Bangalore Traffic Police | ಫುಟ್‌ಪಾತ್‌ ಮೇಲೆ ವಾಹನ ಓಡಿಸಿದರೆ ಡಿಎಲ್‌ ರದ್ದು
x
ಪಾದಚಾರಿ ಮಾರ್ಗದ ಮೇಲೆ ವಾಹನ ಸಂಚಾರ(ಸಾಂದರ್ಭಿಕ ಚಿತ್ರ)

Bangalore Traffic Police | ಫುಟ್‌ಪಾತ್‌ ಮೇಲೆ ವಾಹನ ಓಡಿಸಿದರೆ ಡಿಎಲ್‌ ರದ್ದು

ಸಂಚಾರ ನಿಯಮ ಉಲ್ಲಂಘನೆಯಿಂದ ದಟ್ಟಣೆ ವಿಪರೀತ ಆಗುತ್ತಿರುವುದನ್ನು ಮನಗಂಡಿರುವ ಪೊಲೀಸರು ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.


ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಬೆಂಗಳೂರು ಸಂಚಾರಿ ಪೊಲೀಸರು ಸನ್ನದ್ಧರಾಗಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಯಿಂದ ವಾಹನ ದಟ್ಟಣೆ ವಿಪರೀತ ಆಗುತ್ತಿರುವುದನ್ನು ಮನಗಂಡಿರುವ ಪೊಲೀಸರು ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.

ಟ್ರಾಫಿಕ್ ಸಿಗ್ನಲ್ ಹಾಗೂ ವಾಹನ ದಟ್ಟಣೆ ಸ್ಥಳಗಳಲ್ಲಿ ಪುಟ್ಪಾತ್ ಮೇಲೂ ಸಂಚರಿಸುವ ವಾಹನ ಸವಾರರ ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲು ತೀರ್ಮಾನಿಸಲಾಗಿದೆ.

ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಸಂಚಾರಿ ಪೊಲೀಸರು ಈ ಬಿಗಿ ಕ್ರಮ ಕೈಗೊಳ್ಳುತ್ತಿದ್ದು, ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಫುಟ್ಪಾತ್ ಮೇಲೆ ವಾಹನ ಓಡಿಸಿದರೆ ಕೇವಲ ದಂಡ ಮಾತ್ರ ಹಾಕಲಾಗುತ್ತಿತ್ತು. ಆದರೂ, ವಾಹನ ಸವಾರರು ಜಗ್ಗುತ್ತಿರಲಿಲ್ಲ. ವಾಹನ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಫುಟ್ಪಾತ್ ಮೇಲೆಯೇ ವಾಹನ ಚಲಾಯಿಸಿ, ಪಾದಚಾರಿ ಮಾರ್ಗವನ್ನೂ ಆಕ್ರಮಿಸುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿತ್ತು.

ಫುಟ್ಪಾತ್ ಮೇಲೆ ವಾಹನ ಸಂಚಾರ ನಿರ್ಬಂಧಿಸುವ ಸಲುವಾಗಿ ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಮೊದಲ ಬಾರಿ ಉಲ್ಲಂಘನೆಗೆ ದಂಡ ಹಾಕಲಾಗುತ್ತದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾಗಿ ಸಿಕ್ಕಿಬಿದ್ದರೆ ಲೈಸೆನ್ಸ್ ಅಮಾನತು ಮಾಡುವಂತೆ ಸಂಚಾರಿ ಪೊಲೀಸರು ಶಿಫಾರಸು ಮಾಡಿದ್ದಾರೆ. ಹಾಗಾಗಿ ಇನ್ನು ಮುಂದೆ ಫುಟ್ಪಾತ್ ಮೇಲೆ ಸಂಚರಿಸುವುದಕ್ಕೂ ಮುನ್ನ ವಾಹನ ಸವಾರರು ಯೋಚಿಸಬೇಕಾಗಿದೆ.

80 ಲಕ್ಷ ರೂ. ದಂಡ ಸಂಗ್ರಹ

ಬೆಂಗಳೂರು ನಗರದಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚಿದ್ದು, ಸಂಚಾರಿ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡಿದೆ. ಜ. 27ರಿಂದ ಫೆ.2ರವರೆಗೆ ಪಾನಮತ್ತರಾಗಿ ವಾಹನ ಚಲಾಯಿಸುವವರ ತಪಾಸಣೆಯಲ್ಲಿ 80 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಬೆಂಗಳೂರಿನ 50 ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ತಪಾಸಣೆ ನಡೆದಿದ್ದು, ವಾರದಲ್ಲಿ 800 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.

Read More
Next Story