
ಬಿಜೆಪಿಗೆ ಮತ್ತೊಬ್ಬ ನಾಯಕ ಗುಡ್ ಬೈ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ರಾಜೀನಾಮೆ
ಬಿಜೆಪಿಯೊಳಗಿನ ಗುಂಪುಗಾರಿಕೆಗೆ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಯೋಗೇಶ್ವರ್ ಅವರಂತೆ ನಾನೂ ಕೂಡ ಕಾಂಗ್ರೆಸ್ ಸೇರಲಿದ್ದೇನೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ, ಮಂಡ್ಯ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಶನಿವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಮಂಡ್ಯ ಜಿಲ್ಲೆಯ ನೆಲಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ರೀತಿ ನಾನು ಕೂಡ ಜಂಪಿಂಗ್ ಸ್ಟಾರ್. ಬಿಜೆಪಿಯೊಳಗಿನ ಗುಂಪುಗಾರಿಕೆಗೆ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಯೋಗೇಶ್ವರ್ ಅವರಂತೆ ನಾನೂ ಕೂಡ ಕಾಂಗ್ರೆಸ್ ಸೇರಲಿದ್ದೇನೆ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರತಿ ಚುನಾವಣೆ ಬಂದಾಗ ಕುಟುಂಬದವರನ್ನು ಅಧಿಕಾರಕ್ಕೆ ತರಲು ಕುಮಾರಸ್ವಾಮಿ ನರಬಲಿ ಪಡೆಯುತ್ತಾರೆ. ರಾಜ್ಯದಲ್ಲಿ ಇವರು ಇದೇ ನಡೆಸಿಕೊಂಡು ಬಂದಿದ್ದಾರೆ. ಈಗ ಚನ್ನಪಟ್ಟಣದಲ್ಲಿ ಸಿ.ಪಿ. ಯೀಗೇಶ್ವರ್ ಅವರನ್ನು ಬಲಿ ಪಡೆದಿದ್ದಾರೆ. ಸಂಸದ ಡಾ.ಮಂಜುನಾಥ್ ಅವರಿಗೆ ಟಿಕೆಟ್ ಕೊಡಿಸಲು ಸಿ.ಪಿ. ಯೋಗೇಶ್ವರ್ ತುಂಬಾ ಶ್ರಮಪಟ್ಟರು. ಅಂತವರನ್ನೇ ಬಲಿ ಪಡೆದಿದ್ದಾರೆ. ಆದರೆ, ಚನ್ನಪಟ್ಟಣ ಜನರು ದಡ್ಡರಲ್ಲ, ಈ ಬಾರಿ ಕುಮಾರಸ್ವಾಮಿ ಅವರಿಗೆ ತಕ್ಕ ಪಾಠ ಕಲಿಸಲಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಲ್ಲ, ಅವರ ಅಪ್ಪ ಕುಮಾರಸ್ವಾಮಿ ನಿಂತರೂ ಗೆಲ್ಲುವುದಿಲ್ಲ. ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷ ಕಟ್ಟುತ್ತಾರೆ ಅಂದುಕೊಂಡಿದ್ದೆ. ಆದರೆ, ಬಿಜೆಪಿಯ ಕುತ್ತಿಗೆ ಹಿಚುಕುತ್ತಿದ್ದಾರೆ. ಕುಮಾರಸ್ವಾಮಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪಕ್ಷವನ್ನು ಉಸಿರುಗಟ್ಟಿಸುತ್ತಿದ್ದಾರೆ. ಬಿಜೆಪಿ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ, ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಅವರಿಂದಲೇ ಯೋಗೇಶ್ವರ್ ಬಿಜೆಪಿ ತೊರೆದರು. ಬಿಜೆಪಿಯಲ್ಲಿರುವ ಗುಂಪುಗಾರಿಕೆ ಇದಕ್ಕೆ ಕಾರಣ ಎಂದು ಆರೋಪಿಸಿದರು.
ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ
ರಾಜ್ಯ ಬಿಜೆಪಿಯಲ್ಲಿನ ಗುಂಪುಗಾರಿಕೆ, ಮನಸ್ತಾಪಗಳಿಗೆ ಕುಮಾರಸ್ವಾಮಿ ಅವರೇ ಕಾರಣ ಎಂದು ಶಿವರಾಮೇಗೌಡ ಆರೋಪಿಸಿದರು.
"ಕುಮಾರಸ್ವಾಮಿ ಅವರನ್ನು ರಾಮನಗರದ ಜನ ಓಡಿಸಿದರು. ಮಂಡ್ಯದವರು ʼನರಸತ್ತವರುʼ ಎಂದು ಭಾವಿಸಿ ಇಲ್ಲಿಗೆ ಬಂದು ಸಂಸದರಾಗಿದ್ದಾರೆ. ಜಿಲ್ಲೆಯ ಜನರು ಹಾಗೂ ಮುಖಂಡರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ʼಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿʼ ಎಂದು ಕರೆ ಕೊಡುತ್ತೇನೆ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರು ಎರಡನೇ ಬಾರಿ ಲಾಟರಿಯಲ್ಲಿ ಸಿಎಂ ಆದವರು. ಕುಮಾರಸ್ವಾಮಿ ಅವರ ಗಾಡಿ ನಿಂತು ಹೋಗಿತ್ತು. ಪಾಪ ಮುಳುಗುವ ಹಡಗು ಎಂದುಕೊಂಡು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಜನರು ಕುರುಣೆ ತೋರಿದರು. ಅದಕ್ಕೆ ರಾಜೀನಾಮೆ ಕೊಟ್ಟು ಲೋಕಸಭೆ ಚುನಾವಣೆಗೆ ಮಂಡ್ಯದತ್ತ ಬಂದರು. ಪಾಪ ಹೋಗಲಿ ಎಂದು ಮಂಡ್ಯ ಜನರು ಕೈ ಹಿಡಿದರು ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಮಂಡ್ಯದಲ್ಲಿ ನಾಲ್ಕು ದಿನ, ಬೆಂಗಳೂರಿನಲ್ಲಿ ನಾಲ್ಕು ದಿನ ಕಾಲ ಕಳೆಯುತ್ತಿದ್ದಾರೆ. ಇದರ ಬದಲು, ದೇಶ ಸುತ್ತಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲಿ. ಮಂಡ್ಯ ಜಿಲ್ಲೆಗೆ ಕೈಗಾರಿಕೆಗಳನ್ನು ತರಲಿ ಎಂದು ಆಗ್ರಹಿಸಿದರು.
2022 ರಲ್ಲಿ ಎಲ್.ಆರ್. ಶಿವರಾಮೇಗೌಡ ಅವರನ್ನು ದಿವಂಗತ ಮಾದೇಗೌಡರ ಕುರಿತ ವಿವಾದಾತ್ಮಕ ಆಡಿಯೋ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಅದಾದ ಬಳಿಕ ಅವರು ಬಿಜೆಪಿಯತ್ತ ಬಂದಿದ್ದರು.
ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರು ಇತ್ತೀಚೆಗಷ್ಟೇ ಬಿಜೆಪಿಯ ಎಂಟು ಮಂದಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ನಾನು ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುತ್ತೇನೆ. ಬೇಕಿದ್ದರೆ ನನ್ನ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ಬಿಜೆಪಿ ನಾಯಕರಿಗೆ ನೇರವಾಗಿ ಸವಾಲು ಹಾಕಿದ್ದರು.