
ಗಗನಯಾನ |ವರ್ಷಾಂತ್ಯದಲ್ಲಿ ಮಾನವ ರಹಿತ ನೌಕೆ ಉಡಾವಣೆಗೆ ಇಸ್ರೋ ಸಜ್ಜು
ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯ ಭಾಗವಾಗಿ 2027 ರಂದು ಗಗನಯಾನ ಹಮ್ಮಿಕೊಂಡಿದೆ. ಈ ಯೋಜನೆ ಹಿನ್ನೆಲೆ ಇದೇ ವರ್ಷಾಂತ್ಯದಲ್ಲಿ ಮಾನವ ರಹಿತ ನೌಕೆ ಉಡಾವಣೆ ಮಾಡಲು ಇಸ್ರೋ ತೀರ್ಮಾನಿಸಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆಯುತ್ತಿರುವ ಇಸ್ರೋ ಸಂಸ್ಥೆಯು ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಭರದ ಸಿದ್ಧತೆ ನಡೆಸುತ್ತಿದೆ. ಯೋಜನೆಯ ಭಾಗವಾಗಿ ವರ್ಷಾಂತ್ಯದ ವೇಳೆಗೆ ಮಾನವ ರಹಿತ ಗಗನನೌಕೆ ಉಡಾವಣೆ ಮಾಡಲು ಸಿದ್ಧತೆ ಕೈಗೊಂಡಿದೆ.
ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಗುರುವಾರ ಗಗನಯಾನ ಯೋಜನೆ ಸಂಬಂಧ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು, ಭಾರತದ ಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವು 2027ರಲ್ಲಿ ನಡೆಯಲಿದೆ. ಯೋಜನೆ ಭಾಗವಾಗಿ ವರ್ಷಾಂತ್ಯದ ವೇಳೆಗೆ ಮಾನವ ರಹಿತ ನೌಕೆ ಉಡಾವಣೆ ಮಾಡಲಾಗುವುದು. ಈ ವೇಳೆ ಮೂವರು ಗಗನಯಾತ್ರಿಗಳನ್ನು ಒಳಗೊಂಡ ರಾಕೆಟ್ ಉಡಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಗಗನಯಾನ ಯೋಜನೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಯೋಜನೆಯ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ರಾಕೆಟ್‌ನಲ್ಲಿ ಹಲವು ಸುರಕ್ಷಿತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಪ್ಯಾರಾಚೂಟ್ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳು ಮತ್ತು ಅವುಗಳ ಕಾರ್ಯನಿರ್ವಹಣೆ ಕುರಿತ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮೊದಲ ಮಾನವ ಸಹಿತ ಗಗನಯಾನ ಯೋಜನೆ 2027 ರ ಮೊದಲ ತ್ರೈಮಾಸಿಕದಲ್ಲಿ ಆರಂಭವಾಗಬಹುದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ಯೋಜನೆಗಳು ಮತ್ತು ಪ್ರಾದೇಶಿಕ ಸುಧಾರಣೆಗಳನ್ನು ತರಲಾಗುತ್ತಿದೆ ಎಂದು ಹೇಳಿದರು.
ಯೋಜನೆಗೆ 7,700 ಪರೀಕ್ಷೆ
ಮಾನವಸಹಿತ ಗಗನನೌಕೆ ಉಡಾವಣೆ ಹಿನ್ನೆಲೆಯಲ್ಲಿ ಸುಮಾರು 7,700 ಪರೀಕ್ಷೆಗಳನ್ನು ನಡೆಸಲಾಗಿದೆ. ಉಳಿದ 2,300 ಪರೀಕ್ಷೆಗಳು ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದರು.
ಗಗನಯಾನ ಯೋಜನೆಯ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಸಮಗ್ರ ಪರೀಕ್ಷೆ ಮತ್ತು ಸಾಫ್ಟ್‌ವೇರ್ ಮೌಲ್ಯೀಕರಣ ನಡೆಸುತ್ತಿದ್ದೇವೆ. ಸಂಪೂರ್ಣ ಸುರಕ್ಷತೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಲು ಸಿಬ್ಬಂದಿಗೆ ಹಾರಾಟ ತರಬೇತಿ ನೀಡಲಾಗುತ್ತಿದೆ. ಈ ಯೋಜನೆಗೆ ಆಯ್ಕೆಯಾಗಿರುವ ನಾಲ್ವರು ಗಗನಯಾತ್ರಿಗಳನ್ನು 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದು, ಅವರ ತರಬೇತಿಯು ನಿಕಟ ಮೇಲ್ವಿಚಾರಣೆಯಲ್ಲಿ ಮುಂದುವರಿಯುತ್ತಿದೆ. ಈ ಹಂತದಲ್ಲಿ ಸಿಬ್ಬಂದಿಯೊಂದಿಗೆ ಸಾರ್ವಜನಿಕ ಸಂವಹನ ಸೀಮಿತವಾಗಿದೆ ಎಂದು ಹೇಳಿದರು.
