ಮಾಜಿ ಸಿಎಂ ದಿ. ಜಯಲಲಿತಾ ಅವರ ಕನ್ನಡ ಸ್ನೇಹಿತೆ ಸರೋಜಾದೇವಿ
x

ಮಾಜಿ ಸಿಎಂ ದಿ. ಜಯಲಲಿತಾ ಅವರ 'ಕನ್ನಡ ಸ್ನೇಹಿತೆ' ಸರೋಜಾದೇವಿ

ಬಿ. ಸರೋಜಾದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮಾಜಿ ಸಿಎಂ ಬೊಮ್ಮಾಯಿ ಅವರು ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಹಾಗೂ ಸರೋಜಾದೇವಿ ಅವರ 'ಕನ್ನಡ ಬಾಂಧವ್ಯ'ದ ಬಗ್ಗೆ ಮಾಹಿತಿ ನೀಡಿದ್ದಾರೆ.


ಬಹುಭಾಷಾ ನಟಿ 'ಅಭಿನಯ ಸರಸ್ವತಿ' ಎಂದೇ ಪ್ರಸಿದ್ಧರಾಗಿದ್ದ ಹಿರಿಯ ನಟಿ ಬಿ. ಸರೋಜಾದೇವಿ (87) ಇಂದು (ಸೋಮವಾರ) ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರ ನಿಧನ, ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಸರೋಜಾದೇವಿ ಅವರ ಅಗಲಿಕೆ ಕಲಾಭಿಮಾನಿಗಳನ್ನು ಶೋಕದಲ್ಲಿ ಮುಳುಗಿಸಿದೆ. ಆದಾಗ್ಯೂ ಅವರ ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಡ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ. ಅಲ್ಲದೆ, ಸಿನಿ ಪ್ರೇಮಿಗಳಿಗೆ ಹಲವಾರು ನೆನಪುಗಳನ್ನು ನೀಡಿ ಅಗಲಿದ್ದಾರೆ. ಅಂತೆಯೇ ಸರೋಜಾ ದೇವಿ ಅವರಿಗೆ ಸಂಬಂಧಿಸಿದ ಭಾಷಾ ಪ್ರೇಮದ ವಿಷಯವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಬಿ. ಸರೋಜಾದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮಾಜಿ ಸಿಎಂ ಬೊಮ್ಮಾಯಿ ಅವರು ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಹಾಗೂ ಸರೋಜಾದೇವಿ ಅವರ 'ಕನ್ನಡ ಬಾಂಧವ್ಯ'ದ ಬಗ್ಗೆ ಮಾಹಿತಿ ನೀಡಿದ್ದಾರೆ. ಜಯಲಲಿತಾ ಅವರಿಗೆ ಕನ್ನಡ ಮಾತನಾಡಬೇಕೆನಿಸಿದಾಗಲೆಲ್ಲಾ ಸರೋಜಾದೇವಿ ಅವರನ್ನು ಚೆನ್ನೈಗೆ ಕರೆಸಿಕೊಂಡು ಕರೆಸಿಕೊಂಡು ಗಂಟೆಗಟ್ಟಲೆ ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂಬ ಅಚ್ಚರಿಯ ವಿಷಯವನ್ನು ಬೊಮ್ಮಾಯಿ ಬಹಿರಂಗಪಡಿಸಿದ್ದಾರೆ.

