ಮಕ್ಕಳ ಹಕ್ಕುಗಳ ಮೊದಲ ಸೂಚ್ಯಂಕ| ಬೆಂಗಳೂರು ಸುರಕ್ಷಿತವಲ್ಲ! ಅಪೌಷ್ಟಿಕತೆ ನಿವಾರಣೆಯಲ್ಲಿ ಹಿಂದುಳಿದ ಕರ್ನಾಟಕ !!
x

ಮಕ್ಕಳ ಹಕ್ಕುಗಳ ಮೊದಲ ಸೂಚ್ಯಂಕ| ಬೆಂಗಳೂರು ಸುರಕ್ಷಿತವಲ್ಲ! ಅಪೌಷ್ಟಿಕತೆ ನಿವಾರಣೆಯಲ್ಲಿ ಹಿಂದುಳಿದ ಕರ್ನಾಟಕ !!

ಮಾನವಾಭಿವೃದ್ಧಿ ಸೂಚ್ಯಂಕ ಮಾದರಿಯ ಮೊದಲ 'ಮಕ್ಕಳ ಹಕ್ಕುಗಳ ಸೂಚ್ಯಂಕ' ವರದಿ ರಾಜ್ಯದ ವಾಸ್ತವ ಸ್ಥಿತಿ ತೆರೆದಿಟ್ಟಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಐಸೆಕ್‌ ಸಂಸ್ಥೆ ವರದಿ ತಯಾರಿಸಿದೆ.


Click the Play button to hear this message in audio format

ವಿಶ್ವದ ಗಮನ ಸೆಳೆದಿರುವ ಸಿಲಿಕಾನ್ ಸಿಟಿ ಎಂದು ಕರೆಯಲ್ಪಡುವ ರಾಜಧಾನಿ ಬೆಂಗಳೂರು ಮಕ್ಕಳಿಗೆ ಸುರಕ್ಷಿತವಲ್ಲ ಎಂಬ ಆಘಾತಕಾರಿ ಅಂಶವೊಂದು ಇತ್ತೀಚಿನ ವರದಿಯಲ್ಲಿ ಬಹಿರಂಗಗೊಂಡಿದೆ. ಮಾನವ ಅಭಿವೃದ್ಧಿ ಸೂಚ್ಯಂಕದ ಮಾದರಿಯಲ್ಲಿಯೇ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾದ 'ಮಕ್ಕಳ ಹಕ್ಕುಗಳ ಸೂಚ್ಯಂಕ' ವರದಿಯು ರಾಜ್ಯದ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಂಡ್ಯ ಮತ್ತು ಉಡುಪಿ ಜಿಲ್ಲೆಗಳು ಮುಂಚೂಣಿಯಲ್ಲಿದ್ದರೆ, ಬೆಂಗಳೂರು ನಗರ ಜಿಲ್ಲೆ ತೀರಾ ಹಿಂದುಳಿದಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಈ ಮಹತ್ವದ ವರದಿಯನ್ನು ಸಿದ್ಧಪಡಿಸಿದೆ. ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು, ಬದುಕಲು ಇರುವ ಅನುಕೂಲಕರ ವಾತಾವರಣ, ಪೌಷ್ಟಿಕಾಂಶ ಯುಕ್ತ ಆಹಾರದ ಹಕ್ಕು, ರಕ್ಷಣೆಯ ಹಕ್ಕು, ಶಿಕ್ಷಣದ ಹಕ್ಕು ಹಾಗೂ ಭಾಗವಹಿಸುವಿಕೆಯ ಹಕ್ಕು. ಹೀಗೆ ಆರು ಪ್ರಮುಖ ಮಾನದಂಡಗಳನ್ನು ಇಟ್ಟುಕೊಂಡು ಈ ವರದಿಯನ್ನು ತಯಾರು ಮಾಡಲಾಗಿದೆ. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಹದಿಹರೆಯದಲ್ಲೇ ಗರ್ಭಧಾರಣೆ, ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಇನ್ನಿತರ ಗಂಭೀರ ಸಂಗತಿಗಳನ್ನು ಕೂಡ ವರದಿ ತಯಾರಿಕೆಯ ಸಂದರ್ಭದಲ್ಲಿ ಬಹುಮುಖ್ಯ ಎಂದು ಪರಿಗಣಿಸಲಾಗಿದೆ.

