
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ರಾಜೀನಾಮೆ
ಪರಿಸರ ರಕ್ಷಣೆಗಾಗಿ ನನ್ನ ಉಳಿದ ಅವಧಿಯನ್ನು ಸಂಪೂರ್ಣ ಮೀಸಲಿಡಲು ರಾಜಕೀಯದಿಂದ ದೂರ ಸರಿಯುತ್ತಿದ್ದೇನೆ. ಪರಿಸರ ಸಂಘಟನೆಗಳು, ತಜ್ಞರ ಒಳಗೊಂಡ ರಾಜ್ಯಮಟ್ಟದ ʼಪರಿಸರಕ್ಕಾಗಿ ನಾವು' ಸಂಘಟನೆ ಕಟ್ಟಿದ್ದೇನೆ ಎಂದು ರಾಮಸ್ವಾಮಿ ತಿಳಿಸಿದ್ದಾರೆ.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಶನಿವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತೀಚೆಗೆ ರಾಜ್ಯ ರಾಜಕಾರಣದಿಂದ ದೂರವೇ ಉಳಿದಿದ್ದ ರಾಮಸ್ವಾಮಿ ಅವರು ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ತೊರೆದಿದ್ದು, ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಕಳುಹಿಸಿದ್ದಾರೆ.
ʼನನಗೆ ರಾಜಕಾರಣಕ್ಕಿಂತ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವದ ಕೆಲಸ. ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಹವಾಮಾನದಲ್ಲಿ ಅಸಮತೋಲನ ಉಂಟಾಗಿದೆ. ನೀರು, ಗಾಳಿ ಆಹಾರ ವಿಷಪೂರಿತ ಆಗಿದೆ. ಬೆಟ್ಟ, ಗುಡ್ಡ, ಅರಣ್ಯ ನಾಶದಿಂದ ನದಿ, ತೊರೆಗಳು ಬತ್ತಿವೆ. ಈ ಕುರಿತು ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಹಾಗಾಗಿ ಕೃಷಿ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕಿರುವ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ಏಪ್ರಿಲ್ 9ರಂದು ರಾಜ್ಯ ರಾಜಕಾರಣದಿಂದ ದೂರ ಸರಿಯುವ ಬಗ್ಗೆ ರಾಮಸ್ವಾಮಿ ಅವರು ಸುಳಿವು ನೀಡಿದ್ದರು. ಕರ್ನಾಟಕವು ಮಾಫಿಯಾಗಳ ಸ್ವರ್ಗವಾಗಿದೆ. ಭವಿಷ್ಯದ ಪೀಳಿಗೆಯ ಹಿತಕ್ಕಾಗಿ ಪರಿಸರ ಉಳಿಸುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.
ಭೂಮಿ ರಕ್ಷಣೆಗೆ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ. ಭವಿಷ್ಯದ ನನ್ನ ಪೂರ್ಣ ಸಮಯವನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಡಲು ತೀರ್ಮಾನಿಸಿದ್ದೇನೆ. ಅದರ ಸಲುವಾಗಿ ರಾಜ್ಯದ ಬೇರೆ ಬೇರೆ ಪರಿಸರ ಸಂಘಟನೆಗಳು, ಪರಿಸರಾಸಕ್ತರು, ತಜ್ಞರ ಒಳಗೊಂಡ ರಾಜ್ಯಮಟ್ಟದ ʼಪರಿಸರಕ್ಕಾಗಿ ನಾವು' ಎಂಬ ಸಂಘಟನೆಯನ್ನು ಏ.12ರಂದು ಕಟ್ಟಿದ್ದೇನೆ. ಪರಸರವಾದಿಗಳಾದ ಯಲ್ಲಪ್ಪ ರೆಡ್ಡಿ, ನಾಗೇಶ್ ಹೆಗಡೆ ಸೇರಿ ಹಲವರ ಜತೆಗೂಡಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ರಾಮಸ್ವಾಮಿ ರಾಜಕೀಯ ಹಾದಿ
ಎ.ಟಿ.ರಾಮಸ್ವಾಮಿ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅರಕಲಗೂಡು ಕ್ಷೇತ್ರದಲ್ಲಿ ಮೊದಲ ಬಾರಿಗೆ 1989 ರಲ್ಲಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಆ ಬಳಿಕ 1994, 2004 ಹಾಗೂ 2018 ರಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಶಾಸಕರಾಗಿದ್ದ ಅವರು, ಜೆಡಿಎಸ್ ವರಿಷ್ಠರ ವರ್ತನೆಯಿಂದ ಬೇಸರಗೊಂಡು ಜೆಡಿಎಸ್ ತೊರೆದಿದ್ದರು. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು.
2007 ರಲ್ಲಿ ಬೆಂಗಳೂರು ನಗರದ ಸುತ್ತಲೂ ಸರ್ಕಾರಿ ಭೂಮಿ ಒತ್ತುವರಿ ತನಿಖೆಗೆ ನೇಮಕವಾಗಿದ್ದ ಜಂಟಿ ಸದನ ಸಮಿತಿಯ ಅಧ್ಯಕ್ಷರಾಗಿ ವಿವರವಾದ ವರದಿ ನೀಡಿದ್ದರು. ಕೋಟ್ಯಂತ ರೂ., ಮೌಲ್ಯದ ಸರ್ಕಾರಿ ಆಸ್ತಿ ಭೂಗಳ್ಳರ ಪಾಲಾಗಿದ್ದನ್ನು ರಾಮಸ್ವಾಮಿ ಅವರು ಪತ್ತೆ ಹಚ್ಚಿದ್ದರು. ಇವರ ವರದಿಯಿಂದ ಹಲವು ಕಡೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಲಾಗಿತ್ತು.