
ಕಾಸರಕೋಡ ಬಂದರು ಯೋಜನೆ ಕೈಬಿಡುವಂತೆ ಸಿದ್ದರಾಮಯ್ಯಗೆ ಮೀನುಗಾರರ ಸಂಘಟನೆಗಳ ಒತ್ತಾಯ
ಪೊಲೀಸ್ ಬಲಪ್ರಯೋಗದಲ್ಲಿ ಸರ್ವೆ ಕಾರ್ಯ ನಡೆಸಲಾಗಿದ್ದು, ಇದನ್ನು ಪ್ರಶ್ನಿಸಿದವರನ್ನು ಪೋಲಿಸರು ಬಂಧಿಸಿ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿರುವ ಅತೀರೇಖದಿಂದ ವರ್ತಿಸಿದ್ದಾರೆ. ಜನರು ಜೀವ ಭಯದಲ್ಲಿ ದಿನಕಳೆಯುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ಬಂದರು ಯೋಜನೆಯನ್ನು ಕೈಬಿಡುವಂತೆ ರಾಷ್ಟ್ರೀಯ ಮೀನುಗಾರರ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಈ ಯೋಜನೆಗಾಗಿ ಪರಿಸರ ಸೂಕ್ಷ್ಮ ಕಡಲತೀರದ 5 ಕಿಲೋಮೀಟರ್ ಉದ್ದದ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗದ ನಿರ್ಮಾಣ ಯೋಜನೆ ಕೈಬಿಡಬೇಕು. ಮೀನುಗಾರರ ಹಾಗೂ ಬಂದರು ವಿರೋಧಿ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಕೈಬಿಡುವಂತೆ ಒತ್ತಾಯಿಸಿದ್ದಾರೆ.
ಜಿಲ್ಲೆಯ ಪರಿಸರ ಮತ್ತು ಜನಸಾಮಾನ್ಯರ ಹಿತವನ್ನು ಕಡೆಗಣಿಸಿ, ಸಾಂಪ್ರದಾಯಿಕ ಮೀನುಗಾರಿಕೆ, ಮೀನುಗಾರರ ಜೀವನೋಪಾಯ, ವಸತಿ ನೆಲೆಗಳಿಗೆ ಆತಂಕ ಆಗುವಂತೆ ಕರಾವಳಿಯ ಧಾರಣಾ ಸಾಮರ್ಥ್ಯ ಮೀರಿ ಟೊಂಕದಲ್ಲಿ ಮತ್ತು ಅಂಕೋಲೆಯ ಕೇಣಿಯಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಮತ್ತು ಕಾರವಾರದ ಬಂದರನ್ನು ರವೀಂದ್ರನಾಥ ಠಾಗೋರ ಕಡಲತೀರದವರೆಗೆ ವಿಸ್ತರಣೆ ಮಾಡುವ ಸರ್ಕಾರದ ಅವೈಜ್ಞಾನಿಕ ಪರಿಸರ ವಿರೋಧಿ ಧೋರಣೆಯನ್ನು ಕೈಬಿಡುವಂತೆ ಒತ್ತಾಯಿಸಲಾಗಿದೆ.
