ರಾಜ್ಯೋತ್ಸವ ಪ್ರಶಸ್ತಿ | ಅರ್ಹರ ಆಯ್ಕೆಗೆ ಸಲಹಾ ಸಮಿತಿ ರಚನೆ
x

ರಾಜ್ಯೋತ್ಸವ ಪ್ರಶಸ್ತಿ | ಅರ್ಹರ ಆಯ್ಕೆಗೆ ಸಲಹಾ ಸಮಿತಿ ರಚನೆ

ನವೆಂಬರ್ 1ರಂದು ನಡೆಯಲಿರುವ 69ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಲು ಸಲಹಾ ಸಮಿತಿ ರಚಿಸಲಾಗಿದೆ.


ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಸಾಧಕರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ 50 ಜನರ ಆಯ್ಕೆ ಸಲಹಾ ಸಮಿತಿ ರಚಿಸಿ ಆದೇಶಿಸಿದೆ.

ಸಮಿತಿ ಸದಸ್ಯರನ್ನಾಗಿ ಸಿ.ಎಸ್.ದ್ವಾರಕಾನಾಥ್, ನಿವೃತ್ತ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಧಾರವಾಡದ ಸದಾಶಿವ ಮರ್ಜಿ, ರಾಯಚೂರಿನ ಬಾಬು ಭಂಡಾರಿಗಲ್, ಕೊಪ್ಪಳದ ಶೈಲಜಾ ಹಿರೇಮಠ್, ಕಲ್ಬುರ್ಗಿಯ ರಂಜಾನ್ ದರ್ಗಾ, ಮೈಸೂರಿನ ವೈ.ಸಿ.ಭಾನುಮತಿ, ವಾಗ್ಮಿ ಹಿರೇಮಗಳೂರು ಕಣ್ಣನ್ ಸೇರಿದಂತೆ 36 ಸದಸ್ಯರು, 14 ಮಂದಿ ಪದನಿಮಿತ್ತ ಸದಸ್ಯರನ್ನು ಸಲಹಾ ಸಮಿತಿ ಒಳಗೊಂಡಿದೆ.

ನವೆಂಬರ್ 1ರಂದು ನಡೆಯಲಿರುವ 69ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಾಧಕರನ್ನು ಗುರುತಿಸಲು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಸಲಹಾ ಸಮಿತಿಗೆ ನೇಮಕ ಮಾಡಲಾಗಿದೆ.

ಈಗಾಗಲೇ ಸೇವಾ ಸಿಂಧು ಪೋರ್ಟಲ್ ವೆಬ್ಸೈಟ್ ಮೂಲಕ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ. ಸಲಹಾ ಸಮಿತಿ ಮುಂದಿನ ವಾರದಿಂದಲೇ ನಾಮ ನಿರ್ದೇಶನಗಳನ್ನು ಪರಿಶೀಲನೆ ಮಾಡಲಿದೆ. 69 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 69 ಸಾಧಕರಿಗೆ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ.

ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಸೇವಾ ಸಿಂಧು ಪೋರ್ಟಲ್‌ https://sevasindhu.Karnataka.gov.in ಮೂಲಕ ಸೆ. 30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇಲ್ಲಿಯವರೆಗೆ 1700ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.

Read More
Next Story