ನವೆಂಬರ್‌ ಅಂತ್ಯದವರೆಗೂ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಧ್ವಜಾರೋಹಣ ಕಡ್ಡಾಯ?
x

ನವೆಂಬರ್‌ ಅಂತ್ಯದವರೆಗೂ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಧ್ವಜಾರೋಹಣ ಕಡ್ಡಾಯ?

ಕರ್ನಾಟಕ ಕೇವಲ ನಾಡಲ್ಲ, ಸಂಸ್ಕೃತಿಯ ಬೀಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ. ಕನ್ನಡ ಎನ್ನುವುದು ಜೀವನದ ವಿಧಾನ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.


Click the Play button to hear this message in audio format

ಖಾಸಗಿ‌ ಹಾಗೂ ಸರ್ಕಾರಿ ಕಚೇರಿಗಳಲ್ಲಿ ನವೆಂಬರ್‌ ಮಾಸಂತ್ಯದವರೆಗೂ ಕಡ್ಡಾಯವಾಗಿ ಕನ್ನಡದ ಧ್ವಜ ಹಾರಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲು ಸರ್ಕಾರ ನಿರ್ಧರಿಸಿದೆ.

ಇದನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಖಚಿತಪಡಿಸಿದ್ದಾರೆ. ಅವರು ಶನಿವಾರ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಪಥಸಂಚಲನದಲ್ಲಿ ವಂದನೆ ಸ್ವೀಕರಿಸಿ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

"ಕರ್ನಾಟಕ ಕೇವಲ ನಾಡಲ್ಲ, ಸಂಸ್ಕೃತಿಯ ಬೀಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ. ಕನ್ನಡ ಎನ್ನುವುದು ಜೀವನದ ವಿಧಾನ. ಇಂತಹ ಕನ್ನಡವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ʼಬನ್ನಿ ನಮ್ಮ ಸಂಗಡʼ ಕವಿ ಅಡಿಗರ ಕವನ‌ ವಾಚನ

"ನಮ್ಮ ಉಸಿರು‌ ಕನ್ನಡ, ನಮ್ಮ ಕಸುವು ಕನ್ನಡ, ನಮ್ಮ ಹೆಸರು ಕನ್ನಡ, ನಮ್ಮ ಕಸುಬು ಕನ್ನಡ, ಕನ್ನಡವಿದು ಕನ್ನಡ, ಬನ್ನಿ ನಮ್ಮ ಸಂಗಡ" ಎಂದು ಗೋಪಾಲಕೃಷ್ಣ ಅಡಿಗರ ಕವನವನ್ನು ವಾಚಿಸಿದರು. ಆದಿಕವಿ ಪಂಪನಿಂದ ಹಿಡಿದು ಬಸವಣ್ಣ, ಅಲ್ಲಮಪ್ರಭು, ಕನಕದಾಸರು, ಪುರಂದರದಾಸರು, ಕುವೆಂಪು,‌ ಬೇಂದ್ರೆ, ಮಾಸ್ತಿ ಹೀಗೆ ಸಾಹಿತ್ಯದ ದೊಡ್ಡ ಪರಂಪರೆಯನ್ನು ನಾವು ಹೊಂದಿದ್ದೇವೆ. ಈ ಎಲ್ಲಾ ಸಾಹಿತ್ಯ ಭಂಡಾರವನ್ನು ಮಕ್ಕಳು ಬಾಚಿಕೊಳ್ಳಬೇಕು" ಎಂದು ಕರೆ ‌ನೀಡಿದರು.

ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಈ ನೆಲದಲ್ಲಿ ಏನೋ ವೈಶಿಷ್ಟ್ಯ ಅಡಗಿದೆ. ಇಲ್ಲಿಗೆ ಬಂದವರು ಯಾವುದೇ ಕಾರಣಕ್ಕೂ ಮರಳಿ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಿರುವ ನಮ್ಮ ಕರ್ನಾಟಕ ಶಾಂತಿಯಿಂದ ಕೂಡಿದೆ. ಹೊರಗಿನಿಂದ ಬಂದವರು ಸಹ ಊಟ, ವಸತಿ ಗಳಿಸಿಕೊಂಡಿದ್ದಾರೆ. ಇದೇ ನಮ್ಮ ಕನ್ನಡ ತಾಯಿ, ಭೂಮಿಯ ವಿಶೇಷ. ಇಲ್ಲಿ ಇರುವ ಅತ್ಯುತ್ತಮ ವಾತಾವರಣ ದೇಶದ ಯಾವ ಭಾಗದಲ್ಲಿಯೂ ಇಲ್ಲ. ನಮ್ಮ ಸಂಸ್ಕೃತಿ ಹಾಗೂ ನೆಲ,‌‌ ಜಲಕ್ಕೆ ಎಲ್ಲರನ್ನೂ ಆಕರ್ಷಿಸುವ ಗುಣವಿದೆ ಎಂದರು.

"ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸಬೇಕು. ಕನ್ನಡಿಗರ ತ್ಯಾಗ, ಬಲಿದಾನ, ಶ್ರಮವನ್ನು ನಾವುಗಳು ಮರೆಯಬಾರದು. ಅನೇಕ ಹಿರಿಯರು ಈ ಭಾಷೆ, ನೆಲ,‌ ಜಲ, ಬಾವುಟದ ಗೌರವವನ್ನು ಕಾಪಾಡಿದ್ದಾರೆ. ದೇಶದ ಯಾವ ರಾಜ್ಯವೂ ಧ್ವಜ, ನಾಡಗೀತೆ ಹೊಂದಿಲ್ಲ. ಆದರೆ ನಾವು ಇವೆರಡನ್ನೂ ಹೊಂದಿದ್ದೇವೆ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿದ್ದೇವೆ. ಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯಗೊಳಿಸಿದ್ದೇವೆ. ಬೆಂಗಳೂರಿನಲ್ಲಿರುವ ಉದ್ದಿಮೆಗಳು, ಕಾರ್ಖಾನೆಗಳು, ವಾಣಿಜ್ಯ ಕೇಂದ್ರಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯ ಮಾಡಿದ್ದೇವೆ" ಎಂದರು.

ಜಾಗತಿಕ ಮಟ್ಟಕ್ಕೆ ಕನ್ನಡ

"ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಕರ್ನಾಟಕ ಶಾಂತಿಯ ತೋಟ. ನಾವೆಲ್ಲರೂ ಜಾತಿ, ಧರ್ಮಗಳನ್ನು ಬಿಟ್ಟು ಸಹಬಾಳ್ವೆಯಿಂದ ಕರ್ನಾಟಕದ ಏಳಿಗೆಗೆ ದುಡಿಯಬೇಕು. ಜಾಗತಿಕವಾಗಿ ಬೆಂಗಳೂರು ಬೆಳಗುತ್ತಿದೆ. ಪ್ರಪಂಚದ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಕನ್ನಡ, ಕರ್ನಾಟಕವನ್ನು ಜಾಗತಿಕ ಮಟ್ಟಕ್ಕೆ ನಾವೆಲ್ಲರೂ ಕೊಂಡೊಯ್ಯಬೇಕು" ಎಂದರು.

Read More
Next Story