ಉಡುಪಿ ಮೂಲದ ಗ್ಯಾಂಗ್‌ಸ್ಟರ್ ಪ್ರಸಾದ್‌ ಪೂಜಾರಿ‌ ಚೀನಾದಿಂದ ಗಡಿಪಾರು
x

ಉಡುಪಿ ಮೂಲದ ಗ್ಯಾಂಗ್‌ಸ್ಟರ್ ಪ್ರಸಾದ್‌ ಪೂಜಾರಿ‌ ಚೀನಾದಿಂದ ಗಡಿಪಾರು

ಮುಂಬೈ ಸೇರಿದಂತೆ ಭಾರತದ ವಿವಿದೆಡೆ ಭೂಗತ ಚಟುವಟಿಕೆಯಲ್ಲಿ ತೊಡಗಿದ್ದ ಉಡುಪಿ ಮೂಲದ ಗ್ಯಾಂಗ್‌ಸ್ಟರ್‌ ಪ್ರಸಾದ್‌ ಪೂಜಾರಿಯನ್ನು ಚೀನಾದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.


ಮುಂಬೈ: ಭಾರತದ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಉಡುಪಿ ಮೂಲದ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಚೀನಾದಿಂದ ಗಡಿಪಾರು ಮಾಡಲಾಗಿದ್ದು, ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಆತನನ್ನು ಚೀನಾದಿಂದ ಮುಂಬೈಗೆ ಮರಳಿ ಕರೆತಂದಿದ್ದಾರೆ.

ಉಡುಪಿ-ಮಂಗಳೂರಿಗೆ ಸಂಬಂಧಿಸಿದ ಕೆಲವು ಭೂಗತ ಚಟುವಟಿಕೆಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂಬ ಆಯಾಮಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಸುಲಿಗೆ, ಬೆದರಿಕೆ, ಕೊಲೆ ಪ್ರಕರಣ, ಕೊಲೆ ಯತ್ನ ಪ್ರಕರಣ ಸೇರಿದಂತೆ ಕನಿಷ್ಟ 15 ಕ್ಕೂ ಅಧಿಕ ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಟರ್ಪೋಲ್ ನೀಡಿದ ಮಾಹಿತಿ ಮೇರೆಗೆ ಕಳೆದ ವರ್ಷ ಹಾಂಕಾಂಗ್ ಪೊಲೀಸರು ಆತನನ್ನು ಬಂಧಿಸಿದ್ದರು.

"ಛೋಟಾ ರಾಜನ್, ರವಿ ಪೂಜಾರಿ, ಬಂಟಿ ಪಾಂಡೆಯ ಬಳಿಕ ಈಗ ಪ್ರಸಾದ್ ಪೂಜಾರಿಯನ್ನು ಬಂಧಿಸಲು ಸಾಧ್ಯವಾಗಿರುವುದು ದೊಡ್ಡ ಯಶಸ್ಸು. ಹಲವಾರು ಏಜೆನ್ಸಿಗಳ ಅಧಿಕಾರಿಗಳು ಈತನನ್ನು ಭಾರತಕ್ಕೆ ಮರಳಿ ಕರೆತರಲು ಶ್ರಮಿಸುತ್ತಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2010 ರಲ್ಲಿ ಚೀನಾಕ್ಕೆ ಪಲಾಯನ ಮಾಡಿದ ಪ್ರಸಾದ್ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಶೆನ್ಜೆನ್ ನಗರದಲ್ಲಿ ವಾಸಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಪ್ರಸಾದ್ ಚೀನಾದ ಪ್ರಜೆಯನ್ನು ಮದುವೆಯಾಗಿದ್ದರಿಂದ ಆತನ ಗಡಿಪಾರಿಗೆ ತೊಡಕಾಗಿತ್ತು.

ಭೂಗತ ಪಾತಕಿ ಕುಮಾರ್ ಪಿಳ್ಳೈನ ಮಾಜಿ ಬಂಟನಾಗಿದ್ದ ಪ್ರಸಾದ್ 2010 ರಿಂದ ತಲೆಮರೆಸಿಕೊಂಡಿದ್ದ. 2016 ರಲ್ಲಿ ಸಿಂಗಾಪುರದಿಂದ ಪಿಳ್ಳೈಯನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಪ್ರಸಾದ್ ಪಿಳ್ಳೈ ಗ್ಯಾಂಗ್ ನಿಂದ ಬೇರ್ಪಟ್ಟು ತನ್ನದೇ ಆದ ಗ್ಯಾಂಗ್ ರಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಪ್ರಸಾದ್ ತನ್ನ ಚೀನಾ ಮೂಲದ ಪತ್ನಿಯೊಂದಿಗೆ ಹಾಂಕಾಂಗ್ ನಿಂದ ವಿಮಾನದಲ್ಲಿ ತೆರಳಲು ಹೊರಟಿದ್ದಾಗ ಅಲ್ಲಿನ ಅಧಿಕಾರಿಗಳು ಆತನನ್ನು ಬಂಧಿಸಿದ್ದರು.

Read More
Next Story