ಅಭಿಮಾನ್ ಸ್ಟುಡಿಯೋದ ಜಾಗವನ್ನ ವಶಪಡಿಸಿಕೊಳ್ಳಲು ಅರಣ್ಯ ಇಲಾಖೆಯಿಂದ ಆದೇಶ
x

ಅಭಿಮಾನ್ ಸ್ಟುಡಿಯೋ

ಅಭಿಮಾನ್ ಸ್ಟುಡಿಯೋದ ಜಾಗವನ್ನ ವಶಪಡಿಸಿಕೊಳ್ಳಲು ಅರಣ್ಯ ಇಲಾಖೆಯಿಂದ ಆದೇಶ

ಟಿ.ಎನ್. ಬಾಲಕೃಷ್ಣ ಅವರಿಗೆ 1970ರಲ್ಲಿ ಸರ್ಕಾರವು ಕೆಲವು ಷರತ್ತುಗಳ ಮೇಲೆ ಈ ಅರಣ್ಯ ಇಲಾಖೆ ಜಮೀನನ್ನು ಮಂಜೂರು ಮಾಡಿತ್ತು.


ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ, ಹಿರಿಯ ನಟ ಟಿ.ಎನ್. ಬಾಲಕೃಷ್ಣ ಅವರ ಕನಸಿನ ಕೂಸಾದ 'ಅಭಿಮಾನ್ ಸ್ಟುಡಿಯೋ' ದ ಯಗಾಂತ್ಯವಾಗಿದೆ. ಬೆಂಗಳೂರಿನ ಕೆಂಗೇರಿ ಸಮೀಪದ ಮೈಲಸಂದ್ರ ಗ್ರಾಮದಲ್ಲಿರುವ ಈ ಐತಿಹಾಸಿಕ ಸ್ಟುಡಿಯೋದ 20 ಎಕರೆ ಭೂಮಿಯನ್ನು ಸರ್ಕಾರಿ ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಅರಣ್ಯ ಇಲಾಖೆ ಡಿಎಫ್‌ಒ ಎನ್. ರವೀಂದ್ರ ಕುಮಾರ್ ಅವರು ಬೆಂಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ಭೂಮಿ ವಶಕ್ಕೆ ಪಡೆಯಲು ಸೂಚಿಸಿದ್ದಾರೆ. ಈ ಜಾಗವು ಬೆಂಗಳೂರಿನ ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೆ ನಂಬರ್ 22 ಮತ್ತು 26ರಲ್ಲಿದೆ. ಇದರಲ್ಲಿ ಸರ್ವೆ ನಂಬರ್ 26ರಲ್ಲಿರುವ ಸುಮಾರು 20 ಎಕರೆ ಪ್ರದೇಶದಲ್ಲಿ ಅಭಿಮಾನ್ ಸ್ಟುಡಿಯೋ ಇದೆ. ಇಲ್ಲೇ ಡಾಕ್ಟರ್​​ ವಿಷ್ಣುವರ್ಧನ್​ ಅವರನ್ನು ಸಮಾಧಿ ಮಾಡಲಾಗಿತ್ತು. ಇತ್ತೀಚಿಗೆ ಅವರ ಸಮಾಧಿಯನ್ನು ಅನ್ಯ ಉದ್ದೇಶಗಳಿಗೆ ಬಳಸಲು ನೆಲಸಮ ಮಾಡಲಾಗಿತ್ತು. ಅದು ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು.

ಯಾರಿಗೆ ಸೇರಿದ ಭೂಮಿ?

