ಆಮೆಗತಿಯ ಬೆಂಗಳೂರು ಸಬ್‌-ಅರ್ಬನ್ ಯೋಜನೆಗೆ ಬಂತೇ ಮತ್ತೆ ವೇಗ?  ಮೊದಲ ನಿಲ್ದಾಣ ಕಾಮಗಾರಿ  ಕಾರ್ಯಾರಂಭ
x

ಆಮೆಗತಿಯ ಬೆಂಗಳೂರು ಸಬ್‌-ಅರ್ಬನ್ ಯೋಜನೆಗೆ ಬಂತೇ ಮತ್ತೆ ವೇಗ? ಮೊದಲ ನಿಲ್ದಾಣ ಕಾಮಗಾರಿ ಕಾರ್ಯಾರಂಭ

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮಾರ್ಗದ ಕಸ್ತೂರಿನಗರ ನಿಲ್ದಾಣ ತಲೆ ಎತ್ತುತ್ತಿದೆ. ಬಿಡಬ್ಲ್ಯೂಎಸ್‌ಎಸ್‌ಬಿ ವಾಟರ್‌ ಟ್ಯಾಂಕ್‌ ಬಳಿ ನಿರ್ಮಾಣವಾಗುತ್ತಿದೆ. ಮಲ್ಲಿಗೆ ಮಾರ್ಗದಲ್ಲಿ12 ನಿಲ್ದಾಣಗಳಿರಲಿವೆ.


ವಿಶ್ವದ ಗಮನಸೆಳೆದಿರುವ ಸಿಲಿಕಾನ್‌ಸಿಟಿ ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ದೇಶ-ವಿದೇಶದಿಂದ ವಲಸೆ ಬರುತ್ತಿದ್ದು, ಜನಸಂಖ್ಯೆಯ ಜತೆಜತೆಗೆ ವಾಹನಗಳ ಸಂಖ್ಯೆಯು ಅಧಿಕಗೊಳ್ಳುತ್ತಿದೆ. ಪರಿಣಾಮ ವಾಹನದಟ್ಟಣೆಯು ಅಧಿಕಗೊಳ್ಳುತ್ತಿದ್ದು, ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರವು ನಮ್ಮ ಮೆಟ್ರೋ ಜತೆಗೆ ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು (ಸಬರ್ಬನ್‌ ರೈಲ್ವೆ ಯೋಜನೆ-Bengaluru Suburban Railway) ಕೈಗೆತ್ತಿಕೊಂಡಿದೆ. ಮೆಟ್ರೋ ಯೋಜನೆ ವೇಗವಾಗಿ ಸಾಗುತ್ತಿದೆಯಾದರೂ ಉಪನಗರ ಯೋಜನೆ ಇದೀಗ ತಲೆ ಎತ್ತುತ್ತಿದೆ!

ಸಬ್‌-ಅರ್ಬನ್ ರೈಲ್ವೆ ಯೋಜನೆಯು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜತೆಗೆ ಪ್ರಯಾಣದ ಸಮಯವನ್ನು ಕಡಿತಗೊಳಿಸುವುದು ಮತ್ತು ಅಗ್ಗದ ಸಾರಿಗೆಯನ್ನು ಒದಗಿಸುವುದಾಗಿದೆ. ಯೋಜನೆಯ ಮೊದಲ ರೈಲು ನಿಲ್ದಾಣ ಕಾಮಗಾರಿ ಪ್ರಾರಂಭವಾಗಿದ್ದು, ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ ಮಲ್ಲಿಗೆ ಮಾರ್ಗದಲ್ಲಿ ಕಸ್ತೂರಿನಗರ ನಿಲ್ದಾಣ ತಲೆ ಎತ್ತುತ್ತಿದೆ. ಬೈಯಪ್ಪನಹಳ್ಳಿ ಮತ್ತು ಸೇವಾನಗರ ನಿಲ್ದಾಣಗಳ ನಡುವೆ ಇರುವ ಬಿಡಬ್ಲ್ಯೂಎಸ್‌ಎಸ್‌ಬಿ ವಾಟರ್‌ ಟ್ಯಾಂಕ್‌ ಬಳಿ ನಿರ್ಮಾಣವಾಗುತ್ತಿದೆ.

