ಬಿಜೆಪಿಯತ್ತ ಉರುಳಿದ ಗಾಲಿ | ಬಿಎಸ್‌ವೈ ಬಲದಿಂದ ಮತ್ತೆ ಮುನ್ನೆಲೆಗೆ ಬರುವರೇ ಗಣಿ ಧಣಿ ರೆಡ್ಡಿ?
x

ಬಿಜೆಪಿಯತ್ತ ಉರುಳಿದ ಗಾಲಿ | ಬಿಎಸ್‌ವೈ ಬಲದಿಂದ ಮತ್ತೆ ಮುನ್ನೆಲೆಗೆ ಬರುವರೇ ಗಣಿ ಧಣಿ ರೆಡ್ಡಿ?


ದೇಶದ ಪ್ರಭಾವಿ ಗಣಿ ಉದ್ಯಮಿಯಾಗಿದ್ದ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಪೆನುಗೊಂಡ ಜೈಲು ಸೇರಿದ್ದರು. ಬಿಜೆಪಿ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಸರ್ಕಾರ ರಚನೆಗೆ ಕಾರಣವಾದ ಆಪರೇಷನ್‌ ಕಮಲದ ರೂವಾರಿಯಾಗಿ ಇಡೀ ದೇಶದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಗಾಲಿ ರೆಡ್ಡಿ, ಅಕ್ರಮದ ಆರೋಪದ ಮೇಲೆ ಜೈಲಿಗೆ ಹೋದ ಬಳಿಕ ಅವರ ಪಾಲಿಗೆ ಬಿಜೆಪಿ ಬಾಗಿಲು ಮುಚ್ಚಿತ್ತು. ಆದರೆ ಯಡಿಯೂರಪ್ಪ ಮತ್ತು ಅವರ ಪುತ್ರ, ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಪ್ರಯತ್ನದಿಂದ ಇದೀಗ ಗಣಿ ಧಣಿಗೆ ಬಿಜೆಪಿಯಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿದೆ.

ನಿನ್ನೆ ಮೊನ್ನೆಯವರೆಗೂ ಬಿಜೆಪಿಯ ಕೇಂದ್ರ ನಾಯಕರು ಜನಾರ್ದನ ರೆಡ್ಡಿ ಅವರ ವಿಚಾರದಲ್ಲಿ ಮಡಿವಂತಿಕೆ‌ ತೋರಿಸುತ್ತಿದ್ದರು. ಈ ಹಿಂದೆ ಅಮಿತ್ ಶಾ ಅವರು ರೆಡ್ಡಿಗೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದರು. ಆ ಬಳಿಕ ರೆಡ್ಡಿ ಹೊಸ ಪಕ್ಷವನ್ನೂ ಕಟ್ಟಿದ್ದರು. ತಮ್ಮದೇ ಹೊಸ ಪಕ್ಷದಿಂದಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದು ಗೆದ್ದು ಶಾಸಕರಾದರು. ಇತ್ತೀಚೆಗೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿದ್ದರು. ಅದಾಗಿ ತಿಂಗಳು ತುಂಬುವ ಮುನ್ನವೇ ಈಗ ಬಿಜೆಪಿ ಗೂಡಿಗೆ ಮರಳಿದ್ದಾರೆ.

ರೆಡ್ಡಿ ಬೃಹತ್ ಸಮ್ರಾಜ್ಯ ಕಟ್ಟಿದ್ದು ಹೇಗೆ?

ಚಂಗಾ ರೆಡ್ಡಿ ಎನ್ನುವ ಪೊಲೀಸ್ ಪೇದೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಜನಾರ್ದನ ರೆಡ್ಡಿ, ಸಾವಿರಾರು ಕೋಟಿಯ ಒಡೆಯನಾಗಿ ಬೆಳದ ಕಥೆ ಯಾವ ಸಿನಿಮಾ ಕಥೆಗಿಂತಲೂ ಕಡಿಮೆ ಇಲ್ಲ.

