ಆ.29 ರಿಂದ ಹಾಕಿ ಏಷ್ಯಾಕಪ್ ; ಟೂರ್ನಿಗೆ ಉಚಿತ ಪ್ರವೇಶ ಘೋಷಣೆ
x

ಆ.29 ರಿಂದ ಹಾಕಿ ಏಷ್ಯಾಕಪ್ ; ಟೂರ್ನಿಗೆ ಉಚಿತ ಪ್ರವೇಶ ಘೋಷಣೆ

ಸೆ.7 ರಂದು ನಡೆಯುವ ಫೈನಲ್ ಪಂದ್ಯದೊಂದಿಗೆ ಟೂರ್ನಿ ಕೊನೆಗೊಳ್ಳಲಿದೆ. ಎಲ್ಲ ಪಂದ್ಯಗಳು ಬಿಹಾರದಲ್ಲಿ ನಡೆಯಲಿದ್ದು, ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲು ಹಾಕಿ ಇಂಡಿಯಾ ನಿರ್ಧರಿಸಿದೆ.


ಹಾಕಿ ಅಭಿಮಾನಿಗಳಿಗೆ ಸಿಹಿ ಸುದ್ದಿ ದೊರೆತಿದೆ. ಹಾಕಿ ಏಷ್ಯಾಕಪ್ -2025 ಟೂರ್ನಿಗೆ ಉಚಿತ ಪ್ರವೇಶ ಘೋಷಣೆ ಮಾಡಲಾಗಿದೆ. ಈ ಬಾರಿಯ ಏಷ್ಯಾಕಪ್​ ಆತಿಥ್ಯವನ್ನು ಭಾರತ ವಹಿಸಿದೆ. ಇದೇ ತಿಂಗಳು 29 ರಂದು ಪ್ರಾರಂಭವಾಗುವ ಟೂರ್ನಿಯು ಸೆ.7 ರಂದು ನಡೆಯುವ ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. ಎಲ್ಲ ಪಂದ್ಯಗಳು ಬಿಹಾರದಲ್ಲಿ ನಡೆಯಲಿದ್ದು, ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲು ಹಾಕಿ ಇಂಡಿಯಾ ನಿರ್ಧರಿಸಿದೆ.

ಏಷ್ಯಾಕಪ್ ಪಂದ್ಯಗಳು ಬಿಹಾರದ ರಾಜಗೀರ್ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿವೆ. ದೇಶದಲ್ಲಿ ಹಾಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಹಾಕಿ ಇಂಡಿಯಾ ಉಚಿತ ಪ್ರವೇಶ ಒದಗಿಸಲಿದೆ. ಈ ನಿಟ್ಟಿನಲ್ಲಿ ಅಭಿಮಾನಿಗಳು ವೆಬ್‌ಸೈಟ್ ಮೂಲಕ ಪಂದ್ಯಗಳಿಗೆ ಉಚಿತ ಪಾಸ್‌ಗಳನ್ನು ಪಡೆಯಬಹುದು ಎಂದು ಹಾಕಿ ಇಂಡಿಯಾ ತಿಳಿಸಿದೆ.

ಪ್ರವೇಶ ಪಡೆದ ಅಭಿಮಾನಿಗಳಿಗೆ ವರ್ಚುಯಲ್ ಟಿಕೆಟ್ ನೀಡಲಾಗುವುದು. ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಈ ಪ್ರಕ್ರಿಯೆ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.

ಉಚಿತ ಪ್ರವೇಶಕ್ಕೆ ಕಾರಣ ಏನು?

ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟರ್ಕಿ ಮಾತನಾಡಿ, ರಾಜ್‌ಗಿರ್‌ನಲ್ಲಿ ಪುರುಷರ ಏಷ್ಯಾಕಪ್ ಪಂದ್ಯಾವಳಿಯನ್ನು ಆಯೋಜಿಸುವುದು ಭಾರತೀಯ ಹಾಕಿಗೆ ಒಂದು ಐತಿಹಾಸಿಕ ಕ್ಷಣ ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬ ಅಭಿಮಾನಿಯೂ ಈ ಪ್ರಯಾಣದ ಭಾಗವಾಗಲು ಬಯಸುತ್ತಾರೆ. ವಿಶ್ವ ದರ್ಜೆಯ ಹಾಕಿಯನ್ನು ಉತ್ತೇಜಿಸಲು ವಿದ್ಯಾರ್ಥಿಗಳು ಮತ್ತು ಯುವ ಆಟಗಾರರು ಸೇರಿದಂತೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಒದಗಿಸಲಾಗುತ್ತಿದೆ. ಇದೇ ಉಚಿತ ಪ್ರವೇಶದ ಉದ್ದೇಶವಾಗಿದೆ. ಅಲ್ಲದೇ ದೇಶದಲ್ಲಿ ಹಾಕಿ ಆಟವನ್ನು ಉತ್ತೇಜಿಸಲು ಶ್ರಮಿಸುತ್ತೇವೆ. ಇದು ಕೇವಲ ಆಟವಲ್ಲ, ಕ್ರೀಡಾ ಉತ್ಸವ ಎಂದು ಹೇಳಿದ್ದಾರೆ.

ವಿಶ್ವಕಪ್‌ಗೆ ನೇರ ಅರ್ಹತೆ: ಈ ಬಾರಿಯ ಹಾಕಿ ಏಷ್ಯಾಕಪ್​ನಲ್ಲಿ ಗೆದ್ದ ತಂಡವೂ 2026ರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತವೆ. ಈ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಭಾರತ, ಜಪಾನ್, ಚೀನಾ, ಕಝಾಕಿಸ್ತಾನ್, ಮಲೇಷ್ಯಾ, ಕೊರಿಯಾ, ಬಾಂಗ್ಲಾದೇಶ, ಚೈನೀಸ್ ತೈಪೆ ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಭಾಗಿಯಾಗುತ್ತಿವೆ. ಪಾಕಿಸ್ತಾನ ಮತ್ತು ಒಮನ್ ತಂಡಗಳು ಸಹ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಿತ್ತು. ಆದರೆ, ಇತ್ತೀಚೆಗೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ, ಪಾಕಿಸ್ತಾನ ಪಂದ್ಯಾವಳಿಯಿಂದ ಹಿಂದೆ ಸರಿಯಿತು. ಪಾಕಿಸ್ತಾನ ತಂಡವು ಭಾರತದಲ್ಲಿ ಬಂದು ಆಡಲು ಸರ್ಕಾರ ಅನುಮತಿ ನೀಡಿದ್ದರೂ, ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಹಿಂದೆ ಸರಿದಿದೆ.

Read More
Next Story