ಬೆಂಗಳೂರಿನಲ್ಲಿ ಕಸದ ಕೊಂಪೆಯಂತಾದ ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಸ್ಮಾರಕ
x
ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯವರ ಸ್ಮಾರಕ

ಬೆಂಗಳೂರಿನಲ್ಲಿ ಕಸದ ಕೊಂಪೆಯಂತಾದ ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಸ್ಮಾರಕ

ನೀಲಂ ಸಂಜೀವ ರೆಡ್ಡಿಯವರು ತಮ್ಮ ಶರೀರವನ್ನು ಸಮಾಧಿ ಮಾಡಬಾರದು ಹಾಗೂ ದಹನದ ಬಳಿಕ ಭಸ್ಮವನ್ನು ನದಿಯಲ್ಲಿ ವಿಸರ್ಜಿಸಲು ಸಂಬಂಧಿಗಳಲ್ಲಿ ವಿನಂತಿಸಿಕೊಂಡಿದ್ದರು. ಆದರೆ ಆಗಿನ ಕೇಂದ್ರ ಸರ್ಕಾರ ಸ್ಮಾರಕ ರಚನೆಗೆ ಮುಂದಾಯಿತು.


ಭಾರತದ ಮಾಜಿ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳು ವಯೋಸಹಜವಾಗಿ ನಿಧನರಾದರೆ ಪ್ರತಿಷ್ಠಿತ ಪ್ರದೇಶಗಳಲ್ಲಿ ಅಂತ್ಯಕ್ರಿಯೆ ನಡೆಸಿ ಅಲ್ಲಿ ಸುಂದರವಾದ ಸ್ಮಾರಕ ನಿರ್ಮಿಸಿ ಅದನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಮೂಲಕ ಅದೊಂದು ಸುಂದರ ಪ್ರವಾಸಿ ತಾಣವಾಗುವಂತೆ ಅಭಿವೃದ್ಧಿ ಪಡಿಸಲಾಗುತ್ತದೆ.

ಆದರೆ ಬೆಂಗಳೂರಿನಲ್ಲಿ ಭಾರತದ ಘನತೆವೆತ್ತ ರಾಷ್ಟ್ರಪತಿಯೊಬ್ಬರ ಸ್ಮಾರಕವಿದ್ದು, ಅದು ಅವ್ಯವಸ್ಥೆಯ ಆಗರವಾಗಿದೆ. ಸರ್ಕಾರ ಮತ್ತು ಸಾರ್ವಜನಿಕರಿಂದ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ. ಈ ಸ್ಮಾರಕ ಕಸದ ರಾಶಿಯ ಕೊಂಪೆಯಾಗಿ ಪರಿವರ್ತನೆಯಾಗಿದೆ.

ಭಾರತದ ರಾಷ್ಟ್ರಪತಿಯೊಬ್ಬರ ಸ್ಮಾರಕ‌ ಬೆಂಗಳೂರಿನಲ್ಲಿ ‌ಇರುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಹೌದು ಭಾರತದ ರಾಷ್ಟ್ರಪತಿಯೊಬ್ಬರ ಸ್ಮಾರಕ ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ಇದೆ ಎಂದು‌ ಹೇಳಿದರೆ ಆಶ್ಚರ್ಯವಾಗಬಹುದು.

ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ, 1977 – 1982 ಅವಧಿಯಲ್ಲಿ ರಾಷ್ಟ್ರಪತಿಗಳಾಗಿದ್ದ (ಮೊರಾರ್ಜಿ ದೇಸಾಯಿ, ಚೌಧರಿ ಚರಣ್‌ ಸಿಂಗ್‌ ಮತ್ತು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ) ನೀಲಂ ಸಂಜೀವ ರೆಡ್ಡಿ ಅವರ ಸ್ಮಾರಕ ಸ್ಮಾರಕವನ್ನು ಬೆಂಗಳೂರಿನ ದಂಡು ಪ್ರದೇಶವಾದ ಕಾಕ್ಸ್ ಟೌನ್ ಕಲ್ಲಹಳ್ಳಿ ( ಕಲ್ಪಳ್ಳಿ) ಸ್ಮಶಾನದ ಆವರಣದಲ್ಲಿ ನಿರ್ಮಿಸಲಾಗಿದೆ.


