ಬೆಳಗಾವಿ ʼಗಾಂಧಿ ಭಾರತʼ | ಒಳ್ಳೆಯದಕ್ಕೆ ಕಲ್ಲು ಹಾಕುವುದೇ ಬಿಜೆಪಿ ವರಸೆ: ಸಿಎಂ ಟೀಕೆ
x

ಬೆಳಗಾವಿ ʼಗಾಂಧಿ ಭಾರತʼ | ಒಳ್ಳೆಯದಕ್ಕೆ ಕಲ್ಲು ಹಾಕುವುದೇ ಬಿಜೆಪಿ ವರಸೆ: ಸಿಎಂ ಟೀಕೆ


ಯಾವುದೇ ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವುದೇ ಬಿಜೆಪಿಯವರ ಅಭ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಬೆಳಗಾವಿಯಲ್ಲಿ ಗುರುವಾರ ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಅಪಘಾತದಲ್ಲಿ ಹುತಾತ್ಮರಾದ ರಾಜ್ಯದ ಯೋಧರಿಗೆ ಅಂತಿಮ ಗೌರವ ಸಲ್ಲಿಸಲು ಹೊರಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ರಸ್ತೆ ಎಂದು ಹೆಸರಿಡುವ ಬಗ್ಗೆ ಬಿಜೆಪಿ ವಿರೋಧದ ಕುರಿತು ಪ್ರತಿಕ್ರಿಯೆ ನೀಡಿ, ಯಾವುದೇ ಒಳ್ಳೆಯ ಕೆಲಸವನ್ನು ವಿರೋಧಿಸುವುದೇ ಬಿಜೆಪಿಯವರ ಅಭ್ಯಾಸ. ಕಲ್ಲು ಹಾಕುವುದೇ ಅವರ ಕೆಲಸ. ಆದರೆ ಬಿಜೆಪಿಯವರೇ ಆದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ನಗರಪಾಲಿಕೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಿದರು.

ಗಾಂಧಿ ಪುತ್ಥಳಿ ಅನಾವರಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯ ವೀರಸೌಧದಲ್ಲಿ ಗುರುವಾರ ಬೆಳಿಗ್ಗೆ ಮಹಾತ್ಮಗಾಂಧಿಯವರ ಪುತ್ಥಳಿ ಅನಾವರಣಗೊಳಿಸಿದರು.

ಬಳಿಕ ಮಹಾತ್ಮಗಾಂಧಿಯವರ ಅಧ್ಯಕ್ಷತೆಯಲ್ಲಿ ಎಐಸಿಸಿ(AICC) ಸಭೆ ನಡೆದಿದ್ದ ಸ್ಥಳದ ಸಭಾಂಗಣದಲ್ಲಿನ ಫೋಟೋ ಗ್ಯಾಲರಿಯನ್ನು ಚರಕ ನೂಲುವ ಮೂಲಕ ಉದ್ಘಾಟಿಸಿದರು. ಬಳಿಕ ಮಹಿಳಾ ಸ್ವ ಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕೂಡ ಮುಖ್ಯಮಂತ್ರಿ ಉದ್ಘಾಟಿಸಿದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ಸಚಿವರಾದ ಎಚ್‌ ಸಿ ಮಹದೇವಪ್ಪ, ಡಾ ಎಂ ಬಿ ಪಾಟೀಲ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಕೆ ಎಚ್‌ ಮುನಿಯಪ್ಪ, ಎಚ್‌ ಕೆ ಪಾಟೀಲ್‌, ಶರಣ ಪ್ರಕಾಶ್‌ ಪಾಟೀಲ್‌, ಎಐಸಿಸಿ ಮುಖಂಡರಾದ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ, ಆರ್‌ ವಿ ದೇಶಪಾಂಡೆ ಮತ್ತಿತರರು ಇದ್ದರು.

ಖಾದಿ ವಸ್ತು ಪ್ರದರ್ಶನ ಮೇಳಕ್ಕೆ ಚಾಲನೆ

ಬೆಳಗಾವಿ ನಗರದಲ್ಲಿ ವಿಶೇಷವಾಗಿ ರೂಪಿಸಿರುವ ಸರಸ್ ಮೇಳ ಮತ್ತು ಖಾದಿ ಉತ್ಸವ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಮುಖ್ಯಮಂತ್ರಿಗಳಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಗಣ್ಯರು ಸಾಥ್‌ ನೀಡಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜ್ಞಾನ ವನ‌ ಉದ್ಘಾಟಿಸಿದರು

ಸ್ವ-ಸಹಾಯ ಗುಂಪಿನ ಮಹಿಳೆಯರು ಸಿದ್ಧಪಡಿಸಿರುವ ಖಾದಿ ಉತ್ಪನ್ನಗಳ ಪ್ರದರ್ಶನ ಮೇಳವು ಡಿ.26ರಿಂದ ಜ. 4ರವರೆಗೆ ನಡೆಯಲಿದೆ. ಎಲ್ಲಾ ಜಿಲ್ಲೆಗಳ ಸ್ವ-ಸಹಾಯ ಗುಂಪಿನ ಮಹಿಳೆಯರು ಮೇಳದಲ್ಲಿ ತಾವು ತಯಾರಿಸಿದ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದಾರೆ. ಮೇಳದಲ್ಲಿ ಒಟ್ಟು 150 ಮಳಿಗೆಗಳಿವೆ. 10 ಆಹಾರ ಮೇಳದ ಮಳಿಗೆಗಳು ಮತ್ತು 50 ಖಾದಿ ಉತ್ಪನ್ನದ ಮೇಳಗಳು ಇವೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಪ್ರತಿ ದಿನ ಬೆಳಿಗ್ಗೆ 10.30 ರಿಂದ ರಾತ್ರಿ 9.30 ರವರೆಗೆ ಪ್ರದರ್ಶನ ಇರಲಿದೆ. ಸಂಜೆ 6.30 ರಿಂದ 9 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಆಕರ್ಷಣೀಯ ಅಕ್ಕ ಕೆಫೆ

2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ 50 'ಅಕ್ಕ ಕೆಫೆ'ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಂದಾಜು 1200 ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವ ಸಲುವಾಗಿ ಅಕ್ಕ ಕೆಫೆಗಳನ್ನು ತೆರೆಯಲಾಗಿದೆ. ಸಮಾವೇಶದಲ್ಲಿ ಆರಂಭಿಸಿರುವ ಅಕ್ಕ ಕೆಫೆ ಮಳಿಗಳಲ್ಲಿ ಉತ್ತರ ಕರ್ನಾಟಕದ ಗಿರಮಿಟ್( ಚುರುಮರಿ), ಮಂಡಕ್ಕಿ, ಜೋಳದ ಖಡಕ್ ರೊಟ್ಟಿ ಸೇರಿದಂತೆ ಹೋಳಿಗೆ, ಮಂಗಳೂರು ನೀರ್ದೋಸೆ ಮತ್ತು ಮಾಂಸಹಾರಿ ಆಹಾರಗಳಾದ ಬ್ಯಾಂಬು ಬಿರಿಯಾನಿಯನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುತ್ತಿದೆ.

Read More
Next Story