Avar dal is a hot topic in Basavanagudi; Kunafa attracts attention among dosa, roti, and Holi
x
ಅವರೆಬೇಳೆಯಿಂದ ತಯಾರಿಸಲಾಗಿರುವ ವಿವಿಧ ಸಿಹಿ ತಿನಿಸುಗಳು

ಸಿಲಿಕಾನ್ ಸಿಟಿಯ ಸಾಂಸ್ಕೃತಿಕ ಐತಿಹ್ಯಕ್ಕೆ ಮರುಜೀವ ನೀಡುತ್ತಿರುವ ಬಸವನಗುಡಿ ಅವರೆ ಮೇಳ

ಡಿ.27ರಿಂದ ಆರಂಭವಾಗಿರುವ ಈ ಮೇಳ ಜನವರಿ 5ಕ್ಕೆ ಕೊನೆಯಾಗಲಿದ್ದು, ಈಗಾಗಲೇ ಮೇಳಕ್ಕೆ ಸಾವಿರಾರು ಜನರು ಆಗಮಿಸಿ ಅವರೆ ಬೇಳೆಯ ವಿಭಿನ್ನ ಖಾದ್ಯಗಳ ರುಚಿಯನ್ನು ಸವಿದು ಮನೆಗೂ ಕೊಂಡೊಯ್ಯುತ್ತಿದ್ದಾರೆ.


Click the Play button to hear this message in audio format

ಬೆಂಗಳೂರು ಎಂದಾಕ್ಷಣಾ ನಮ್ಮ ಕಣ್ಣೆದುರಿಗೆ ಐಟಿಬಿಟಿ, ವಿಶ್ವದ ಉತ್ಕೃಷ್ಟ ಕಂಪನಿಗಳ ತಾಣ, ಉದ್ಯಾನನಗರಿ ಹೀಗೆ ಸಾಲು ಸಾಲು ಪ್ರತಿಷ್ಠೆಯ ಲೋಕ ಹಾದುಗೋಗುತ್ತದೆ. ಆದರೆ ಈ ಮಾಯಾಲೋಕದೊಳಗೂ ಬೆಂಗಳೂರು ನಗರ ಸಾಂಸ್ಕೃತಿಕ ಐತಿಹ್ಯ ಹೊಂದಿದ್ದು ಹಲವಾರು ಸಂಭ್ರಮಾಚರಣೆಗಳನ್ನು ಮಾಡುತ್ತಾ, ತನ್ನ ಮೂಲ ಸಂಸ್ಕೃತಿ ಯುವಜನತೆಗೆ ಪರಿಚಯಿಸುತ್ತಾ, ಉಳಿಸುವ ಕಾರ್ಯವನ್ನು ಮಾಡುತ್ತಿದೆ.

ಜಗತ್‌ಪ್ರಸಿದ್ಧ ಬೆಂಗಳೂರು ಕರಗ, ಐತಿಹಾಸಿಕ ಕಡಲೆಕಾಯಿಪರಿಷೆ, ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ, ಸೆಂಟ್‌ ಮೇರಿಸ್‌ ಹಬ್ಬದ ಜೊತೆಗೆ ಬಸವನಗುಡಿಯಲ್ಲಿ ಕಳೆದ 26 ವರ್ಷಗಳಿಂದ ವಾಸವಿ ಕಾಂಡಿಮೆಂಟ್ಸ್‌ ಮಾಲೀಕರಾದ ಗೀತಾ ಶಿವಕುಮಾರ್‌ ಅವರೆ ಬೇಳೆ ಮೇಳವನ್ನು ನಡೆಸುತ್ತಿದ್ದು, ಬೆಂಗಳೂರಿಗರಿಗೆ ಸುಮಾರು 150ಕ್ಕೂ ಹೆಚ್ಚು ಅವರೆ ಖಾದ್ಯವನ್ನು ಉಣಬಡಿಸುತ್ತಿದ್ದಾರೆ.

