ಧರ್ಮಸ್ಥಳ ಪ್ರಕರಣ : ʼಸೌಜನ್ಯಪರ ಹೋರಾಟಗಾರʼ ಹೊಸ ಸಾಕ್ಷಿ?
x

ಧರ್ಮಸ್ಥಳ ಪ್ರಕರಣ : ʼಸೌಜನ್ಯಪರ ಹೋರಾಟಗಾರʼ ಹೊಸ ಸಾಕ್ಷಿ?

ಧರ್ಮಸ್ಥಳದಲ್ಲಿ ʼಸಾಕ್ಷ್ಯಕ್ಕಾಗಿʼ ಅಗೆತ: ಬಾಲಕಿಯನ್ನು ಹೂತ ಜಾಗ ತೋರಿಸುತ್ತೇನೆ ಎಂದು ಮುಂದೆ ಬಂದ ʼಸೌಜನ್ಯಪರ ಹೋರಾಟಗಾರʼ


ದೇಶಾದ್ಯಂತ ಗಮನ ಸೆಳೆದಿರುವ ʼಧರ್ಮಸ್ಥಳ ಸಾಮೂಹಿಕ ಸಮಾಧಿʼ ಪ್ರಕರಣವೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಧರ್ಮಸ್ಥಳದಲ್ಲಿ ಹಲವಾರು ಮಹಿಳೆಯರ ಮೃತದೇಹಗಳನ್ನು ಅಕ್ರಮವಾಗಿ ದಫನ ಮಾಡಲಾಗಿದೆ ಎಂದು ಸಾಕ್ಷಿದಾರ ಗುರುತಿಸಿದ್ದ ಸ್ಥಳದಲ್ಲಿ ಎಸ್‌ಐಟಿ ತಂಡವು ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ, ಇನ್ನಷ್ಟು ಸಾಕ್ಷಿದಾರರು ಸಾಕ್ಷ್ಯ ಹೇಳಲು ಮುಂದೆ ಬರಲು ಸಜ್ಜಾಗಿದ್ದಾರೆ.

ಸದ್ಯ, ಅಪ್ರಾಪ್ತ ಬಾಲಕಿಯೊಬ್ಬಳ ಮೃತದೇಹ ಹೂತು ಹಾಕಿರುವ ಸ್ಥಳ ತನಗೆ ಗೊತ್ತಿರುವುದಾಗಿಯೂ, ಎಸ್‌ಐಟಿ ತಂಡಕ್ಕೆ ಅದರ ಗುರುತು ತೋರಿಸುತ್ತೇನೆ ಎಂದು ಬೆಳ್ತಂಗಡಿ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಲು ಬಂದಿದ್ದಾರೆ. ಅವರು ಮಾತ್ರವಲ್ಲದೆ, ಧರ್ಮಸ್ಥಳದ ಸ್ಥಳೀಯ ಆಟೋ ಚಾಲಕರೊಬ್ಬರು ಕೂಡಾ ಸಾಕ್ಷ್ಯ ನೀಡಲು ಸಜ್ಜಾಗಿದ್ದಾರೆ ಎಂದು ಮೂಲಗಳು ಹೇಳಿವೆ.

2008 ರಲ್ಲಿ ಧರ್ಮಸ್ಥಳದಲ್ಲಿ ಅತ್ಯಾಚಾರ ಹಾಗೂ ಹತ್ಯೆಗೊಳಗಾಗಿದ್ದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಇಚ್ಲಂಪಾಡಿ ಗ್ರಾಮದ ಜಯಂತ್‌ ಟಿ ಎಂಬವರು ಮಾಧ್ಯಮಗಳ ಮುಂದೆ ಬಂದಿದ್ದು, ಧರ್ಮಸ್ಥಳದಲ್ಲಿ ಅಪ್ರಾಪ್ತೆ ಬಾಲಕಿಯ ಮೃತದೇಹವನ್ನು ಹೂತಿರುವುದಕ್ಕೆ ತಾನು ಪ್ರತ್ಯಕ್ಷದರ್ಶಿ ಎಂದು ಹೇಳಿಕೆ ನೀಡಿದ್ದಾರೆ.