1977 ರ ಜುಲೈ 25 ರಿಂದ 1982 ಜುಲೈ 25 ರ ತನಕ ನೀಲಂ ಸಂಜೀವ ರೆಡ್ಡಿ ಅವರು‌ ಭಾರತದ ರಾಷ್ಟ್ರಪತಿಯಾಗಿ ಸೇವೆಸಲ್ಲಿಸಿದರು. ಈ ಕಾಲಾವಧಿಯಲ್ಲಿ ‌ಕರ್ನಾಟಕದವರೆ ಆದ ಬಿ.ಡಿ.ಜತ್ತಿಯವರು ಉಪ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿ ಹುದ್ದೆಯಲ್ಲದೆ ಎರಡು ಬಾರಿ ಲೋಕಸಭಾ ಅಧ್ಯಕ್ಷರಾಗಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ‌ ಹಾಗೂ ಕೇಂದ್ರ ಸಚಿವರಾಗಿ ಹೀಗೆ ಹಲವಾರು ಉನ್ನತ ಹುದ್ದೆಗಳಲ್ಲಿ ಕಾಂಗ್ರೆಸ್‌ ನಾಯಕ ನೀಲಂ ಸಂಜೀವ್ ರೆಡ್ಡಿ ಅವರು ಸೇವೆ ಸಲ್ಲಿಸಿದ್ದಾರೆ.

1913 ಮೇ ತಿಂಗಳ 19 ರಂದು ಆಂಧ್ರ ಪ್ರದೇಶ ಅನಂತಪುರ‌ ಜಿಲ್ಲೆಯಲ್ಲಿ ಜನಿಸಿದ ನೀಲಂ‌ ಸಂಜೀವ್ ರೆಡ್ಡಿ ಅವರು ಮಹಾತ್ಮಾಗಾಂಧಿ ನೇತೃತ್ವದಲ್ಲಿ ʼಭಾರತ ಬಿಟ್ಟು ತೊಲಗಿʼ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಆಂಧ್ರಪ್ರದೇಶದ ಉಪ‌ಮುಖ್ಯಮಂತ್ರಿ, ಮುಖ್ಯಮಂತ್ರಿ, ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ, ಪ್ರಧಾನಮಂತ್ರಿಗಳಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಇಂದಿರಾಗಾಂಧಿ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನೀಲಂ ಸಂಜೀವ ರೆಡ್ಡಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುತ್ತಿರುವುದು

ಆಂಧ್ರಪ್ರದೇಶದ ಅನಂತಪುರದ ಗಡಿಯ ಕರ್ನಾಟಕದ ಜತೆಗೆ ವಿಶೇಷ ನಂಟಿದ್ದ ಅವರ ಸಂಬಂಧಿಕರ ಬೆಂಗಳೂರು ಮನೆಗಳಲ್ಲಿ ಆಗಾಗ ವಾಸವಿರುತ್ತಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ 1960 ರ ಬೆಂಗಳೂರು ಸಮಾವೇಶದ ನೇತೃತ್ವ ವಹಿಸಿದ್ದ ನೀಲಂ ಸಂಜೀವ ರೆಡ್ಡಿ, ಬೆಂಗಳೂರಿನ ಸಂಬಂಧಿ ಮನೆಯಲ್ಲೇ 1996 ರ ಜೂನ್ ಒಂದರಂದು ವಯೋಸಹಜ ಕಾರಣಕ್ಕೆ ನಿಧನರಾಗಿದ್ದರು.

ಅವರಿಗೆ ಇಷ್ಟವಿರಲಿಲ್ಲ

ನೀಲಂ ಸಂಜೀವ ರೆಡ್ಡಿಯವರು ತಮ್ಮ ಶರೀರವನ್ನು ಸಮಾಧಿ ಮಾಡಬಾರದು ಹಾಗೂ ದಹನದ ಬಳಿಕ ಭಸ್ಮವನ್ನು ನದಿಯಲ್ಲಿ ವಿಸರ್ಜಿಸಲು ಸಂಬಂಧಿಗಳಲ್ಲಿ ವಿನಂತಿಸಿಕೊಂಡಿದ್ದರು. ಆದರೆ ಆಗಿನ ಕೇಂದ್ರ ಸರ್ಕಾರ ಸ್ಮಾರಕ ರಚನೆಗೆ ಮುಂದಾಯಿತು.

