ಕಿದ್ವಾಯಿ ಆಸ್ಪತ್ರೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರೋಟಾನ್ ಚಿಕಿತ್ಸಾ ಸೌಲಭ್ಯ ಸ್ಥಾಪನೆ
x

ಕಿದ್ವಾಯಿ ಆಸ್ಪತ್ರೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರೋಟಾನ್ ಚಿಕಿತ್ಸಾ ಸೌಲಭ್ಯ ಸ್ಥಾಪನೆ

ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಪ್ರೋಟಾನ್‌ ಚಿಕಿತ್ಸಾ ಕೇಂದ್ರ ಆರಂಭಿಸಲು 500 ಕೋಟಿ ರೂಪಾಯಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಕೆ.


ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಾಧುನಿಕತೆ ಮತ್ತು ವಿಶೇಷ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯಲ್ಲಿ (ಕೆಎಂಐಒ) ದೇಶದಲ್ಲೇ ಮೊದಲ ಬಾರಿಗೆ ಪ್ರೋಟಾನ್ ಚಿಕಿತ್ಸಾ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್‌ ಅವರ ದೂರದೃಷ್ಟಿಯೊಂದಿಗೆ ಈ ಚಿಕಿತ್ಸಾ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರೊಂದಿಗಿನ ಸಭೆಯಲ್ಲಿ ಈ ಸುಧಾರಿತ ಚಿಕಿತ್ಸಾ ಸೌಲಭ್ಯವನ್ನು ಕಿದ್ವಾಯಿ ಸಂಸ್ಥೆಯಲ್ಲಿ ಸ್ಥಾಪಿಸಲು ಕೇಂದ್ರದಿಂದ 500 ಕೋಟಿ ರೂಪಾಯಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ದೇಶದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾದ ಕೆಎಂಐಒದಲ್ಲಿ ವಾರ್ಷಿಕವಾಗಿ ೨೧ ಸಾವಿರಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದೆ. ವಿಕಿರಣ ಚಿಕಿತ್ಸೆಯಲ್ಲಿ ಗೆಡ್ಡೆಯ ಅಕ್ಕಪಕ್ಕದ ಭಾಗಗಳಿಗೂ ಪರಿಣಾಮವಾಗುವ ಸಾಧ್ಯತೆ ಇರುತ್ತದೆ. ಆದರೆ ಸುಧಾರಿತ ರೂಪವಾದ ಪ್ರೋಟಾನ್ ಚಿಕಿತ್ಸೆಯು ಗೆಡ್ಡೆಯ ಬಳಿ ನಿರ್ಣಾಯಕ ಅಂಗಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಗಾಮಾ ಕಿರಣಗಳು ಅಥವಾ ಎಕ್ಸ್-ಕಿರಣಗಳನ್ನು ಬಳಸುವುದು ಸಾಂಪ್ರದಾಯಿಕ ರೇಡಿಯೊ ಥೆರಪಿಗಿಂತ ಭಿನ್ನವಾಗಿರುತ್ತದೆ. ಪ್ರೋಟಾನ್ ಚಿಕಿತ್ಸೆಯು ನಿಖರವಾಗಿ ಸಮಸ್ಯೆ ಇರುವ ಜಾಗಕ್ಕೆ ಮಾತ್ರ ಚಿಕಿತ್ಸೆ ಒದಗಿಸುತ್ತದೆ. ಇದರಿಂದ ಹಾನಿ ಪ್ರಮಾಣ ಕಡಿಮೆ ಎಂದು ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಸ್ತಾವನೆಯು ಮಕ್ಕಳ ಕ್ಯಾನ್ಸರ್‌ ಪ್ರಕರಣಗಳು, ವಿಶೇಷವಾಗಿ NF-1 ಮತ್ತು ರೆಟಿನೋಬ್ಲಾಸ್ಟೊಮಾದಂತಹ ಆನುವಂಶಿಕ ಪ್ರಕಾರಗಳು ಮತ್ತು ಕಣ್ಣು, ಕಕ್ಷೆ, ತಲೆಬುರುಡೆಯ ಬುಡ, ಬೆನ್ನುಮೂಳೆ, ಯಕೃತ್ತು, ಸ್ತನ, ತಲೆ ಸೇರಿದಂತೆ ಇತರೆ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ. ಮರು-ವಿಕಿರಣ ಪ್ರಕರಣಗಳು ಮತ್ತು ತೆಗೆದುಹಾಕಲಾಗದ ಗೆಡ್ಡೆಗಳ ಪ್ರಕರಣಗಳಿಗೂ ಬಳಸಬಹುದಾಗಿದೆ. ಇದರಿಂದ ವಾಸಿಯಾಗುವ ಭರವಸೆ ಹೆಚ್ಚಾಗಿರುತ್ತದೆ ಎಂದು ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ.


Read More
Next Story