ಎಲೆವೆಟೆಡ್‌ (ಎತ್ತರಿಸಿದ) ಮಾದರಿ ನಿಲ್ದಾಣ ಇದಾಗಿದ್ದು, ಮೆಟ್ರೋ ಮಾದರಿಯಲ್ಲೆ ಎರಡನೇ ಹಂತದಲ್ಲಿ ಪ್ಲಾಟ್‌ಫಾರ್ಮ್‌, ಮಳಿಗೆಗಳು ಇರಲಿವೆ. ರೈಲ್ವೆ ಟ್ರ್ಯಾಕ್‌ ನೆಲಮಟ್ಟದಲ್ಲಿ ಇರಲಿದೆ. ನಿಲ್ದಾಣದ ಹೊರಭಾಗದಲ್ಲಿ ಪಾರ್ಕಿಂಗ್‌ ಪ್ರದೇಶ ಇರಲಿದ್ದು, ಇದಕ್ಕೆ ಫುಟ್ ಓವರ್‌ ಬ್ರಿಡ್ಜ್‌ ಮೂಲಕ ಸಂಪರ್ಕ ಇರಲಿದೆ. ಎಲ್ ಆ್ಯಂಡ್ ಟಿ ಕಂಪನಿ ಗುತ್ತಿಗೆಯಿಂದ ಹೊರ ನಡೆದ ಕಾರಣ ಹೈದರಾಬಾದ್ ಮೂಲದ ನಾಗಾರ್ಜುನ ಕನ್ ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ಮುಂದೆ ಬಂದಿದ್ದು, ಕಸ್ತೂರಿ ನಗರ ನಿಲ್ದಾಣ ಕಾಮಗಾರಿಯನ್ನು ಪ್ರಾರಂಭಿಸಿದೆ. ರೈಲ್ವೆ ಇನ್ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಂಪನಿ ಲಿಮಿಟೆಡ್‌ (ಕೆ-ರೈಡ್‌) ಯೋಜನೆಯ ಮೇಲುಸ್ತುವಾರಿ ವಹಿಸಿಕೊಂಡಿದೆ. ಯೋಜನೆಯು ಸಂಪಿಗೆ, ಮಲ್ಲಿಗೆ, ಪಾರಿಜಾತ ಮತ್ತು ಕನಕ ಹೆಸರಿನಲ್ಲಿ ನಾಲ್ಕು ಕಾರಿಡಾರ್‌ಗಳನ್ನು ಒಳಗೊಂಡಿದೆ. ರೈಲು ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ.

501 ಕೋಟಿ ರೂ. ಒಪ್ಪಂದ

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ನಡುವಿನ ಮಲ್ಲಿಗೆ ಮಾರ್ಗದಲ್ಲಿ 12 ನಿಲ್ದಾಣಗಳ ನಿರ್ಮಾಣಕ್ಕೆ ಎರಡು ಹಂತದಲ್ಲಿ ಕೆ-ರೈಡ್‌ ಟೆಂಡರ್‌ ಕರೆದಿದೆ. ಎನ್‌ಸಿಸಿಯೊಂದಿಗೆ ಎಂಟು ರೈಲು ನಿಲ್ದಾಣಕ್ಕೆ 501 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆನ್ನಿಗಾನಹಳ್ಳಿ , ಕಸ್ತೂರಿ ನಗರ, ಸೇವಾನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ ಮತ್ತು ಮತ್ತಿಕೆರೆ ನಿಲ್ದಾಣಗಳನ್ನು ಎನ್‌ಸಿಸಿ ಕಂಪನಿ ನಿರ್ಮಾಣ ಮಾಡಲಿದೆ. 24 ತಿಂಗಳಲ್ಲಿ ಕಾಮಗಾರಿ ಮುಗಿಸುವ ಒಪ್ಪಂದವಾಗಿದೆ. ಉಳಿದಂತೆ ಎರಡನೇ ಹಂತದಲ್ಲಿ ಯಶವಂತಪುರ, ಶೆಟ್ಟಿಹಳ್ಳಿ, ಮೈದರಹಳ್ಳಿ ಮತ್ತು ಚಿಕ್ಕಬಾಣಾವರ ನಿಲ್ದಾಣ ತಲೆ ಎತ್ತಲಿವೆ ಎಂದು ಕೆ-ರೈಡ್‌ ಮೂಲಗಳು ಹೇಳಿವೆ.