ಅವರ ಅಂತಿಮ ಆಸೆಯಂತೆ ನೀಲಂ ಸಂಜೀವ್ ರೆಡ್ಡಿಯವರ ಅಂತ್ಯಕ್ರಿಯೆಯನ್ನು‌ ‌ ಪೂರ್ವ ಬೆಂಗಳೂರಿನ ಕಲ್ಪಳ್ಳಿ ಸ್ಮಶಾನದಲ್ಲಿ ‌ನೆರವೇರಿಸಲಾಗಿತ್ತು. ಅಂತ್ಯಕ್ರಿಯೆ ನರವೆರಿಸಿದ ಪ್ರದೇಶದಲ್ಲಿ‌ ಅಂದಾಜು ಐದು ಗುಂಟೆ ಜಮೀನಿನಲ್ಲಿ ಸ್ಮಾರಕ ನಿರ್ಮಿಸಿ ಸುತ್ತಲೂ ಕಬ್ಬಿಣದ ಬೇಲಿ ಹಾಕಲಾಗಿದೆ.

1996ರ ಜೂನ್ 3ರಂದು ಸಂಜೀವ ರೆಡ್ಡಿಯವರ ಅಂತ್ಯಕ್ರಿಯೆಯಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು, ಆದರೆ ಅದರ ನಂತರ ಈ ಸ್ಮಾರಕಕ್ಕೆ ಯಾರೂ ಭೇಟಿ ನೀಡಲು ಅಥವಾ ಸಮಾಧಿ ಸಂರಕ್ಷಣೆಗೆ ಯಾರೂ ಮುಂದಾಗಲೇ ಇಲ್ಲ ಎನ್ನುವುದು ವೈಪರೀತ್ಯ. ಅವರ ಮೊಮ್ಮಕ್ಕಳಾದ ಡಿ.ವಿ. ಪ್ರಸಾದ (ನಿವೃತ್ತ ಐಎಎಸ್‌ ಅಧಿಕಾರಿ) ಹಾಗೂ ಸಮಾಜ ಸೇವಕ ಎನ್.ಎಸ್. ರವಿ ಅವರು ನೀಲಂ ಸಂಜೀವ ರೆಡ್ಡಿಯವರ ಪುಣ್ಯತಿಥಿ ಸಂದರ್ಭದಲ್ಲಿ ಆ ಸ್ಮಾರಕದ ಬಳಿ ಭೇಟಿ ನೀಡಿ ಗೌರವ ಸಲ್ಲಿಸುತ್ತಾರಂತೆ.


ಅವ್ಯವಸ್ಥೆಯ ಆಗರ

ಸ್ಮಾರಕ ಯಾವುದೇ ರೀತಿಯಲ್ಲಿ ನಿರ್ವಹಣೆ ಮಾಡದೆ ಅವ್ಯವಸ್ಥೆಯ ಆಗರವಾಗಿದ್ದು. ಸ್ಮಾರಕದ ಒಳಗೆ‌ ಹೊರಗೆ ಕಸದ ರಾಶಿ ಬಿದ್ದಿದ್ದು ಇಡೀ ಸ್ಮಾರಕದ ಪ್ರದೇಶ ಮೇಲ್ನೋಟಕ್ಕೆ ‌ಕಸದ‌ ತೊಟ್ಟಿಯಂತೆ ಭಾಸವಾಗುತ್ತದೆ.

ಹೊರಗೆ ರಾಷ್ಟ್ರಪತಿ ನೀಲಂ ಸಂಜೀವ್ ರೆಡ್ಡಿ ಯವವರ ಸ್ಮಾರಕ‌ (19 ಮೇ 1913 - 1 ಜೂನ್ 1996) ಎಂಬ ಫಲಕ ಬಿಟ್ಟರೆ ಅವರ ಸಾರ್ವಜನಿಕ ಜೀವನದ ಬಗ್ಗೆ ಮಾಹಿತಿ ನೀಡುವ ಯಾವ‌ ಫಲಕಗಳು ಇಲ್ಲ. ಸ್ಮಾರಕದ ‌ಒಳಗೆ ದೀಪದ‌ ವ್ಯವಸ್ಥೆ ಇದ್ದರೂ ಅವುಗಳಲ್ಲಿ ಹೆಚ್ಚಿನವು‌ ಕೆಟ್ಟುಹೋಗಿವೆ.

