Namma Metro Fare Hike | ತೆವಳುತ್ತಿರುವ ಬೆಂಗಳೂರಿಗೆ ಅನಿರೀಕ್ಷಿತವಾಗಿ ಕಾಡಿದ ಮೆಟ್ರೋ ಪ್ರಯಾಣ ದರ ಏರಿಕೆ
x
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು

Namma Metro Fare Hike | ತೆವಳುತ್ತಿರುವ ಬೆಂಗಳೂರಿಗೆ ಅನಿರೀಕ್ಷಿತವಾಗಿ ಕಾಡಿದ ಮೆಟ್ರೋ ಪ್ರಯಾಣ ದರ ಏರಿಕೆ

ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರವಾಗಬಲ್ಲ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಸಮೂಹ ಸಾರಿಗೆ ವ್ಯವಸ್ಥೆ ಇಲ್ಲ ಎಂಬುದು ಮೆಟ್ರೋ ಪ್ರಯಾಣ ದರ ಏರಿಕೆ ನಂತರ ಬೆಳವಣಿಗೆಗಳಿಂದ ಖಾತ್ರಿಯಾಗಿದೆ.


ಸಂಚಾರ ದಟ್ಟಣೆಯ ಸುಳಿಗೆ ಸಿಲುಕಿರುವ ಬೆಂಗಳೂರಿಗರನ್ನು ಮೆಟ್ರೋ ಪ್ರಯಾಣ ದರ ಏರಿಕೆ ಕುಪಿತಗೊಳ್ಳುವಂತೆ ಮಾಡಿದೆ. ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಜನರಲ್ಲಿ ದಿನೇ ದಿನೇ ಅಸಹನೆ, ಆಕ್ರೋಶ ವ್ಯಾಪಿಸುತ್ತಿದೆ. ಜನರ ವಿರೋಧಕ್ಕೆ ಬೆದರಿದ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಕೊಂಚ ದರ ಇಳಿಸಿ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆದರೆ, ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರವಾಗಬಲ್ಲ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಸಮೂಹ ಸಾರಿಗೆ ವ್ಯವಸ್ಥೆ ಇಲ್ಲ ಎಂಬುದು ಮೆಟ್ರೋ ಪ್ರಯಾಣ ದರ ಏರಿಕೆ ನಂತರ ಬೆಳವಣಿಗೆಗಳಿಂದ ಖಾತ್ರಿಯಾಗಿದೆ.

ಫೆ.9 ರಂದು ಮೆಟ್ರೋ ಪ್ರಯಾಣ ದರ ಏರಿಸುವ ಮೂಲಕ ʼನಮ್ಮ ಮೆಟ್ರೋʼ ಇಡೀ ದೇಶದಲ್ಲೇ ದುಬಾರಿ ಸಾರಿಗೆ ವ್ಯವಸ್ಥೆಯಾಗಿ ಕುಖ್ಯಾತಿಗೆ ಒಳಗಾಗಿತ್ತು. ಅಸಮರ್ಪಕ ನಗರ ಸಾರಿಗೆ ವ್ಯವಸ್ಥೆ(ಬಿಎಂಟಿಸಿ), ಅಸ್ತಿತ್ವದಲ್ಲಿಲ್ಲದ ಸಬ್ ಅರ್ಬನ್ ರೈಲು ಯೋಜನೆಗಳ ಬೆನ್ನಲ್ಲೇ ದಿಢೀರ್ ಮೆಟ್ರೋ ಪ್ರಯಾಣ ದರ ಏರಿಕೆ ಅನಿರೀಕ್ಷಿತ ಬದಲಾವಣೆಗೂ ಕಾರಣವಾಯಿತು.

