
ಗಾಂಧಿ ಭಾರತ | ಬಗೆಹರಿಯದ ವಿವಾದ: ಟೀಕೆಗೆ ಗುರಿಯಾಯ್ತು ದಂಡಿಯಾತ್ರೆ ಜಾಹೀರಾತು!
ಮಹಾತ್ಮ ಗಾಂಧಿಯವರಿಗೆ ಸರಿಸಮಾನಾದ ನಾಯಕರು ಎಂಬಂತೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಹೋಲಿಸಿ ಪ್ರಚಾರ ಮಾಡುತ್ತಿರುವ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಈ ಜಾಹೀರಾತು ವಿಶೇಷವಾಗಿ ಪ್ರತಿಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕಳೆದ ಡಿಸೆಂಬರ್ 27ರಂದು ನಿಗದಿಯಾಗಿದ್ದ ಗಾಂಧಿ ಭಾರತ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಜ.21ರ ಮಂಗಳವಾರ ಸಮಾವೇಶ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಖುದ್ದು ಬೆಳಗಾವಿಯಲ್ಲೇ ಬೀಡುಬಿಟ್ಟು ಸಮಾವೇಶದ ತಯಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದ ಎದುರು ಬೃಹತ್ ಗಾಂಧಿ ಪ್ರತಿಮೆ ಅನಾವರಣದೊಂದಿಗೆ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನೂರು ವರ್ಷಗಳ ಹಿಂದೆ ಬೆಳಗಾವಿಯಲ್ಲಿ 1924ರಲ್ಲಿ ನಡೆದಿದ್ದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ಆಯೋಜಿಸಿರುವ ʼಜೈ ಬಾಪು, ಜೈ ಭೀಮ್, ಜೈ ಸಂವಿಧಾನʼ ಸಮಾವೇಶ ನಡೆಯಲಿದೆ.
ಆದರೆ, ಆರಂಭಕ್ಕೆ ಮುನ್ನವೇ ಸಮಾವೇಶದ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಒಳಗೇ ಆಂತರಿಕ ಬೇಗುದಿ ಭುಗಿಲೆದ್ದಿದೆ. ಸಮಾವೇಶದ ಉಸ್ತುವಾರಿಯ ವಿಷಯದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಬೆಳಗಾವಿಯ ಉಸ್ತುವಾರಿ ಸಚಿವರೂ ಆಗಿರುವ ಜಿಲ್ಲೆಯ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ರೊಚ್ಚಿಗೆದ್ದಿದ್ದರು. ಸಮಾವೇಶದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ನಡೆಸಿದ ಸಭೆಯಲ್ಲೇ ಜಾರಕಿಹೊಳಿ ಬೆಂಬಲಿಗರು ರೊಚ್ಚಿಗೆದ್ದು ಸುರ್ಜೆವಾಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗೂ ಜೋರಾಗಿತ್ತು. ಈ ನಡುವೆ, ಸುರ್ಜೆವಾಲಾ ಅವರು ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದು ಕೂಡ ಜಾರಕಿಹೊಳಿ ಮತ್ತು ಸಿಎಂ ಸಿದ್ದರಾಮಯ್ಯ ಬೆಂಬಲಿಗರನ್ನು ಕೆರಳಿಸಿತ್ತು. ಆ ಹಿನ್ನೆಲೆಯಲ್ಲಿಯೇ ಇದೀಗ ಸ್ವತಃ ಸುರ್ಜೆವಾಲಾ ವಿರುದ್ಧವೇ ಪಕ್ಷದ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರಿಗೆ ದೂರು ನೀಡಲು ಕೆಲವು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ, ಗಾಂಧಿ ಭಾರತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀಡಿರುವ ಜಾಹೀರಾತು ವಿಪಕ್ಷಗಳು ಟೀಕೆಗೆ ಗುರಿಯಾಗಿದೆ.
ಮಹಾತ್ಮ ಗಾಂಧಿ ಅವರು ಕೈಗೊಂಡಿದ್ದ ಐತಿಹಾಸಿಕ ದಂಡಿಯಾತ್ರೆಯ ಜನಪ್ರಿಯ ಚಿತ್ರದ ಮಾದರಿಯಲ್ಲಿ ಮುಂದೆ ಗಾಂಧಿ, ಅವರ ಹಿಂದೆ ಸಿಎಂ ಸಿದ್ದರಾಮಯ್ಯ, ಅವರ ಹಿಂದೆ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಈ ಮೂವರ ಹಿಂದೆ ಗುಂಪು ಸಾಗುತ್ತಿರುವಂತೆ ರೂಪಿಸಿರುವ ಚಿತ್ರವನ್ನು ಆ ಜಾಹೀರಾತಿನಲ್ಲಿ ಬಳಸಲಾಗಿದೆ.
ಮಹಾತ್ಮ ಗಾಂಧಿಯವರಿಗೆ ಸರಿಸಮಾನಾದ ನಾಯಕರು ಎಂಬಂತೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಹೋಲಿಸಿ ಪ್ರಚಾರ ಮಾಡುತ್ತಿರುವ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಈ ಜಾಹೀರಾತು ವಿಶೇಷವಾಗಿ ಪ್ರತಿಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾಗಿದೆ.
ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ ಅವರು ತಮ್ಮ ʼಎಕ್ಸ್ʼ ಖಾತೆಯಲ್ಲಿ ಸರ್ಕಾರ ದಿನಪತ್ರಿಕೆಗಳಿಗೆ ನೀಡಿದ ಜಾಹೀರಾತು ಹಂಚಿಕೊಂಡಿದ್ದು, ಅದರೊಂದಿಗೆ, “ಗಾಂಧಿ ಆದರ್ಶಗಳನ್ನು ಅನುಸರಿಸುವುದು ಎಂದರೆ ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಮಾಡುವುದಾ? ಅಥವಾ ಸೂರಿಲ್ಲದ ಜನಸಾಮಾನ್ಯರು ಸೂರು ಕಟ್ಟಿಕೊಳ್ಳಲು ಸಿಗಬೇಕಾಗಿದ್ದ ಮೂಡಾ ಸೈಟುಗಳನ್ನು ಲಪಟಾಯಿಸುವುದಾ?” ಎಂದು ಸಿದ್ದರಾಮಯ್ಯ ಸರ್ಕಾರದ ಹಗರಣಗಳನ್ನು ಉಲ್ಲೇಖಿಸಿ ಕಟಕಿಯಾಡಿದ್ದಾರೆ.
“ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದು ಎಂದರೆ ಗಾಂಧೀಜಿ ಅವರು ತಂದುಕೊಟ್ಟ ಸ್ವಾತಂತ್ರ್ಯ ಬಳಸಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವುದಾ? ಅಥವಾ ಗೋಮಾತೆಯ ಕೆಚ್ಚಲು ಕತ್ತರಿಸಿದರೂ ಮೌನ ವಹಿಸುವುದಾ? ಗಾಂಧಿ ಕನಸನ್ನು ನನಸಾಗಿಸುವುದು ಎಂದರೆ ನಕಲಿ ಗಾಂಧಿಗಳ ಕೈಗೆ ಕಾಂಗ್ರೆಸ್ ಪಕ್ಷವನ್ನು ಕೊಟ್ಟು ಗುಮಲಾಗಿರಿ ಮಾಡುವುದಾ?” ಎಂದೂ ಅವರು ವ್ಯಂಗ್ಯವಾಡಿದ್ದಾರೆ.
ಅಲ್ಲದೆ, “ಸ್ವತಂತ್ರ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನೇ ಜೈಲು ಮಾಡುವುದಾ? ಬಹುಶಃ ಇದನ್ನೆಲ್ಲಾ ಮುಂದಾಲೋಚನೆ ಮಾಡಿಯೇ ಗಾಂಧೀಜಿ ಅವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು ಅನ್ನಿಸುತ್ತೆ. ಈಗಿರುವ ನಕಲಿ ಗಾಂಧಿಗಳು ಎಷ್ಟು ಡೋಂಗಿ ಗಾಂಧಿವಾದಿಗಳೋ ಅಧಿಕಾರಕ್ಕಾಗಿ ಅವರ ಗುಲಾಮಗಿರಿ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಅವರಿಗಿಂತ ಹೆಚ್ಚು ಡೋಂಗಿಗಳು” ಎಂದೂ ಅಶೋಕ ಅವರು ಟೀಕಿಸಿದ್ದಾರೆ.
ಪ್ರತಿಪಕ್ಷ ನಾಯಕ ಆರ್ ಅಶೋಕ ಮಾತ್ರವಲ್ಲದೆ, ಇತ್ತೀಚೆಗೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ನಿಂದನೆ ಮಾಡಿದ ಆರೋಪದಲ್ಲಿ ವಿವಾದಕ್ಕೀಡಾಗಿದ್ದ ಬಿಜೆಪಿ ಹಿರಿಯ ನಾಯಕ ಸಿ ಟಿ ರವಿ ಅವರೂ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ʼಎಕ್ಸ್ʼ ಖಾತೆಯಲ್ಲಿ ಜಾಹೀರಾತು ಹಂಚಿಕೊಂಡು ಟೀಕೆ ಮಾಡಿರುವ ಅವರು, “ಈ ಜಾಹಿರಾತನ್ನು ನೋಡಿದ ಮೇಲೆ ಇಂದಿನ ಯುವಜನತೆ ಮಹಾತ್ಮಾ ಗಾಂಧಿಯವರ ಬಗ್ಗೆ ಏನೆಂದು ತಿಳಿದುಕೊಳ್ಳಬಹುದು??? ಮಹಾತ್ಮ ಗಾಂಧಿಯವರ ಅನುಯಾಯಿಗಳೆಲ್ಲ ಲೂಟಿಕೋರರು, ಭ್ರಷ್ಟರು ಎಂದುಕೊಂಡು ಬಿಟ್ಟರೆ!!!???” ಎಂದು ಪ್ರಶ್ನಿಸಿದ್ದಾರೆ.
ಮುಖ್ಯವಾಗಿ ಮುಡಾ ನಿವೇಶನ ಹಂಚಿಕೆ ಪ್ರಕರಣ, ಮಹರ್ಷಿ ವಾಲ್ಮೀಕಿ ನಿಗಮ ಹಗರಣಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ವಿಪಕ್ಷಗಳು ತಮ್ಮ ಟೀಕಾ ಪ್ರಹಾರವನ್ನು ಮುಂದುವರಿಸಿದ್ದು, ಇದೀಗ ಗಾಂಧಿ ಭಾರತ ಸಮಾವೇಶದ ಜಾಹೀರಾತನ್ನು ಕೂಡ ತಮ್ಮ ಟೀಕೆಗೆ ಬಳಸಿಕೊಂಡಿವೆ. ಸರ್ಕಾರ ಕೂಡ ಮಹಾತ್ಮ ಗಾಂಧಿಯಂತಹ ಮೇರು ವ್ಯಕ್ತಿತ್ವದ ಜೊತೆ ಗಂಭೀರ ಅಕ್ರಮಗಳ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರನ್ನು ಹೋಲಿಸಿ ಜಾಹೀರಾತು ವಿನ್ಯಾಸ ಮಾಡುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ಆಹಾರ ಒದಗಿಸಿದೆ.