
Garbage Problem Part 5 | ಅವ್ಯವಸ್ಥೆ ಖಂಡಿಸಿದರೆ ಸ್ಥಳೀಯರಿಗೆ ರಸ್ತೆಯನ್ನೇ ಬಂದ್ ಮಾಡುವ ಎಂಎಸ್‌ಜಿಪಿ ಘಟಕ!
ಎಂಎಸ್‌ಜಿಪಿ ಘಟಕಕ್ಕೆ ಬೆಂಗಳೂರಿನಿಂದ ಪ್ರತಿ ದಿನ ಸುಮಾರು 150-200 ಲಾರಿಗಳು ತ್ಯಾಜ್ಯ ಹೊತ್ತು ತರುತ್ತವೆ. ವೇಗವಾಗಿ ಸಂಚರಿಸುವ ಕಸದ ಲಾರಿಗಳ ಅಪಘಾತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ದೊಡ್ಡಬಳ್ಳಾಪುರದ ಜನರಿಗೆ ಬೆಂಗಳೂರಿನ ಕಸದ ವಿಷ ಹರಡುತ್ತಿರುವ ಎಂಎಸ್‌ಜಿಪಿ ಘಟಕದ ಅವೈಜ್ಞಾನಿಕ ನಿರ್ವಹಣೆಯನ್ನು ಸ್ಥಳೀಯರು ಪ್ರಶ್ನಿಸುವಂತಿಲ್ಲ. ಆಗೊಮ್ಮೆ ಪ್ರಶ್ನಿಸಿದರೆ ಅಂತಹ ಗ್ರಾಮಗಳಿಗೆ ರಸ್ತೆ ಸಂಪರ್ಕವನ್ನೇ ಬಂದ್ ಮಾಡುವ ಬೆದರಿಕೆ ಹಾಕಲಿದೆ ಎಂಬ ಆರೋಪ ಕೇಳಿಬಂದಿವೆ.
ಬೆಂಗಳೂರು ನಗರದಿಂದ ನಿತ್ಯ ಸಾವಿರಾರು ಟನ್ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಘಟಕದ ಒಳಗೆ ತ್ಯಾಜ್ಯದ ನೀರು ಇಂಗಲು ಹೊಂಡಗಳನ್ನು ನಿರ್ಮಿಸಿದ್ದರೂ ಮಳೆ ಹೆಚ್ಚಾದಾಗ ತ್ಯಾಜ್ಯದ ನೀರು ಕೆರೆ, ಕಟ್ಟೆಗಳಿಗೆ ಹರಿದು ಅಂತರ್ಜಲವನ್ನು ಕಲುಷಿತಗೊಳಿಸಲಿದೆ.
ಎಂಎಸ್‌ಜಿಪಿ ಘಟಕದ ಅವೈಜ್ಞಾನಿಕ ನಿರ್ವಹಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ ಅಂತಹವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಾರೆ. ಇಲ್ಲವೇ ಗುಂಡ್ಲಹಳ್ಳಿಯಿಂದ ತಣ್ಣೀರನಹಳ್ಳಿಗೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ರಸ್ತೆಯನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಘಟಕದ ಸುತ್ತಲಿನ ಗ್ರಾಮಗಳ ಜನರು ಆರೋಪಿಸುತ್ತಾರೆ.
"ಕಲುಷಿತ ನೀರಿನಿಂದ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಯಂತ್ರಗಳು ಆಗ್ಗಿಂದಾಗೆ ರಿಪೇರಿಗೆ ಬರುತ್ತಿವೆ. ನೀರು ಸಂಪೂರ್ಣ ಶುದ್ದೀಕರಣವಾಗದ ಕಾರಣ ಕಲುಷಿತ ನೀರನ್ನೇ ಕುಡಿಯುವಂತಾಗಿದೆ. ಇದರಿಂದ ಜನರು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಮಂಕಳಾಲದ ನಿವಾಸಿ ರಂಗನಾಥ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬಿಬಿಎಂಪಿ ಲಾರಿ ಅಪಘಾತ ಸಾಮಾನ್ಯ
ಎಂಎಸ್‌ಜಿಪಿ ಘಟಕಕ್ಕೆ ಬೆಂಗಳೂರಿನಿಂದ ಪ್ರತಿ ದಿನ ಸುಮಾರು 150-200 ಲಾರಿಗಳು ತ್ಯಾಜ್ಯ ಹೊತ್ತು ತರುತ್ತವೆ. ವೇಗವಾಗಿ ಸಂಚರಿಸುವ ಕಸದ ಲಾರಿಗಳ ಅಪಘಾತದಿಂದ ಹಲವರು ಪ್ರಾಣ ಕಳೆದುಕೊಂಡಿರುವ ನಿದರ್ಶನಗಳೂ ಇವೆ.
ಕಳೆದ ವರ್ಷಗಳ ಹಿಂದೆ ಹುಲಿಕುಂಟೆ ಸಮೀಪ ದಾಬಸ್‌ಪೇಟೆ-ಹೊಸಕೋಟೆ ರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಿಂದ ಇಬ್ಬರು ಯುವಕರು ಮೃತಪಟ್ಟಿದ್ದರು. ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸುವವರೆಗೂ ಮೃತದೇಹ ತೆರವು ಮಾಡಲು ಬಿಡದೇ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ನಾಯಕರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣವೂ ಸೇರಿದಂತೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೊಡ್ಡಬೆಳವಂಗಲದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.