“15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬಳ ಮೃತದೇಹವನ್ನು ಹೂತು ಹಾಕಿರುವುದನ್ನು ತಾನು ನೋಡಿದ್ದೇನೆ, ಅಕ್ರಮವಾಗಿ ದಫನ ಮಾಡಲಾಗಿದೆ. ಎಸ್‌ಐಟಿ ತಂಡದ ಮೇಲಿನ ವಿಶ್ವಾಸದ ಮೇರೆಗೆ ಈಗ ಅದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಧೈರ್ಯ ಬಂದಿದೆ, ತನಿಖಾ ತಂಡಕ್ಕೆ ಆ ಸ್ಥಳವನ್ನು ನಾನು ತೋರಿಸಿಕೊಡುತ್ತೇನೆ” ಎಂದು ಅವರು ಹೇಳಿದ್ದಾರೆ.

ದಿನದಿಂದ ದಿನಕ್ಕೆ ಕುತೂಹಲ

ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಅತ್ಯಾಚಾರ ಹಾಗೂ ಕೊಲೆ ನಡೆದಿದೆ ಎಂಬ ಆರೋಪವು ಸಾರ್ವಜನಿಕ ವಲಯದಲ್ಲಿ ದಟ್ಟವಾಗುತ್ತಿದ್ದಂತೆಯೇ, ವರ್ಷಗಳ ಹಿಂದೆ ತಾನು ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ದೂರಿನ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚನೆಗೆ ಸಾರ್ವಜನಿಕ ಒತ್ತಾಯ ಕೇಳಿ ಬಂದಿತ್ತು. ಎಸ್‌ಐಟಿ ರಚನೆ ಬಳಿಕ, ವ್ಯಕ್ತಿ ಗುರುತಿಸಿದ 13 ಸ್ಥಳಗಳಲ್ಲಿ ಇದುವರೆಗೂ 9 ಸ್ಥಳಗಳನ್ನು ಅಗೆಯಲಾಗಿದ್ದು, ಒಂದೆಡೆ ಆಸ್ಥಿಪಂಜರದ ಕಳೇಬರಗಳು ಪತ್ತೆಯಾಗಿವೆ. ಹೀಗಿರುವಾಗ, ಜಯಂತ್‌ ಟಿ ಎಂಬವರು ಮತ್ತೊಂದು ಮೃತದೇಹ ಹೂತು ಹಾಕಿರುವ ಬಗ್ಗೆ ಸಾಕ್ಷಿ ನೀಡಲು ಮುಂದೆ ಬಂದಿದ್ದು, ತನ್ನೊಂದಿಗೆ ಇನ್ನೂ ನಾಲ್ಕೈದು ಮಂದಿ ಸಾಕ್ಷಿ ನೀಡಲು ಬರಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

“ಇಲ್ಲಿ (ಧರ್ಮಸ್ಥಳದಲ್ಲಿ) ಹಲವಾರು ಕೊಲೆಗಳಾಗಿವೆ. ಹೆದರಿಕೆಯಿಂದಾಗಿ ಈವರೆಗೂ ಯಾರೂ ಮಾತಾಡಿರಲಿಲ್ಲ. ಎಸ್‌ಐಟಿ ರಚನೆಯಾದ್ದರಿಂದ ಈ ಬಗ್ಗೆ ಧೈರ್ಯವಾಗಿ ಮಾತನಾಡುತ್ತಿದ್ದೇನೆ. ಹದಿನೈದು ವರ್ಷದ ಹಿಂದೆ 13-15 ವರ್ಷದೊಳಗಿನ ಬಾಲಕಿ ಇಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಳು. ಎಫ್‌ಐಆರ್‌ ದಾಖಲಿಸದೆ, ಮರಣೋತ್ತರ ಪರೀಕ್ಷೆಯೂ ನಡೆಸದೆ ಆ ಮೃತದೇಹವನ್ನು ಹೂಳಲಾಗಿತ್ತು” ಎಂದು ಜಯಂತ್‌ ಹೇಳಿದ್ದಾರೆ.

