ವಿಧಾನಸಭೆ ಮಾದರಿ ಈಗ ಪಾಲಿಕೆಯಲ್ಲಿ: ಹುಬ್ಬಳ್ಳಿ- ಧಾರವಾದ ಪಾಲಿಕೆಗೆ ಮಾರ್ಷಲ್ ಬಲ!
x

ವಿಧಾನಸಭೆ ಮಾದರಿ ಈಗ ಪಾಲಿಕೆಯಲ್ಲಿ: ಹುಬ್ಬಳ್ಳಿ- ಧಾರವಾದ ಪಾಲಿಕೆಗೆ 'ಮಾರ್ಷಲ್' ಬಲ!

ರಾಜ್ಯದ 2ನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಕೀರ್ತಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ಇದೆ. ಈ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿದೆ.


Click the Play button to hear this message in audio format

ರಾಜ್ಯ ವಿಧಾನಮಂಡಲದ ಸುಗಮ ಕಲಾಪ ನಡೆಯಲು ಮತ್ತು ಗದ್ದಲಗಳು ನಡೆದರೆ ಸಭಾಧ್ಯಕ್ಷರ ಸೂಚನೆ ಮೇರೆಗೆ ಸದಸ್ಯರನ್ನು ಹತೋಟಿಗೆ ತರುವುದೇ ಮಾರ್ಷಲ್‌ಗಳ ಪ್ರಮುಖ ಕಾರ್ಯ. ಈ 'ಮಾರ್ಷಲ್‌' ಪರಿಕಲ್ಪನೆಯು ಈ ಹಿಂದೆ ಕೇವಲ ರಾಜ್ಯ ವಿಧಾನಮಂಡಲಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಇದೀಗ ಈ ಪರಿಕಲ್ಪನೆಯು ಪಾಲಿಕೆ ವ್ಯಾಪ್ತಿಗೂ ವಿಸ್ತರಿಸಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ರಾಜ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅತಿ ದೊಡ್ಡ ಪಾಲಿಕೆಯಾಗಿದ್ದರೆ, ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಕೀರ್ತಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಇದೆ. ಈ ಪಾಲಿಕೆಯ ಮಟ್ಟದಲ್ಲಿ ಮಾರ್ಷಲ್‌ಗಳನ್ನು ನೇಮಕ ಮಾಡಿರುವುದು ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟಮೊದಲನೆಯದಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 82 ಸದಸ್ಯರ ಸಂಖ್ಯಾಬಲ ಹೊಂದಿದ್ದು, ಒಟ್ಟು 18 ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಪೈಕಿ 8 ಮಹಿಳಾ ಹಾಗೂ 10 ಪುರುಷ ಮಾರ್ಷಲ್‌ಗಳಿದ್ದಾರೆ. ಈ ಮಾರ್ಷಲ್‌ಗಳು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಡೆಯುವ ಗದ್ದಲಗಳ ನಿಯಂತ್ರಣದ ಕೆಲಸ ಮಾಡಲಿದ್ದಾರೆ. ಇವರಿಗೆ ಅಗತ್ಯ ತರಬೇತಿಗಳನ್ನು ನೀಡಲಾಗಿದ್ದು, ಮಾರ್ಷಲ್‌ಗಳ ಕಾರ್ಯವೈಖರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಪಾಲಿಕೆಯ ಹಿರಿಯ ಅಧಿಕಾರಿಗಳು ಮಾರ್ಷಲ್‌ಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸಿದ್ದಾರೆ.

