Hampi | ಹಂಪಿಯಲ್ಲಿ ವಿದೇಶಿಗರ ಅಪಸ್ವರ; ಸ್ಥಳೀಯರ ಜೊತೆ ಘರ್ಷಣೆ ನಿರಂತರ
x

Hampi | ಹಂಪಿಯಲ್ಲಿ ವಿದೇಶಿಗರ ಅಪಸ್ವರ; ಸ್ಥಳೀಯರ ಜೊತೆ ಘರ್ಷಣೆ ನಿರಂತರ

ರೆಸಾರ್ಟ್‌ಗಳಲ್ಲಿ ತಂಗುವ ವಿದೇಶಿಗರು ಹಗಲು ರಾತ್ರಿ ಎನ್ನದೇ ಮೋಜು ಮಸ್ತಿಯಲ್ಲಿ ತೊಡಗುವುದು ಕೂಡ ತಿಕ್ಕಾಟಕ್ಕೆ ಕಾರಣವಾಗಿದೆ. ಅತಿ ಹೆಚ್ಚು ವಿದೇಶಿಗರ ಆಗಮನದಿಂದ ಸ್ಥಳೀಯರಿಗೆ ಆದಾಯವೂ ಹರಿದುಬರುತ್ತಿದೆ. ಜೊತೆಗೆ ಘರ್ಷಣೆಗೆ ಕಾರಣವಾಗುತ್ತಿದೆ.


ವಿಶ್ವ ವಿಖ್ಯಾತಿ ಪಡೆದಿರುವ ಕರ್ನಾಟಕದ ಪ್ರವಾಸಿ ತಾಣ ಹಂಪಿಯ ವೈಭವವನ್ನು ವೀಕ್ಷಿಸಲು ಪ್ರತಿ ವರ್ಷ ದೇಶ-ವಿದೇಶಗಳಿಂದ ಪ್ರವಾಸಿಗರ ಮಹಾಪೂರವೇ ಹರಿದು ಬರುತ್ತದೆ. ಬೆಟ್ಟಗುಡ್ಡ, ನದಿ, ಪ್ರಕೃತಿ ಸೌಂದರ್ಯ ಹಾಗೂ ಭಾರತೀಯ ವಾಸ್ತುಶಿಲ್ಪದೊಂದಿಗೆ ಮಿಳಿತವಾಗಿರುವ ಈ ಪ್ರದೇಶ ವಿದೇಶಿಗರ ಅಚ್ಚುಮೆಚ್ಚಿನ ಟೂರಿಸ್ಟ್​ ಸ್ಪಾಟ್ ಕೂಡ ಹೌದು.

ಹಂಪಿಯ ವಾಸ್ತುಶಿಲ್ಪ ಕಣ್ತುಂಬಿಕೊಳ್ಳಲೆಂದೇ ಬರುವ ವಿದೇಶಿ ಪ್ರವಾಸಿಗರಿಗಾಗಿ ಹಂಪಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಸಂಖ್ಯೆಯಲ್ಲಿ ರೆಸಾರ್ಟ್‌ಗಳು ತಲೆ ಎತ್ತಿವೆ. ರೆಸಾರ್ಟ್‌ಗಳಲ್ಲಿ ತಂಗುವ ವಿದೇಶಿಗರು ಹಗಲು ರಾತ್ರಿ ಎನ್ನದೇ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ ಎಂಬ ಆರೋಪಗಳಿವೆ. ಇಂತಹ ಪ್ರಸಂಗಗಳು ಹಲವು ಬಾರಿ ಬೆಳಕಿಗೆ ಬಂದಿವೆ. ಏತನ್ಮಧ್ಯೆ, ವಿದೇಶಿಗರ ಆಗಮನದಿಂದ ಸ್ಥಳೀಯರ ವ್ಯಾಪಾರ ಹೆಚ್ಚಾಗಿ ಆದಾಯವೂ ಹರಿದುಬರುತ್ತಿದೆ. ಆದರೆ, ಅರೆ ನಗ್ನರಾಗಿ ತಿರುಗಾಡುವ ವಿದೇಶಿಗರ ವರ್ತನೆ ಸ್ಥಳೀಯರೊಡನೆ ಸಂಘರ್ಷಕ್ಕೂ ಕಾರಣವಾಗಿದೆ.

ಹಂಪಿಯಲ್ಲಿ ಅರೆನಗ್ನರಾಗಿ ತಿರುಗಾಡುವುದನ್ನೇ ನೋಡಲು ಬರುವ ಕೆಲ ಪುಂಡ ಪೋಕರಿಗಳು ಬೇಕೆಂತಲೇ ಗಲಾಟೆ ಮಾಡುವುದು ಕೂಡ ಸಾಮಾನ್ಯವಾಗಿದೆ. ವಿದೇಶಿ ಮಹಿಳೆಯರನ್ನು ರೇಗಿಸುವುದರಿಂದಲೇ ಸಾಕಷ್ಟು ಬಾರಿ ಘರ್ಷಣೆಗಳು ನಡೆದಿವೆ ಎಂಬುದು ಪ್ರವಾಸಿ ಮಾರ್ಗದರ್ಶಕರ ಮಾತು.