ಸಾಲ ಹಿಂತಿರುಗಿಸುವ ಬಾಧ್ಯತೆ, 2017ರಿಂದ ಪ್ರಯಾಣ ದರ ಏರಿಸದ ಕುರಿತು ಬಿಎಂಆರ್‌ಸಿಎಲ್‌ ಅಧಿಕಾರಿಗಳು ನೀಡಿದ ಸಮರ್ಥನೆಗಳನ್ನು ಜನ ಒಪ್ಪಲಿಲ್ಲ. ಆಕ್ರೋಶ ವ್ಯಾಪಿಸಿದ ಬಳಿಕ ಕೆಲ ಸ್ಟೇಜ್‌ಗಳಲ್ಲಿ ದರ ಇಳಿಸಿ ಕಣ್ಣೊರೆಸುವ ತಂತ್ರ ಅನುಸರಿಸಿದರೂ ವಿಶ್ವಾಸಾರ್ಹ ಸಾರಿಗೆಯಾಗಿ ಉಳಿಯದಿರುವುದು ನಿರಾಶೆ ತಂದೊಡ್ಡಿದೆ.

ಕುಸಿಯುತ್ತಿರುವ ಪ್ರಯಾಣಿಕರ ಸಂಖ್ಯೆ

ಜನ ಸಾಮಾನ್ಯರ ಕೈಗೆಟುಕುವಂತಿದ್ದ ʼನಮ್ಮ ಮೆಟ್ರೋʼ ದಿಢೀರ್ ಪ್ರಯಾಣ ದರ ಏರಿಕೆಯಿಂದ ಇದೀಗ ಗಗನಕುಸುಮದಂತಾಗಿದೆ. ದರ ಏರಿಕೆ ಬಳಿಕ ನಿತ್ಯ ಪ್ರಯಾಣಿಸುವವರ ಸಂಖ್ಯೆಯಲ್ಲಿ ಭಾರೀ ಕುಸಿತ ಕಾಣುತ್ತಿದೆ. ಪ್ರತಿಶತ 8-10 ರಷ್ಟು ಪ್ರಯಾಣಿಕರ ಸಂಖ್ಯೆ ಕುಸಿಯುತ್ತಿರುವುದು ಬಿಎಂಆರ್‌ಸಿಎಲ್‌ ಅಂಕಿ ಅಂಶಗಳಿಂದಲೇ ವೇದ್ಯವಾಗುತ್ತಿದೆ.

ಫೆ. 5 ರಂದು 8.68 ಲಕ್ಷದಷ್ಟು ಇದ್ದ ಪ್ರಯಾಣಿಕರ ಸಂಖ್ಯೆ ಫೆ.12 ಕ್ಕೆ 7.78 ಲಕ್ಷಕ್ಕೆ ಇಳಿದಿದೆ. ಇದರರ್ಥ ಜನಸಾಮಾನ್ಯರು ದುಬಾರಿ ಪ್ರಯಾಣದಿಂದ ದೂರವಾಗಿ ಸ್ವಂತ ವಾಹನಗಳ ಮೊರೆ ಹೋಗಿರುವುದು ಖಾತ್ರಿಯಾಗುತ್ತಿದೆ.

ಸರ್ಕಾರದ ಅವೈಜ್ಞಾನಿಕ ನೀತಿಗಳು

ದಶಕಗಳಿಂದ ಸಾರ್ವಜನಿಕ ಸಾರಿಗೆಯನ್ನು ಕಾರ್ಯಸಾಧುವಾದ, ಸುಸ್ಥಿರ ಪ್ರಯಾಣದ ಆಯ್ಕೆಯನ್ನಾಗಿ ಮಾಡುವಲ್ಲಿ ವಿಫಲವಾಗಿರುವುದು ಎದ್ದುಕಾಣುತ್ತಿದೆ. ರಾಜ್ಯ ಸರ್ಕಾರ ಸಮೂಹ ಸಾರಿಗೆ ವ್ಯವಸ್ಥೆ ಕುರಿತು ಯಾವುದೇ ಸ್ಪಷ್ಟ ನೀತಿ ರೂಪಿಸದಿರುವುದು ಸಮಸ್ಯೆಯನ್ನು ಜಟಿಲಗೊಳಿಸಿದೆ. 2000 ನೇ ಸಾಲಿನಲ್ಲಿ ಖಾಸಗಿ ವಾಹನಗಳ ಅಗಾಧ ಹೆಚ್ಚಳವನ್ನು ಸರಿದೂಗಿಸಲು ಸಲುವಾಗಿ ರಸ್ತೆ ಅಗಲೀಕರಣಕ್ಕೆ ಮುಂದಾಯಿತು. ಆದರೆ, ನಂತರದ ವರ್ಷಗಳಲ್ಲಿ ಈ ಪ್ರಕ್ರಿಯೆ ವೇಗ ಪಡೆಯುವಲ್ಲಿ ವಿಫಲವಾಯಿತು. ಇಂದು ರಸ್ತೆ ಅಗಲೀಕರಣದ ಪ್ರವೃತ್ತಿ ಕೇವಲ ಎತ್ತರದ ಕಾರಿಡಾರ್‌ಗಳ ನಿರ್ಮಾಣ, ಖಾಸಗಿ ವಾಹನಗಳಿಗೆ ಅನುಕೂಲವಾಗುವಂತಹ ಸುರಂಗ ರಸ್ತೆಗಳ ನಿರ್ಮಾಣದ ಪ್ರಸ್ತಾಪಕ್ಕೆ ಬಂದು ನಿಂತಿದೆ.

