ಮಂಡ್ಯ ಲೋಕಸಭಾ ಕ್ಷೇತ್ರ | ಸುಮಲತಾ ಭೇಟಿ ಮಾಡಿ ಬೆಂಬಲ ಕೋರಿದ ಎಚ್‌ ಡಿ ಕುಮಾರಸ್ವಾಮಿ
x

ಮಂಡ್ಯ ಲೋಕಸಭಾ ಕ್ಷೇತ್ರ | ಸುಮಲತಾ ಭೇಟಿ ಮಾಡಿ ಬೆಂಬಲ ಕೋರಿದ ಎಚ್‌ ಡಿ ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎನ್‌ ಡಿಎ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದು, ಸುಮಲತಾ ಅವರ ಬೆಂಬಲವನ್ನು ಕೋರಿದ್ದಾರೆ.


ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.

ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಸುಮಲತಾ ಅವರು ಭಾರೀ ಪ್ರಯತ್ನ ನಡೆಸಿದ್ದರು. ಇನ್ನೊಂದೆಡೆ, ಮೈತ್ರಿ ಸೂತ್ರದಡಿಯಲ್ಲಿ ಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್‌ ಕೂಡಾ ಪಟ್ಟು ಹಿಡಿದು, ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸುಮಲತಾ-ಹೆಚ್‌ ಡಿಕೆ ಭೇಟಿ ಸಾಕಷ್ಟು ಗಮನ ಸೆಳೆದಿದೆ.

ಭಾನುವಾರ ಬೆಂಗಳೂರಿನ ಜೆಪಿ ನಗರದ ಸುಮಲತಾ ಅವರ ನಿವಾಸದಲ್ಲಿ ನಡೆದ ಭೇಟಿ ವೇಳೆ ನಟ, ಹಾಗೂ ಸುಮಲತಾ ಪುತ್ರ ಅಭಿಷೇಕ್‌ ಅಂಬರೀಷ್‌ ಕೂಡಾ ಹಾಜರಿದ್ದರು.

ಕುಮಾರಸ್ವಾಮಿ ಅವರು ಸುಮಲತಾ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದು, ಸುಮಲತಾ ಅವರ ಬೆಂಬಲವನ್ನು ಕೋರಿದ್ದಾರೆ. ಸುಮಲತಾ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಮಾತುಕತೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಇದೊಂದು ಸೌಹಾರ್ದ ಭೇಟಿ ಎಂದಷ್ಟೇ ಹೇಳಿದ್ದಾರೆ. ಸುಮಲತಾ ಅವರು ತಮಗೆ ಬೆಂಬಲ ನೀಡುತ್ತಾರೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ನಡುವೆ, ಸುಮಲತಾ ಅವರಿಗೆ ಮತ್ತೊಮ್ಮೆ ಮಂಡ್ಯ ಲೋಕಸಭಾ ಕ್ಷೇತದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಅವರ ಬೆಂಬಲಿಗರು ಆಗ್ರಹಿಸಿದ್ದು, ಅವರ ಜೆಪಿ ನಗರದ ನಿವಾಸದ ಮುಂದೆ ಶನಿವಾರ ನೂರಾರು ಬೆಂಬಲಿಗರು ಜಮಾಯಿಸಿ ಸ್ಪರ್ಧೆಗೆ ಒತ್ತಾಯಿಸಿದ್ದರು.

ಬೆಂಬಲಿಗ ಮುಖಂಡರೊಂದಿಗೆ ಚರ್ಚೆ ನಡೆಸಿದ ಬಳಿಕ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಸುಮಲತಾ ಅವರು, ಏಪ್ರಿಲ್ 3ರಂದು ಮಂಡ್ಯದಲ್ಲಿ ಸಭೆ ನಡೆಸಿದ ಬಳಿಕ ತನ್ನ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು.

ಹಾಗಾಗಿ ಏ.3 ರ ಮಂಡ್ಯ ಸಭೆಯವರೆಗೆ ಮಂಡ್ಯ ಲೋಕಸಭಾ ಕಣ ಕುತೂಹಲದ ಕೇಂದ್ರವಾಗಿದೆ. ಬೆಂಬಲಿಗರ ಸಭೆಯಲ್ಲಿ ಸುಮಲತಾ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕ್ಷೇತ್ರದಲ್ಲಿ ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಡುವುದೇ? ಅಥವಾ ಕಾಂಗ್ರೆಸ್‌ ವರ್ಸಸ್ ಎನ್‌ ಡಿಎ ನಡುವಿನ ನೇರ ಹಣಾಹಣಿಯೇ? ಎಂಬುದು ಅಂತಿಮವಾಗಲಿದೆ.

Read More
Next Story