2019ರ ವಿಸ್ತೃತ ಯೋಜನಾ ವರದಿ ಪ್ರಕಾರ 9 ಬೋಗಿಯ ರೈಲು ನಿಲುಗಡೆ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಲ್ದಾಣದ ಉದ್ದ ಇರಲಿದೆ. ಆದರೆ, ಉಪನಗರ ರೈಲು ಯೋಜನೆಯಲ್ಲಿ ರೈಲುಗಳು ಎಷ್ಟು ಬೋಗಿ ಹೊಂದಿರಬೇಕು ಎಂಬುದು ಈವರೆಗೆ ತೀರ್ಮಾನವಾಗಿಲ್ಲ. ಜತೆಗೆ ವಂದೇ ಭಾರತ್‌ ಮಾದರಿಯಲ್ಲಿ ಇರಬೇಕೆ? ಅಥವಾ ಮೆಟ್ರೋ ರೈಲಿನ ಮಾದರಿಯಲ್ಲಿ ಇರಬೇಕೆ ಎಂಬುದೂ ಸಹ ತೀರ್ಮಾನವಾಗಿಲ್ಲ. ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧರಿಸಲಾಗುತ್ತದೆ ಎಂಬುದು ಕೆ-ರೈಡ್‌ನ ಹೇಳಿಕೆಯಾಗಿದೆ.

ನಿಲ್ದಾಣ ಪರಿಸರ ಸ್ನೇಹಿ

ಉಪನಗರ ರೈಲು ನಿಲ್ದಾಣಗಳು ಪರಿಸರ ಸ್ನೇಹಿಯಾಗಿರಲಿವೆ. ಸೌರಶಕ್ತಿ ಅಳವಡಿಕೆ, ಮಳೆನೀರು ಕೊಯ್ಲು ತಂತ್ರಜ್ಞಾನ ಅಳವಡಿಕೆ ಆಗಲಿದೆ. ಈ ಮೂಲಕ ಪರಿಸರ ಸ್ನೇಹಿಯಾಗಿ ಉಪನಗರ ರೈಲ್ವೆ ನಿಲ್ದಾಣಗಳು ನಿರ್ಮಾಣ ಆಗಲಿವೆ. ವಿದ್ಯುತ್ ಬಳಕೆ ಸ್ವಾವಲಂಬನೆ ಸಾಧಿಸಲು ನಿಲ್ದಾಣಗಳ ಮೇಲೆ ಸೋಲಾರ್ ಪ್ಯಾನಲ್‌ ಅಳವಡಿಕೆ ಮಾಡಲಾಗುವುದು. ಎಲಿವೇಟೆಡ್ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಫುಟ್‌-ಓವರ್‌ ಬ್ರಿಡ್ಜ್‌ ಮೇಲೆಯೂ ಸೋಲಾರ್ ರೂಫ್ ಟಾಪ್ ಅಳವಡಿಸಲು ಯೋಜಿಸಲಾಗಿದೆ. ಪ್ರತಿ ನಿಲ್ದಾಣದ ಶೇ.20-30ರಷ್ಟು ವಿದ್ಯುತ್ ಉಳಿತಾಯಕ್ಕೆ ಕೆ-ರೈಡ್‌ ಕ್ರಮ ವಹಿಸಿದೆ.