ರಾಷ್ಟ್ರೀಯ ಮೀನುಗಾರ ಕಾರ್ಮಿಕರ ವೇದಿಕೆಯ ಅಧ್ಯಕ್ಷ ರಾಮಕೃಷ್ಣ ತಾಂಡೇಲ, ಪ್ರಧಾನ ಕಾರ್ಯದರ್ಶಿ ಅಲೆನ್ಸಿಯೋ ಸಿಮೋಯಿಸ್, ಸಂಯೋಜಕ ವಿಕಾಸ ತಾಂಡೇಲ, ಉಜ್ವಲಾ ಪಾಟೀಲ, ಲಕ್ಷೀ.ಟಿ, ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಕಾಸರಕೋಡ ಟೊಂಕದ ಬಂದರು ವಿರೋಧಿ ಹೋರಾಟ ಸಮೀತಿಯ ರಾಜೇಶ ತಾಂಡೇಲ, ಗಣಪತಿ ತಾಂಡೇಲ, ರಿಜ್ವಾನ ಮೈದಿನ ಸಾಬ, ಅನ್ಸಾರ ಇಷ. ಸಾಬ ರಾಜು ಈಶ್ವರ ತಾಂಡೇಲ, ಅಂಕೋಲಾ ಕೇಣಿಯ ಬಂದರು ವಿರೋಧಿ ಹೋರಾಟ ಸಮೀತಿಯ ಸಂಜೀವ ಬಲೇಗಾರ, ಜ್ಞಾನೇಶ್ವರ, ಗಿರೀಶ ಹರಿಕಂತ್ರ, ಹೂವಾ ಖಂಡೇಕರ್, ವೆಂಕಟೇಶ್ ದುರ್ಗೇಕರ್, ಜ್ಞಾನೇಶ್ವರ ಹರಿಕಂತ್ರ, ಗಿರೀಶ್ ಬಳೆಗಾರ್. ಮತ್ತು ಉ.ಕ.ಮೀನುಗಾರರ ಫೇಡರೇಷನ್ನಿನ ಪದಾಧಿಕಾರಿಗಳು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು.
ಅಹವಾಲು ಆಲಿಸಿ ಮನವಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಮೀನುಗಾರರ ಬೇಡಿಕೆಗಳು ಮನವರಿಕೆಯಾಗಿವೆ. ಬಂದರು ವಿರೋಧಿ ಹೋರಾಟದಲ್ಲಿ ಹಿಂದೆ ಮುಂಚೂಣಿಯಲ್ಲಿದ್ದ ಅಂದಿನ ಶಾಸಕ ಮಂಕಾಳ ವೈದ್ಯರೇ ಇಂದು ಬಂದರು ಖಾತೆ ಸಚಿವರಾಗಿದ್ದಾರೆ. ಅವರನ್ನು ಮತ್ತೂ ಸಂಬಂದಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸುತ್ತೇನೆ. ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಾಧ್ಯವಾದರೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಪೊಲೀಸ್ ಬಲಪ್ರಯೋಗ ವಿರುದ್ಧ ದೂರು
ಪೊಲೀಸ್ ಬಲಪ್ರಯೋಗದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರು ನಿರ್ಮಿಸುವ ಅವೈಜ್ಞಾನಿಕ ಜನವಿರೋಧಿ ಕ್ರಮವನ್ನು ತಡೆಯಲು, ಅಮಾಯಕ-ಬಡ ಮೀನುಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸಿರುವ, ವಾಣಿಜ್ಯ ಬಂದರು ನಿರ್ಮಾಣ ಮಾಡುವ ಅವೈಜ್ಞಾನಿಕ, ಪರಿಸರ ಮತ್ತು ಮೀನುಗಾರಿಕೆ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಸಂಘಟನೆ ಪ್ರಮುಖರು ಒತ್ತಾಯಿಸಿದರು.
