆ ಕಸದ ನಗರವಾಗಿ ಬದಲಾಗುತ್ತಿದೆ. ಪ್ರಭಾವಿಗಳು, ಜನಪ್ರಿಯ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂಬಂಧಪಟ್ಟವರ ಗಮನ ಸೆಳೆದಾಗ ಮಾತ್ರ ಸ್ಪಂದಿಸುವ, ನಿರ್ದಿಷ್ಟ ಪ್ರಕರಣಗಳಲ್ಲಿ ಮಾತ್ರ ದಿಢೀರ್‌ ಕಾರ್ಯೋನ್ಮುಖಿಯಾಗುವ ಬಿಬಿಎಂಪಿ, ಉಳಿದಂತೆ ಕಸದ ಸಮಸ್ಯೆಯನ್ನು ನಿತ್ಯದ ಗೋಳು ಎಂದು ಪರಿಗಣಿಸಿ ಉದಾಸೀನ ಮಾಡುವುದೇ ಹೆಚ್ಚು. ಹಾಗಾಗಿಯೇ ಬೆಂಗಳೂರಿನ ನಾಗರಿಕರ ಪಾಲಿಗೆ ಕಸದ ದುರ್ನಾತ, ಅನಾಹುತಗಳೂ ಬದುಕಿನ ಭಾಗವಾಗುತ್ತಿವೆ.

Read More
Next Story