1.35 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳು ಜನಸಂಖ್ಯೆಗೆ ಅನುಗುಣವಾಗಿಲ್ಲ. ಬೆಂಗಳೂರಿನಲ್ಲಿ ಕೇವಲ 6,340 ಬಿಎಂಟಿಸಿ ಬಸ್‌ಗಳು ಕಾರ್ಯಾಚರಿಸುತ್ತಿವೆ. ಆದರೆ, ಇವುಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಬಸ್‌ಗಳು ಶಿಥಿಲ ಸ್ಥಿತಿಯಲ್ಲಿವೆ ಎಂಬುದು ಸಿಎಜಿ ವರದಿಯಲ್ಲಿಯೇ ಉಲ್ಲೇಖವಾಗಿದೆ.

ಕಡಿಮೆ ಸಂಖ್ಯೆಯ ಸಾರ್ವಜನಿಕ ಸಾರಿಗೆ ವಾಹನಗಳು ಪ್ರಯಾಣದ ಆವರ್ತನದ (ರೌಂಡ್‌ ಟ್ರಿಪ್‌) ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದ ಉದ್ದನೆಯ ಸರತಿ ಸಾಲು, ಲಕ್ಷಾಂತರ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಈ ಅಸಹಾಯಕತೆಯೇ ವ್ಯವಸ್ಥೆಯ ಲೋಪಕ್ಕೆ ತಾಜಾ ನಿದರ್ಶನವಾಗಿದೆ.

ಕೊನೆಯ ಮೈಲಿವರೆಗಿನ ಸಂಪರ್ಕದ ಕೊರತೆ ಮತ್ತಷ್ಟು ಸಮಸ್ಯೆ ಹೆಚ್ಚಿಸಿದೆ. ಸಾರ್ವಜನಿಕ ಸಾರಿಗೆಗಿಂತ ಖಾಸಗಿ ಸಾರಿಗೆ ಹೆಚ್ಚಾಗಿದೆ. ಮನೆಯಿಂದ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಮತ್ತು ಅಲ್ಲಿಂದ ಗಮ್ಯಸ್ಥಾನ ತಲುಪುವ, ಹಿಂತಿರುಗುವ ಪ್ರಯಾಣ ದುಬಾರಿ ಎನಿಸಿದೆ. ಅನಿಯಂತ್ರಿತ ಆಟೋ ರಿಕ್ಷಾಗಳು, ಓಲಾ, ಉಬರ್ ಕ್ಯಾಬ್‌ಗಳೇ ಸಾರ್ವಜನಿಕ ಸಾರಿಗೆಯ ಸ್ಥಾನದಲ್ಲಿ ತುಂಬಿಕೊಂಡಿವೆ. ಇನ್ನು ಪಾದಚಾರಿ ಮಾರ್ಗಗಳು ಕೂಡ ಸಮರ್ಪಕವಾಗಿಲ್ಲ. ಈ ಎಲ್ಲಾ ಕಾರಣಗಳಿಂದ ಜನರು ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ.