ಹೌದು, ಜನಾರ್ದನ ರೆಡ್ಡಿ ಅವರು ಓದಿದ್ದು ಕೇವಲ ಎಸ್ಎಸ್ಎಲ್‌ಸಿ. ಅವರಿಗೆ ಬಿಸನೆಸ್ ಮಾಡುವುದರ ಬಗ್ಗೆ ಆಸಕ್ತಿ ಇತ್ತು. ಹಾಗಾಗಿ ಇನ್ನೋಬಲ್ ಫೈನಾನ್ಸ್ ಕಂಪನಿ ಆರಂಭಿಸಿದರು. ಅಲ್ಲಿ ಹಣ ಹೂಡಿಕೆ ಮಾಡುವವರಿಗೆ ಬ್ಯಾಂಕ್ ಗಳಲ್ಲಿ ನೀಡುವ ಬಡ್ಡಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಣ ಹೂಡಿಕೆಯಾಗುತ್ತಿತ್ತು. ಒಂದೇ ವರ್ಷದಲ್ಲಿ ವಹಿವಾಟು 350 ಕೋಟಿ ದಾಟಿತು. ಆ ಬಳಿಕ ಜಿಲ್ಲೆಯಲ್ಲಿ ರೆಡ್ಡಿ ವರ್ಚಸ್ಸು ಬೆಳೆಯುತ್ತಾ ಹೋಯಿತು.

ಸುಷ್ಮಾ ಸ್ವಾರಾಜ್‌ಗೆ ಮಾನಸಪುತ್ರ

ಕಾಂಗ್ರೆಸ್ ಭದ್ರಕೋಟಿಯಾಗಿದ್ದ ಬಳ್ಳಾರಿಯಲ್ಲಿ 1999ರ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಅವರ ವಿರುದ್ಧ ಸುಷ್ಮಾ ಸ್ವರಾಜ್ ಸ್ಪರ್ಧೆಗಿಳಿದಿದ್ದರು. ಅವರಿಗೆ ಬೆಂಬಲವಾಗಿ ನಿಂತ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮಲು ಹಗಲು ರಾತ್ರಿ ಎನ್ನದೇ ಸುಷ್ಮಾ ಸ್ವಾರಜ್ ಅವರ ಪರ ಪ್ರಚಾರ ನಡೆಸಿದರು.

ಆ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿ ವಿರುದ್ಧ ಸೋತಿದ್ದರು. ಸೋನಿಯಾ ಗಾಂಧಿ ಅವರು ಕೇವಲ 56,100 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿ ನಿಧಾನವಾಗಿ ಆಕ್ರಮಿಸಿಕೊಳ್ಳಲು ಶುರುವಾಯಿತು.

ಸುಷ್ಮಾ ಸ್ವರಾಜ್ ಅವರು ಬಳ್ಳಾರಿ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಅದಕ್ಕೆ ಕಾರಣವಾಗಿದ್ದೇ ಈ ರೆಡ್ಡಿ ಬ್ರದರ್ಸ್‌ ಮತ್ತು ರಾಮುಲು. ಚುನಾವಣೆಯಲ್ಲಿ ಸೋತರೂ ಬಳ್ಳಾರಿಯ ಮಗಳಾಗಿ ತಾವು ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವುದಾಗಿ ಸುಷ್ಮಾ ಘೋಷಿಸಿದ್ದರು. ಅದರಂತೆ ಕೆಲವು ವರ್ಷ ಸುಷ್ಮಾ ಬಳ್ಳಾರಿಗೆ ಬರುತ್ತಿದ್ದರು. ಆನಂತರದಲ್ಲಿ ಸುಷ್ಮಾ ಸ್ವಾರಜ್ ಅವರು ಜನಾರ್ದನ ರೆಡ್ಡಿಗೆ ರಾಜಕಾರಣ ಮತ್ತು ವ್ಯವಹಾರದ ಏಣಿ ಏರಲು ʼಭಾಗ್ಯದ ಲಕ್ಷ್ಮಿʼಯಾದರು.