ಸಬರ್ಬನ್‌ ರೈಲ್ವೆ ಯೋಜನೆಯ ಇತಿಹಾಸ

ಬೆಂಗಳೂರು ಉಪನಗರ ರೈಲ್ವೆ 1983 ರಲ್ಲಿ ಮೊದಲ ಪ್ರಸ್ತಾವನೆ ಸಲ್ಲಿಸಲಾಯಿತು. ಬಳಿಕ ಹಲವು ಪ್ರಸ್ತಾವನೆಗಳನ್ನು ಸಲ್ಲಿಕೆ ಮಾಡಲಾಯಿತು. 2019 ರ ರೈಲ್ವೆ ಬಜೆಟ್‌ನಲ್ಲಿ 161 ಕಿಮೀ ಉದ್ದದ ಪರಿಷ್ಕೃತ ಪ್ರಸ್ತಾವನೆಯನ್ನು ಅನುಮೋದಿಸುವವರೆಗೆ ಯಾವುದೇ ಪ್ರಯೋಜನವಾಗಲಿಲ್ಲ. ಈ ಜಾಲವು ಒಟ್ಟು ನಾಲ್ಕು ಮಾರ್ಗಗಳನ್ನು ಹೊಂದಿದ್ದು, ಅವುಗಳಲ್ಲಿ ಎರಡು ಡಿಸೆಂಬರ್ 2026 ರ ವೇಳೆಗೆ ಆರಂಭಿಸುವ ಚಿಂತನೆ ನಡೆಸಲಾಗಿದೆ. 1983 ರಲ್ಲಿ ನಗರಕ್ಕೆ ಉಪನಗರ ರೈಲು ವ್ಯವಸ್ಥೆಯನ್ನು ಮೊದಲು ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಮತ್ತು ಬೆಂಗಳೂರು ಪ್ರತಿನಿಧಿಸುವ ಸಂಸತ್ ಸದಸ್ಯರಿಂದ ಪ್ರಸ್ತಾಪಿಸಲಾಯಿತು. ಮೂರು ಉಪನಗರ ರೈಲು ಮಾರ್ಗಗಳು ಅವರ ಶಿಫಾರಸ್ಸಾಗಿತ್ತು. ಈ ಪ್ಯಾಕೇಜ್‌ಗೆ 25 ವರ್ಷಗಳ ಅವಧಿಯಲ್ಲಿ 650 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಅನುಮೋದನೆ

2013ರ ಜು.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಿತ್ತು. ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. 8,759 ಕೋಟಿ ರೂ.ವೆಚ್ಚದ ಈ ಯೋಜನೆಯನ್ನು ಕಾರ್ಯಗತಗೊಳಿಸಲು ವಿಶೇಷ ಉದ್ದೇಶದ ವಾಹನ ಬೆಂಗಳೂರು ಉಪನಗರ ರೈಲು ನಿಗಮ ಲಿಮಿಟೆಡ್ (ಬಿಎಸ್‌ಆರ್‌ಸಿಎಲ್‌) ಸ್ಥಾಪನೆಯನ್ನು ಬಜೆಟ್ ಪ್ರಸ್ತಾಪಿಸಿತು. 2016-17 ರ ರೈಲ್ವೆ ಬಜೆಟ್‌ನಲ್ಲಿ, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಬೆಂಗಳೂರಿಗೆ 9,000 ಕೋಟಿ ಉಪನಗರ ರೈಲು ಜಾಲಕ್ಕಾಗಿ ಕರ್ನಾಟಕ ಸರ್ಕಾರದೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದರು. ಆದರೆ ಯಾವುದೇ ಹಣವನ್ನು ಹಂಚಿಕೆ ಮಾಡಲಿಲ್ಲ. 2020 ರಲ್ಲಿ ಭೂಸಮೀಕ್ಷೆ, ಸಿಬ್ಬಂದಿ ನೇಮಕ ಇತ್ಯಾದಿಗಳಿಗೆ ಟೆಂಡರ್‌ಗಳನ್ನು ಕರೆಯುವ ಮೂಲಕ ಉಪನಗರ ಯೋಜನೆಯನ್ನು ಪ್ರಾರಂಭಿಸಲಾಯಿತು. ರಾಜ್ಯ ಸರ್ಕಾರದ ಸಲಹೆಯ ಮೇರೆಗೆ ಮೊದಲು ಮಲ್ಲಿಗೆ ಮತ್ತು ಕನಕವನ್ನು ಕೈಗೆತ್ತಿಕೊಳ್ಳಲಾಗಿದೆ. 2022 ರ ಜೂ.20 ರಂದು ಪ್ರಧಾನಿ ನರೇಂದ್ರ ಮೋದಿ ಯೋಜನೆಯ ನಿರ್ಮಾಣದ ಆರಂಭಕ್ಕೆ ಅಡಿಪಾಯ ಹಾಕಿದ್ದರು.

