
ಸರ್ಕಾರದ ಗಮನಸೆಳೆದ ʼದ ಫೆಡರಲ್ʼ: ವಿಶ್ವಕಪ್ ಗೆದ್ದ ಅಂಧ ಮಹಿಳೆಯರಿಗೆ ತಲಾ 10 ಲಕ್ಷ, ಸರ್ಕಾರಿ ಉದ್ಯೋಗ- ಸಿಎಂ
ಕೇವಲ ಕರ್ನಾಟಕದ ಆಟಗಾರ್ತಿಯರು ಮಾತ್ರವಲ್ಲದೇ ತಂಡದಲ್ಲಿದ್ದ ಇತರ ರಾಜ್ಯಗಳ 13 ಆಟಗಾರ್ತಿಯರಿಗೂ ತಲಾ 2 ಲಕ್ಷ ರೂ.ನಗದು ಬಹುಮಾನ ನೀಡುವುದಾಗಿ ತಿಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಕ್ರೀಡಾ ಸ್ಫೂರ್ತಿ ಮೆರೆದರು.
ಚೊಚ್ಚಲ ಟಿ-20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10ಲಕ್ಷ ರೂ. ನಗದು ಬಹುಮಾನ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ಮಹಿಳಾ ತಂಡದ ಸಾಧನೆಗೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಸ್ವಾಗತಿಸಿದ್ದಲ್ಲದೆ ಬೇರೇನೂ ಕ್ರಮ ಕೈಗೊಳ್ಳದ ಸರ್ಕಾರದ ʼಕುರುಡುಗಣ್ಣಿʼನ ಬಗ್ಗೆ ದ ಫೆಡರಲ್ ಕರ್ನಾಟಕದ ವರದಿ ಗಮನ ಸೆಳೆದಿತ್ತು. ಈಗ ಸರ್ಕಾರ ಅಧಿಕೃತವಾಗಿ ಆ ಆಟಗಾರ್ತಿಯರಿಗೆ ಬಹುಮಾನ ಘೋಷಿಸಿದೆ.
ಮಂಗಳವಾರ (ನ.25) ತಮ್ಮಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಮಹಿಳಾ ತಂಡಕ್ಕೆ ಅದ್ದೂರಿ ಸ್ವಾಗತ ಕೋರಿದ ಅವರು, ವಿಶ್ವವಿಜೇತ ಆಟಗಾರ್ತಿಯರನ್ನು ಪ್ರೀತಿಯಿಂದ ಬರಮಾಡಿಕೊಂಡು ಪ್ರತಿಯೊಬ್ಬರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು.
ರಾಜ್ಯದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಕರ್ನಾಟಕ ಮೂಲದ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ. ನಗದು ಬಹುಮಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದರು.
ಕೇವಲ ಕರ್ನಾಟಕದ ಆಟಗಾರ್ತಿಯರು ಮಾತ್ರವಲ್ಲದೆ, ತಂಡದಲ್ಲಿದ್ದ ಇತರ ರಾಜ್ಯಗಳ 13 ಆಟಗಾರ್ತಿಯರಿಗೂ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ತಿಳಿಸುವ ಮೂಲಕ ಸಿಎಂ ಕ್ರೀಡಾ ಸ್ಫೂರ್ತಿ ಮೆರೆದರು.
ಆಟಗಾರ್ತಿಯರಿಗೆ ‘ಶಹಬ್ಬಾಸ್‌ಗಿರಿ’ ನೀಡಿದ ಸಿಎಂ
ಸಮರ್ಥನಂ ಸಂಸ್ಥೆಯ ಸಂಸ್ಥಾಪಕರು ಹಾಗೂ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ (CABI) ಅಧ್ಯಕ್ಷ ಮಹಾಂತೇಶ್ ಜಿ. ಕಿವಡಸಣ್ಣವರ್ ನೇತೃತ್ವದಲ್ಲಿ ತಂಡದ ಕೋಚ್, ಮ್ಯಾನೇಜರ್ ಹಾಗೂ ಸಹಾಯಕ ಸಿಬ್ಬಂದಿ ಈ ಭೇಟಿಯ ವೇಳೆ ಜತೆಗಿದ್ದರು. ಈ ವೇಳೆ ಪ್ರತಿಯೊಬ್ಬ ಆಟಗಾರ್ತಿಯನ್ನೂ ಹತ್ತಿರ ಕರೆದು ಸನ್ಮಾನಿಸಿದ ಸಿಎಂ, ಬೆನ್ನು ತಟ್ಟಿ ‘ಶಹಬ್ಬಾಸ್‌ಗಿರಿ’ ನೀಡಿದರು. ನಾನಾ ಕಷ್ಟದ ಹಿನ್ನೆಲೆಯಿಂದ ಬಂದು ಜಾಗತಿಕ ಮಟ್ಟದಲ್ಲಿ ಸಾಧನೆಗೈದ ಇವರ ಪರಿಶ್ರಮ ಅದ್ಭುತ ಎಂದು ಬಣ್ಣಿಸಿದರು.