2025 ಜ.31 ರವರೆಗೆ ಬೆಂಗಳೂರಿನಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 1.22 ಕೋಟಿಯಷ್ಟಿವೆ. ಅವುಗಳಲ್ಲಿ ಪ್ರತಿಶತ 88 ವಾಹನಗಳು ಖಾಸಗಿಯವರ ಒಡೆತನದಲ್ಲಿವೆ. 2024 ಮಾರ್ಚ್ 31 ರಂದು ಈ ಸಂಖ್ಯೆ ಕೇವಲ 1.16 ಕೋಟಿಯಷ್ಟಿದ್ದವು. ಅದೇ ರೀತಿ ಕಾರುಗಳ ಸಂಖ್ಯೆಯೂ ಬೆರಗುಗೊಳಿಸುವ ರೀತಿಯಲ್ಲಿ ಏರಿಕೆಯಾಗಿದೆ. ಪ್ರತಿಶತ 340 ರಷ್ಟು ಕಾರುಗಳ ಸಂಖ್ಯೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 25.2 ಲಕ್ಷ ಕಾರುಗಳು ಮತ್ತು 82 ಲಕ್ಷ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿದಿರುವುದರಿಂದ ಸಂಚಾರ ದಟ್ಟಣೆ ವಿಪರೀತವಾಗಿದೆ.

ನಿಷ್ಕ್ರಿಯವಾಗಿರುವ BMLTA

ಬೆಂಗಳೂರಿನಲ್ಲಿ ರಸ್ತೆ ಬಳಕೆದಾರರ ಅಹವಾಲು ಆಡಳಿತ ಯಂತ್ರಕ್ಕೆ ಕೇಳಿಸದಂತಾಗಿದೆ. ಸಂಚಾರ ಅವ್ಯವಸ್ಥೆಯಿಂದ ಹೊರಬಂದು ದೃಢವಾದ, ಅಂತರ್ಗತ ಚಲನಶೀಲತೆ ನೀತಿ ರೂಪಿಸುವುದೂ ಜರೂರಾಗಿದೆ. ಬಿಎಂಟಿಸಿ ಮತ್ತು ಬಿಎಂಆರ್​​ಸಿಎಲ್​ ನಂತಹ ಸಾರಿಗೆ ನಿಗಮಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಂತಹ ಪಾಲುದಾರರು ಉತ್ತಮವಾದ, ಯೋಜಿತ ಮತ್ತು ಸುಸ್ಥಿರ ಮಾರ್ಗ ರೂಪಿಸಲು ಒಗ್ಗೂಡುವುದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ.

ನಗರ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸ್ಥಾಪಿಸಲಾದ ʼಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ(BMLTA ) ಕಳೆದ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿದೆ. 2022 ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಾಧಿಕಾರಕ್ಕೆ ಇನ್ನೂ ನಿಯಮಗಳನ್ನೇ ರೂಪಿಸಿಲ್ಲ. ಕನಿಷ್ಠ ನಿರ್ದೇಶಕರ ಮಂಡಳಿಯನ್ನು ರಚಿಸಿಲ್ಲ. ಬಹು ಸಂಸ್ಥೆಗಳ ಸಹಯೋಗ ಹಾಗೂ ಸಮನ್ವಯತೆಯತಲ್ಲಿ ಭೂ ಸಾರಿಗೆಯ ಯೋಜನೆ ರೂಪಿಸಬೇಕಾದ ಪ್ರಾಧಿಕಾರಕ್ಕೆ ಗೆದ್ದಲು ಹತ್ತಿದೆ. ಮೆಟ್ರೋ, ಬಿಎಂಟಿಸಿ , ಉಪನಗರ ರೈಲು, ವಾಕಿಂಗ್ ಮತ್ತು ಸೈಕ್ಲಿಂಗ್ ಪಥಗಳೊಂದಿಗೆ ಮೂಲಸೌಕರ್ಯವನ್ನು ಕ್ರಮಬದ್ಧಗೊಳಿಸುವ ಸಲುವಾಗಿ ಈ ಪ್ರಾಧಿಕಾರವನ್ನು ರಚಿಸಲಾಗಿತ್ತು.

