93 ವರ್ಷಗಳಲ್ಲೇ ಪ್ರಥಮ, ಒಂದೇ ವರ್ಷದಲ್ಲಿ ಕೆಆರ್‌ಎಸ್‌ 3ನೇ ಬಾರಿಗೆ ಭರ್ತಿ
x

93 ವರ್ಷಗಳಲ್ಲೇ ಪ್ರಥಮ, ಒಂದೇ ವರ್ಷದಲ್ಲಿ ಕೆಆರ್‌ಎಸ್‌ 3ನೇ ಬಾರಿಗೆ ಭರ್ತಿ

1932ರಲ್ಲಿ ನಿರ್ಮಾಣವಾದ ಕೆಆರ್‌ಎಸ್‌ ಜಲಾಶಯದ 93 ವರ್ಷಗಳ ಇತಿಹಾಸದಲ್ಲಿ, 77 ಬಾರಿ ಭರ್ತಿಯಾಗಿದ್ದು, ಕೇವಲ 16 ಬಾರಿ ಮಾತ್ರ ಭರ್ತಿಯಾಗಿರಲಿಲ್ಲ. ಆದರೆ, ಒಂದೇ ವರ್ಷದಲ್ಲಿ ಮೂರು ಬಾರಿ ಭರ್ತಿಯಾಗಿರುವುದು ಇದೇ ಮೊದಲು.


Click the Play button to hear this message in audio format

2024ರಲ್ಲಿ ರಾಜ್ಯವನ್ನು ತೀವ್ರವಾಗಿ ಕಾಡಿದ್ದ ಬರಗಾಲದ ಕರಿಛಾಯೆಯ ನಂತರ, 2025ರಲ್ಲಿ ವರುಣನ ಕೃಪೆ ಕಾವೇರಿ ಕಣಿವೆಯ ಮೇಲೆ ಧಾರಾಳವಾಗಿ ಸುರಿದಿದೆ. ಇದರ ಫಲವಾಗಿ, 93 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಕೃಷ್ಣರಾಜ ಸಾಗರ ಜಲಾಶಯವು ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಸಂಪೂರ್ಣ ಭರ್ತಿಯಾಗಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಈ ಅಭೂತಪೂರ್ವ ಜಲಸಮೃದ್ಧಿಯು, ಸಿಲಿಕಾನ್ ಸಿಟಿ ಬೆಂಗಳೂರಿನ ಮುಂದಿನ ಬೇಸಿಗೆಯ ಕುಡಿಯುವ ನೀರಿನ ಚಿಂತೆಯನ್ನು ಸಂಪೂರ್ಣವಾಗಿ ದೂರ ಮಾಡುವುದರ ಜೊತೆಗೆ, ಪ್ರತಿ ವರ್ಷವೂ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ತಲೆದೋರುತ್ತಿದ್ದ ಕಾವೇರಿ ಜಲ ಸಂಘರ್ಷಕ್ಕೂ ಈ ವರ್ಷ ಪ್ರಕೃತಿದತ್ತವಾಗಿಯೇ ಪೂರ್ಣವಿರಾಮ ಇಟ್ಟಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಬೇಸಿಗೆಯ ನೀರಿನ ಅಭಾವವಿಲ್ಲ

ಈ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆಗಳು ನಿರೀಕ್ಷೆಗೂ ಮೀರಿ ಸುರಿದ ಪರಿಣಾಮ, ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕಬಿನಿ ಮತ್ತು ಕೆಆರ್‌ಎಸ್‌ ಅಕ್ಟೋಬರ್ ತಿಂಗಳಲ್ಲೇ ಮತ್ತೆ ಭರ್ತಿಯಾಗಿವೆ. ಪ್ರಸ್ತುತ ಈ ನಾಲ್ಕು ಜಲಾಶಯಗಳಲ್ಲಿ ಒಟ್ಟು 115 ಟಿಎಂಸಿ ನೀರು ಸಂಗ್ರಹವಾಗಿದೆ. ಅಷ್ಟೇ ಅಲ್ಲದೆ, ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ 6,576 ಕೆರೆಗಳು ಮತ್ತು ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ವ್ಯಾಪ್ತಿಯ ಕೆರೆಗಳೂ ಸಹ ಸಂಪೂರ್ಣವಾಗಿ ತುಂಬಿ ಕೋಡಿ ಹರಿಯುತ್ತಿವೆ. ಬೆಂಗಳೂರು ನಗರಕ್ಕೆ ವಾರ್ಷಿಕವಾಗಿ 31 ಟಿಎಂಸಿ (ಅಂದರೆ ಪ್ರತಿ ತಿಂಗಳು 2.60 ಟಿಎಂಸಿ) ಕುಡಿಯುವ ನೀರು ಬೇಕಾಗಿದ್ದು, ಪ್ರಸ್ತುತ ಜಲಾಶಯಗಳು ಮತ್ತು ಕೆರೆಗಳಲ್ಲಿರುವ ಸಮೃದ್ಧ ನೀರಿನ ಸಂಗ್ರಹವು, ಮುಂದಿನ ಬೇಸಿಗೆಯ ಉದ್ದಕ್ಕೂ ರಾಜಧಾನಿಯ ನೀರಿನ ಅಗತ್ಯವನ್ನು ಆರಾಮವಾಗಿ ಪೂರೈಸಲಿದೆ. ಹೀಗಾಗಿ, ಈ ಬಾರಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡು ಸಂಘರ್ಷಕ್ಕೆ ಪ್ರಕೃತಿಯೇ ಹಾಕಿದ ಪೂರ್ಣವಿರಾಮ

