
ಪೊಲೀಸರು ವಶಪಡಿಸಿಕೊಂಡಿರು ಶ್ರೀಗಂಧದ ತುಂಡುಗಳ ಮೂಟೆ
ಈರುಳ್ಳಿ ಚೀಲಗಳ ಮಧ್ಯೆ 750 ಕೆ.ಜಿ ಶ್ರೀಗಂಧ ಸಾಗಾಟ, ಆಂಧ್ರ ಮೂಲದ ನಾಲ್ವರ ಬಂಧನ
ಆರೋಪಿಗಳು ಸೋಮೇಶ್ವರನಗರ ಆರ್ಚ್ ಬಳಿ ಗೂಡ್ಸ್ ವಾಹನ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಈ ವೇಳೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಮಾಲು ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸರಕು ಸಾಗಣೆ ವಾಹನದಲ್ಲಿ ಈರುಳ್ಳಿ ಚೀಲಗಳ ಮಧ್ಯೆ ಅಕ್ರಮವಾಗಿ 750 ಕೆ.ಜಿ. ತೂಕದ 258 ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಬೆಂಗಳೂರಿನ ಸಿದ್ಧಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಶೇಕ್ ಅಬ್ದುಲ್ ಕಲಾಂ(47), ರಾಮ ಭೂಪಲ್ (40) ಶೇಕ್ ಶಾರೂಕ್(31) ಹಾಗೂ ಪರಮೇಶ್ (30) ಬಂಧಿತರು. ಆರೋಪಿಗಳಿಂದ ಶ್ರೀಗಂಧದ ತುಂಡುಗಳು, ಸರಕು ಸಾಗಣೆ ವಾಹನ ಹಾಗೂ ಕಾರು ಜಪ್ತಿ ಮಾಡಲಾಗಿದೆ.
ಆರೋಪಿಗಳು ಅ.16ರಂದು ಮಧ್ಯರಾತ್ರಿ 12.30ರ ಸುಮಾರಿಗೆ ಸೋಮೇಶ್ವರನಗರದ ಆರ್ಚ್ ಬಳಿ ಗೂಡ್ಸ್ ವಾಹನ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಈ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಿಪ್ರ ಕಾರ್ಯಾಚರಣೆ ಕೈಗೊಂಡು ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಘಟನೆ ?
ಆಂಧ್ರಪ್ರದೇಶದ ಕರ್ನೂಲಿನಿಂದ ಆರೋಪಿಗಳು ಶ್ರೀಗಂಧದ ತುಂಡುಗಳನ್ನು ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದರು. 18 ಚೀಲಗಳಲ್ಲಿ 258 ತುಂಡುಗಳನ್ನು ತುಂಬಿಸಿ ಲಘು ಸರಕು ಸಾಗಾಣಿ ವಾಹನದಲ್ಲಿ ಸಾಗಿಸುತ್ತಿದ್ದರು. ಅನುಮಾನ ಬಾರದಂತೆ ವಾಹನದಲ್ಲಿ ಈರುಳ್ಳಿ ಚೀಲಗಳನ್ನು ತುಂಬಲಾಗಿತ್ತು.
ಶೇಕ್ ಶಾರೂಕ್ ವಾಹನ ಚಾಲನೆ ಮಾಡಿಕೊಂಡು ಬಂದರೆ ಉಳಿದ ಮೂವರು ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿ ಬಂದಿದ್ದರು.
ನಗರದ ವ್ಯಕ್ತಿಗೆ ಮಾರಾಟ
ನಾಲ್ವರು ಆರೋಪಿಗಳು ಶ್ರೀಗಂಧದ ತುಂಡುಗಳನ್ನು ನಗರದ ವ್ಯಕ್ತಿಯೊಬ್ಬರಿಗೆ ತಲುಪಿಸಲು ಬಂದಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಶ್ರೀಗಂಧದ ತುಂಡುಗಳ ಕಳ್ಳ ಸಾಗಾಣಿಕೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