ಮಾರ್ಷಲ್‌ಗಳ ಕಾರ್ಯ

ವಿಧಾನಮಂಡಲ ಅಧಿವೇಶನದಲ್ಲಿ ಸದಸ್ಯರು ಧರಣಿ ನಡೆಸುವಾಗ ಕೆಲವು ಪ್ರಸಂಗಗಳಲ್ಲಿ ಪ್ರತಿಭಟನೆಗಳು ಅತಿರೇಕಕ್ಕೆ ಹೋಗಿರುವ ನಿದರ್ಶನಗಳಿವೆ. ಸದಸ್ಯರ ವರ್ತನೆ ಮಿತಿಮೀರಿದಾಗ, ಸಭಾಧ್ಯಕ್ಷರ ಸೂಚನೆಯ ಮೇರೆಗೆ ಮಾರ್ಷಲ್‌ಗಳು ಸದಸ್ಯರನ್ನು ಸದನದಿಂದ ಹೊರಹಾಕುವ ಕೆಲಸ ಮಾಡುತ್ತಾರೆ. ಅಲ್ಲದೇ, ಸದಸ್ಯರಿಗೆ ಅಗತ್ಯವಿದ್ದಾಗ ನೀರು, ಕಡತಗಳನ್ನು ತಂದುಕೊಡುವುದು ಸೇರಿದಂತೆ ಇತರೆ ಕಾರ್ಯಗಳನ್ನೂ ಮಾರ್ಷಲ್‌ಗಳು ನಿರ್ವಹಿಸುತ್ತಾರೆ. ಇದೇ ಮಾದರಿಯಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿಯೂ ಗದ್ದಲಗಳು ಪದೇ ಪದೇ ಮರುಕಳಿಸುತ್ತಿದ್ದಾಗ, ಆಡಳಿತವು ಮಾರ್ಷಲ್‌ಗಳನ್ನು ನಿಯೋಜಿಸುವ ತೀರ್ಮಾನ ಕೈಗೊಂಡು ಅದನ್ನು ಅನುಷ್ಠಾನಗೊಳಿಸಿದೆ. ಈ ಮೂಲಕ, ರಾಜ್ಯದ ಇತರೆ ಪಾಲಿಕೆಗಳಲ್ಲಿಯೂ ಮಾರ್ಷಲ್‌ಗಳ ನೇಮಕಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಮಾದರಿಯಾಗಲಿದೆ.

ಸಾಮಾನ್ಯ ಸಭೆಯು ಸುಗಮವಾಗಿ ನಡೆಯಲು ಮಾರ್ಷಲ್‌ಗಳು ಅತ್ಯಗತ್ಯ. ಪಾಲಿಕೆ ಸದಸ್ಯರಿಗೆ ಕಲಾಪದ ವೇಳೆ ಅಗತ್ಯ ದಾಖಲೆಗಳನ್ನು ಪೂರೈಸುವುದು, ಗಲಾಟೆಗಳು ಸಂಭವಿಸಿದಾಗ ನಿಯಂತ್ರಿಸುವುದು, ಗಲಾಟೆ ಮಾಡುವ ಸದಸ್ಯರನ್ನು ಹೊರಗೆ ಹಾಕುವುದು ಸೇರಿದಂತೆ ಮೇಯರ್ ಮತ್ತು ಉಪ ಮೇಯರ್ ನೀಡುವ ಆದೇಶಗಳನ್ನು ಮಾರ್ಷಲ್‌ಗಳು ಪಾಲಿಸಲಿದ್ದಾರೆ.

ವಿಧಾನಮಂಡಲದಂತೆಯೇ ಬಿಳಿ ಉಡುಪು

ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಮಾರ್ಷಲ್‌ಗಳಿಗೆ ಬಿಳಿ ಉಡುಪಿನ ಸಮವಸ್ತ್ರ ನೀಡಲಾಗಿದೆ. ಇದೇ ಮಾದರಿಯಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾರ್ಷಲ್‌ಗಳಿಗೂ ಸಹ ಬಿಳಿ ಉಡುಪು ಸಮವಸ್ತ್ರ ಹಾಗೂ ನೀಲಿ ಟೋಪಿಯನ್ನು ನೀಡಲಾಗಿದೆ. ವಿಧಾನಮಂಡಲದಲ್ಲಿ ನೀಡುವ ಸಮವಸ್ತ್ರದ ಮಾದರಿಯಲ್ಲೇ ನೀಡಲು ಪಾಲಿಕೆ ನಿರ್ಧರಿಸಿ, ಬಿಳಿ ಉಡುಪಿನ ಸಮವಸ್ತ್ರವನ್ನು ವಿತರಿಸಿದೆ.