ಗುರುವಾರ ರಾತ್ರಿ ಸಾಣಾಪುರ ಕೆರೆಯ ಬಳಿ ರಾತ್ರಿ 11ರ ಸುಮಾರಿಗೆ ಗಿಟಾರ್‌ ಬಾರಿಸುತ್ತಾ ಆಗಸ ವೀಕ್ಷಿಸುತ್ತಿದ್ದ ಪ್ರವಾಸಿಗರೊಂದಿಗೆ ಸ್ಥಳೀಯ ಪುಂಡರು ಇದೇ ರೀತಿಯಲ್ಲಿ ಜಗಳ ಮಾಡಿದ್ದಾರೆ. ರಾತ್ರಿಯ ಏಕಾಂತವನ್ನೇ ಬಳಸಿಕೊಂಡು ಪುರುಷರನ್ನು ನಾಲೆಗೆ ದೂಡಿ, ವಿದೇಶಿ ಮಹಿಳೆ ಹಾಗೂ ಹೋಂ ಸ್ಟೇ ನಿರ್ವಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಬಳಿಕ ಹಂಪಿ ಸುತ್ತಮುತ್ತಲು ಉಂಟಾಗುತ್ತಿರುವ ದುಷ್ಕೃತ್ಯಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಈ ಹಿಂದೆ ಹಂಪಿಯ ಕಮಲಾಪುರ ಸಮೀಪದ ವಿರುಪಾಪುರ ಗಡ್ಡೆ ಪ್ರದೇಶದಲ್ಲಿ ವಿದೇಶಿಗರ ಮೋಜು ಮಸ್ತಿ ವಿಪರೀತವಾಗಿತ್ತು. ಮದ್ಯ, ಮಾದಕ ವಸ್ತುಗಳ ಸೇವನೆ ಸೇರಿದಂತೆ ಹಲವು ಅನೈತಿಕ ಚಟುವಟಿಕೆಗಳಿಂದ ಕುಖ್ಯಾತಿ ಪಡೆದಿತ್ತು. 2019ರ ಮಹಾಮಳೆಗೆ ವಿರುಪಾಪುರ ಗಡ್ಡೆ ಮುಳುಗಡೆಯಾದ ನಂತರ ಅಲ್ಲಿನ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ವಿದೇಶಿಗರ ವಾಸ್ತವ್ಯವೂ ಬದಲಾಯಿತು.

ಈಗ ಹಂಪಿ ಸುತ್ತಮುತ್ತಲಿನ ಕಮಲಾಪುರ, ಸಾಣಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅನಧಿಕೃತ ರೆಸಾರ್ಟ್‌ಗಳು ತಲೆ ಎತ್ತಿವೆ. ಹಂಪಿ, ಕೊಪ್ಪಳದ ಅಂಜನಾದ್ರಿ, ಪಂಪಾ ಸರೋವರ, ಸಣಾಪುರ ಕೆರೆ, ಸಣಾಪುರ ಫಾಲ್ಸ್, ಋುಷಿ ಮುಖ ಪರ್ವತ ಸೇರಿ ನಾನಾ ಸ್ಥಳಗಳ ವೀಕ್ಷಣೆಗೆ ಬರುವ ವಿದೇಶಿಗರು ಇಲ್ಲಿ ತಂಗಲಿದ್ದು, ಪಾರ್ಟಿಗಳಲ್ಲಿ ತೊಡಗುವುದು ಮುಂದುವರಿದಿದೆ.

ಸ್ಥಳೀಯರು-ವಿದೇಶಿಗರ ಮಧ್ಯೆ ಘರ್ಷಣೆ

ಹಂಪಿ ಸುತ್ತಮುತ್ತ ಪ್ರವಾಸಿ ತಾಣಗಳಲ್ಲಿ ಕಳೆದ ಹಲವು ವರ್ಷಗಳಿಂದ ಸಣ್ಣಪುಟ್ಟ ವಿಚಾರಗಳಿಗೆ ವಿದೇಶಿಯರು ಹಾಗೂ ಸ್ಥಳೀಯರ ಮಧ್ಯೆ ಘರ್ಷಣೆ ನಡೆಯುತ್ತಲೇ ಇದೆ. ವಿದೇಶಿಯರು ಪುರಾತನ ಸ್ಥಳಗಳಲ್ಲಿ ಅನೈತಿಕ ಚಟುವಟಿಗೆಳಲ್ಲಿ ಭಾಗಿಯಾಗುತ್ತಿದ್ದ ವಿಚಾರ ಸಾಕಷ್ಟು ಬಾರಿ ಘರ್ಷಣೆಗೆ ಕಾರಣವಾಗಿತ್ತು.

