
ಡೆಂಗ್ಯೂ ಆಯ್ತು, ಈಗ ಇಲಿ ಜ್ವರ | ಹಾವೇರಿಯಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿ
ರಾಜ್ಯಾದ್ಯಂತ ಡೆಂಗ್ಯೂ ಜ್ವರದ ಸಾವಿನ ಸರಣಿ ಮುಂದುವರಿದಿರುವಾಗಲೇ, ಹಾವೇರಿ ಜಿಲ್ಲೆಯಲ್ಲಿ ಇಲಿ ಜ್ವರದಿಂದ ಮೊದಲ ಸಾವು ಸಂಭವಿಸಿದೆ.
ಜಿಲ್ಲೆಯ ಜನರಿಗೆ ಡೆಂಗ್ಯೂ, ಇಲಿ ಜ್ವರದ ಆತಂಕ ಹೆಚ್ಚಿಸಿದೆ. ನಿನ್ನೆಯಷ್ಟೇ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ದೃಢಪಟ್ಟಿತ್ತು. ಈಗ ಹಾವೇರಿ ಜಿಲ್ಲೆಯಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿಯಾಗಿದೆ. ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ಉಮೇಶ್(72) ಎಂಬ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಉಮೇಶ್ ಅವರು ಹಾವೇರಿ, ಮಂಗಳೂರು ಸೇರಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ನಡೆಸಿದಾಗ ಇಲಿ ಜ್ವರ ಇರುವುದು ದೃಢಪಟ್ಟಿತ್ತು. ಇಲಿ ಜ್ವರದ ಜೊತೆ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇಲಿ ಜ್ವರದಿಂದ ವೃದ್ಧ ಸಾವು ಹಿನ್ನೆಲೆ ಹಾವೇರಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಇತ್ತೀಚೆಗೆ ಹಾವೇರಿ ತಾಲೂಕಿನ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಇಲಿ ಜ್ವರ ಕಾಣಿಸಿಕೊಂಡ ಬಾಲಕನಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಜ್ವರ ಕಾಣಿಸಿಕೊಂಡ ಹಿನ್ನಲೆ ಹಾವೇರಿ ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ. ಮೊದಲು 12 ವರ್ಷದ ಬಾಲಕನಿಗೆ ಜಾಂಡೀಸ್ ರೋಗ ಕಾಣಿಸಿಕೊಂಡಿತ್ತು. ರೋಗ ಗುಣಮುಖಗೊಂಡು ಊರಿಗೆ ಹೋಗಿದ್ದನು. ಮತ್ತೆ ಬಾಲಕನಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆ ಜಿಲ್ಲಾಸ್ಪತ್ರೆಗೆ ದಾಖಲಿದ್ದಾರೆ. ಬಾಲಕನ ರಕ್ತಪರೀಕ್ಷೆಯ ನಂತರ ಬಾಲಕನಿಗೆ ಇಲಿ ಜ್ವರ ಇರುವುದು ದೃಢಪಟ್ಟಿದೆ. ಬಾಲಕ ಆರೋಗ್ಯ ಸ್ಥಿರವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.