Mysore MUDA Case | ಮುಡಾ ಮಾಜಿ ಆಯುಕ್ತ ನಟೇಶ್ ಲೋಕಾಯುಕ್ತ ವಿಚಾರಣೆಗೆ ಹಾಜರು
ಮುಡಾ ನಿವೇಶನಗಳನ್ನು 50:50 ಅನುಪಾತದಲ್ಲಿ ಹಂಚಿಕೆ ಸಂಬಂಧಿಸಿದಂತೆ ನಟೇಶ್ ಅವರಿಗೆ ಲೋಕಯುಕ್ತ ಪೊಲೀಸರು ನೋಟಿಸ್ ನೀಡಿದ್ದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್ ಲೋಕಾಯುಕ್ತ ವಿಚಾರಣೆಗೆ ಮಂಗಳವಾರ ಹಾಜರಾಗಿದ್ದಾರೆ.
ಮುಡಾ ನಿವೇಶನಗಳನ್ನು 50:50 ಅನುಪಾತದಲ್ಲಿ ಹಂಚಿಕೆ ಮಾಡಿದ ಸಂಬಂಧ ನಟೇಶ್ ಅವರಿಗೆ ಲೋಕಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನಲೆ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಗೆ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮತಿ ಪಡೆದು, ಲೋಕಾಯುಕ್ತ ಎಸ್ಪಿ ಉದೇಶ್ ವಿಚಾರಣೆ ನಡೆಸಿದ್ದಾರೆ.
ನಟೇಶ್ ಸಿದ್ದರಾಮಯ್ಯ ಕುಟುಂಬಕ್ಕೆ ಸೈಟು ಹಂಚಿಕೆ ವಿಚಾರದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ನಟೇಶ್ ಅವರು ಕೆಲವು ದಾಖಲೆಗಳ ಸಮೇತ ಆಟೋದಲ್ಲಿ ಗಾಬರಿಯಿಂದಲೇ ಲೋಕಾಯುಕ್ತಕ್ಕೆ ಆಗಮಿಸಿದ್ದರು. ಕಚೇರಿ ಎದುರಿಗೆ ಮಾಧ್ಯಮದ ಕ್ಯಾಮೆರಾ ಕಂಡು ನಟೇಶ್ ಸಿಡಿಮಿಡಿಗೊಂಡಿದ್ದು, ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ ? ನನ್ನ ವಿಡಿಯೋ ಏಕೆ ತೆಗೆಯುತ್ತಿದ್ದೀರಾ? ಎಂದು ಮಾಧ್ಯಮದವರಿಗೆ ಪ್ರಶ್ನಿಸಿದ್ದರು.
ಮುಡಾ ಹಗರಣದ ಬಗ್ಗೆ ತನಿಖೆ ನಡೆಸಿ ಡಿಸೆಂಬರ್‌ನಲ್ಲಿ ಮಾಹಿತಿ ನೀಡುವಂತೆ ನ್ಯಾಯಾಲಯದ ಸೂಚಿಸಿರುವ ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಮುಡಾ ಪ್ರಕರಣದ ಆರೋಪಿಗಳನ್ನೆಲ್ಲ ವಿಚಾರಣೆ ಗೊಳಪಡಿಸಿದ್ದಾರೆ. ಇದೀಗ ಮೂಡಾದ ಮಾಜಿ ಆಯುಕ್ತರಾದ ನಟೇಶ್ ಅವರ ವಿಚಾರಣೆಯನ್ನು ನಡೆಸಿದ್ದಾರೆ. ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದಂತೆ ಎಲ್ಲರ ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ನಡೆಸಿದ್ದಾರೆ.
ಸಿದ್ದರಾಮಯ್ಯ ಪತ್ನಿಗೆ ಸೈಟು ನೀಡಿದ ವೇಳೆ ಮುಡಾ ಅಧ್ಯಕ್ಷರಾಗಿದ್ದ ಧೃವ ಕುಮಾರ್‌ಗೂ ನೋಟಿಸ್ ನೀಡಲಾಗಿದೆ. ಬುಧವಾರ ವಿಚಾರಣೆಗೆ ಧೃವಕುಮಾರ್ ಹಾಜರಾಗಬೇಕಿದೆ. ಈ ನಡುವೆ ಹಗರಣದ ಕುರಿತು ಪರ್ಯಾಯ ತನಿಖೆ ನಡೆಸುತ್ತಿರುವ ಇಡಿ, ಸೋಮವಾರ ಸಿಎಂ ಬಾಮೈದ ಮಲ್ಲಿಕಾರ್ಜುನಸ್ವಾಮಿಯನ್ನು ವಿಚಾರಣೆ ನಡೆಸಿತ್ತು. ಭೂಮಿ ಮಾರಾಟದ ವೇಳೆ ಮಲ್ಲಿಕಾರ್ಜುನಸ್ವಾಮಿಗೆ ಸಹಾಯ ಮಾಡಿದ್ದ ಶಿವಣ್ಣ ಎಂಬುವವರನ್ನು ಮಂಗಳವಾರ ಇಡಿ ವಿಚಾರಣೆ ನಡೆಸಿದೆ.