ಮಳೆಯಿಂದ ಕಲ್ಯಾಣ ಕರ್ನಾಟಕದಲ್ಲಿ ನೆರೆ | ಮಳೆಹಾನಿ ಪ್ರದೇಶಗಳಲ್ಲಿ ಸೆ.30 ರಂದು ಸಿಎಂ‌ ವೈಮಾನಿಕ ಸಮೀಕ್ಷೆ
x

ಮಳೆಯಿಂದ ಕಲ್ಯಾಣ ಕರ್ನಾಟಕದಲ್ಲಿ ನೆರೆ | ಮಳೆಹಾನಿ ಪ್ರದೇಶಗಳಲ್ಲಿ ಸೆ.30 ರಂದು ಸಿಎಂ‌ ವೈಮಾನಿಕ ಸಮೀಕ್ಷೆ

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ಇದಲ್ಲದೇ ಸಾವಿರಾರು ಎಕರೆಯಲ್ಲಿ ಬೆಳೆಗಳು ಕೂಡ ಹಾಳಾಗಿವೆ.


ಭೀಮಾ ನದಿ ಪ್ರವಾಹದಿಂದಾಗಿ ಕಲಬುರಗಿ, ಬೀದರ್, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ ಹಲವು ಭಾಗಗಳಲ್ಲಿ ಉಂಟಾಗಿರುವ ಹಾನಿ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಸೆ.30ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಮಂಗಳವಾರ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಅವರು, ಪ್ರವಾಹ ಪರಿಸ್ಥಿತಿ ಕುರಿತು ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಪರಿಹಾರ ಕಾರ್ಯಗಳ ಪ್ರಗತಿ ಹಾಗೂ ಅಗತ್ಯ ಕ್ರಮಗಳ ಕುರಿತಂತೆ ಸಿಎಂ ಅವರು ಮಾಹಿತಿ ಪಡೆಯಲಿದ್ದಾರೆ.

ಕಲಬುರಗಿಯ ಜೊತೆಗೆ ಬೀದರ್, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೂಡ ಅಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ಇದಲ್ಲದೇ ಸಾವಿರಾರು ಎಕರೆಯಲ್ಲಿ ಬೆಳೆಗಳು ಕೂಡ ಹಾಳಾಗಿವೆ. ಈ ಹಿನ್ನೆಲೆಯಲ್ಲಿ ಅಗತ್ಯ ರಕ್ಷಣಾ ಕಾರ್ಯ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ಸಿಇಒಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ವಿಶೇಷ ಪ್ಯಾಕೇಜ್ ಗೆ ಮನವಿ

ಭಾನುವಾರ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಬೀದರ್ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ವಿವರ ನೀಡಿದರು.

ಪ್ರವಾಹದಿಂದಾಗಿ ಮನೆ ಮನೆಗಳಲ್ಲಿ ನೀರು ನುಗ್ಗಿರುವುದು, ರಸ್ತೆ ಸಂಚಾರ ಅಸ್ತವ್ಯಸ್ತವಾಗಿರುವುದು, ಬೆಳೆ ನಷ್ಟ ಹಾಗೂ ಮೂಲಸೌಕರ್ಯ ಹಾನಿ ಕುರಿತು ಸಚಿವರು ಮುಖ್ಯಮಂತ್ರಿ ಅವರಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿಗಳ ಪ್ರವಾಸದ ವೇಳೆ ಪೀಡಿತ ಕುಟುಂಬಗಳಿಗೆ ಸರ್ಕಾರದ ನೆರವು ತಲುಪುವ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಹೆಚ್ಚುವರಿ ಪರಿಹಾರ ಘೋಷಣೆ ಮಾಡುವ ನಿರೀಕ್ಷೆಯಿದೆ.

Read More
Next Story