ದಶಕಗಳಿಂದ ಉಪನಗರ ರೈಲು ಯೋಜನೆ ವಿಳಂಬ

ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆ ನಿರ್ಮಿಸುವ ಕುರಿತು 1983 ರಲ್ಲಿ ಮೊದಲು ಪ್ರಸ್ತಾಪಿಸಲಾಯಿತು. ಆದರೆ, 43 ವರ್ಷಗಳ ನಂತರವೂ ಯೋಜನೆಗೆ ಚಾಲನೆಯೇ ದೊರೆತಿಲ್ಲ. ಸಂಚಾರ ದಟ್ಟಣೆಗೆ ಪರಿಹಾರವಾಗಿ ಕಂಡುಕೊಳ್ಳಲಾದ ಸಬ್‌ ಅರ್ಬನ್‌ ರೈಲು ಯೋಜನೆ ಕುಂಟುತ್ತಾ ಸಾಗುತ್ತಿದ್ದು, ತೀವ್ರ ಟೀಕೆಗಳಿಗೆ ಗುರಿಯಾಗಿದೆ. ಸಬ್‌ ಅರ್ಬಲ್‌ ರೈಲು ಯೋಜನೆ ಪ್ರಾರಂಭಿಸುವ ಸಲುವಾಗಿ ದಶಕಗಳ ಕಾಲ ಸಾರ್ವಜನಿಕರಿಂದ ಅಭಿಯಾನಗಳು ನಡೆದವು. ಇದರ ಪರಿಣಾಮ 161-ಕಿಮೀ ಉದ್ದದ ನಾಲ್ಕು-ಕಾರಿಡಾರ್ ಒಳಗೊಂಡ ಸಬ್ ಅರ್ಬನ್ ರೈಲು ಯೋಜನೆಗೆ 2019 ರ ರೈಲ್ವೆ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಲಾಯಿತು. ಆದರೆ, ಈ ಸಮೂಹ ಸಾರಿಗೆ ವಿಧಾನದ ಪ್ರಗತಿ ಅತ್ಯಂತ ನಿಧಾನವಾಗಿದೆ. ಎರಡು ಮಾರ್ಗಗಳ ಬದಲಿಗೆ ಒಂದು ಮಾರ್ಗಕ್ಕೆ ಸೀಮಿತಗೊಳಿಸಲಾಗಿದೆ.

ಮೆಟ್ರೋಗಿಂತ ಭಿನ್ನವಾದ ಸಾರಿಗೆ

ಮೆಟ್ರೋಗಿಂತ ಭಿನ್ನವಾಗಿರುವ ಉಪನಗರ ರೈಲು ಯೋಜನೆಯ ಬಗ್ಗೆ ಸರ್ಕಾರಗಳ ಅಸಡ್ಡೆ ಎದ್ದುಕಾಣುತ್ತಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದ ಈ ಯೋಜನೆ ಕುಟುಂತ್ತಾ ಸಾಗಿದೆ. ಯೋಜನೆಗೆ ಭೂಸ್ವಾಧೀನ, ಯೋಜನಾ ವೆಚ್ಚಗಳು ಕಡಿಮೆ. BMRCL ರೇಕ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಕೋಚ್ ಸಾಮರ್ಥ್ಯ, ಹೆಚ್ಚಿನ ವೇಗ ಮತ್ತು ಕಡಿಮೆ ಕಾರ್ಯಾಚರಣೆಯ ವೆಚ್ಚಗಳು ಯೋಜನೆಯಲ್ಲಿವೆ. ಹಾಗಿದ್ದರೂ ಯೋಜನೆಗೆ ವೇಗ ನೀಡುವಲ್ಲಿ ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ನಿರ್ಲಕ್ಷ್ಯ ತೋರುತ್ತಿವೆ ಎಂಬುದು ರೈಲ್ವೆ ಪ್ರಯಾಣಿಕರ ಆರೋಪವಾಗಿದೆ.