26ನೇ ವಸಂತ ಅವರೆ ಮೇಳ ಸತತ 10 ದಿನಗಳ ಕಾಲ ನಡೆಯಲಿದ್ದು, ಹಿಂದೆಲ್ಲ ಅದು 5 ದಿನಗಳ ಕಾಲ ನಡೆಯುತ್ತಿತ್ತು. ಅವರೆ ಬೇಳೆಯ ಸಿಹಿತಿಂಡಿಗಳು, ಸಾರು, ಅಕ್ಕಿ ಹಾಗೂ ರಾಗಿ ಬೇಳೆ ರೊಟ್ಟಿ, ಹೋಳಿಗೆ, ದೋಸೆ, ಉಪ್ಪಿಟ್ಟು, ಜಾಮೂನ್, ನಿಪ್ಪಟ್ಟು, ಕೋಡುಬಳೆ, ವಡೆ, ಬೋಂಡಾ, ಮೊಮೊಸ್‌, ಕುನಾಫ ಸೇರಿದಂತೆ ಗ್ರಾಹಕರು 150 ಕ್ಕೂ ಹೆಚ್ ಖಾದ್ಯಗಳನ್ನು ಸವಿಯಬಹುದು. ಈ ಮೇಳಕ್ಕಾಗಿಯೇ ಸುಮಾರು 30 ಟನ್ ಗಿಂತ ಹೆಚ್ಚು ಅವರೆಕಾಯಿಯನ್ನು ತರಿಸಲಾಗುತ್ತದೆ.

ಅವರೆಬೇಳೆ ಕುನಾಫ

ಡಿ.27ರಿಂದ ಆರಂಭವಾಗಿರುವ ಈ ಮೇಳ ಜನವರಿ 5ಕ್ಕೆ ಕೊನೆಯಾಗಲಿದ್ದು, ಈಗಾಗಲೇ ಮೇಳಕ್ಕೆ ಸಾವಿರಾರು ಜನರು ಆಗಮಿಸಿ ಅವರೆ ಬೇಳೆಯ ವಿಭಿನ್ನ ಖಾದ್ಯಗಳ ರುಚಿಯನ್ನು ಸವಿದು ಮನೆಗೂ ಕೊಂಡೊಯ್ಯುತ್ತಿದ್ದಾರೆ. ಈ ಅವರೆ ಮೇಳದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅವರೆ ಬೇಳೆ ದೋಸೆಗೆ ಅತಿ ಹೆಚ್ಚು ಡಿಮ್ಯಾಂಡ್‌ ಇದೆ ಎಂದು ಅಡುಗೆ ತಯಾರಕರು ತಿಳಿಸಿದ್ದಾರೆ.

ಮಾಗಡಿ, ಕೋಲಾರದಿಂದ ಅವರೆ ಖರೀದಿ

ಅವರೆಬೇಳೆ ಮೇಳದಲ್ಲಿನ ಬಹುತೇಕ ಖಾದ್ಯಗಳಿಗೆ ಮಾಗಡಿ, ಚನ್ನರಾಯಪಟ್ಟಣ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಿಂದ ತರಿಸಲಾಗುತ್ತದೆ. ಬಯಲುಸೀಮೆಯಲ್ಲಿ ಬೆಳೆಯು ಅವರೆಕಾಯಿ ಸೊಗಡಿನಿಂದ ಕೂಡಿದ್ದು, ಬಹಳ ರುಚಿಗೂ ಹೆಸರುವಾಸಿಯಾಗಿದೆ. ಆದ್ದರಿಂದಲೇ ದೋಸೆ, ಹೋಳಿಗೆ, ರೊಟ್ಟಿ ಸೇರಿದಂತೆ ಬಹುತೇಕ ಖಾದ್ಯಗಳಿಗೆ ಸೊಗಡು ಅವರೆಯನ್ನೇ ಬಳಸುವುದರಿಂದ ಆಹಾರ ಹೆಚ್ಚಿನ ರುಚಿಯಿಂದ ಕೂಡಿರುತ್ತದೆ ಎಂದು ಅಂಗಡಿ ಮಾಲೀಕರಾದ ರಾಮಚಂದ್ರಪ್ಪ ತಿಳಿಸಿದರು.