1969ರಲ್ಲಿ, ಕನ್ನಡ ಚಿತ್ರರಂಗಕ್ಕೆ ಉತ್ತೇಜನ ನೀಡುವ ಸದುದ್ದೇಶದಿಂದ ಅಂದಿನ ಸರ್ಕಾರವು ನಟ ಬಾಲಕೃಷ್ಣ ಅವರಿಗೆ 20 ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಿತ್ತು. ಈ ಭೂಮಿಯನ್ನು ಕೇವಲ ಸ್ಟುಡಿಯೋ ನಿರ್ಮಾಣ ಮತ್ತು ಚಿತ್ರೀಕರಣ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು, ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂಬ ಕಠಿಣ ಷರತ್ತುಗಳನ್ನು ವಿಧಿಸಲಾಗಿತ್ತು. ಒಂದು ವೇಳೆ ಷರತ್ತುಗಳನ್ನು ಉಲ್ಲಂಘಿಸಿದರೆ, ಯಾವುದೇ ಪರಿಹಾರ ನೀಡದೆ ಭೂಮಿಯನ್ನು ಹಿಂಪಡೆಯಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು. ಈ ಜಾಗವು ಕಾನೂನಾತ್ಮಕವಾಗಿ 'ತುರಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶ'ದ ಭಾಗವಾಗಿತ್ತು.

ಆದರೆ, ಕಾಲಾನಂತರದಲ್ಲಿ ಈ ಷರತ್ತುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದು ಅರಣ್ಯ ಇಲಾಖೆ ಗಂಭೀರ ಆರೋಪ ಮಾಡಿದೆ. ಟಿ.ಎನ್. ಬಾಲಕೃಷ್ಣ ಅವರ ನಿಧನದ ನಂತರ, ಅವರ ಮಕ್ಕಳು ಸ್ಟುಡಿಯೋ ನವೀಕರಣದ ಹೆಸರಿನಲ್ಲಿ 10 ಎಕರೆ ಭೂಮಿ ಮಾರಾಟ ಮಾಡಲು ಸರ್ಕಾರದ ಅನುಮತಿ ಪಡೆದಿದ್ದರು. ಆದರೆ, ಅನುಮತಿ ಪಡೆದಿದ್ದಕ್ಕಿಂತ ಹೆಚ್ಚುವರಿಯಾಗಿ, ಅಂದರೆ 12 ಎಕರೆ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಇಲಾಖೆ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲ, ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋದ ಅಭಿವೃದ್ಧಿಗೆ ಬಳಸಿಲ್ಲ, ಜಮೀನು ಹಾಗೆಯೇ ಉಳಿದಿದೆ, ಇದು ಕೂಡ ಮೂಲ ಉದ್ದೇಶದ ಉಲ್ಲಂಘನೆಯಾಗಿದೆ.

ಗಂಭೀರ ಉಲ್ಲಂಘನೆಗಳು

ಇದಲ್ಲದೆ, 2021ರಲ್ಲಿ ರಾಘವೇಂದ್ರ ಬಿ.ಕೆ. ಎಂಬುವವರೊಂದಿಗೆ ಉಳಿದ 10 ಎಕರೆ ಜಮೀನನ್ನು ಪ್ರತಿ ಚದರ ಅಡಿಗೆ 3,500 ರೂಪಾಯಿಯಂತೆ ಮಾರಾಟ ಮಾಡಲು ನೋಂದಾಯಿತ ಮಾರಾಟ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಭೂಮಿಯ ಮೇಲೆ ಮೂರನೇ ವ್ಯಕ್ತಿಯ ಹಕ್ಕನ್ನು ಸೃಷ್ಟಿಸುವ ಪ್ರಯತ್ನವಾಗಿದ್ದು, ಇದು ಮಂಜೂರಾತಿಯ ಅತ್ಯಂತ ಗಂಭೀರ ಉಲ್ಲಂಘನೆ ಎಂದು ಅರಣ್ಯ ಇಲಾಖೆ ಪರಿಗಣಿಸಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಎನ್. ರವೀಂದ್ರ ಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು, ಬಾಲಕೃಷ್ಣ ಅವರಿಗೆ ನೀಡಲಾಗಿದ್ದ ಭೂಮಿ ಮಂಜೂರಾತಿ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಸೂಚಿಸಿದ್ದಾರೆ ಅಲ್ಲದೆ, ಸಂಪೂರ್ಣ 20 ಎಕರೆ ಪ್ರದೇಶವನ್ನು ಮರಳಿ ಅರಣ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಂಡು, ಇಲಾಖೆಯ ಹೆಸರಿಗೆ ಖಾತೆ ಬದಲಾವಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Read More
Next Story