2012 ಫೆ 27ರಂದು ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಹಿಂಬದಿಯ ‘ವಾಟರ್ ಫಾಲ್ಸ್’ನಲ್ಲಿ ವಿದೇಶಿಗರು ಅರೆ ಬೆತ್ತಲೆ ಸ್ನಾನ ಮಾಡುತ್ತಿದ್ದರು. ಮದ್ಯ ಸೇವನೆ, ಧೂಮಪಾನ, ಮಾದಕ ದ್ರವ್ಯಗಳ ಸೇವಿಸುತ್ತಿದ್ದ ಬಗ್ಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಪವಿತ್ರ ಧಾರ್ಮಿಕ ತಾಣದಲ್ಲಿ ಅಸಭ್ಯ ವರ್ತನೆಗೆ ಕಡಿವಾಣ ಹಾಕುವಂತೆ ಸ್ಥಳೀಯರು ಹಾಗೂ ಪ್ರವಾಸಿಗರು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.

2023 ಫೆ.22 ರಂದು ಕೆಲ ವಿದೇಶಿ ಪ್ರಜೆಗಳು ವಿರೂಪಾಕ್ಷ ದೇವಾಲಯದ ಬಳಿ ಮದ್ಯಪಾನ, ಧೂಮಪಾನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.ಹಂಪಿಯ ಪುರಂದರ ಮಂಟಪದಲ್ಲಿ ಪಾರ್ಟಿ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗಲೂ ಜೋರು ಗಲಾಟೆ ನಡೆದಿತ್ತು. ಇದಾದ ಬಳಿಕವೂ ವಿದೇಶಿಯರ ಉಪಟಳ ಮುಂದುವರಿದೇ ಇತ್ತು ಎಂದು ಕೊಪ್ಪಳ ನಿವಾಸಿ ಪ್ರಮೋದ್‌ "ದ ಫೆಡರಲ್‌ ಕರ್ನಾಟಕ" ವಾಸ್ತವವನ್ನು ವಿವರಿಸಿದ್ದಾರೆ.

ನಾಯಿಕೊಡೆಗಳಂತೆ ತಲೆ ಎತ್ತಿದ್ದ ರೆಸಾರ್ಟ್‌ಗಳು

ಹಂಪಿ ಸುತ್ತ ಮುತ್ತ ಗ್ರಾಮಗಳಲ್ಲಿ ಲಾಭದ ದೃಷ್ಟಿಯಿಂದ ಹಲವು ಯಾವುದೇ ಪರವಾನಗಿ ಪಡೆಯದೇ ಕಂದಾಯ ಭೂಮಿಯಲ್ಲಿ ರೆಸಾರ್ಟ್ ನಿರ್ಮಿಸಲಾಗಿದೆ. ಇವೆಲ್ಲವೂ ವಿದೇಶಿಗರ ತಾಣಗಳಾಗಿವೆ.

ಹಂಪಿಗೆ ಬರುವ ಅಮೆರಿಕ, ಇಸ್ರೇಲ್, ಮಾಲ್ಡಿವ್ಸ್, ಬ್ರಿಟನ್ ಸೇರಿದಂತೆ ವಿವಿಧ ದೇಶಗಳ ಪ್ರವಾಸಿಗರು ಪ್ರಕೃತಿಯ ಮಡಿಲಲ್ಲಿರುವ ರೆಸಾರ್ಟ್‌ಗಳಲ್ಲಿ ಠಿಕಾಣಿ ಹೂಡುತ್ತಾರೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿಂದ ಮಾರ್ಚ್ ವರೆಗೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. 2023 ರಲ್ಲಿ ಹಂಪಿಗೆ ಬರೋಬ್ಬರಿ 16 ಸಾವಿರ ವಿದೇಶಿ ಪ್ರವಾಸಿಗರ ಭೇಟಿ ನೀಡಿದ್ದರು ಎಂದು ಅಂಕಿ ಅಂಶಗಳು ತಿಳಿಸಿವೆ.

ವಿದೇಶಗಳಿಂದ ಅಷ್ಟೇ ಅಲ್ಲದೇ ದೇಶದ ವಿವಿಧ ಮೂಲೆಗಳಿಂದಲೂ ಪ್ರವಾಸಿಗರು ಆಗಮಿಸುವುದರಿಂದ ಅನಧಿಕೃತ ರೆಸಾರ್ಟ್​ಗಳು ಹೆಚ್ಚು ತಲೆ ಎತ್ತಿವೆ. ಮಾಲ್ಡಿವ್ಸ್ ಮಾದರಿಯಂತೆ ನೀರಿನ ಮೇಲೆ, ಭತ್ತದ ಗದ್ದೆಗಳ ಮೇಲೆ ರೆಸಾರ್ಟ್‌ಗಳನ್ನು ನಿರ್ಮಿಸಲಾಗಿದೆ.



Read More
Next Story