ಸೊಗಡು ಅವರೆಕಾಯಿ

ದೋಸೆ ಪರಿಮಳ

ಅವರೆ ಮೇಳಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಶಶಿ ಅವರು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿ, 'ಅವರೆ ಬೇಳೆಯಿಂದ ಇಷ್ಟೊಂದು ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಬಹುದು ಎಂದು ನಾನು ಊಹಿಸಿರಲಿಲ್ಲ. ಇಲ್ಲಿನ ದೋಸೆ, ಪಾನಿಪೂರಿ ಸೇರಿದಂತೆ ವಿವಿಧ ತಿನಿಸುಗಳು ಬಾಯಲ್ಲಿ ನೀರು ತರಿಸುತ್ತಿವೆ. ಆದರೆ, ದೋಸೆ ಸೇರಿದಂತೆ ಬಹುತೇಕ ಖಾದ್ಯಗಳ ಬೆಲೆ ಹೆಚ್ಚಾಗಿರುವುದು ಗ್ರಾಹಕರಿಗೆ ಕೊಂಚ ಹೊರೆಯಾಗಲಿದೆ. ಆದಾಗ್ಯೂ, ವರ್ಷಕ್ಕೊಮ್ಮೆ ನಡೆಯುವ ಇಂತಹ ಅಪರೂಪದ ಮೇಳಕ್ಕೆ ಭೇಟಿ ನೀಡಿ ಇಲ್ಲಿನ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ' ಎಂದು ಅಭಿಪ್ರಾಯಪಟ್ಟರು.

ಕಡಿಮೆಯಾಗದ ರಾಗಿ ರೊಟ್ಟಿ ಸವಿ

ಚನ್ನರಾಯಪಟ್ಟಣದ ಅಡುಗೆ ತಯಾರಕ ಸಿದ್ಧಲಿಂಗಸ್ವಾಮಿ ಅವರು ಮೇಳದ ಕುರಿತು ಮಾತನಾಡಿ, 'ನಮ್ಮ ಮಳಿಗೆಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಅವರೆ ಬೇಳೆ ಮಿಶ್ರಿತ ಅಕ್ಕಿ ರೊಟ್ಟಿ ಹಾಗೂ ರಾಗಿ ರೊಟ್ಟಿಯನ್ನು ಜನರು ಸವಿಯಲು ಹೆಚ್ಚು ಇಷ್ಟಪಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ನಾವು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ಭರ್ಜರಿ ವ್ಯಾಪಾರ

ಅವರೆ ಮೇಳದಲ್ಲಿ ಕೇವಲ ಸಿದ್ಧ ಖಾದ್ಯಗಳಷ್ಟೇ ಅಲ್ಲದೆ, ಹಸಿ ಅವರೆಕಾಯಿ ಮತ್ತು ಬೇಳೆಯ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ. ಈ ಕುರಿತು ವ್ಯಾಪಾರಸ್ಥರಾದ ಧನಲಕ್ಷ್ಮಿ ಅವರು ಮಾತನಾಡಿ, 'ನಾವು ಹಲವು ವರ್ಷಗಳಿಂದ ಅವರೆಕಾಯಿ ಮತ್ತು ಬೇಳೆಯ ವ್ಯಾಪಾರ ಮಾಡುತ್ತಿದ್ದೇವೆ. ಮೇಳಕ್ಕೆ ಆಗಮಿಸುವ ಗ್ರಾಹಕರು ತರಹೇವಾರಿ ಖಾದ್ಯಗಳನ್ನು ಸವಿಯುವುದರ ಜೊತೆಗೆ, ನಮ್ಮಲ್ಲಿರುವ ನಾಟಿ ಸೊಗಡಿನ ತಾಜಾ ಅವರೆಕಾಯಿ ಹಾಗೂ ಹಸಿ ಕಾಳುಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ನಮಗೂ ಉತ್ತಮ ವ್ಯಾಪಾರವಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ' ಎಂದು ತಿಳಿಸಿದರು.

