ಅನಗತ್ಯ ಡಿಎನ್​​ಎ ಪರೀಕ್ಷೆ ಒತ್ತಾಯ ಮಾಡುವುದರಿಂದ ವ್ಯಕ್ತಿಯ ಘನತೆಗೆ ಧಕ್ಕೆ: ಹೈಕೋರ್ಟ್​​
x

ಅನಗತ್ಯ ಡಿಎನ್​​ಎ ಪರೀಕ್ಷೆ ಒತ್ತಾಯ ಮಾಡುವುದರಿಂದ ವ್ಯಕ್ತಿಯ ಘನತೆಗೆ ಧಕ್ಕೆ: ಹೈಕೋರ್ಟ್​​

ಕೆಲವು ಪುರುಷರು ತಮ್ಮ ಪತ್ನಿಯ ಚಾರಿತ್ರ್ಯವಧೆ ಮಾಡಲು ಡಿಎನ್‌ಎ ಪರೀಕ್ಷೆಯನ್ನು ಅಸ್ತ್ರವಾಗಿ ಬಳಸುತ್ತಾರೆ. ಇದು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ. ಇಂತಹ ದುರ್ಬಳಕೆಗೆ ನ್ಯಾಯಾಲಯಗಳು ಅವಕಾಶ ನೀಡಬಾರದು.


Click the Play button to hear this message in audio format

ಆಸ್ತಿ ಪಾಲುದಾರಿಕೆಯ ವಿವಾದಗಳಲ್ಲಿ ಸಕಾರಣವಿಲ್ಲದೆ ಡಿಎನ್ಎ ಪರೀಕ್ಷೆಗೆ ಒತ್ತಾಯಿಸುವುದು ವ್ಯಕ್ತಿಯ "ಗೋಪ್ಯತೆ ಮತ್ತು ಘನತೆಯ ಮೂಲಭೂತ ಹಕ್ಕಿನ" ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚನ್ನರಾಯಪಟ್ಟಣದ ಸಿವಿಲ್ ನ್ಯಾಯಾಲಯವು ನೀಡಿದ್ದ ಡಿಎನ್ಎ ಪರೀಕ್ಷೆಯ ಆದೇಶವನ್ನು ಪ್ರಶ್ನಿಸಿ 39 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

ಚನ್ನರಾಯಪಟ್ಟಣದ ನ್ಯಾಯಾಲಯದಲ್ಲಿ 2016ರಿಂದ ಆಸ್ತಿ ವಿವಾದವೊಂದು ನಡೆಯುತ್ತಿತ್ತು. ವ್ಯಕ್ತಿಯೊಬ್ಬರ ಮೊದಲ ಪತ್ನಿಯ ಇಬ್ಬರು ಗಂಡು ಮಕ್ಕಳು, ಎರಡನೇ ಪತ್ನಿಯ ಮಗನಿಗೆ ಆಸ್ತಿಯಲ್ಲಿ ಪಾಲು ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದರು. "ನಮ್ಮ ತಂದೆಗೆ ಈತ ಜನಿಸಿಲ್ಲ, ಏಕೆಂದರೆ ನಮ್ಮ ತಂದೆ ಅದಾಗಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ (ವಾಸೆಕ್ಟಮಿ) ಮಾಡಿಸಿಕೊಂಡಿದ್ದರು. ಹೀಗಾಗಿ, ಇವರ ಪಿತೃತ್ವವನ್ನು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆ ನಡೆಸಬೇಕು" ಎಂದು ಅವರು ನ್ಯಾಯಾಲಯವನ್ನು ಕೋರಿದ್ದರು.

ಈ ವಾದವನ್ನು ಪುರಸ್ಕರಿಸಿದ್ದ ಸಿವಿಲ್ ನ್ಯಾಯಾಲಯ, ಡಿಎನ್‌ಎ ಪರೀಕ್ಷೆಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎರಡನೇ ಪತ್ನಿಯ ಮಗ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ಹೇಳಿದ್ದೇನು?

ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಈ ಕೆಳಗಿನ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿದೆ: ಸಕಾರಣವಿಲ್ಲದೆ ಡಿಎನ್ಎ ಪರೀಕ್ಷೆಗೆ ಆದೇಶಿಸುವುದು ದಂಪತಿಗೆ ಸಂವಿಧಾನ ನೀಡಿರುವ ಗೋಪ್ಯತೆ ಮತ್ತು ಘನತೆಯ ಹಕ್ಕನ್ನು ಕಸಿದುಕೊಂಡಂತೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಕಲಂ 112ರ ಪ್ರಕಾರ, ಕಾನೂನುಬದ್ಧ ವಿವಾಹದ ಸಮಯದಲ್ಲಿ ಜನಿಸಿದ ಮಗುವಿನ ಪಿತೃತ್ವವನ್ನು ಪ್ರಶ್ನಿಸುವಂತಿಲ್ಲ. ಇದು ಮಗು ಮತ್ತು ತಾಯಿಯ ಘನತೆಯನ್ನು ರಕ್ಷಿಸುತ್ತದೆ. ಇದನ್ನು ಮೀರಿ ಅತ್ಯಂತ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಡಿಎನ್‌ಎ ಪರೀಕ್ಷೆಗೆ ಆದೇಶಿಸಬಹುದು.

ಕೆಲವು ಪುರುಷರು ತಮ್ಮ ಪತ್ನಿಯ ಚಾರಿತ್ರ್ಯವಧೆ ಮಾಡಲು ಡಿಎನ್‌ಎ ಪರೀಕ್ಷೆಯನ್ನು ಅಸ್ತ್ರವಾಗಿ ಬಳಸುತ್ತಾರೆ. ಇದು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ. ಇಂತಹ ದುರ್ಬಳಕೆಗೆ ನ್ಯಾಯಾಲಯಗಳು ಅವಕಾಶ ನೀಡಬಾರದು.

ಈ ತೀರ್ಪಿನ ಪ್ರತಿಯನ್ನು ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ಕಳುಹಿಸುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಸೂಚನೆ ನೀಡಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಈಗಾಗಲೇ ಡಿಎನ್‌ಎ ವರದಿ ಸಿದ್ಧಪಡಿಸಿದ್ದರೆ, ಅದು ಅಮಾನ್ಯವಾಗಿರುತ್ತದೆ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

Read More
Next Story