ಮಂಡ್ಯಕ್ಕೆ ಪ್ರಥಮ, ಬಳ್ಳಾರಿಗೆ ಕೊನೆ ಸ್ಥಾನ

ಮಕ್ಕಳ 'ಬದುಕುವ ಹಕ್ಕು' ವಿಭಾಗದಲ್ಲಿ ಈ ಹಿಂದೆ ಕರ್ನಾಟಕವು ದೇಶದಲ್ಲಿಯೇ 5ನೇ ಸ್ಥಾನದಲ್ಲಿತ್ತು. ಆದರೆ, ವರದಿಗಳ ಪ್ರಕಾರ ರಾಜ್ಯವು ಈ ವಿಭಾಗದಲ್ಲಿ ಹಿನ್ನಡೆ ಅನುಭವಿಸಿದ್ದು, 15ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ, ಮಕ್ಕಳಿಗೆ ಬದುಕಲು ಪೂರಕವಾದ ಒಳ್ಳೆಯ ವಾತಾವರಣ ಹಾಗೂ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಒದಗಿಸುವಲ್ಲಿಯೂ ರಾಜ್ಯವು 15ನೇ ಸ್ಥಾನದಲ್ಲಿದೆ. ಬದುಕುವ ಹಕ್ಕಿನ ಸೂಚ್ಯಂಕದಲ್ಲಿ ಮಂಡ್ಯ ಜಿಲ್ಲೆಯು 0.822 ಅಂಕಗಳೊಂದಿಗೆ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇದು ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಬದುಕುವ ಹಕ್ಕಿನ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಆದರೆ, ಗಣಿ ಜಿಲ್ಲೆ ಬಳ್ಳಾರಿ ಈ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದು, ಅಲ್ಲಿನ ಮಕ್ಕಳ ಸ್ಥಿತಿಗತಿಯ ಬಗ್ಗೆ ಆತಂಕ ಮೂಡಿಸಿದೆ. ಇನ್ನು ಬದುಕಲು ಅನುಕೂಲಕರ ಪರಿಸರದ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ರಾಜಧಾನಿಯಲ್ಲೇ ಮಕ್ಕಳಿಗೆ ರಕ್ಷಣೆ ಇಲ್ಲ!

ರಾಜ್ಯದ ಆಡಳಿತ ಕೇಂದ್ರ ಬೆಂಗಳೂರಿನಲ್ಲಿಯೇ ಮಕ್ಕಳು ಸುರಕ್ಷಿತರಲ್ಲ ಎನ್ನುವ ಆತಂಕಕಾರಿ ವಿಚಾರವು ಈ ವರದಿಯು ಬೆಳಕು ಚೆಲ್ಲಿದೆ. ಬೆಂಗಳೂರು ನಗರದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಿರುವುದಾಗಿ ವರದಿ ಉಲ್ಲೇಖಿಸಿದೆ. ಕೇವಲ ಬೆಂಗಳೂರು ನಗರ ಮಾತ್ರವಲ್ಲದೆ, ಸಾಂಸ್ಕೃತಿಕ ನಗರಿ ಮೈಸೂರು, ಸಕ್ಕರೆ ನಾಡು ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚು ವರದಿಯಾಗಿವೆ ಎಂದು ಅಂಕಿಅಂಶಗಳು ಹೇಳಿವೆ. ಇನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳನ್ನು ಗಮನಿಸಿದರೆ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ನಗರ, ಹಾಸನ, ದಕ್ಷಿಣ ಕನ್ನಡ, ಮೈಸೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚು ವರದಿಯಾಗಿರುವುದಾಗಿ ವರದಿ ಬಹಿರಂಗಪಡಿಸಿದೆ.