ಪಾಲಿಕೆ ಸಿಬ್ಬಂದಿಯೇ ಮಾರ್ಷಲ್‌ಗಳು

ವಿಧಾನಮಂಡಲದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ ಸಚಿವಾಲಯದ ಸಿಬ್ಬಂದಿ ಅಧಿವೇಶನದೊಳಗೆ ಕಾರ್ಯನಿರ್ವಹಿಸಿದರೆ, ಮಾರ್ಷಲ್‌ಗಳು ಹೊರಗೆ ಕಾರ್ಯ ನಿರ್ವಹಿಸುತ್ತಾರೆ. ವಿಧಾನಮಂಡಲದಲ್ಲಿ ನಿಯೋಜನೆಗೊಳ್ಳುವ ಮಾರ್ಷಲ್‌ಗಳು ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿದ್ದು, ಪೊಲೀಸ್ ಕಾನ್‌ಸ್ಟೆಬಲ್‌ನಿಂದ ಸಬ್‌ಇನ್ಸ್‌ಪೆಕ್ಟರ್ ಹಂತದವರೆಗಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಬೆಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನೇ ಮಾರ್ಷಲ್‌ಗಳಾಗಿ ನಿಯೋಜಿಸಲಾಗುತ್ತದೆ.

ಆದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ, ಪಾಲಿಕೆಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಿ ಮತ್ತು ಡಿ ಗ್ರೂಪ್ ಸಿಬ್ಬಂದಿಯನ್ನೇ ಮಾರ್ಷಲ್‌ಗಳಾಗಿ ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು 18 ಮಾರ್ಷಲ್‌ಗಳನ್ನು ನಿಯೋಜಿಸಲಾಗಿದ್ದು, ಅವರಿಗೆ ವಿಧಾನಮಂಡಲದ ಮಾರ್ಷಲ್‌ಗಳನ್ನು ಮಾದರಿಯಾಗಿಟ್ಟುಕೊಂಡು ಅಗತ್ಯ ತರಬೇತಿಯನ್ನು ನೀಡಲಾಗಿದೆ.

ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಸಭೆಗೆ ಅಗೌರವ ತೋರಿದ ಮೂವರು ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್ ಆದೇಶ ಹೊರಡಿಸಿದ್ದರು. ಇದನ್ನು ಖಂಡಿಸಿ ನಡೆದ ಪ್ರತಿಭಟನೆ ವಿಪರೀತಕ್ಕೆ ಹೋಗಿತ್ತು. ಈ ವೇಳೆ ಗದ್ದಲ ನಿಯಂತ್ರಣಕ್ಕೆ ಮಾರ್ಷಲ್‌ಗಳ ನಿಯೋಜನೆ ಸಹಕಾರಿಯಾಗಿತ್ತು.

