ನಾಮಪತ್ರ ಸಲ್ಲಿಕೆ ರೋಡ್‌ ಶೋನಲ್ಲಿ ಭಾಗವಹಿಸಲು ಒತ್ತಡ: ತೇಜಸ್ವಿ ಸೂರ್ಯ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
x

ನಾಮಪತ್ರ ಸಲ್ಲಿಕೆ ರೋಡ್‌ ಶೋನಲ್ಲಿ ಭಾಗವಹಿಸಲು ಒತ್ತಡ: ತೇಜಸ್ವಿ ಸೂರ್ಯ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸುವಂತೆ ವಿವಿ ಪುರಂ ಜೈನ್‌ ಕಾಲೇಜು ವಿದ್ಯಾರ್ಥಿಗಳಿಗೆ ಬಲವಂತಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ವಿವಿ ಪುರಂ ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿತ್ತು ಎಂದು ಕಾಲೇಜಿನ ವಿದ್ಯಾರ್ಥಿಗಳು ಆರೋಪಿಸಿದ್ದು, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.

“ತೇಜಸ್ವಿ ಸೂರ್ಯ ಅವರು ಗುರುವಾರ (ಏ. 4) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ನಾಮಪತ್ರ ಸಲ್ಲಿಕೆಗೆ ಮುನ್ನ ಹಮ್ಮಿಕೊಂಡಿರುವ ರೋಡ್‌ ಶೋದಲ್ಲಿ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕು, ಭಾಗವಹಿಸುವವರಿಗೆ ಹಾಜರಾತಿ ನೀಡಲಾಗುವುದು, ಯಾವುದೇ ಕಾರಣಕ್ಕೂ ತಪ್ಪಿಸಬಾರದು” ಎಂದು ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪಿನಲ್ಲಿ ಕಳುಹಿಸಲಾದ ಸಂದೇಶಗಳನ್ನು ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.

ಬೆಂಗಳೂರಿನ ವಿವಿ ಪುರಂನಲ್ಲಿರುವ ಜೈನ್ ಕಾಲೇಜಿನ ವಾಟ್ಸಪ್ ಗ್ರೂಪಿನಲ್ಲಿ ಈ ಸಂದೇಶ ಹಾಕಲಾಗಿದೆ ಎನ್ನಲಾಗಿದೆ.

ಏ. 3 ರಂದು ವಿದ್ಯಾರ್ಥಿಗಳಿಗೆ ಈ ಸಂದೇಶ ರವಾನೆಯಾಗಿದ್ದು, “ನಾಳೆ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅದಕ್ಕೂ ಮುನ್ನ ಮೆರವಣಿಗೆ ನಡೆಯಲಿದೆ. ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಜಯನಗರದ ಮೈಯ್ಯಾಸ್ ಹೋಟೆಲ್ ಬಳಿ ಬಂದು ಸೇರಬೇಕು. ಅಲ್ಲಿ ನಿಮಗೆ ಟಿ-ಶರ್ಟ್ ನೀಡಲಾಗುವುದು. ಆದ್ದರಿಂದ ತಡ ಮಾಡಬಾರದು. ಕಡ್ಡಾಯವಾಗಿ ಇದರಲ್ಲಿ ಭಾಗವಹಿಸಬೇಕು. ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಭಾಗವಹಿಸುವವರಿಗೆ ಹಾಜರಾತಿಯನ್ನು ನೀಡಲಾಗುವುದು” ಎಂದು ಆ ಸಂದೇಶದಲ್ಲಿ ಹೇಳಲಾಗಿದೆ.

ಕಾಲೇಜಿನ ಪ್ರತಿಯೊಂದು ವಿಭಾಗದ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪುಗಳಲ್ಲೂ ಸಂದೇಶ ರವಾನಿಸಲಾಗಿದ್ದು, ಸ್ವತಃ ಕಾಲೇಜಿನ ಆಡಳಿತ ಮಂಡಳಿಯ ಸೂಚನೆಯ ಮೇರೆಗೆ ಈ ಆದೇಶ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಎರಡು ವರ್ಷಗಳ ಹಿಂದೆ ತೇಜಸ್ವಿ ಸೂರ್ಯ ಅವರು ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ, ಅದಕ್ಕೆ ಪ್ರತಿಯಾಗಿ ತಾನು ನಾಮಪತ್ರ ಸಲ್ಲಿಸುವಾಗ ಕಾಲೇಜು ವಿದ್ಯಾರ್ಥಿಗಳನ್ನು ಕಳುಹಿಸಬೇಕೆಂದು ಆಡಳಿತ ಮಂಡಳಿಯ ಬಳಿ ಖುದ್ದು ತೇಜಸ್ವಿ ಸೂರ್ಯ ಅವರೇ ಹೇಳಿದ್ದರೆಂದು ಕಾಲೇಜು ಮೂಲಗಳು ಹೇಳಿವೆ.