ಅಪೌಷ್ಟಿಕತೆಯಲ್ಲಿ 19ನೇ ಸ್ಥಾನ

ರಾಜ್ಯದಲ್ಲಿ ಅಂಗನವಾಡಿ, ಬಿಸಿಯೂಟದಂತಹ ಹತ್ತಾರು ಯೋಜನೆಗಳಿದ್ದರೂ ಅಪೌಷ್ಟಿಕತೆ ನಿವಾರಣೆಯಲ್ಲಿ ಕರ್ನಾಟಕ ಇನ್ನೂ ಸಾಕಷ್ಟು ಹಿಂದುಳಿದಿದೆ. ರಾಷ್ಟ್ರಮಟ್ಟದ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನದಲ್ಲಿದೆ. ಈ ಅಂಕಿಅಂಶವು ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ತಳಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕತೆ ಕೊರತೆ ಎದ್ದು ಕಾಣುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಶೇ.50ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಇರುವುದು ವರದಿಯಲ್ಲಿ ಬಹಿರಂಗವಾಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಯಾದಗಿರಿ, ಕೊಪ್ಪಳ, ಧಾರವಾಡ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶೇ.50ರಷ್ಟು ಮಕ್ಕಳು ಕಡಿಮೆ ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಸರ್ಕಾರದ ಬಿಸಿಯೂಟ ಮತ್ತು ಅಂಗನವಾಡಿ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಮಂಡ್ಯ, ರಾಮನಗರ, ಉಡುಪಿ ಮತ್ತು ಕೊಡಗು ಜಿಲ್ಲೆಗಳು ಅಪೌಷ್ಟಿಕತೆ ನಿವಾರಣೆಯಲ್ಲಿ ಉತ್ತಮ ಪ್ರದರ್ಶನ ತೋರಿವೆ.

ಶಿಕ್ಷಣದಲ್ಲಿ ಹಿನ್ನಡೆ - ಕೇರಳಕ್ಕೆ ಅಗ್ರಸ್ಥಾನ

ಮಕ್ಕಳ ವಿದ್ಯಾಭ್ಯಾಸ ಮತ್ತು ಶಿಕ್ಷಣದ ಹಕ್ಕಿನ ವಿಷಯದಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ 14ನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದ ಇತರ ರಾಜ್ಯಗಳು ಈ ವಿಷಯದಲ್ಲಿ ಕರ್ನಾಟಕಕ್ಕಿಂತ ಉತ್ತಮ ಸಾಧನೆ ತೋರಿವೆ. ಶಿಕ್ಷಣ ಕ್ಷೇತ್ರದಲ್ಲಿ ಕೇರಳ ರಾಜ್ಯವು ನಂಬರ್ 1 ಸ್ಥಾನವನ್ನು ಅಲಂಕರಿಸಿದರೆ, ಗೋವಾ 2ನೇ ಸ್ಥಾನ ಹಾಗೂ ತಮಿಳುನಾಡು 3ನೇ ಸ್ಥಾನವನ್ನು ಪಡೆದುಕೊಂಡಿವೆ. ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಾನ ಕುಸಿತ ಕಂಡಿರುವುದು ಶಿಕ್ಷಣ ಇಲಾಖೆಗೆ ಎಚ್ಚರಿಕೆಯ ಗಂಟೆಯಾಗಿದೆ.

