Manmohan Singh Death | ದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ಮನಮೋಹನ ಸಿಂಗ್ ಅಂತ್ಯಕ್ರಿಯೆ; ಗಣ್ಯರಿಂದ ಅಂತಿಮ ನಮನ
ನವದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ಸಿಖ್ ಸಮುದಾಯದ ಸಂಪ್ರದಾಯದಂತೆ ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಪವಿತ್ರ ಗುರುಗ್ರಂಥ ಸಾಹಿಬ್ ಪಠಣದ ಮೂಲಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ನವ ಭಾರತದ ಆರ್ಥಿಕ ಸುಧಾರಣೆಯ ಹರಿಕಾರ, ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ1 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ನವದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ಸಿಖ್ ಸಮುದಾಯದ ಸಂಪ್ರದಾಯದಂತೆ ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಪವಿತ್ರ ಗುರುಗ್ರಂಥ ಸಾಹಿಬ್ ವಾಕ್ಯಗಳ ಪಠಣದ ಮೂಲಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಸುಮಾರು 30ನಿಮಿಷಗಳ ಕಾಲ ಧಾರ್ಮಿಕ ಗುರುಗಳು ಮಂತ್ರ ಪಠಿಸಿದರು. ಬಳಿಕ ಪಾರ್ಥಿವ ಶರೀರದ ಸುತ್ತ ಕಟ್ಟಿಗೆಗಳನ್ನು ಜೋಡಿಸಿ, ಕುಟುಂಬದ ಹಿರಿಯ ವ್ಯಕ್ತಿ ಕೈಯಿಂದ ಅಗ್ನಿ ಸ್ಪರ್ಶ ಮಾಡಿಸಲಾಯಿತು. ಆ ಮೂಲಕ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಪಂಚಭೂತಗಳಲ್ಲಿ ಲೀನವಾದರು.
ಸೇನಾಧಿಕಾರಿಗಳು ಮೂರು ಸುತ್ತು ಕುಶಾಲುತೋಪು ಸಿಡಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಿದರು. ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದರು.
ಬೆಳಿಗ್ಗೆ ಎಐಸಿಸಿ ಕಚೇರಿಯಲ್ಲೂ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ರಾಜ್ಯಗಳ ಕಾಂಗ್ರೆಸ್ ಹಿರಿಯ ನಾಯಕರು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು. ಬಳಿಕ ನಿಗಮಬೋಧ್ ಘಾಟ್‌ನಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸಂತಾಪ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಸಂತಾಪ ಸೂಚಿಸಿದ್ದಾರೆ.
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಶೋಕದಲ್ಲಿ ಅಮೆರಿಕ ಕೂಡ ಭಾಗಿಯಾಗಲಿದೆ. ಸಂಕಷ್ಟದ ಸಮಯದಲ್ಲಿ ದೇಶದ ಅಭಿವೃದ್ಧಿಗಾಗಿ ಜೀವನ ಮುಡುಪಾಗಿಟ್ಟಿದ್ದರು ಎಂದು ಬಣ್ಣಿಸಿದ್ದಾರೆ.