ನೀಲಂ ಸಂಜೀವ್ ರೆಡ್ಡಿ ಅವರ ಕುಟುಂಬದ ಹಿತೈಶಿ ಬಸವರಾಜ್ ರೆಡ್ಡಿ ಅವರ ಪ್ರಕಾರ ಆರಂಭದಿಂದಲೂ ಬೆಂಗಳೂರು ಮಹಾನಗರ ಪಾಲಿಕೆ ಸ್ಮಾರಕ ನಿರ್ವಹಣೆ ಮಾಡುವಲ್ಲಿ‌ ಸಂಪೂರ್ಣ ‌ನಿರ್ಲಕ್ಷ್ಯತಾಳಿದೆ. ನೀಲಂ ಸಂಜೀವ್ ರೆಡ್ಡಿ ಅವರ ಹುಟ್ಟುಹಬ್ಬ ಹಾಗೂ ಪುಣ್ಯ ತಿಥಿಯ ಸಮಯದಲ್ಲಿ ಅವರ ಕುಟುಂಬ ಸದಸ್ಯರು ಸ್ಮಾರಕವನ್ನು ಸ್ವಚ್ಛಗೊಳಿಸಿ ‌ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ. ಉಳಿದ ದಿನಗಳಲ್ಲಿ ‌ ಈ‌ ಕಡೆ ಯಾರು‌ ತಲೆ ಹಾಕುವುದಿಲ್ಲ. ಪ್ರವಾಸಿಗರಂತೂ ಬರುವ ಮಾತು‌ ದೂರವೆ ಉಳಿಯತು ಎನ್ನುತ್ತಾರೆ.

ಸ್ಮಾರಕ ನಿರ್ವಹಣೆ ಕುರಿತು‌‌ ಬಿಬಿಎಂಪಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಅವರಿಂದ ಯಾವುದೇ ರೀತಿಯಲ್ಲೂ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ ಎಂದು ಬಸವರಾಜ್ ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಭಾರತದ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯವರ ಹುಟ್ಟುಹಬ್ಬ ಮತ್ತು ಪುಣ್ಯ ತಿಥಿ ಅಚರಣೆಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಹಿತ ಸರ್ಕಾರದ ಯಾವ ಪ್ರತಿನಿಧಿಗಳು ಶಿಷ್ಟಾಚಾರಕ್ಕೂ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿಲ್ಲ. ಸರ್ಕಾರಕ್ಕೆ ರಾಷ್ಟ್ರಪತಿ ನೀಲಂ ಸಂಜೀವ್ ರೆಡ್ಡಿಯವರ ಸ್ಮಾರಕ ಬೆಂಗಳೂರಿನಲ್ಲಿ ಇರುವುದೇ ಮರೆತು ಹೋಗಿರಬಹುದು ಎಂದು‌ ಕಲ್ಲಹಳ್ಳಿ ಸ್ಮಶಾನದಲ್ಲಿ ಕೆಲಸ ಮಾಡುವ‌ ಸಿಬ್ಬಂದಿಗಳು‌ ಹೇಳುತ್ತಾರೆ.

ಇಷ್ಟು ವರ್ಷಗಳಲ್ಲಿ ಜುಲೈ 19 ಅವರ ಜನ್ಮದಿನವಾಗಿದ್ದರೂ, ಯಾರೂ ಈ ಸ್ಮಾರಕದ ಬಳಿ ಬಂದಿರುವ ಲಕ್ಷಣಗಳಿಲ್ಲ. ಎಷ್ಟೋ ಬಾರಿ ಆ ಸ್ಮಶಾನದ ಸಹಾಯಕ ಆಂಥೋನಿ ಸ್ವಾಮಿ ಅಲಿಯಾಸ್ ಕುಟ್ಟಿ ಮತ್ತವರ ಕುಟುಂಬವೇ ಆ ಪ್ರದೇಶ ಸ್ವಚ್ಛಗೊಳಿಸಿ, ಹೂವು, ತೆಂಗಿನಕಾಯಿ ಹಾಗೂ ಚಾಕೋಲೇಟ್ ತಂದು ರೆಡ್ಡಿಯವರ ಜಯಂತಿಯನ್ನು ಆಚರಿಸಿರುವ ನಿದರ್ಶನಗಳಿವೆ ಎನ್ನುತ್ತಾರೆ ಸ್ಥಳೀಯರು. ಅವರೇ ಕೊನೆಗೆ ಸಂಪ್ರದಾಯ ಪ್ರಕಾರ ಇಡಲಾಗುವ ಎಡೆಯನ್ನು ಕಾಗೆಗಳಿಗೆ ಸಮರ್ಪಿಸಿದ್ದಾರಂತೆ.


ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ. ಉನ್ನತ ಹುದ್ದೆ ಅಲಂಕರಿಸಿದ ಮುತ್ಸದ್ದಿ ನಾಯಕ ನೀಲಂ ಸಂಜೀವ್ ರೆಡ್ಡಿ ಅವರು ಸರ್ಕಾರ ಹಾಗೂ ಜನ ಮಾನಸದಿಂದ ಮರೆಯಾಗುವಂತೆ ಅಗಿರುವುದಕ್ಕೆ ಮೂಲ‌ ಕಾರಣವೆಂದರೆ ಮತಬ್ಯಾಂಕ್ ರಾಜಕಾರಣ. ನೀಲಂ ಸಂಜೀವ್ ರೆಡ್ಡಿ ಅವರ ಜಾತಿಯವರು ಆ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿದ್ದು ಅವರಿಂದ ಚುನಾವಣೆಯಲ್ಲಿ ಲಾಭವಾಗುವಂತಿದ್ದರೆ ಎಲ್ಲಾ‌ ಪಕ್ಷಗಳ ಸರ್ಕಾರಗಳ‌ ಮುಖ್ಯಸ್ಥರು ಚಾಚೂ ತಪ್ಪದೆ ಹುಟ್ಟುಹಬ್ಬ ಹಾಗೂ ಪುಣ್ಣ ತಿಥಿಯನ್ನು ವಿಜೃಂಭಣೆಯೊಂದ ಅಚರಣೆ ಮಾಡುತ್ತಿದ್ದರು. ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ಸಾರ್ವಜನಿಕ ವೇದಿಕೆಯಲ್ಲಿ ಹಾಡಿ ಹೊಗಳುತ್ತಿದ್ದರು. ಆದರೆ ಇಲ್ಲಿ‌ ಓಟಿನ ಲಾಭ ಆಗದೆ ಇರುವುದರಿಂದ. ರಾಜಕೀಯ ನಾಯಕರು ಜಾಣ ಮೆರವು ಪ್ರದರ್ಶಿಸುತ್ತಿದ್ದಾರೆ. ಸ್ಮಾರಕದ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು‌ ಕಾಕ್ಸ್ ಟೌನ್ ಹಿರಿಯ ನಾಗರಿಕ ಹಾಗೂ ಭಾರತೀಯ‌ ರಕ್ಷಣಾ‌ ಪಡೆಯ ನಿವೃತ್ತ ನೌಕರ‌ ನಾರಾಯಣ ರೆಡ್ಡಿ ‌ಹೇಳುತ್ತಾರೆ.

ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯವರ ಸ್ಮಾರಕದ ಹತಾಶ ಸ್ಥಿತಿಯನ್ನು ನೋಡಿದರೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಇದರ ಅಸ್ತಿತ್ವದ ಬಗ್ಗೆಯೇ ಮಾಹಿತಿಯಿಲ್ಲ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಿಬ್ಬಂದಿ, ರಾಜಕಾರಣಿಗಳು ಅಥವಾ ರೆಡ್ಡಿ ಜನ ಸಂಘದ ಸದಸ್ಯರೂ ಸಹ ಮಾಜಿ ರಾಷ್ಟ್ರಪತಿಯವರ ಸ್ಮಾರಕದ ಕಡೆ ತಲೆಹಾಕುವುದಿಲ್ಲ ಎನ್ನುತ್ತಾರೆ ಅವರು.


2013ರಲ್ಲಿ, ನೀಲಂ ಸಂಜೀವ ರೆಡ್ಡಿಯವರ ಶತಮಾನೋತ್ಸವದ ಸಂದರ್ಭದಲ್ಲಿ, ಆಂಧ್ರಪ್ರದೇಶ ಸರ್ಕಾರ ಕೆಲವು ಅಧಿಕಾರಿಗಳನ್ನು ನೇಮಕ ಮಾಡಿ, ಭಾವಚಿತ್ರ ಪ್ರದರ್ಶನ ಆಯೋಜಿಸಿತ್ತು. "ಆದರೆ, ಯಾವುದೇ ಅಧಿಕಾರಿಯೂ ಅವರ ಸಮಾಧಿಯಿರುವ ಬೆಂಗಳೂರಿಗೆ ಭೇಟಿ ನೀಡಿಲ್ಲ, ಅಥವಾ ಸ್ಮಾರಕದ ಪರಿಸ್ಥಿತಿಯನ್ನುಗಮನಿಸಿಲ್ಲ ಎಂದು ಹೇಳುತ್ತಾರೆ ಇನ್ನೊಬ್ಬ ಸ್ಥಳೀಯ ನಿವಾಸಿ ರಾಜಣ್ಣ.

Read More
Next Story