ಶಿಕ್ಷಣದ ಹಕ್ಕಿನ ಸೂಚ್ಯಂಕದಲ್ಲಿ 0.828 ಅಂಕಗಳೊಂದಿಗೆ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಸಾಕ್ಷರತೆಯಲ್ಲಿ ಮುಂದಿರುವ ಕರಾವಳಿ ಜಿಲ್ಲೆ ಉಡುಪಿ ಇಲ್ಲಿಯೂ ತನ್ನ ಹಿರಿಮೆಯನ್ನು ಕಾಯ್ದುಕೊಂಡಿದೆ. ಇನ್ನುಳಿದಂತೆ ಭಾಗವಹಿಸುವಿಕೆಯ ಹಕ್ಕನ್ನು ನೀಡುವಲ್ಲಿ ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಗಳು ಉತ್ತಮ ಪ್ರದರ್ಶನ ನೀಡಿದ್ದರೆ, ಕೊಡಗು ಜಿಲ್ಲೆ ಕಳಪೆ ಪ್ರದರ್ಶನ ನೀಡಿದೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಂಡ್ಯ ಮತ್ತು ಉಡುಪಿ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಎಲ್ಲಾ ಸೂಚ್ಯಂಕಗಳನ್ನು ಒಳಗೊಂಡಂತೆ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಅದೇ ಭಾಗವಹಿಸುವಿಕೆಯ ಸೂಚ್ಯಂಕವನ್ನು ಮಾತ್ರ ಹೊರತುಪಡಿಸಿದರೆ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಆದರೆ ಕೋಲಾರ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಒಟ್ಟಾರೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ ಎಂಬುದು ಕಳವಳಕಾರಿ ವಿಷಯ.

ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ:

ರಾಜ್ಯದಲ್ಲಿ ಬಾಲ್ಯ ವಿವಾಹದ ಪ್ರಮಾಣ 2005-06 ಕ್ಕೆ ಹೋಲಿಸಿದರೆ ಕಡಿಮೆಯಾಗಿದ್ದರೂ (ಶೇ.42 ರಿಂದ ಶೇ.21 ಕ್ಕೆ ಇಳಿಕೆ), ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಇದು ಇನ್ನೂ ಚಾಲ್ತಿಯಲ್ಲಿದೆ ಎಂದು ವರದಿ ಹೇಳಿದೆ. ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಶೇ.30 ಕ್ಕಿಂತ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ. ಇನ್ನು ಬಾಲ ಕಾರ್ಮಿಕ ಪದ್ಧತಿಗೆ ಬಂದರೆ, ದಕ್ಷಿಣ ಭಾರತದ ರಾಜ್ಯಗಳಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚು ಬಾಲ ಕಾರ್ಮಿಕರಿದ್ದಾರೆ (ಶೇ.5.73) ಎಂಬ ಆಘಾತಕಾರಿ ಅಂಶವನ್ನು ವರದಿ ಉಲ್ಲೇಖಿಸಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹದಿಹರೆಯದವರ ಗರ್ಭಧಾರಣೆ ಪ್ರಮಾಣ ಹೆಚ್ಚಿರುವುದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದೆ.

ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸ್ಥಾನವೇನು?

ಮಕ್ಕಳ ಹಕ್ಕುಗಳ ಅನುಷ್ಠಾನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೇರಳ ರಾಜ್ಯವು (0.804 ಅಂಕ) ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕವು 0.648 ಅಂಕಗಳೊಂದಿಗೆ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ (ತಮಿಳುನಾಡು, ಕೇರಳ) ಹೋಲಿಸಿದರೆ ಕರ್ನಾಟಕದ ಸಾಧನೆ ಸಾಧಾರಣ ಮಟ್ಟದಲ್ಲಿದೆ ವರದಿಯು ಕೇವಲ ಅಂಕಿಅಂಶಗಳನ್ನು ನೀಡದೆ, ಸುಧಾರಣೆಗೆ ಬೇಕಾದ ಸಲಹೆಗಳನ್ನೂ ನೀಡಿದೆ.

