BPL Card Controversy | ರದ್ದು ಇಲ್ಲ, ಅನರ್ಹರನ್ನು ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ: ಆಹಾರ ಸಚಿವ ಕೆ ಎಚ್ ಮುನಿಯಪ್ಪ ಸ್ಪಷ್ಟನೆ
x
ಕೆ ಹೆಚ್ ಮುನಿಯಪ್ಪ

BPL Card Controversy | ರದ್ದು ಇಲ್ಲ, ಅನರ್ಹರನ್ನು ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ: ಆಹಾರ ಸಚಿವ ಕೆ ಎಚ್ ಮುನಿಯಪ್ಪ ಸ್ಪಷ್ಟನೆ

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಯಾವುದೇ ಕಾರ್ಡ್‌ಗಳನ್ನು ರದ್ದುಗೊಳಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸೋಮವಾರ ಸ್ಪಷ್ಟಪಡಿಸಿದ್ದಾರೆ.


Click the Play button to hear this message in audio format

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಯಾವುದೇ ಕಾರ್ಡ್‌ಗಳನ್ನು ರದ್ದುಗೊಳಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿಲ್ಲ. ಬಿಜೆಪಿಯವರು ಈ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸದ್ಯ ಜನಸಂಖ್ಯೆಯ ಸುಮಾರು 80 ಪ್ರತಿಶತ ಜನರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಅಂದರೆ ಕೆಲವು ಅನರ್ಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಬಂದಿದೆ. ನಾವು ಅಂತಹ ಕಾರ್ಡ್‌ಗಳನ್ನು ಮರು ವರ್ಗೀಕರಿಸುವ ಕೆಲಸ ಮಾಡುತ್ತಿದ್ದೇವೆ. ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ, ಆದರೆ ಅವುಗಳನ್ನು ಎಪಿಎಲ್ ವರ್ಗಕ್ಕೆ ವರ್ಗಾಯಿಸುತ್ತೇವೆ ಎಂದು ಅವರು ತಿಳಿಸಿದರು.

ಮುಖ್ಯವಾಗಿ ಸ್ಥಿರ ಆರ್ಥಿಕ ಹಿನ್ನೆಲೆಯುಳ್ಳ ವ್ಯಕ್ತಿಗಳು, ಆದಾಯ ತೆರಿಗೆ ಪಾವತಿಸುವ ವ್ಯಕ್ತಿಗಳು ಸೇರಿದಂತೆ ಬಿಪಿಎಲ್ ಕಾರ್ಡ್‌ಗೆ ಅನರ್ಹರಾಗಿರುವವರನ್ನು ಎಪಿಎಲ್ ವರ್ಗಕ್ಕೆ ವರ್ಗಾಯಿಸಲಾಗುವುದು. ಎಪಿಎಲ್ ಕಾರ್ಡುದಾರರು ಅವರಿಗೆ ನಿಗದಿತ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ ಎಂದು ಹೇಳಿದರು.

ಆಹಾರ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯವು 4.35 ಕೋಟಿ ಬಿಪಿಎಲ್ ಫಲಾನುಭವಿಗಳನ್ನು ಹೊಂದಿದೆ. ಅದರಲ್ಲಿ ಸರ್ಕಾರವು 13.87 ಲಕ್ಷ ಅನರ್ಹ ಕಾರ್ಡ್‌ಗಳನ್ನು ಗುರುತಿಸಿದೆ. ಅದರಲ್ಲಿ 3.64 ಲಕ್ಷ ಅನರ್ಹ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. 2024-25ರಲ್ಲಿ ರಾಜ್ಯದಾದ್ಯಂತ 1,48,533 ಹೊಸ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ.

ಆದರೆ, ಪ್ರತಿಪಕ್ಷಗಳು ಬಿಪಿಎಲ್‌ ಕಾರ್ಡ್‌ ರದ್ದತಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರಣ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆಯಾಗಿ ಬಡವರ ಪಡಿತರವನ್ನೇ ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದವು. ಆ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿ, ಅನರ್ಹ ಕಾರ್ಡುಗಳನ್ನು ಮಾತ್ರ ರದ್ದು ಮಾಡಲಾಗುವುದು, ಮತ್ತು ಕೆಲವನ್ನು ಎಪಿಎಲ್‌ ಕಾರ್ಡುಗಳಾಗಿ ಪರಿವರ್ತಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ಪ್ರತಿಪಕ್ಷಗಳ ಕೂಗು ಸರ್ಕಾರಕ್ಕೆ ಸಾಕಷ್ಟು ಮುಜಗರ ತಂದಿತ್ತು. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೇ ಸ್ಪಷ್ಟನೆ ನೀಡಿ, ಗೊಂದಲ ನಿವಾರಿಸುವ ಯತ್ನ ಮಾಡಿದ್ದಾರೆ.

Read More
Next Story