ಮಾರ್ಷಲ್ ನೇಮಕಾತಿ ಕುರಿತು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ ಪಾಲಿಕೆಯ ಮೇಯರ್‌ ಜ್ಯೋತಿ ಪಾಟೀಲ, "ರಾಜ್ಯದ ಮಹಾನಗರ ಪಾಲಿಕೆಗಳ ಪೈಕಿ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಈ ಹೊಸ ಪ್ರಯೋಗ ಮಾಡಲಾಗಿದೆ. ಪ್ರತಿಪಕ್ಷದ ತೀವ್ರ ಗದ್ದಲದಿಂದಾಗಿ ವಿಧಾನಮಂಡಲ ಮಾದರಿಯಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲು ಚಿಂತನೆ ನಡೆಸಲಾಯಿತು. ಪಾಲಿಕೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ, ಪಾಲಿಕೆಯ ಸಿ ಮತ್ತು ಡಿ ಗ್ರೂಪ್ ಸಿಬ್ಬಂದಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ. ಮಾರ್ಷಲ್‌ಗಳು ಯಾವ ರೀತಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ವಿಡಿಯೋಗಳನ್ನು ತೋರಿಸಿ, ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗಿದೆ" ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ 'ದ ಫೆಡರಲ್​ ಕರ್ನಾಟಕ'ಕ್ಕೆ , "ಮಾರ್ಷಲ್‌ಗಳನ್ನು ನೇಮಿಸುವ ಯೋಚನೆ ಮೊದಲಿನಿಂದಲೂ ಇತ್ತು. ಸಾಮಾನ್ಯ ಸಭೆಯ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಇದು ಅನುಕೂಲಕರ. ಅವರಿಗಾಗಿ ವಿಶೇಷ ವಸ್ತ್ರ ಸಂಹಿತೆ ಮಾಡಲಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲದೆ, ಒತ್ತುವರಿ ತೆರವು, ರಸ್ತೆ ಅಗಲೀಕರಣದಂತಹ ಕಾರ್ಯಾಚರಣೆಗಳಿಗೂ ಅವರನ್ನು ಬಳಸಿಕೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೂ ನಿಯೋಜನೆಯಾಗುತ್ತಾರೆಯೇ?

ರಾಜ್ಯದಲ್ಲಿ ಅತಿ ದೊಡ್ಡ ಪಾಲಿಕೆಯಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದ ಬಳಿಕ, 198 ವಾರ್ಡ್‌ಗಳ ಸಂಖ್ಯೆ 358ಕ್ಕೂ ಹೆಚ್ಚಾಗಲಿದೆ. ಆಗ ಸದಸ್ಯರ ಸಂಖ್ಯೆ ದ್ವಿಗುಣಗೊಳ್ಳುವುದರಿಂದ, ಸಭೆಗಳಲ್ಲಿ ಗದ್ದಲ ಸಹಜವಾಗಿಯೇ ಹೆಚ್ಚಾಗಬಹುದು. ಸದಸ್ಯರಿಗೆ ಅಗತ್ಯ ದಾಖಲೆಗಳನ್ನು ಪೂರೈಸಲು, ನೀರು ಒದಗಿಸಲು ಮತ್ತು ಗದ್ದಲ ನಿಯಂತ್ರಿಸಲು ಸಿಬ್ಬಂದಿಯ ಅಗತ್ಯವಿರುತ್ತದೆ. ಹೀಗಾಗಿ, ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರವೂ ಮಾರ್ಷಲ್‌ಗಳನ್ನು ನಿಯೋಜಿಸಿಕೊಳ್ಳುವ ಅಗತ್ಯತೆ ಎದುರಾಗಬಹುದು.

ಜಿಬಿಎಯಲ್ಲಿ ಪೊಲೀಸರನ್ನು ಮಾರ್ಷಲ್‌ಗಳನ್ನಾಗಿ ನಿಯೋಜಿಸಿದರೆ ಹೆಚ್ಚುವರಿ ಭತ್ಯೆ ನೀಡಬೇಕಾಗಿ, ಆರ್ಥಿಕ ಹೊರೆಯಾಗಬಹುದು. ಇದನ್ನು ತಪ್ಪಿಸಲು, ಹುಬ್ಬಳ್ಳಿ-ಧಾರವಾಡ ಪಾಲಿಕೆಯಂತೆ ತನ್ನದೇ ಸಿಬ್ಬಂದಿಯನ್ನು ನಿಯೋಜಿಸುವುದು ಸೂಕ್ತ. ಆದರೆ, ಚುನಾವಣೆ ನಡೆದು, ಹೊಸ ಸದಸ್ಯರು ಆಯ್ಕೆಯಾದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದೆ.

Read More
Next Story