ಕಾರವಾರ ಮತ್ತು ಬೇಲೆಕೇರಿಗಳಲ್ಲಿ ಎರಡು ಪ್ರಮುಖ ವಾಣಿಜ್ಯ ಬಂದರುಗಳು ಕಾರ್ಯಾಚರಿಸುತ್ತಿದ್ದು, ಅವು ಹೊಂದಿರುವ ಈ ವರೆಗಿನ ಒಟ್ಟು ಗುರಿಯಲ್ಲಿ ಪ್ರತಿಶತ 40ರಷ್ಷು ತಲುಪಲು ಈವರೆಗೆ ಸಾಧ್ಯವಾಗಿಲ್ಲ. ಈ ಎರಡೂ ಬಂದರುಗಳಿಂದ ಮುಂದಿನ 200 ವರ್ಷಗಳವರೆಗೆ ರಾಜ್ಯದ ಅಗತ್ಯವನ್ನು ಪೂರೈಸುವ ಸಾಮರ್ಥ್ಯ ಹೊಂದಿವೆ. ಜಿಲ್ಲೆಯ ಕಡಲತೀರಗಳ ಧಾರಣಾಸಾಮರ್ಥ್ಯವನ್ನು ಮೀರಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸಲು ಸರ್ಕಾರ ಮತ್ತು ಸ್ಥಳಿಯ ಆಡಳಿತವು ಖಾಸಗೀ ಸಹಭಾಗಿತ್ವದಲ್ಲಿ ಯತ್ನಿಸುತ್ತಿರುವುದು ಸರಿಯಲ್ಲ. ಇದು ತೀರಾ ಅವೈಜ್ಞಾನಿಕ, ಅವಾಸ್ತವಿಕ ಮತ್ತು ಅತ್ಯಂತ ಅಪಾಯಕಾರಿ ನೀತಿಯಾಗಿದೆ. ಲಕ್ಷಾಂತರ ಜನರ ಜೀವನೋಪಾಯಕ್ಕೆ ಅಡ್ಡಿಯಾಗುವಂತೆ ಪರಿಸರ ವಿರೋಧಿ ಯೋಜನೆಯನ್ನು ಪೋಲಿಸ್ ಬಲಪ್ರಯೋಗದ ಮೂಲಕ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬಲವಂತದಿಂದ ಜನರ ಮೇಲೆ ಹೇರಲು ಯತ್ನಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಟೊಂಕ ಗ್ರಾಮದ ಕಡಲತೀರದಲ್ಲಿ ಸಾವಿರಾರು ಮಹಿಳೆಯರು ಒಣಮೀನುಗಾರಿಕೆ ಉದ್ಯಮದಲ್ಲಿ ತೊಡಗಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳು ಸಾಂಪ್ರದಾಯಿಕ ಮೀನುಗಾರಿಕೆಯೊಂದಿಗೆ ಇಲ್ಲಿನ ಕಡಲತೀರದಲ್ಲಿ ಪಾರಂಪರಿಕವಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿವೆ. ಐದು ಸಾವಿರಕ್ಕೂ ಹೆಚ್ಚು ಮೀನುಗಾರರು ಯಾಂತ್ರಿಕ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಲ್ಲಿ ಇಲ್ಲಿನ ಪರಿಸರ ಸೂಕ್ಷ್ಮ ಕಡಲ ತೀರಕ್ಕೆ ಹೊಂದಿಕೊಂಡಿರುವ 4 ಕೀ.ಮೀ.ಉದ್ದದ ಮೀನುಗಾರರ ಪರಂಪರಾಗತ ವಸತಿನೆಲೆಯ ಹತ್ತಿರ, ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಧೂಳು ಮಿಶ್ರಿತ ಸರಕುಗಳ ಸಾಗಾಟ, ಸಂಗ್ರಹ ಆಮದು ರಪ್ತು ಬಹು ಉದ್ದೇಶಿಸಿತ ವಾಣಿಜ್ಯ ಬಂದರು ನಿರ್ಮಾಣ ಮಾಡುವುದರಿಂದ ಇಲ್ಲಿನ ಸಂಸ್ಕೃತಿ ನಾಮಾಶೇಷವಾಗಲಿದೆ. ಬಂದರು ಇಲಾಖೆಯ ಅಧಿಕಾರಿಗಳು ಮತ್ತು ಎಚ್.ಪಿ.ಪಿ.ಎಲ್.ಕಂಪೆನಿಯವರು ಸೇರಿ ಇಲ್ಲಿನ ಮೀನುಗಾರರನ್ನು ಬಲವಂತದಿಂದ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದ್ದಾರೆ ಎಂದು ದೂರಿದರು.