ಪ್ರತಿ ವರ್ಷವೂ ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಂಘರ್ಷ ಏರ್ಪಡುವುದು ಸಾಮಾನ್ಯ. ಆದರೆ ಈ ವರ್ಷ, ಪ್ರಕೃತಿಯೇ ಈ ಸಮಸ್ಯೆಯನ್ನು ಬಗೆಹರಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ (ದಿನಾಂಕ 16/6/2018), ಕರ್ನಾಟಕವು ಜೂನ್ 2025 ರಿಂದ ಮೇ 2026ರವರೆಗಿನ ಜಲವರ್ಷದಲ್ಲಿ ತಮಿಳುನಾಡಿಗೆ ಒಟ್ಟು 177.25 ಟಿಎಂಸಿ ನೀರನ್ನು ಹರಿಸಬೇಕಿತ್ತು. ಆದರೆ, ಈ ಜಲವರ್ಷದ ಮೊದಲ ಐದು ತಿಂಗಳಲ್ಲೇ (ಜೂನ್-ಅಕ್ಟೋಬರ್), ಬಿಳಿಗೊಂಡ್ಲು ಜಲಮಾಪನ ಕೇಂದ್ರದಿಂದ ದಾಖಲೆಯ 273.426 ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಗಿದೆ. ಇದು, ಆ ಅವಧಿಗೆ ನಿಗದಿಯಾಗಿದ್ದ 138.014 ಟಿಎಂಸಿಗಿಂತ 135.412 ಟಿಎಂಸಿ ಹೆಚ್ಚುವರಿಯಾಗಿದೆ. ವಾರ್ಷಿಕ ಕೋಟಾಕ್ಕಿಂತಲೂ ಹೆಚ್ಚಿನ ನೀರು ಈಗಾಗಲೇ ತಮಿಳುನಾಡಿಗೆ ಹರಿದು ಹೋಗಿರುವುದರಿಂದ, ಈ ವರ್ಷ ಉಭಯ ರಾಜ್ಯಗಳ ನಡುವೆ ನೀರಿಗಾಗಿ ಯಾವುದೇ ವಿವಾದದ ಸಾಧ್ಯತೆ ಇಲ್ಲ.

ತಿಂಗಳವಾರು ಹರಿದ ನೀರಿನ ಪ್ರಮಾಣ:

* ಜೂನ್: 9.19 ಟಿಎಂಸಿಗೆ ಬದಲಾಗಿ 42.256 ಟಿಎಂಸಿ

* ಜುಲೈ: 31.24 ಟಿಎಂಸಿಗೆ ಬದಲಾಗಿ 103.514 ಟಿಎಂಸಿ

* ಆಗಸ್ಟ್: 45.95 ಟಿಎಂಸಿಗೆ ಬದಲಾಗಿ 51.943 ಟಿಎಂಸಿ

* ಸೆಪ್ಟೆಂಬರ್: 36.76 ಟಿಎಂಸಿಗೆ ಬದಲಾಗಿ 40.790 ಟಿಎಂಸಿ

* ಅಕ್ಟೋಬರ್: 14.35 ಟಿಎಂಸಿಗೆ ಬದಲಾಗಿ 31.344 ಟಿಎಂಸಿ

ಐತಿಹಾಸಿಕ ದಾಖಲೆ ಬರೆದ ಕೆಆರ್‌ಎಸ್‌

1932ರಲ್ಲಿ ನಿರ್ಮಾಣವಾದ ಕೆಆರ್‌ಎಸ್‌ ಜಲಾಶಯದ 93 ವರ್ಷಗಳ ಇತಿಹಾಸದಲ್ಲಿ, 77 ಬಾರಿ ಭರ್ತಿಯಾಗಿದ್ದು, ಕೇವಲ 16 ಬಾರಿ ಮಾತ್ರ ಭರ್ತಿಯಾಗಿರಲಿಲ್ಲ. ಆದರೆ, ಒಂದೇ ವರ್ಷದಲ್ಲಿ ಮೂರು ಬಾರಿ ಭರ್ತಿಯಾಗಿರುವುದು ಇದೇ ಮೊದಲು. ಈ ವರ್ಷ ಜೂನ್‌ನಲ್ಲೇ ಮೊದಲ ಬಾರಿಗೆ ಭರ್ತಿಯಾಗಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದ ಕೆಆರ್‌ಎಸ್‌, ಅಕ್ಟೋಬರ್ ಎರಡನೇ ವಾರದಲ್ಲಿ ಎರಡನೇ ಬಾರಿ ಮತ್ತು ಅಕ್ಟೋಬರ್ 18-23ರ ನಡುವೆ ಮೂರನೇ ಬಾರಿಗೆ 124.80 ಅಡಿಗಳ ಗರಿಷ್ಠ ಮಟ್ಟವನ್ನು ತಲುಪಿ, ಮತ್ತೊಂದು ದಾಖಲೆ ನಿರ್ಮಿಸಿದೆ. ಪ್ರಸ್ತುತ, ಕೆಆರ್‌ಎಸ್‌ನಿಂದ 20,540 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು, ಬಿಳಿಗೊಂಡ್ಲು ಮಾಪನ ಕೇಂದ್ರದಲ್ಲಿ 41,424 ಕ್ಯೂಸೆಕ್ಸ್ ಹೊರಹರಿವು ದಾಖಲಾಗಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಡಿಕೆಶಿ, "ಬೀದರ್‌ನಿಂದ ಚಾಮರಾಜನಗರದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಯಾವುದೇ ತೊಂದರೆ ಇಲ್ಲ. ನಮ್ಮ ಸರ್ಕಾರ ವರುಣನ ಕೃಪೆಗೆ ಪಾತ್ರವಾಗಿದೆ" ಎಂದು ಹೇಳಿದ್ದಾರೆ.

Read More
Next Story