2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಗುರಿ
2035ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಗುರಿ ಹೊಂದಿದೆ. ಈ ನಿಲ್ದಾಣದ ಮೊದಲ ಮಾಡ್ಯೂಲ್ ಅನ್ನು 2028ರಲ್ಲಿ ಉಡಾವಣೆ ಮಾಡಲಾಗುವುದು. ನಂತರ ಸಂಪೂರ್ಣವಾಗಿ ಕಾರ್ಯಾಚರಣೆಗೆ ಬರುವ ನಿರೀಕ್ಷೆಯಿದೆ. ಈ ಯೋಜನೆಯು ಬಾಹ್ಯಾಕಾಶ ಅಧ್ಯಯನ, ಜೀವರಸಾಯನಶಾಸ್ತ್ರ ಮತ್ತು ವೈದ್ಯಕೀಯ ಸಂಶೋಧನೆ ಸೇರಿದಂತೆ ಇತರೆ ಕ್ಷೇತ್ರಗಳಿಗೆ ನೆರವಾಗಲಿದೆ.
ಇಸ್ರೋ ಸಂಸ್ಥೆಯು ಸಂಪೂರ್ಣ ಯೋಜನೆ ರೂಪಿಸುತ್ತಿದೆ. ಈ ಸಂಬಂಧ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಬಾಹಾಕ್ಯಾಶದಲ್ಲಿ ಅಧ್ಯಯನ, ಗುರುತ್ವಾಕರ್ಷಣೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸಂಶೋಧ ನಡೆಸಲಾಗುವುದು. ಸುಮಾರು 400 ಕಿ.ಮೀ. ಎತ್ತರದ ಭೂ ಕಕ್ಷೆಯಲ್ಲಿ ನಿಲ್ದಾಣವನ್ನು ಸ್ಥಿರೀಕರಿಸಲಾಗುವುದು ಎಂದು ತಿಳಿಸಿದರು.
ಚಂದ್ರಯಾನ-4, 5ಕ್ಕೆ ಅನುಮೋದನೆ
ಇಸ್ರೋದ ಚಂದ್ರಯಾನ-4 ಮತ್ತು 5ಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 2,104.06 ಕೋಟಿ ರೂ. ವೆಚ್ಚದ ಚಂದ್ರಯಾನ-4 ಕೈಗೆತ್ತಿಕೊಳ್ಳಲಾಗುವುದು. ಈ ಮಿಷನ್ ಚಂದ್ರನ ಮೇಲ್ಮೈಯಿಂದ ಕಲ್ಲು ಮತ್ತು ಮಣ್ಣಿನ ಮಾದರಿ ಸಂಗ್ರಹಿಸಿ ಭೂಮಿಗೆ ತರುವ ಗುರಿ ಹೊಂದಿದೆ. ಚಂದ್ರಯಾನ-5 ಅನ್ನು ಜಪಾನ್ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು. ಈ ಯೋಜನೆಯು ಚಂದ್ರನ ಮೇಲ್ಮೈ ಅಧ್ಯಯನ ಮಾಡಲು 350 ಕೆ.ಜಿ. ರೋವರ್ ಕೊಂಡೊಯ್ಯುತ್ತದೆ. ಸ್ಥಳೀಯ ರಾಕೆಟ್ ಬಳಸಿ ಭಾರತೀಯ ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸುವ ಯೋಜನೆ ಅಭಿವೃದ್ಧಿಪಡಿಸಲು ಸರ್ಕಾರವು ಇಸ್ರೋಗೆ ಸೂಚನೆ ನೀಡಿದೆ. ಸುರಕ್ಷಿತ ವಾಪಸಾತಿ ಕಾರ್ಯಾಚರಣೆ ಗಮನದಲ್ಲಿ ಇಟ್ಟುಕೊಂಡು ಯೋಜನೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಬ್ಲೂ ಬರ್ಡ್ ಉಪಗ್ರಹ ಉಡಾವಣೆ
ಇಸ್ರೋ ಸಂಸ್ಥೆಯು ಅಮೆರಿಕದ ಸಹಯೋಗದಲ್ಲಿ ಮಹತ್ವದ ಉಪಗ್ರಹ ಉಡಾವಣೆಗೆ ಸಿದ್ಧತೆ ಕೈಗೊಂಡಿದೆ. ಬ್ಲೂಬರ್ಡ್ ಸಂವಹನ ಉಪಗ್ರಹವನ್ನು ನವೆಂಬರ್ ತಿಂಗಳಲ್ಲಿ ಉಡಾವಣೆ ಮಾಡಲು ಯೋಜಿಸಿದೆ. ನವೆಂಬರ್ ತಿಂಗಳಲ್ಲಿ ಸಾಧ್ಯವಾಗದಿದ್ದರೆ ವರ್ಷಾಂತ್ಯದೊಳಗೆ ಉಡಾವಣೆಯಾಗಲಿದೆ. ಉಡಾವಣಾ ದಿನಾಂಕವನ್ನು ಪ್ರಧಾನಿ ಘೋಷಿಸಲಿದ್ದು, ವರ್ಷಾಂತ್ಯಕ್ಕೆ ಮೊದಲು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಬ್ಯೂ ಬರ್ಡ್ ಉಪಗ್ರಹವು 6.5 ಟನ್ ತೂಕ ಹೊಂದಿದೆ. ಬ್ಯೂ ಬರ್ಡ್ ಉಪಗ್ರಹವು ಸಂಸ್ಥೆಯ ಕೈ ಸೇರಿದ್ದು, ಉಡಾವಣೆಗೆ ಅಗತ್ಯವಾದ ವಾಹನ ನಿರ್ಮಾಣ ಪ್ರಗತಿಯಲ್ಲಿದೆ. ಈ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್‌ವಿಎಂ-3 ರ ಮೂಲಕ ಕಕ್ಷೆಗೆ ಸೇರಿಸಲಾಗುವುದು ಎಂದು ಹೇಳಿದರು.