ವಿಶೇಷವಾಗಿ ತಂಡದ ನಾಯಕಿ, ತುಮಕೂರಿನ ಶಿರಾ ಮೂಲದ ದೀಪಿಕಾ ಅವರ ನಾಯಕತ್ವ ಮತ್ತು ಆಟದ ವೈಖರಿಯನ್ನು ಸಿಎಂ ವಿಶೇಷವಾಗಿ ಸ್ಮರಿಸಿದರು. ಅಂಧರ ಕ್ರಿಕೆಟ್‌ಗೆ ಬೆನ್ನೆಲುಬಾಗಿ ನಿಂತಿರುವ ಮಹಾಂತೇಶ್ ಜಿ. ಕಿವಡಸಣ್ಣವರ್ ಅವರ ಸೇವೆಯನ್ನು ಕೊಂಡಾಡಿದ ಅವರು, ಸಂಸ್ಥೆಗೆ ಎಲ್ಲ ರೀತಿಯ ನೆರವು ನೀಡುವ ಭರವಸೆಯನ್ನೂ ನೀಡಿದರು.
ಸಿಎಂ ಪ್ರೋತ್ಸಾಹವೇ ಪ್ರೇರಣೆ
ಸಿಎಂ ಅವರ ಆತಿಥ್ಯ ಮತ್ತು ಪ್ರೋತ್ಸಾಹದ ಕುರಿತು ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ್ ಜಿ ಕಿವಡಸಣ್ಣವರ್ ಮಾತನಾಡಿ, "ಮುಖ್ಯಮಂತ್ರಿಗಳು ಹಾಗೂ ಸಂಪುಟದ ಸಹೋದ್ಯೋಗಿಗಳು ತೋರಿದ ಪ್ರೀತಿ ಮತ್ತು ನೀಡಿದ ಭರವಸೆಗಳಿಗೆ ನಾವು ಚಿರಋಣಿ. ಆಟಗಾರ್ತಿಯರಿಗೆ ಸರ್ಕಾರಿ ನೌಕರಿ ಮತ್ತು ನಗದು ಬಹುಮಾನ ಘೋಷಿಸಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ. ಅಂಧರ ಕ್ರಿಕೆಟ್‌ಗೆ ಅವರು ನೀಡಿರುವ ಈ ಪ್ರೋತ್ಸಾಹವು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲು ನಮಗೆ ದೊಡ್ಡ ಪ್ರೇರಣೆಯಾಗಿದೆ," ಎಂದು ಕೃತಜ್ಞತೆ ಸಲ್ಲಿಸಿದರು.
ಸರ್ಕಾರದ ಗಮನ ಸೆಳೆದಿದ್ದ ʼದ ಫೆಡರಲ್ ಕರ್ನಾಟಕʼ ವರದಿ
ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಚಾಂಪಿಯನ್ ತಂಡವನ್ನು ಮುನ್ನಡೆಸಿದ್ದು ಕರ್ನಾಟಕದ ಕುವರಿ ದೀಪಿಕಾ ಟಿ.ಸಿ. ಎನ್ನುವುದು ಮತ್ತೊಂದು ಹೆಮ್ಮಪಡುವ ವಿಷಯ. ಆದರೆ ಆ ಸಾಧನೆಯನ್ನು ಕಣ್ಣಾರೆ ಕಂಡು, ಬೆನ್ನುತಟ್ಟಿ ಪ್ರೋತ್ಸಾಹಿಸಲು ವಿಮಾನ ನಿಲ್ದಾಣಕ್ಕೆ ಬಾರದೆ, ಸರ್ಕಾರ ತಮ್ಮ ಜವಾಬ್ದಾರಿಯನ್ನು ಮರೆತು ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ವರದಿ ಮಾಡಲಾಗಿತ್ತು.
ಕೆಲವು ತಿಂಗಳ ಹಿಂದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ ಟ್ರೋಫಿ ಗೆದ್ದಾಗ ಕರ್ನಾಟಕ ಸರ್ಕಾರದ ಸಂಭ್ರಮ ಮುಗಿಲು ಮುಟ್ಟಿತ್ತು. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ತಂಡವನ್ನು ಸ್ವಾಗತಿಸಿದ್ದರು. ಬಳಿಕ ವಿಧಾನಸೌಧದ ಮುಂದೆ ಬೃಹತ್ ಕಾರ್ಯಕ್ರಮ ಆಯೋಜಿಸಿ, ರಾಜಮರ್ಯಾದೆ ನೀಡಲಾಗಿತ್ತು. ಆದರೆ ಚಾಂಪಿಯನ್ ಆದ ಅಂಧರ ಮಹಿಳಾ ತಂಡದ ಸಾಧನೆ ಸರ್ಕಾರಕ್ಕೆ ಕಾಣಿಸುತ್ತಿಲ್ಲ ಎಂದೂ ವರದಿ ತಿಳಿಸಿತ್ತು.