“ಎಲಿ ಹೂಳಲಾಗಿದೆ, ಯಾರೆಲ್ಲಾ ಅದಕ್ಕೆ ಸಾಕ್ಷಿ ಇದ್ದಾರೆ ಅನ್ನುವ ಎಲ್ಲಾ ಮಾಹಿತಿಯನ್ನೂ ನಾನು ಎಸ್‌ಐಟಿ ಮುಂದೆ ಇಡಲಿದ್ದೇನೆ, ಅದಕ್ಕೆ ಸಾಕ್ಷಿಯಾಗಿರುವ ಇನ್ನೂ ನಾಲ್ಕೈದು ಮಂದಿ ಎಸ್‌ಐಟಿ ಮುಂದೆ ಬಂದು ಸಾಕ್ಷಿ ನೀಡಲಿದ್ದಾರೆ. ಇಲ್ಲಿ ಇಂತಹ ಹಲವಾರು ಕೊಲೆಗಳಾಗಿದೆ. ಆದರೆ, ಈ ಬಗ್ಗೆ ಹೇಳಲು ಜೀವಭಯವಿತ್ತು. ಇವತ್ತು ಎಸ್‌ಐಟಿ ರಚನೆಯಾಗಿದೆ, ಎಸ್‌ಐಟಿ ಮೇಲಿನ ನಂಬಿಕೆಯಿಂದ ಸಾಕ್ಷಿ ಹೇಳಲು ಮುಂದೆ ಬಂದಿದ್ದೇನೆ” ಎಂದು ಜಯಂತ್‌ ಹೇಳಿದ್ದಾರೆ.

ನನಗೆ ಈಗ ಯಾವ ಭಯವೂ ಇಲ್ಲ

“ಪದ್ಮಲತಾ ನನ್ನ ಕುಟುಂಬದ ಹೆಣ್ಣುಮಗಳು, ಈಗ ಅವರಿಗೆ ನ್ಯಾಯ ಸಿಗುತ್ತದೆ ಎಂದು ಭರವಸೆ ಇದೆ. ಇದುವರೆಗೂ ಇದ್ದ ಭಯದ ವಾತಾವರಣ ಈಗ ಇಲ್ಲ. ಅದಕ್ಕಾಗಿ ತಾನು ಮುಂದೆ ಬಂದು ಸಾಕ್ಷಿ ನೀಡುತ್ತಿದ್ದೇನೆ, ಇನ್ನೂ ಹಲವರು ಸಾಕ್ಷಿ ನೀಡಲು ಮುಂದೆ ಬರಲಿದ್ದಾರೆ. ಯಾರು ಕೊಲೆ ಮಾಡಿದ್ದಾರೆ, ಎಂದು ನಾನು ಆರೋಪಿಸುತ್ತಿಲ್ಲ, ಅದು ತನಿಖೆಯಲ್ಲಿ ಹೊರಬರಬೇಕು, ಆದರೆ, ಬಾಲಕಿಯ ಮೃತದೇಹ ಹೂತದಕ್ಕೆ ನಾನು ಸಾಕ್ಷಿ” ಎಂದು ಜಯಂತ್‌ ಹೇಳಿದ್ದಾರೆ.

ಸದ್ಯ, ಜಯಂತ್‌ ಅವರ ಹೇಳಿಕೆಯನ್ನು ದಾಖಲಿಸಲು ಸೋಮವಾರ ಬರುವಂತೆ ತನಿಖಾ ತಂಡವು ಸೂಚಿಸಿದೆ ಎಂದು ಅವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ. ಜಯಂತ್‌ ಅವರು ʼಸೌಜನ್ಯ ಅತ್ಯಾಚಾರ-ಕೊಲೆʼ ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂದು ನಡೆಯುತ್ತಿದ್ದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದು, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಇನ್ನೂ ಹಲವು ಪ್ರಕರಣಗಳು ಬೆಳಕಿಗೆ ಬರಬೇಕು, ಎಲ್ಲಾ ಸಂತ್ರಸ್ತರಿಗೂ ನ್ಯಾಯ ಸಿಗಬೇಕೆಂದು ಆಗ್ರಹಿಸುತ್ತಾ ಬಂದಿದ್ದರು.

Read More
Next Story