1. ಪ್ರಾದೇಶಿಕ ಅಸಮತೋಲನ ನಿವಾರಣೆ:

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ (ಕಲ್ಯಾಣ ಕರ್ನಾಟಕ) ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಂಶದ ಸೂಚಕಗಳು ತೀರಾ ಕಳಪೆಯಾಗಿವೆ. ಈ ಭಾಗಕ್ಕೆ ವಿಶೇಷ ಒತ್ತು ಮತ್ತು ಹೆಚ್ಚಿನ ಅನುದಾನದ ಅಗತ್ಯವಿದೆ.

2. ರಕ್ಷಣಾ ವ್ಯವಸ್ಥೆಯ ಬಲವರ್ಧನೆ:

ಬೆಂಗಳೂರಿನಂತಹ ನಗರಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೋಕ್ಸೋ ಕಾಯ್ದೆಯಡಿ ತ್ವರಿತ ನ್ಯಾಯಾಲಯಗಳು ಮತ್ತು ಕಠಿಣ ಕ್ರಮಗಳ ಅಗತ್ಯವಿದೆ.

3. ಆರೋಗ್ಯ ಮತ್ತು ಪೌಷ್ಟಿಕಾಂಶ:

ಅಂಗನವಾಡಿ ಮತ್ತು ಬಿಸಿಯೂಟ ಯೋಜನೆಗಳ ಮೂಲಕ ಪೌಷ್ಟಿಕ ಆಹಾರ ವಿತರಣೆಯನ್ನು ಇನ್ನಷ್ಟು ಬಲಪಡಿಸಬೇಕು. ರಕ್ತಹೀನತೆ ನಿವಾರಣೆಗೆ ವಿಶೇಷ ಆಂದೋಲನಗಳ ಅಗತ್ಯವಿದೆ.

4. ಶಿಕ್ಷಣದಲ್ಲಿ ಗುಣಮಟ್ಟ:

ಕೇವಲ ಶಾಲೆಗೆ ದಾಖಲಾತಿ ಮಾಡುವುದಷ್ಟೇ ಸಾಲದು, ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.

5. ಮಕ್ಕಳ ಭಾಗವಹಿಸುವಿಕೆ:

ಮಕ್ಕಳ ಗ್ರಾಮ ಸಭೆಗಳನ್ನು ಕೇವಲ ಕಾಗದದ ಮೇಲೆ ಸೀಮಿತಗೊಳಿಸದೆ, ಅವರ ದ್ವನಿಗೆ ಬೆಲೆ ನೀಡುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.

ಸರ್ಕಾರಕ್ಕೆ ದಿಕ್ಸೂಚಿ ಈ ವರದಿ

ವರದಿಯು ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಯೋಜನೆಗಳನ್ನು ರೂಪಿಸಲು ದಿಕ್ಸೂಚಿಯಾಗಲಿದೆ. ವರದಿ ಆಧರಿಸಿ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಬಹುದು. ಜತೆಗೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು. ಮಕ್ಕಳ ಹಕ್ಕುಗಳ ರಕ್ಷಣೆಗೆ ಬಜೆಟ್‌ನಲ್ಲಿ ಯಾವ ರೀತಿ ಹಂಚಿಕೆ ಮಾಡಬೇಕು ಎನ್ನುವುದನ್ನು ಅರಿಯಲು ಸರ್ಕಾರಕ್ಕೆ ವರದಿ ಸಹಕಾರಿಯಾಗಲಿದೆ. ಈವರೆಗೂ ಮಕ್ಕಳ ಹಕ್ಕುಗಳ ಬಗ್ಗೆ ಇಂತಹದೊಂದು ಸಮಗ್ರ ವರದಿ ತಯಾರಾಗಿರಲಿಲ್ಲ ಎಂದು ದ ಫೆಡರಲ್‌ ಕರ್ನಾಟಕಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ಹೇಳಿದ್ದಾರೆ.