ಕಡಲಾಮೆ ಮೊಟ್ಟೆಗೆ ಮಾರಕ
ಪರಿಸರ, ಜೀವ ವೈವಿಧ್ಯತೆ, ಜನರ ಆರೋಗ್ಯ ಮತ್ತು ಜೀವನೋಪಾಯಕ್ಕೆ ಮಾರಕವಾಗುವ ವಾಣಿಜ್ಯ ಬಂದರುಗಳ ನಿರ್ಮಾಣ ಮಾಡುವುದು ತೀರ ಅವೈಜ್ಞಾನಿಕ ಮತ್ತು ಮುಂದಿನ ಪೀಳಿಗೆಗೆ ಇದು ಅಪಾಯಕಾರಿ ಎಂದು ಅನೇಕ ತಜ್ಞರು ಎಚ್ಚರಿಸಿದ್ದಾರೆ. ಕಡಲಾಮೆಗಳು ಮೊಟ್ಟೆ ಇಡುವ ಪರಿಸರ ಸೂಕ್ಷ್ಮ ಮತ್ತು ಸಾಂಪ್ರದಾಯಿಕ ಮೀನುಗಾರಿಕೆಯ ಪ್ರಮುಖ ತಾಣವಾಗಿರುವ, ಕುಡಿಯುವ ನೀರಿನ ದೈನಂದಿನ ಅಗತ್ಯಗಳನ್ನು ಪೂರೈಸುತ್ತಿರುವ ಜೀವನದಿ ಶರಾವತಿಯ ಸಂಗಮ ಪ್ರದೇಶವಾಗಿರುವ 3ಕಿ.ಮೀ .ಉದ್ದಕ್ಕೂ ಅಸ್ತಿತ್ವದಲ್ಲಿರದ ಕಚ್ಛಾ ರಸ್ತೆಯ ಸುಧಾರಣೆಯ ನೆಪದಲ್ಲಿ ಕಲ್ಲುಮಣ್ಣು ಸುರಿದು ವನ್ಯ ಜೀವಿಕಾಯ್ದೆ ಸಹಿತ ವಿವಿಧ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿ ಹೊಸದಾಗಿ ಪಕ್ಕಾ ರಸ್ತೆ ನಿರ್ಮಿಸುವ ಪ್ರಯತ್ನ ನಡೆಸಲಾಗಿದೆ.
ಪರಂಪರಾಗತ ಮೀನುಗಾರರ ವಸತಿನೆಲೆಯಲ್ಲಿನ ಜನರಿಗೆ ಯಾವುದೇ ಪೂರ್ವ ಸೂಚನೆ ನೀಡದೇ ವಾಣಿಜ್ಯ ಬಂದರು ಯೋಜನೆಯ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ ಚತುಷ್ಪಥ ರಸ್ತೆ ನಿರ್ಮಾಣಮಾಡುವ ಉದ್ದೇಶಕ್ಕೆ ಭೂಸ್ವಾಧೀನ ಮಾಡುತ್ತಿರುವುದು ಸರಿಯಲ್ಲ. ಪೊಲೀಸ್ ಬಲಪ್ರಯೋಗದಲ್ಲಿ ಸರ್ವೆ ಕಾರ್ಯ ನಡೆಸಲಾಗಿದ್ದು, ಇದನ್ನು ಪ್ರಶ್ನಿಸಿದವರನ್ನು ಪೋಲಿಸರು ಬಂಧಿಸಿ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿರುವ ಅತೀರೇಖದಿಂದ ವರ್ತಿಸಿದ್ದಾರೆ. ಜನರು ಜೀವ ಭಯದಲ್ಲಿ ದಿನಕಳೆಯುವಂತಾಗಿದೆ. ಈ ಭಾಗ ಪ್ರವಾಸೋದ್ಯಮಕ್ಕೆ ಪ್ರಶಸ್ತ ತಾಣವಾಗಿದ್ದು, ಸಹಸ್ರಾರು ಕುಟುಂಬಗಳು ಇಲ್ಲಿ ತಮ್ಮ ಬದುಕು ಕಟ್ಟಿಕೊಂಡಿವೆ ಎಂದು ಹೇಳಿದ್ದಾರೆ.