2023-24ರಲ್ಲಿ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಸದ ಲಾರಿಗಳಿಂದಾದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ನೊಣದ ಸಮಸ್ಯೆಯಿಂದ ಹೈರಾಣು
ಬೆಂಗಳೂರಿನ ತ್ಯಾಜ್ಯವನ್ನು ತಂದು ಚಿಗರೇನಹಳ್ಳಿಯಲ್ಲಿ ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸನೆ ಜತೆಗೆ ಸೊಳ್ಳೆ ಹಾಗೂ ನೊಣದ ಸಮಸ್ಯೆ ವಿಪರೀತವಾಗಿದೆ. ಮನೆಗಳಲ್ಲಿ ಅಡುಗೆ ಮಾಡಲು ಹಾಗೂ ಊಟ ಮಾಡಲು ಆಗದಂತಹ ಪರಿಸ್ಥಿತಿ ಇದೆ. ಇದರಿಂದ ಕಾಯಿಲೆ ಹರಡುತ್ತಿದೆ. ಈ ಮೊದಲು ಮನೆಗಳಲ್ಲಿನ ಆಹಾರ ಪದಾರ್ಥ, ಹಣ್ಣು, ತರಕಾರಿಗಳ ಮೇಲೆ ನೊಣಗಳು ಹೆಚ್ಚಾಗಿ ಇರುತ್ತಿದ್ದವು. ಇತ್ತೀಚೆಗೆ ಎಂಎಸ್‌ಜಿಪಿ ಘಟಕದಿಂದ ಔಷಧ ಸಿಂಪಡಿಸುತ್ತಿರುವುದರಿಂದ ಕೊಂಚ ಕಡಿಮೆಯಾಗಿದೆ. ಹೀಗಿದ್ದರೂ ಅಡುಗೆ ಮಾಡುವಾಗ, ಊಟ ಮಾಡುವಾಗ ಹಾಗೂ ಮಕ್ಕಳು ಏನಾದರೂ ತಿನ್ನುವಾಗ ನೊಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಆದಷ್ಟು ಶೀಘ್ರ ಎಂಎಸ್‌ಜಿಪಿ ಘಟಕ ಸ್ಥಗಿತಗೊಳಿಸಬೇಕೆಂದು ಹೆಸರೇಳಲು ಇಚ್ಚಿಸದ ತಣ್ಣೀರನಹಳ್ಳಿ ಗ್ರಾಮದ ಮಹಿಳೆಯೊಬ್ಬರು ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಎಂಎಸ್‌ಜಿಪಿ ಘಟಕದ ಪಕ್ಕದ ಬೊಮ್ಮಹಳ್ಳಿ ಗ್ರಾಮದ ಯುವಕ ಶಶಿಕುಮಾರ್ ಮಾತನಾಡಿ, ನಮ್ಮ ಗ್ರಾಮದಲ್ಲಿ ವಿಪರೀತವಾದ ವಾಸನೆ ಹಾಗೂ ನೊಣದ ಸಮಸ್ಯೆಯಿದ್ದು ಸದಾ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ಭಾಗದ ಜನಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಆದರೆ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ. ಗ್ರಾಮದಲ್ಲಿನ ಮಕ್ಕಳು ಹಾಗೂ ಹಿರಿಯ ನಾಗರಿಕರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಘಟಕದಿಂದ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಅಳಲು ತೋಡಿಕೊಂಡರು.
ಚಿರತೆಯಂತಿರುವ ಶ್ವಾನಗಳು
ತ್ಯಾಜ್ಯದಲ್ಲಿ ಆಹಾರ ಅರಸಿ ಬರುವ ನೂರಕ್ಕೂ ಹೆಚ್ಚು ಶ್ವಾನಗಳು ಎಂಎಸ್‌ಜಿಪಿ ಘಟಕದಲ್ಲೇ ಬೀಡು ಬಿಟ್ಟಿವೆ. ಇದರಿಂದ ಸುತ್ತಲಿನ ಗ್ರಾಮಗಳಲ್ಲಿ ಹಸು, ಮೇಕೆ, ಕುರಿಗಳನ್ನು ಮೇಯಿಸುವುದು ಕಷ್ಟಕರವಾಗಿದೆ. ನಾಯಿಗಳ ಹಿಂಡು ಜಾನುವಾರುಗಳ ಮೇಲೆ ಯಾವಾಗ ದಾಳಿ ಮಾಡುತ್ತವೋ ಎಂಬ ಆತಂಕದಲ್ಲೇ ರೈತಾಪಿ ಜನ ಕಾಲ ಕಳೆಯುವಂತಾಗಿದೆ. ಈಗಾಗಲೇ ಹಲವರು ನಾಯಿ ಹಿಂಡಿನ ದಾಳಿಯಿಂದ ಕುರಿ, ಮೇಕೆ ಕಳೆದುಕೊಂಡಿದ್ದಾರೆ. ಗ್ರಾಮಗಳ ಮಕ್ಕಳು ಹಾಗೂ ಹಿರಿಯ ನಾಗರಿಕರ ಮೇಲೂ ದಾಳಿ ಮಾಡುವ ನಾಯಿಗಳನ್ನು ನೋಡಿದರೆ ಚಿರತೆಗಳಂತೆ ಭಾಸವಾಗುತ್ತದೆ ಎಂದು ಟಿ.ಎಂ. ರಮೇಶ್ ಅವರು ʼದ ಫಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಒಟ್ಟಾರೆ ಎಂಎಸ್‌ಜಿಪಿ ಘಟಕವನ್ನು ಸರ್ಕಾರ ಶೀಘ್ರವಾಗಿ ಸ್ಥಗಿತಗೊಳಿಸುವ ಮೂಲಕ ಈ ಭಾಗದ 8-10 ಸಾವಿರ ಜನರು ಹಾಗೂ ಭವಿಷ್ಯದ ಪೀಳಿಗೆಗೆ ಆರೋಗ್ಯಯುತ ಪರಿಸರ ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಯುವಕರು, ರೈತ ಮುಖಂಡರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.