ಯೋಜನೆಯಲ್ಲಿ ಮಾಜಿ ಸಚಿವ ಅನಂತಕುಮಾರ್‌ ಪಾತ್ರ

ಬೆಂಗಳೂರಿನ ದಟ್ಟ ಸಂಚಾರ ಸಮಸ್ಯೆ ನಿವಾರಣೆಗೆ ಉಪನಗರ ರೈಲು ಯೋಜನೆಗೆ ಕೇಂದ್ರದ ಮಾಜಿ ಸಚಿವ ಅನಂತ್‌ಕುಮಾರ್‌ ಜೀವ ತುಂಬಿದ ಪ್ರಮುಖ ನಾಯಕರಾಗಿದ್ದಾರೆ. ಸುಲಭ ಸಂಚಾರ ವ್ಯವಸ್ಥೆ ಒದಗಿಸುವ ಉದ್ದೇಶದಿಂದ 1983ರಲ್ಲಿ ಮೊದಲ ಬಾರಿ ಈ ಯೋಜನೆ ಪ್ರಸ್ತಾಪವಾಯಿತು. ಆದರೆ ಹಲವು ವರ್ಷಗಳ ಕಾಲ ಅದು ಕಾಗದದ ಮೇಲೆಯೇ ಉಳಿಯಿತು. 1996ರಲ್ಲಿಅನಂತಕುಮಾರ್ ಯೋಜನೆಯನ್ನು ಮತ್ತೆ ಚರ್ಚೆಯ ಕೇಂದ್ರಬಿಂದುವಿಗೆ ತಂದರು. ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ನಡುವೆ ಜಂಟಿ ಸಂಸ್ಥೆ ರಚನೆಗೆ ಮುಂದಾದರು. ಇದರ ಪ್ರಯತ್ನವಾಗಿ ಕರ್ನಾಟಕ ರಾಜ್ಯ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) ಸ್ಥಾಪನೆಯಾಯಿತು. ಇದೇ ಸಂಸ್ಥೆ ಉಪನಗರ ರೈಲು ಯೋಜನೆಯನ್ನು ನೇರವಾಗಿ ಕಾರ್ಯಗತಗೊಳಿಸುತ್ತಿದೆ.

ಅನಂತಕುಮಾರ್‌ ಪ್ರಯತ್ನದಿಂದಾಗಿ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆಯಿತು. ಬಜೆಟ್‌ನಲ್ಲಿ ಮೊದಲ ಬಾರಿಗೆ ಉಪನಗರ ರೈಲು ಯೋಜನೆಯ ಉಲ್ಲೇಖವಾಗಿದ್ದು, ಅವರ ಮುಂದಾಳತ್ವದ ಫಲವಾಗಿದೆ. ಯೋಜನೆಯನ್ನು ಆರಂಭದಲ್ಲಿ 2026 ರ ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಯೋಜನೆಯಲ್ಲಿನ ವಿಳಂಬಕ್ಕೆ ಹಲವಾರು ಅಂಶಗಳು ಕಾರಣವಾಗಿದ್ದು, ಪೂರ್ಣಗೊಳ್ಳುವ ಸಮಯವನ್ನು 2027 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.

Read More
Next Story