ಹೌದು, ಸುಷ್ಮಾ ಸ್ವಾರಜ್ ಅವರ ಒಡನಾಟದಿಂದಾಗಿ ರೆಡ್ಡಿ ಬ್ರದರ್ಸ್ ರಾಜಕೀಯ ವಲಯದಲ್ಲಿ ಬಹುಬೇಗ ಪ್ರವರ್ಧನಮಾನಕ್ಕೆ ಬಂದರು. ಜೊತೆಜೊತೆಗೆ ಗಣಿಗಾರಿಕೆ ವ್ಯವಹಾರದಲ್ಲೂ ಸುಲಭ ರಹದಾರಿ ಕಂಡುಕೊಂಡರು. 2001ರಲ್ಲಿ ಓಬಳಾಪುರಂ ಮೈನಿಂಗ್ ಕಂಪನಿ ಸ್ಥಾಪಿಸಿದರು. ಅದರಿಂದ ದೊಡ್ಡ ಮಟ್ಟದ ಲಾಭ ಇಲ್ಲದಿದ್ದರೂ ಲಾಭದಲ್ಲಿಯೇ ಮೈನಿಂಗ್ ಸಾಗುತ್ತಿತ್ತು. ವಾಜಪೇಯಿ ಸರ್ಕಾರದಲ್ಲಿ ದೇಶದ ಅದಿರು ವಿದೇಶಕ್ಕೂ ರಫ್ತು ಮಾಡಬಹುದು ಎನ್ನುವ ಕಾನೂನು ತಂದರು. ಆಗ ಅದರ ಸಂಪೂರ್ಣ ಲಾಭ ಪಡೆದ ರೆಡ್ಡಿ ಬೃಹತ್ ಸಮ್ರಾಜ್ಯವನ್ನೇ ಕಟ್ಟಿದರು.

ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡುತ್ತಿದ್ದ ರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯನ್ನು ಆಕ್ರಮಿಸಿಕೊಂಡರು. ಕಾನೂನಿನ ಪ್ರಕಾರ, 68.5 ಹೆಕ್ಟೆರ್ ಗಣಿಗಾರಿಕೆಗೆ ಅವಕಾಶ ನೀಡಲಾಗಿತ್ತು. ಆದರೆ, ರೆಡ್ಡಿ ಮಾತ್ರ ಅಕ್ರಮವಾಗಿ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡು 8000 ಕೋಟಿಯಷ್ಟು ಹಣ ಗಳಿಸಿದರು. ಅದೇ ಹಣದಿಂದ ಮುಂದೆ ಕಡಪದಲ್ಲಿ ಬ್ರಾಹ್ಮಿಣಿ ಇಂಡಸ್ರ್ಟಿ ಹೆಸರಿನಲ್ಲಿ ಉಕ್ಕು ತಯಾರಿಕಾ ಉದ್ಯಮ ಆರಂಭಿಸಿದರು. ಹೀಗೆ ಆರ್ಥಿಕವಾಗಿ ಬೆಳೆಯುತ್ತ ಹೋದ ರೆಡ್ಡಿ ದೇಶದ ಪ್ರಭಾವಿ ಗಣ್ಯ ಉದ್ಯಮಿಯಾಗಿ ಬೆಳೆದರು.

ಬಳ್ಳಾರಿ ರಿಪಬ್ಲಿಕ್‌ ಅಸ್ತಿತ್ವಕ್ಕೆ

ಸಾವಿರಾರು ಕೋಟಿ ಒಡೆಯನಾಗಿ ಬೆಳೆದ ರೆಡ್ಡಿ, ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿದರು. ಯಡಿಯೂರಪ್ಪ ಸಿಎಂ ಹುದ್ದೆಗೆ ಏರಲು ಏಣಿಯಾಗಿ ನಿಂತಿದ್ದುಇದೇ ಜನಾರ್ಧನ ರೆಡ್ಡಿ. ಹೌದು, 2008ರಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆಗ ಬಿಜೆಪಿಗೆ 110 ಸ್ಥಾನಗಳು ಮಾತ್ರ ಬಂದಿದ್ದವು. ಸ್ಪಷ್ಟ ಬಹುಮತ ಇರಲಿಲ್ಲ. ಈ ಸಂದರ್ಭದಲ್ಲಿ ಬಿಎಸ್‌ವೈ ಬೆನ್ನಿಗೆ ನಿಂತಿದ್ದೇ ರೆಡ್ಡಿ, ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್‌ ಹಾಗೂ ಪಕ್ಷೇತರ ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಗದ್ದುಗೆ ಹಿಡಿಯಲು ದಾರಿ ಮಾಡಿಕೊಡಲಾಯಿತು.

ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಸರ್ಕಾರ ರಚಿಸಲು ನೆರವಾದ ಶಾಸಕರನ್ನು ಮತ್ತೆ ಗೆಲ್ಲಿಸಿಕೊಂಡು ಬರಲು ಹಣದ ಹೊಳೆ ಹರಿಸಿದ್ದು ಇದೇ ಜನಾರ್ದನ ರೆಡ್ಡಿ. ಹೀಗೆ ಯಡಿಯೂರಪ್ಪ ಅವರನ್ನು ಮೊದಲ ಬಾರಿ ಸಿಎಂ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ರೆಡ್ಡಿ, ರಾಜ್ಯ ಬಿಜೆಪಿಯ ಮೇಲೆ ಪಾರುಪತ್ಯ ಸಾಧಿಸಿದರು. ʼಯಡಿಯೂರಪ್ಪನವರ ಸರ್ಕಾರ ರೆಡ್ಡಿ ಜೇಬಿನಲ್ಲಿʼ ಎನ್ನುವಂತಹ ಮಾತುಗಳನ್ನು ಜನಸಾಮಾನ್ಯರು ಆಡುವಷ್ಟರ ಮಟ್ಟಿಗೆ ರೆಡ್ಡಿ ಸರ್ಕಾರದ ಮೇಲೆ ಪ್ರಾಬಲ್ಯ ಹೊಂದಿದ್ದರು.

ಕಟ್ಟಿದ ಸಾಮ್ರಾಜ್ಯ ಧರೆಗುರುಳಿದ್ದು ಹೇಗೆ?

2011ರ ಆಗಸ್ಟ್‌ನಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ಸಂತೋಷ್ ಹೆಗಡೆ ಅವರು ತಮ್ಮ ವರದಿಯಲ್ಲಿ ದೋಷಾರೋಪ ಹೊರಿಸಿದರು. ಅಲ್ಲಿಯವರೆಗೂ ತಮ್ಮ ಹಣ ಮತ್ತು ರಾಜಕೀಯ ಬಲದಿಂದ ಗಾಲಿ ಜನಾರ್ದನ ರೆಡ್ಡಿ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು.

ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 5, 2011ರಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತು. ಬಳಿಕ ಅವರನ್ನು ಆಂಧ್ರಪ್ರದೇಶದ ಪೆನುಗೊಂಡ ಜೈಲಿನಲ್ಲಿ ಇಡಲಾಗಿತ್ತು. ಆನಂತರ ಪರಪ್ಪನ ಅಗ್ರಹಾರಕ್ಕೂ ಕಳುಹಿಸಲಾಗಿತ್ತು. ಒಟ್ಟಾರೆ ಒಂದೂವರೆ ವರ್ಷಗಳ ಕಾಲ ಜನಾರ್ಧನ ರೆಡ್ಡಿ ಜೈಲುವಾಸ ಅನುಭವಿಸಿದರು.

ಆ ಬಳಿಕ ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಯಿತು. ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. 2015ರಲ್ಲಿ ರೆಡ್ಡಿಗೆ ಜಾಮೀನು ನೀಡಲಾಗಿತ್ತು. ಆ ಸಂದರ್ಭದಲ್ಲಿ ನ್ಯಾಯಾಧೀಶರಿಗೆ ಲಂಚ ನೀಡಲು ಮುಂದಾಗಿದ್ದರು ಎನ್ನುವ ಆರೋಪಗಳು ರೆಡ್ಡಿ ಮತ್ತು ಅವರ ತಂಡದ ಮೇಲಿದೆ.

ಗಂಭೀರ ಆರೋಪಗಳ ಮೇಲೆ ರೆಡ್ಡಿ ಜೈಲು ಪಾಲಾಗುತ್ತಲೇ, ಅವರೇ ಅಧಿಕಾರದ ರುಚಿ ತೋರಿಸಿದ ಬಿಜೆಪಿಯೇ ಅವರನ್ನು ಸಂಪೂರ್ಣ ಕೈಬಿಟ್ಟಿತ್ತು. ಅವರನ್ನು ಪಕ್ಷದಿಂದ ಉಚ್ಛಾಟಿಸಿ, ಅಂತರ ಕಾಯ್ದುಕೊಂಡಿತ್ತು.

ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ

ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬಂದ ಜನಾರ್ದನ ರೆಡ್ಡಿ, ತಮ್ಮನ್ನು ಏಕಾಂಗಿ ಮಾಡಿದ ಬಿಜೆಪಿಗೆ ಸೆಡ್ಡು ಹೊಡೆದು ಪತ್ನಿ ಲಕ್ಷ್ಮೀ ಅರುಣಾ ಅವರ ಜೊತೆಗೂಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಗೆಲುವು ಕಂಡ ರೆಡ್ಡಿ ವಿಧಾನಸಭಾ ಪ್ರವೇಶಿಸಿದರು. ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ಬಳ್ಳಾರಿ ನಗರ ಕ್ಷೇತ್ರದಿಂದ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿಯಾಗಿದ್ದ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿಯ ಸೋಲಿಗೆ ಕಾರಣರಾದರು.

ಲೋಕಸಭಾ ಚುನಾವಣೆ ಹತ್ತಿರ ಬರುವವರೆಗೂ ಜನಾರ್ದನ ರೆಡ್ಡಿಯನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅನುಮಾನವೇ ಇತ್ತು. ಆದರೆ ರೆಡ್ಡಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಜೊತೆಗೆ ಚರ್ಚೆ ನಡೆಸಿದ್ದು, ಅಮಿತ್ ಶಾ ಅವರೇ ಹಸಿರು ನಿಶಾನೆ ತೋರಿದ್ದು, ಯಾವುದೇ ಷರತ್ತುಗಳು ಇಲ್ಲದೆ ಪಕ್ಷದ ನಾಯಕತ್ವ ಮತ್ತು ಸಿದ್ದಾಂತಕ್ಕೆ ಬದ್ದವಾಗಿ ಪಕ್ಷ ಸೇರ್ಪಡೆಗೆ ಸಮ್ಮತಿಸಿದ್ದಾರೆ.

ಸದ್ಯ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸ್ಥಿತಿ ಇದೆ. ಏಕೆಂದರೆ, ಟಿಕೆಟ್ ಕೈತಪ್ಪಿದ ಕಾರಣಕ್ಕೆ ಅಸಮಾಧಾನಿತರ ಗುಂಪು ದೊಡ್ಡದಾಗಿದೆ. ಹೀಗಿದ್ದಾಗ ರೆಡ್ಡಿ ಬೆಂಬಲ ಅನಿವಾರ್ಯ ಎನ್ನುವ ಸ್ಥಿತಿ ಗೆ ಯಡಿಯೂರಪ್ಪ ಅವರು ಬಂದಂತೆ ತೋರುತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತರಲು ಯಡಿಯೂರಪ್ಪ ಅವರ ಜೊತೆಗೆ ನಿಂತಿದ್ದ ರೆಡ್ಡಿ ಇದೀಗ ಮತ್ತೆ ಬಿಜೆಪಿ ಸೇರಿದ್ದಾರೆ.

ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಸ್ಆರ್ ಹಿರೇಮಠ ಅವರು, ʼʼಇದು ಬಿಜೆಪಿಯ ವಾಷಿಂಗ್ ಮಷೀನ್ ಪ್ರಕ್ರಿಯೆ ಅಷ್ಟೇ, ಪ್ರತಿಪಕ್ಷದಲ್ಲಿರುವ ನಾಯಕರನ್ನು ಭ್ರಷ್ಟರು ಎನ್ನುವ ಬಿಜೆಪಿಯು ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಅವರು ಪ್ರಾಮಾಣಿಕ ರಾಜಕಾರಣಿಯಾಗುತ್ತಾರೆ. ಅದೇ ರೀತಿ ಜನಾರ್ದನ ರೆಡ್ಡಿ ವಿಚಾರದಲ್ಲಿ ನಡೆಯುತ್ತಿದೆʼʼ ಎಂದರು.

ʼʼಅಕ್ರಮ ಗಣಿಗಾರಿಕೆ ನಡೆಸಿದವನನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ನಾಯಕರು ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಒಬ್ಬ ಭ್ರಷ್ಟಾಚಾರಿಗೆ ನೀಡಿದ್ದಾರೆʼʼ ಎಂದು ಎಸ್ ಆರ್ ಹಿರೇಮಠ ಹೇಳಿದರು.

Read More
Next Story