ದೇಶದಲ್ಲೇ ಮೊದಲು: ಕರ್ನಾಟಕದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ
x

ದೇಶದಲ್ಲೇ ಮೊದಲು: ಕರ್ನಾಟಕದಲ್ಲಿ 'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮಕ್ಕೆ ಚಾಲನೆ

ಸಾರ್ವಜನಿಕರು ಪೊಲೀಸರನ್ನು ಸಹೋದರತ್ವದ ಭಾವನೆಯಿಂದ ನೋಡಬೇಕು. ಈ ನಿಟ್ಟಿನಲ್ಲಿ ನಾವೇ ಜನರ ಮನೆ ಬಾಗಿಲಿಗೆ ಹೋಗಿ, ಅವರ ಕಷ್ಟಗಳನ್ನು ಆಲಿಸಿ ಪರಿಹರಿಸಿದರೆ ಉತ್ತಮ ಅಭಿಪ್ರಾಯ ಮೂಡುತ್ತದೆ ಎಂದು ಗೃಹ ಸಚಿವರು ಹೇಳಿದರು.


ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ರಾಜ್ಯಾದ್ಯಂತ 'ಮನೆ-ಮನೆಗೆ ಪೊಲೀಸ್' ಎಂಬ ವಿಶಿಷ್ಟ ಕಾರ್ಯಕ್ರಮಕ್ಕೆ ಶುಕ್ರವಾರ ಬೆಂಗಳೂರಿನ ಗೋವಿಂದರಾಜನಗರದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಚಾಲನೆ ನೀಡಿದರು. ಈ ಕಾರ್ಯಕ್ರಮದ ಯಶಸ್ಸು ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಾತನಾಡಿ, "ನಮ್ಮ ಪೊಲೀಸರು ಜನಸ್ನೇಹಿಯಾಗಬೇಕು. ಸಾರ್ವಜನಿಕರು ಪೊಲೀಸರನ್ನು ಸಹೋದರತ್ವದ ಭಾವನೆಯಿಂದ ನೋಡಬೇಕು. ಈ ನಿಟ್ಟಿನಲ್ಲಿ ನಾವೇ ಜನರ ಮನೆ ಬಾಗಿಲಿಗೆ ಹೋಗಿ, ಅವರ ಕಷ್ಟಗಳನ್ನು ಆಲಿಸಿ ಪರಿಹರಿಸಿದರೆ ಉತ್ತಮ ಅಭಿಪ್ರಾಯ ಮೂಡುತ್ತದೆ" ಎಂದರು.

ಪೊಲೀಸರು ತಮ್ಮ ದಿನನಿತ್ಯದ ಬೀಟ್ ಸಂದರ್ಭದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ಯಾರು ಬಂದಿದ್ದಾರೆ, ಏನು ಕೆಲಸ ಮಾಡುತ್ತಾರೆ, ಯಾವ ಸಮಸ್ಯೆಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಈ ಎಲ್ಲಾ ಡೇಟಾವನ್ನು ಬೆಂಗಳೂರು ಪೊಲೀಸರು ನಿರ್ವಹಿಸಲಿದ್ದಾರೆ. ನೆರೆಹೊರೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು, ಮಕ್ಕಳಿಗೆ ತೊಂದರೆ ಅಥವಾ ಡ್ರಗ್ಸ್ ಚಟುವಟಿಕೆಗಳ ಬಗ್ಗೆ ಜನರು ಪೊಲೀಸರೊಂದಿಗೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳಬಹುದು. ಈ ಎಲ್ಲಾ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗುವುದು ಮತ್ತು ಬೀಟ್ ಸಿಬ್ಬಂದಿಗಳಿಗೆ ಟ್ಯಾಬ್‌ಗಳನ್ನು ನೀಡಲಾಗುವುದು. ಇದು ಜನಪ್ರತಿನಿಧಿಗಳು, ಉದ್ಯಮಿಗಳು, ಸಾಹಿತಿಗಳಂತಹ 'ಸಾಫ್ಟ್ ಟಾರ್ಗೆಟ್'ಗಳ ಬಗ್ಗೆ ನಿಗಾವಹಿಸಲು ಸಹ ಸಹಾಯಕವಾಗಲಿದೆ ಎಂದು ಪರಮೇಶ್ವರ ತಿಳಿಸಿದರು.

ಟೋಯಿಂಗ್​ ಜಾರಿ ಖಚಿತ

ವಾಹನ ನಿಲುಗಡೆ ಸಮಸ್ಯೆ ಕುರಿತು ಮಾತನಾಡಿದ ಗೃಹ ಸಚಿವರು, "ನಮ್ಮ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪ್ರತಿನಿತ್ಯ ಗಲಾಟೆಗಳಾಗುತ್ತಿವೆ. ಇದನ್ನು ನಿಯಂತ್ರಿಸಲು ಟೋಯಿಂಗ್ ವ್ಯವಸ್ಥೆಯನ್ನು ಮರುಜಾರಿಗೊಳಿಸಲಾಗುವುದು. ಪೊಲೀಸ್ ಸಿಬ್ಬಂದಿಗಳೇ ಟೋಯಿಂಗ್ ಕಾರ್ಯ ನಿರ್ವಹಿಸಲಿದ್ದಾರೆ. ಟೋಯಿಂಗ್‌ಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಹೊಸ ವಾಹನಗಳನ್ನು ನೀಡುವುದಾಗಿ ತಿಳಿಸಿದ್ದಾರೆ" ಎಂದು ಮಾಹಿತಿ ನೀಡಿದರು.

ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಹೇಳಿದ ಸಚಿವರು, ಮಹಿಳೆಯರು ತೊಂದರೆಯಲ್ಲಿದ್ದಾಗ ಪೊಲೀಸರು ಕೂಡಲೇ ಸ್ಪಂದಿಸುತ್ತಿದ್ದಾರೆ. ಬೆಂಗಳೂರನ್ನು ಮಹಿಳೆಯರಿಗೆ ಸುರಕ್ಷಿತ ನಗರವನ್ನಾಗಿ ಮಾಡುತ್ತೇವೆ. ನಿರ್ಭಯಾ ಯೋಜನೆಯಡಿ ನಗರದಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 50 ಸೇಫ್ ಐ ಲ್ಯಾಂಡ್‌ಗಳನ್ನು ಸ್ಥಾಪಿಸಲಾಗಿದೆ. "ಬೆಂಗಳೂರನ್ನು ಡ್ರಗ್ ಮುಕ್ತ ನಗರವನ್ನಾಗಿ ಮಾಡುತ್ತೇವೆ" ಎಂದು ಅವರು ಘೋಷಿಸಿದರು. ತಮ್ಮ ಮಕ್ಕಳು ಮಾದಕದ್ರವ್ಯ ಬಳಕೆ ಸೇರಿದಂತೆ ದುಶ್ಚಟಗಳಿಗೆ ಸಿಲುಕಿದ್ದರೆ, ಮನೆಗಳಿಗೆ ಪೊಲೀಸರು ಬಂದಾಗ ಇಂತಹ ಸಮಸ್ಯೆಗಳನ್ನು ಅವರೊಂದಿಗೆ ಹಂಚಿಕೊಳ್ಳುವಂತೆ ಪರಮೇಶ್ವರ ಸಾರ್ವಜನಿಕರಿಗೆ ಕರೆ ನೀಡಿದರು.

'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮದ ಕುರಿತು ಗೃಹ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲವು ಜಿಲ್ಲೆಗಳ ಎಸ್‌ಪಿ ಹಾಗೂ ಪೊಲೀಸ್ ಕಮಿಷನರ್‌ಗಳೊಂದಿಗೆ ಸಂವಾದ ನಡೆಸಿ ಕಾರ್ಯಕ್ರಮದ ಪ್ರಗತಿ ಮತ್ತು ಸವಾಲುಗಳ ಬಗ್ಗೆ ಮಾಹಿತಿ ಪಡೆದರು.

ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಪಿ ಡಾ. ಅರುಣ್ ಮಾತನಾಡಿ, ತಮ್ಮ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಹೆಚ್ಚು ಅನುಕೂಲಕರವಾಗಿದೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಸಮನ್ವಯತೆ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು. ಶಿವಮೊಗ್ಗ ಜಿಲ್ಲಾ ಎಸ್‌ಪಿ ಮಿಥುನ್ ಅವರು, ತಮ್ಮ ಜಿಲ್ಲೆಯಲ್ಲಿ 478 ಬೀಟ್‌ಗಳಿವೆ. ಆರಂಭದಲ್ಲಿ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಆತಂಕವಿತ್ತು, ಆದರೆ ಈಗ ಅದು ನಿವಾರಣೆಯಾಗಿದೆ. ಮನೆಗಳಿಗೆ ಭೇಟಿ ನೀಡಿದಾಗ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಸೈಬರ್ ಕ್ರೈಂ, ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಇದು ಸಹಕಾರಿಯಾಗಿದೆ ಎಂದರು. ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ಎಸ್.ಡಿ. ಶರಣಪ್ಪ ಅವರು, ಜನರೊಂದಿಗೆ ಸಮನ್ವಯತೆ ಸಾಧಿಸಲು ಇದು ಉತ್ತಮ ಕಾರ್ಯಕ್ರಮ. ಸಮಾಜದಲ್ಲಿ ಪೊಲೀಸರ ಬಗ್ಗೆ ಇರುವ ಅಭಿಪ್ರಾಯವನ್ನು ಉತ್ತಮಗೊಳಿಸುತ್ತೇವೆ. ಈ ಜವಾಬ್ದಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಂವಾದದ ನಂತರ ಗೃಹ ಸಚಿವರು, "ನಿಗದಿತ ಸಮಯದಲ್ಲಿ ಕೆಲಸ ಮುಗಿಸಬೇಕು. ಎಲ್ಲಾ ಮನೆಗಳ ಡೇಟಾ ನಿಮ್ಮ ಬಳಿ ಇರಬೇಕು. ನಾನು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದಾಗ ಈ ಎಲ್ಲಾ ಮಾಹಿತಿ ಲಭ್ಯವಿರಬೇಕು. ಬೇರೆ ರಾಜ್ಯಗಳ ಪೊಲೀಸರಿಗೆ ಮಾದರಿಯಾಗಬೇಕು" ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಶಾಸಕರಾದ ಪ್ರಿಯಕೃಷ್ಣ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ, ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Read More
Next Story