ಮಕ್ಕಳ ಹಕ್ಕುಗಳನ್ನು ಬಲಪಡಿಸಲು, ಸರ್ಕಾರ ಆರೋಗ್ಯ, ಪೌಷ್ಟಿಕತೆ, ಗುಣಮಟ್ಟದ ಶಿಕ್ಷಣ ಮತ್ತು ಸುರಕ್ಷತೆಗಳಿಗೆ ಆದ್ಯತೆ ನೀಡಬೇಕು. ರಕ್ಷಣೆ, ತಾಯಿ ಮತ್ತು ಶಿಶುವಿನ ಮರಣ ತಡೆಗೆ ಐಸಿಡಿಎಸ್, ಲಸಿಕಾಕರಣ, ಮಾತೃ ಆರೈಕೆ ಮತ್ತು ಮಾನಸಿಕ ಆರೋಗ್ಯ ಸೇವೆ ಬಲಪಡಿಸಬೇಕು. ಬಾಲ್ಯ ವಿವಾಹ, ಮಕ್ಕಳ ಮೇಲಿನ ಅಪರಾಧ ತಡೆಯಲು ರಕ್ಷಣಾ ವ್ಯವಸ್ಥೆ ಬಲಪಡಿಸಬೇಕು. ಪೋಕ್ಸೋ ಕಾಯಿದೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು. ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಜಿಲ್ಲಾ ಮಟ್ಟದ ಮೇಲ್ವಿಚಾರಣೆ, ಇಲಾಖೆಗಳ ನಡುವಿನ ಸಮನ್ವಯ ಮತ್ತು ಹೆಚ್ಚಿನ ಬಜೆಟ್ ಹಂಚಿಕೆ ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮತ್ತೋರ್ವ ಸದಸ್ಯರಾದ ಎಸ್‌.ಮಂಜು ಮಾತನಾಡಿ, ರಾಜ್ಯದಲ್ಲಿ ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ. ಕೆಲವೊಂದು ವಿಭಾಗದಲ್ಲಿ ಉತ್ತಮ ಸ್ಥಾನದಲ್ಲಿದ್ದರೂ, ಕೆಲವೊಂದು ವಿಭಾಗದಲ್ಲಿ ತೀರಾ ಹಿಂದುಳಿದಿದೆ. ವಿದ್ಯಾಭ್ಯಾಸದಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 19ನೇ ಸ್ಥಾನದಲ್ಲಿದೆ. ಮಕ್ಕಳ ಸುರಕ್ಷತೆಯು ಕರ್ನಾಟಕ 9ನೇ ಸ್ಥಾನದಲ್ಲಿದೆ. ಈ ವರದಿ ಮಕ್ಕಳ ರಕ್ಷಣೆ ಮತ್ತು ಕಲ್ಯಾಣ ವಿಚಾರದಲ್ಲಿ ಅನುದಾನ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ಈ ವರದಿಯು ಕರ್ನಾಟಕದ ಮಕ್ಕಳ ಸ್ಥಿತಿಗತಿಯ ಬಗ್ಗೆ ಕನ್ನಡಿ ಹಿಡಿದಿದೆ. 'ಕರ್ನಾಟಕದ ಮಕ್ಕಳು' ಎದುರಿಸುತ್ತಿರುವ ಸವಾಲುಗಳನ್ನು ಈ ವರದಿ ಎತ್ತಿ ತೋರಿಸಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತನ್ನು ಅರ್ಥಪೂರ್ಣವಾಗಿಸಲು ಸರ್ಕಾರ, ಸಮಾಜ ಮತ್ತು ಪೋಷಕರು ಒಂದಾಗಿ ಶ್ರಮಿಸಬೇಕಾದ ತುರ್ತು ಅಗತ್ಯವನ್ನು ವರದಿ ಹೇಳಿದೆ. "ಮಕ್ಕಳೇ ದೇಶದ ಆಸ್ತಿ" ಎಂಬ ಮಾತನ್ನು ಉಳಿಸಿಕೊಳ್ಳಲು ಕಾರ್ಯಪ್ರವೃತ್ತವಾಗಬೇಕಾದ ಅಗತ್ಯ ಇದೆ.

Read More
Next Story