ವಾಟ್ಸಾಪ್ ಗ್ರೂಪುಗಳಲ್ಲಿ ನೀಡಲಾದ ಸಂದೇಶಕ್ಕೆ ಕೆಲವು ವಿದ್ಯಾರ್ಥಿಗಳು ಅಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳನ್ನು ರಾಜಕೀಯ ಕಾರ್ಯಕ್ರಮಗಳಿಗೆ ಭಾಗಿಯಾಗುವಂತೆ ಒತ್ತಾಯಿಸಲು ಯಾವುದೇ ಹಕ್ಕು ಇಲ್ಲ ಎಂದು ತಕರಾರು ಎತ್ತಿದ್ದಾರೆ.

ರಾಜಕೀಯ ಮತ್ತು ಶಿಕ್ಷಣ ಎರಡು ಬೇರೆ ಬೇರೆ ವಿಚಾರ. ರಾಜಕೀಯ ಪಕ್ಷಗಳ ರ್ಯಾಲಿಗಳಲ್ಲಿ ಭಾಗಿಯಾಗಬೇಕೇ ಬೇಡವೇ ಎಂಬುದು ನಮ್ಮ ಹಕ್ಕಲ್ಲವೇ? ಈ ವಿಚಾರದಲ್ಲಿ ಬಲವಂತ ಏಕೆ ಎಂದು ವಿದ್ಯಾರ್ಥಿಯೊಬ್ಬರು ಎತ್ತಿದ ಪ್ರಶ್ನೆಯೂ ವೈರಲ್ ಆಗಿದೆ.

ಈ ಬಗ್ಗೆ ಸ್ಪಷ್ಟನೆ ಪಡೆಯಲು ಸಂಸದ ತೇಜಸ್ವಿ ಸೂರ್ಯ ಹಾಗೂ ಜೈನ್ ಕಾಲೇಜನ್ನು ʼದಿ ಫೆಡೆರಲ್ ಕರ್ನಾಟಕʼ ಸಂಪರ್ಕಿಸಲು ಯತ್ನಿಸಿತು. ಆದರೆ , ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

ತೇಜಸ್ವಿ ಸೂರ್ಯ ವಿರುದ್ಧ ಕ್ರಮಕ್ಕೆ ಆಗ್ರಹ

ಕಾಲೇಜು ವಿದ್ಯಾರ್ಥಿಗಳನ್ನು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಒತ್ತಡ ಹೇರಲಾಗಿದೆ ಎಂಬ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕಟ್ಟುನಿಟ್ಟಿನ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು X ನಲ್ಲಿ ಪೋಸ್ಟ್ ಮಾಡಿದ್ದು, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗೆ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಅವರಲ್ಲಿ ಆಗ್ರಹಿಸಿದ್ದಾರೆ.

“ಇತ್ತೀಚೆಗೆ ತೇಜಸ್ವಿ ಸೂರ್ಯ ಅವರು ನಮ್ಮ ಪ್ರಾಂಶುಪಾಲರು ಮತ್ತು ಕಾಲೇಜು ಸಿಬ್ಬಂದಿಯನ್ನು ಭೇಟಿ ಮಾಡಿ, 4/04/2024 ರಂದು ಬೆಳಿಗ್ಗೆ 9 ಗಂಟೆಗೆ ಜಯನಗರದಲ್ಲಿ ನಡೆಯಲಿರುವ ಅವರ ರ್ಯಾಲಿಯಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕಟ್ಟು ನಿಟ್ಟಾಗಿ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ. ನೀವು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿ, ಇದು ಸಂಭವಿಸದಂತೆ ತಡೆಯಿರಿ ಎಂದು ಮನವಿ ಮಾಡುತ್ತಿದ್ದೇವೆ. ಅದರ ಪುರಾವೆ ನನ್ನ ಬಳಿ ಇದೆ” ಎಂದು ವಿವಿ ಪುರಂ ಜೈನ್ ಕಾಲೇಜ್ ವಿದ್ಯಾರ್ಥಿ ಎಂದು ಪರಿಚಯಿಸಿರುವ ಒಬ್ಬರು ಕಳುಹಿಸಿರುವ ಸಂದೇಶವೊಂದನ್ನು ಸೌಮ್ಯಾ ರೆಡ್ಡಿ ಅವರು ಹಂಚಿಕೊಂಡಿದ್ದಾರೆ.

ಕರ್ನಾಟಕ ಯೂತ್ ಕಾಂಗ್ರೆಸ್ ಕೂಡಾ ಈ ಬಗ್ಗೆ ಪೋಸ್ಟ್ ಮಾಡಿದ್ದು, “ರಾಜಕೀಯ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆಗಮಿಸಲು ಸೂಚನೆ ನೀಡಿರುವ ತೇಜಸ್ವಿ ಸೂರ್ಯ ರವರ ನಡೆ ಎಷ್ಟು ಸರಿ? ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯ ರವರ ಮೇಲೆ ಕ್ರಮವಿಲ್ಲವೇ? ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ?” ಎಂದು ಪ್ರಶ್ನಿಸಿದೆ.

Read More
Next Story