"ಸರೋಜಾದೇವಿ ಅವರು ಜಯಲಲಿತಾ ಅವರಿಗೆ ಬಹಳ ಆತ್ಮೀಯವಾಗಿದ್ದರು. ಒಮ್ಮೆ ನಾನು ಜಯಲಲಿತಾ ಅವರನ್ನು ಭೇಟಿಯಾದಾಗ, ಅವರು ಸ್ಪಷ್ಟವಾದ ಕನ್ನಡದಲ್ಲಿ ಮಾತನಾಡುತ್ತಿದ್ದರು. ಆಗ ನಾನು, 'ನೀವು ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತೀರಿ, ಹೊರಗಡೆ ಯಾಕೆ ಕನ್ನಡ ಮಾತನಾಡಬಾರದು?' ಎಂದು ಕೇಳಿದೆ. ಅದಕ್ಕೆ ಜಯಲಲಿತಾ ಅವರು, 'ನಾನು ಹೊರಗಡೆ ಕನ್ನಡ ಮಾತನಾಡಿದರೆ ಕಷ್ಟವಾಗಬಹುದು. ಆದರೆ, ನನಗೆ ಕನ್ನಡ ಮಾತನಾಡಬೇಕು ಎಂದು ಅನ್ನಿಸಿದಾಗಲೆಲ್ಲಾ ಸರೋಜಾದೇವಿ ಅವರನ್ನು ಕರೆಸಿಕೊಂಡು ಮನಸ್ಸಿನ ತುಂಬ ಮಾತನಾಡುತ್ತೇನೆ' ಎಂದು ನನಗೆ ಹೇಳಿದ್ದರು. ಅಂತೆಯೇ ಸರೋಜಾದೇವಿ ಅವರೊಂದಿಗೆ ಜಯಲಲಿತಾ ಗಂಟೆಗಟ್ಟಲೆ ಕನ್ನಡದಲ್ಲಿ ಹರಟೆ ಹೊಡೆಯುತ್ತಿದ್ದರು," ಎಂದು ಬಸವರಾಜ ಬೊಮ್ಮಾಯಿ ಇಂದು ಮಾಧ್ಯಮಗಳ ಮುಂದೆ ನೆನಪುಗಳನ್ನು ಮೆಲುಕು ಹಾಕಿದರು.

ನಾಳೆ ಚನ್ನಪಟ್ಟಣದಲ್ಲಿ ಅಂತ್ಯಕ್ರಿಯೆ

ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ಇಂದು (ಜುಲೈ 14) ಮಧ್ಯಾಹ್ನ 12 ಗಂಟೆವರೆಗೂ ಮಲ್ಲೇಶ್ವರಂನ ಅವರ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ನಾಳೆ, ಜುಲೈ 15 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

7 ದಶಕಗಳ ಅಮೋಘ ಕಲಾ ಸೇವೆ

ಸರೋಜಾದೇವಿ ಅವರು 1955 ರಿಂದ 2020 ರವರೆಗೆ ಸುದೀರ್ಘ ಏಳು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತಮ್ಮ 29 ವರ್ಷಗಳ ವೃತ್ತಿಜೀವನದಲ್ಲಿ, 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದರು. ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಮ್ಮ ಬಹುಮುಖಿ ಪ್ರತಿಭೆಯನ್ನು ಅನಾವರಣಗೊಳಿಸಿದ್ದ ಇವರನ್ನು ಕನ್ನಡದಲ್ಲಿ "ಅಭಿನಯ ಸರಸ್ವತಿ" ಹಾಗೂ ತಮಿಳಿನಲ್ಲಿ "ಕನ್ನಡತು ಪೈಂಗಿಳಿ" (ಕನ್ನಡದ ಗಿಳಿ) ಎಂಬ ಬಿರುದುಗಳಿಂದ ಗೌರವಿಸಲಾಗುತ್ತಿತ್ತು.

ಅವರು ನಟಿಸಿದ ಪ್ರಮುಖ ಕನ್ನಡ ಚಿತ್ರಗಳಲ್ಲಿ ಮಹಾಕವಿ ಕಾಳಿದಾಸ, ಕಿತ್ತೂರು ಚೆನ್ನಮ್ಮ, ಅಣ್ಣಾ ತಮ್ಮ, ಭಕ್ತ ಕನಕದಾಸ, ಬಾಳೇ ಬಂಗಾರ, ನಾಗಕನ್ಯೆ, ಬೆಟ್ಟದ ಹೂವು, ಕಸ್ತೂರಿ ನಿವಾಸ ಸೇರಿವೆ. ತಮಿಳಿನಲ್ಲಿ 'ನಾಡೋಡಿ ಮನ್ನನ್', 'ಕರ್ಪೂರ ಕರಸಿ', 'ಪಾಂಡುರಂಗ ಮಹಾತ್ಯಂ', 'ತಿರುಮಣಂ' ಮುಂತಾದ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2020ರಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದಲ್ಲಿ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದರು.

ಸರೋಜಾದೇವಿ ಅವರ ಕಲಾ ಸೇವೆಗಾಗಿ 1969ರಲ್ಲಿ ಪದ್ಮಶ್ರೀ ಮತ್ತು 1992ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಗಳು ಸಂದಿವೆ. ಅಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ 'ಕಲೈಮಾಮಣಿ' ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

Read More
Next Story