
ಮಾಜಿ ಸಚಿವ ಕೆ.ಎನ್.ರಾಜಣ್ಣ ಬಿಜೆಪಿಗೆ ಸೇರಲು ಸಿದ್ಧತೆ; ಹೊಸ ಬಾಂಬ್ ಸಿಡಿಸಿದ ʼಕೈʼ ಶಾಸಕ
ಮಾಜಿ ಸಚಿವ ಕೆಎನ್ ರಾಜಣ್ಣ ಅವರು ಬಿಜೆಪಿ ಸೇರಲು ಅರ್ಜಿ ಹಾಕಿದ್ದಾರೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಮಾತಿನಂತೆ ರಾಜಣ್ಣ ಅವರು ತಮ್ಮ ಮಾತಿನಿಂದಲೇ ಎಲ್ಲವನ್ನು ಕಳೆದುಕೊಂಡರು ಎಂದು ಶಾಸಕ ಬಾಲಕೃಷ್ಣ ಆರೋಪಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರ್ಪಡೆಗೆ ಯತ್ನಿಸಿದ್ದರೆಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕರ ವಿರುದ್ಧ ಸ್ವಪಕ್ಷದ ಶಾಸಕರೇ ಪಕ್ಷಾಂತರದ ಬಾಂಬ್ ಸಿಡಿಸಿದ್ದಾರೆ.
ಮಧುಗಿರಿ ಶಾಸಕ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಬಿಜೆಪಿ ಸೇರಲು ಸನ್ನದ್ಧರಾಗಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿರುವುದು ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ.
ರಾಮನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಕೆಎನ್ ರಾಜಣ್ಣ ಅವರು ಬಿಜೆಪಿ ಸೇರಲು ಅರ್ಜಿ ಹಾಕಿದ್ದಾರೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಮಾತಿನಂತೆ ರಾಜಣ್ಣ ಅವರು ತಮ್ಮ ಮಾತಿನಿಂದಲೇ ಎಲ್ಲವನ್ನು ಕಳೆದುಕೊಂಡರು. ಇದರಲ್ಲಿ ನಮ್ಮ ನಾಯಕರ ಷಡ್ಯಂತ್ರ ಇಲ್ಲ. ಸುಖಾಸುಮ್ಮನೆ ಪಕ್ಷದ ಮೇಲೆ ಗೂಬೆ ಕೂರಿಸಲು ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.
ಕೆ.ಎನ್. ರಾಜಣ್ಣ ಅಭಿಮಾನಿಗಳು ದೆಹಲಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ, ಸಮಾವೇಶ ಮಾಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿ ಸಮಾವೇಶ ಮಾಡುವವರನ್ನು ಹಿಡಿದುಕೊಳ್ಳಲು ಆಗುತ್ತಾ ಎಂದು ಹೇಳಿದರು.
ಮಂಪರು ಪರೀಕ್ಷೆ ಆಗಲಿ
ಕೆ.ಎನ್. ರಾಜಣ್ಣ ಅವರು ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ತಿಳಿದಿದೆ. ಬೇಕಿದ್ದರೆ ಅವರ ಮಂಪರು ಪರೀಕ್ಷೆ ಆಗಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರು ಪಕ್ಷದಲ್ಲಿದ್ದರು. ಈಗ ಸಚಿವ ಸ್ಥಾನ ಕಳೆದುಕೊಂಡಿದ್ದು, ಬೇರೆ ನಾಯಕರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸೇರಲು ಸನ್ನದ್ಧರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸೇರ್ಪಡೆ ಊಹಾಪೋಹ
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಅವರ ಅಭಿಮಾನಿಗಳು ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ವೇಳೆ ಕೆ.ಎನ್.ರಾಜಣ್ಣ ಅವರು ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಇದು ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಕೆ.ಎನ್.ರಾಜಣ್ಣ, ಎಚ್.ಸಿ. ಬಾಲಕೃಷ್ಣ ಇಬ್ಬರೂ ಕೂಡ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯ ಎಂಎಲ್‌ಸಿ ಸಿ.ಟಿ.ರವಿ ಹೇಳಿರುವುದು ಕುತೂಹಲ ಮೂಡಿಸಿದೆ.
ನಾವೆಲ್ಲರೂ ಒಂದೇ, ಎದುರಿಗೆ ಸಿಕ್ಕಾಗ ಮಾತನಾಡುವ ಸಂಬಂಧ ಹೊಂದಿದ್ದೇವೆ. ಬಾಲಕೃಷ್ಣ ಮೂಲ ಬಿಜೆಪಿಗರು. ರಾಜಣ್ಣ ಅವರು ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಇಬ್ಬರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿರುವುದು ಪಕ್ಷಾಂತರದ ವದಂತಿಗಳಿಗೆ ಇಂಬು ನೀಡುವಂತಿದೆ.
ಬಿಜೆಪಿ ಸೇರಿದರೆ ಆಗುವ ಪರಿಣಾಮವೇನು?
ಕೆ.ಎನ್.ರಾಜಣ್ಣ ಅವರು ಬಿಜೆಪಿಗೆ ಸೇರ್ಪಡೆಯಾದರೆ ತುಮಕೂರು ಜಿಲ್ಲೆಯ ರಾಜಕೀಯ ಸಮೀಕರಣ ಬದಲಾಗುವ ಸಾಧ್ಯತೆಯಿದೆ. ಅಲ್ಲದೇ ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕರಾಗಿರುವ ಕೆ.ಎನ್.ರಾಜಣ್ಣ ಅವರು ಬಿಜೆಪಿ ಸೇರಿದರೆ ಈ ಭಾಗದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಸರ್ಕಾರದ ಮೇಲೂ ಪರಿಶಿಷ್ಟ ಪಂಗಡದ ಒತ್ತಡ ಹೆಚ್ಚಬಹುದು ಎಂದು ವಿಶ್ಲೇಷಿಸಲಾಗಿದೆ. ಆದರೆ, ಎಲ್ಲಿಯೂ ಕೆ.ಎನ್.ರಾಜಣ್ಣ ಅವರು ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿಲ್ಲ.