ಆತ್ಮಹತ್ಯೆ ಪ್ರಕರಣ | ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆಗೆ ಒತ್ತಾಯ
ಗುರುವಾರ ಯುವಕನೊಬ್ಬ ಮೆಟ್ರೋ ರೈಲಿಗೆ ಜಿಗಿದು ಸಾವುಕಂಡ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸಬೇಕು ಎನ್ನುವ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.
ಗುರುವಾರ ಯುವಕನೊಬ್ಬ ಮೆಟ್ರೋ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು ಭೀಕರ ಘಟನೆಯ ಬಳಿಕ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ವಿದ್ಯುದೀಕರಣಗೊಂಡ ಮೆಟ್ರೋ ಹಳಿಗಳ ಮೇಲೆ ಸಾರ್ವಜನಿಕರು ಧುಮುಕಿದ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಟ್ರಾಕ್ ಮೇಲೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹಳಿ ಮೇಲೆ ಹಾರಿದ ಘಟನೆ ನಡೆದಿತ್ತು. ಅದಾದ ಬೆನ್ನಲ್ಲೇ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದ. ಈ ಘಟನೆ ನಡೆದ ಬಳಿಕ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸಬೇಕು ಎನ್ನುವ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.
ಈ ಘಟನೆ ಮಾಸುವ ಮುನ್ನವೇ ಗುರುವಾರ ( ಮಾರ್ಚ್ 22) ರಂದು ಅತ್ತಿಗುಪ್ಪೆಯಲ್ಲಿ ವಿದ್ಯಾರ್ಥಿಯೊಬ್ಬ ಚಲಿಸುತ್ತಿರುವ ಮೆಟ್ರೋ ರೈಲಿನ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ಮತ್ತೆ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆ ಮಾಡಬೇಕು ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.
ಏನಿದು ಪಿಎಸ್‌ಡಿ
ಪಿಎಸ್‌ಡಿ ಎಂದರೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್. ಹಳಿಗೆ ಯಾರೂ ನುಗ್ಗದಂತೆ ಫ್ಲಾಟ್‌ಫಾರ್ಮ್‌ಗಳಲ್ಲಿ ಗ್ಲಾಸ್ ಬಾಗಿಲುಗಳನ್ನು ಅಳವಡಿಸಲಾಗಿರುತ್ತದೆ. ರೈಲು ಬಂದು ನಿಂತ ಮೇಲೆ ಆ ಬಾಗಿಲುಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ರೈಲಿನ ಬಾಗಿಲು ಮುಚ್ಚಿಕೊಳ್ಳುವ ಹೊತ್ತಿಗೆ ಗ್ಲಾಸ್ ಬಾಗಿಲು ಮುಚ್ಚಿಕೊಳ್ಳುತ್ತವೆ. ಪಿಎಸ್‌ಡಿ ತಂತ್ರಜ್ಞಾನವನ್ನು ಚೆನ್ನೈ, ದೆಹಲಿ ಮತ್ತು ಮುಂಬೈನ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ.
ಎರಡನೇ ಆತ್ಮಹತ್ಯೆ ಪ್ರಕರಣ
ಮೆಟ್ರೋ ರೈಲಿನ ಹಳಿಗೆ ಬಿದ್ದು, ಸಾವನ್ನಪ್ಪಿರುವ ಪ್ರಕರಣ ಇದೇ ಮೊದಲೇನಲ್ಲ. 2012ರಲ್ಲಿ ಸೇಂಟ್ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿ ವಿಷ್ಣು ಶರಣ್ (17ವ) ಎಂ.ಜಿ ರೋಡ್ ರೈಲು ನಿಲ್ದಾಣದಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವುದು ಮತ್ತು ಅವರು ಹಳಿಗಳ ಮೇಲೆ ಪ್ರವೇಶಿಸುವುದನ್ನು ತಡೆಗಟ್ಟಲು ಇಂತಹ ಕ್ರಮಗಳು ಅನಿವಾರ್ಯವಾಗಿವೆ.