ಹೆಚ್ಚಿನ ಮೆಟ್ರೋ ನಿಲ್ದಾಣಗಳು ಇಂಟರ್‌ಮೋಡಲ್‌ ಸಂಪರ್ಕಕ್ಕೆ ಸಹಾಯವಾಗಬೇಕು. ಆದರೆ, ಸಾಕಷ್ಟು ನಿಲ್ದಾಣಗಳಲ್ಲಿ ಪಾರ್ಕಿಂಗ್, ಬಸ್ ಬೇಗಳು ಇಲ್ಲ. ನಗರದ ಯಶವಂತಪುರ ರೈಲ್ವೆ ಟರ್ಮಿನಲ್‌ನಲ್ಲಿ ಸಂಚಾರ ವ್ಯವಸ್ಥೆ ಅಯೋಮಯವಾಗಿರುವುದೇ ಇದಕ್ಕೆ ಉದಾಹರಣೆ. ಪ್ರಯಾಣಿಕರ ಸಂಚಾರಕ್ಕೆ ಸೂಕ್ತ ಸೇತುವೆ ಒದಗಿಸಿಲ್ಲ. ಪ್ರಯಾಣಿಕರು ಕೆಲವೇ ನೂರು ಮೀಟರ್ ದೂರದ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಹೋಗಲು ಸುತ್ತಿ ಬಳಸಿ ಬರುವಂತಾಗಿದೆ. ಸೇತುವೆ ನಿರ್ಮಾಣದ ಬದಲು ಟರ್ಮಿನಲ್ ಸೌಂದರ್ಯೀಕರಣ ಹೆಚ್ಚು ಮಹತ್ವ ಪಡೆದುಕೊಂಡಿದೆ.

ರಾಜಕೀಯ ಬಣ್ಣ ಪಡೆದ ದರ ಏರಿಕೆ

ಮೆಟ್ರೋ ದರ ಏರಿಕೆಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದರ ಏರಿಕೆ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ನಿರತವಾಗಿವೆ. ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಕೇಂದ್ರ ಸರ್ಕಾರ ರಚಿಸಿರುವ ದರ ನಿಗದಿ ಸಮಿತಿ ನಿರ್ಧರಿಸಿದೆ ಎಂದು ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳುವುದರೊಂದಿಗೆ ರಾಜಕೀಯ ಬಣ್ಣ ಪಡೆದುಕೊಂಡಿದೆ. ಆದರೆ BMRCL ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ. 2029-30 ರವರೆಗೆ 10,422.2 ಕೋಟಿ ರೂ.ಗಳ ಸಾಲ ಮರುಪಾವತಿ ಮಾಡಬೇಕಾದ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದಿದೆ.

ರಾಜಕೀಯ ಪಕ್ಷಗಳಲ್ಲೂ ಮೆಟ್ರೋ ಪ್ರಯಾಣ ದರ ಏರಿಕೆ ಹಗ್ಗಜಗ್ಗಾಟ ಮುಂದುವರಿದಿದೆ. ಆದರೆ, ದೈನಂದಿನ ಅನಿವಾರ್ಯತೆ, ಸಂಕಟಗಳಲ್ಲಿ ಸಿಲುಕಿರುವ ಪ್ರಯಾಣಿಕರು ಮಾತ್ರ ಅಸಹಾಯಕರಾಗಿ ಮೆಟ್ರೋದಿಂದ ದೂರ ಸರಿಯುತ್ತಿದ್ದಾರೆ. ವಿಶ್ವಾಸಾರ್ಹವಲ್ಲದ ಅಪರೂಪದ BMTC ಬಸ್ಸುಗಳು, ದುಬಾರಿ ಮೆಟ್ರೋ ಪ್ರಯಾಣ, ವಿಳಂಬವಾಗುತ್ತಿರುವ ಉಪನಗರ ರೈಲು ಜಾಲ, ಅನಿಯಂತ್ರಿತ ಆಟೋ ರಿಕ್ಷಾಗಳು ಎಲ್ಲವನ್ನೂ ಜನಸಾಮಾನ್ಯರನ್ನು ಹತಾಶೆಗೆ ದೂಡಿವೆ.

Read More
Next Story