ಬೇಳೆ ಸಾಂಬರ್‌ ಬಲು ಇಷ್ಟ

ಅವರೆ ಮೇಳದಲ್ಲಿ ಖಾದ್ಯಗಳ ವೈವಿಧ್ಯತೆ ತಲೆಮಾರುಗಳ ನಡುವಿನ ಅಭಿರುಚಿಯನ್ನೂ ಅನಾವರಣಗೊಳಿಸಿತು. ಹಿರಿಯರು ಸಾಂಪ್ರದಾಯಿಕ ಅವರೆ ಬೇಳೆ ದೋಸೆ ಹಾಗೂ ಸಾಂಬಾರ್ ಸವಿಯಲು ಇಷ್ಟಪಟ್ಟರೆ, ಯುವಜನತೆ ಮತ್ತು ಮಕ್ಕಳು ಅವರೆ ಬೇಳೆ ಮಿಶ್ರಿತ ಹಾಟ್ ಚಾಕೊಲೇಟ್, ಮೊಮೊಸ್ ಹಾಗೂ ಕುನಾಫದಂತಹ ವಿನೂತನ ಖಾದ್ಯಗಳತ್ತ ಆಕರ್ಷಿತರಾಗಿದ್ದರು. ಇನ್ನು, ಬಿಸಿಬಿಸಿ ಅವರೆ ಬೇಳೆ ಬೋಂಡ ಹಾಗೂ ವಡೆಯ ಘಮಲು ಮೇಳಕ್ಕೆ ಬಂದವರನ್ನೆಲ್ಲಾ ತನ್ನತ್ತ ಸೆಳೆಯುತ್ತಿತ್ತು; ಇವುಗಳ ಕೌಂಟರ್‌ಗಳು ಸದಾ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು.

ಅವರೆಬೇಳೆ ಮೇಳದಲ್ಲಿ ಪಾಲ್ಗೊಂಡಿದ್ದ ಮಕ್ಕಳು

ಅವರೆ ಬೇಳೆಯಿಂದಾಗುವ ಪ್ರಯೋಜನಗಳೇನು?

ಅವರೆ ಬೇಳೆಯು ಕೇವಲ ರುಚಿಗಷ್ಟೇ ಅಲ್ಲ, ಅದ್ಭುತವಾದ ಆರೋಗ್ಯ ಗುಣಗಳಿಗೂ ಹೆಸರುವಾಸಿಯಾಗಿದೆ. ಇದರಲ್ಲಿ ನಾರಿನಂಶ ಹೇರಳವಾಗಿದ್ದು, ಇದು ಜೀರ್ಣಾಂಗ ವ್ಯೂಹವನ್ನು ಚುರುಕುಗೊಳಿಸುವುದಲ್ಲದೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರಿಸುವಿಕೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ. ಅಲ್ಲದೆ, ಅವರೆ ಬೇಳೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸಿ, ರಕ್ತಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿಶೇಷವೆಂದರೆ, ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಣದಲ್ಲಿಡುತ್ತದೆ, ಹೀಗಾಗಿ ಮಧುಮೇಹಿಗಳು ಸಹ ಮಿತವಾಗಿ ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ತೂಕ ಇಳಿಸಲು ಸಹಕಾರಿ

ಸಸ್ಯಾಹಾರಿಗಳಿಗೆ ಅವರೆ ಬೇಳೆಯು ಪ್ರೋಟೀನ್‌ನ ಅತ್ಯುತ್ತಮ ಅಗತ್ಯ. ಇದು ಸ್ನಾಯುಗಳ ಬೆಳವಣಿಗೆಗೆ ಹಾಗೂ ದೇಹದ ಜೀವಕೋಶಗಳ ಸವೆತವನ್ನು ಸರಿಪಡಿಸಲು ಪೂರಕವಾಗಿದೆ. ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುವ ಮೂಲಕ ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅವರೆ ಬೇಳೆಯಲ್ಲಿ ವಿಟಮಿನ್ 'ಸಿ' ಮತ್ತು 'ಬಿ' ಕಾಂಪ್ಲೆಕ್ಸ್ ಹೇರಳವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಇದರಲ್ಲಿ ನಾರಿನಂಶ ಮತ್ತು ಪ್ರೋಟೀನ್ ಸಮೃದ್ಧವಾಗಿರುವುದರಿಂದ, ಇದನ್ನು ಸೇವಿಸಿದಾಗ ಹೊಟ್ಟೆ ತುಂಬಿದ ಅನುಭವ ದೀರ್ಘಕಾಲ ಇರುತ್ತದೆ. ಇದು ಅನಗತ್ಯ ಹಸಿವನ್ನು ತಡೆಯುವ ಮೂಲಕ ತೂಕ ಇಳಿಸಲು ಇಚ್ಛಿಸುವವರಿಗೂ ಸಹಕಾರಿಯಾಗಿದೆ.

Read More
Next Story