ಬೆಂಗಳೂರು| ಪಟಾಕಿ ಅಬ್ಬರ, ಕಣ್ಣಿನ ಗಾಯಗಳ ಸಂಖ್ಯೆ 90ಕ್ಕೆ ಏರಿಕೆ
x

ಸಾಂದರ್ಭಿಕ ಚಿತ್ರ

ಬೆಂಗಳೂರು| ಪಟಾಕಿ ಅಬ್ಬರ, ಕಣ್ಣಿನ ಗಾಯಗಳ ಸಂಖ್ಯೆ 90ಕ್ಕೆ ಏರಿಕೆ

ಗಾಯಗೊಂಡವರಲ್ಲಿ 20 ವಯಸ್ಕರು ಮತ್ತು 31 ಮಕ್ಕಳು ಸೇರಿದ್ದು, ಇವರಲ್ಲಿ ಪಟಾಕಿ ಸಿಡಿಸುವವರು ಮತ್ತು ಪಕ್ಕದಲ್ಲಿ ನಿಂತಿದ್ದವರು ಕೂಡ ಇದ್ದಾರೆ.


Click the Play button to hear this message in audio format

ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ ಮಾಡಿಕೊಂಡು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 90ಕ್ಕೆ ಏರಿದೆ.

ಮಂಗಳವಾರ ಮಧ್ಯಾಹ್ನದ ವೇಳೆಗೆ ನಾರಾಯಣ ನೇತ್ರಾಲಯದಲ್ಲಿಯೇ 51 ಕಣ್ಣಿನ ಗಾಯಗಳ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಆರು ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಗಾಯಗೊಂಡವರಲ್ಲಿ 20 ಮಂದಿ ವಯಸ್ಕರು, 31 ಮಕ್ಕಳು ಸೇರಿದ್ದು, ಇವರಲ್ಲಿ ಪಟಾಕಿ ಸಿಡಿಸುವವರು ಮತ್ತು ಪಕ್ಕದಲ್ಲಿ ನಿಂತಿದ್ದವರು ಕೂಡ ಇದ್ದಾರೆ.

ನಾರಾಯಣ ನೇತ್ರಾಲಯದ ಕಣ್ಣಿನ ಪೊರೆ ಮತ್ತು ವಕ್ರೀಕಾರಕ ಮಸೂರ ಸೇವೆಗಳ ಮುಖ್ಯಸ್ಥ ಡಾ. ನರೇನ್ ಶೆಟ್ಟಿ ಅವರು ಮಾತನಾಡಿ, ಮೂರು ಗಂಭೀರ ಪ್ರಕರಣಗಳು ವರದಿಯಾಗಿದ್ದು, ಗಾಯಗೊಂಡವರಲ್ಲಿ ಶೇ. 60ರಷ್ಟು ಮಕ್ಕಳು ಇರುವುದು ಆತಂಕಕಾರಿ. ಮುನ್ನೆಚ್ಚರಿಕೆ ಬಹಳ ಮುಖ್ಯ ಎಂದಿದ್ದಾರೆ. ಪಟಾಕಿ ಸಿಡಿಸುವಾಗ ಪೋಷಕರು ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಬೇಕು, ಮಾರ್ಗದರ್ಶನದ ಕೊರತೆಯೇ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಹೇಳಿರುವುದಾಗಿ ಡೆಕ್ಕನ್‌ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಇಲ್ಲಿ ಎಂಟು ಮಂದಿ ವಯಸ್ಕರು ಮತ್ತು ಐದು ಮಕ್ಕಳು ಗಾಯಗೊಂಡವರಾಗಿದ್ದಾರೆ. ನೇತ್ರಧಾಮ ಕಣ್ಣಿನ ಆಸ್ಪತ್ರೆಯಲ್ಲಿ 12 ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ ಒಂಬತ್ತು ಮಕ್ಕಳು ಮತ್ತು ಮೂವರು ವಯಸ್ಕರು ಇದ್ದಾರೆ. ಸುರಕ್ಷತಾ ಕ್ರಮಗಳ ಕೊರತೆಯಿಂದಲೇ ಹೆಚ್ಚಿನ ಗಾಯಗಳಾಗಿವೆ ಎಂದು ಆಸ್ಪತ್ರೆ ವರದಿ ತಿಳಿಸಿದೆ.

ಮಿಂಟೋ ನೇತ್ರ ಚಿಕಿತ್ಸಾಲಯದಲ್ಲಿ 17 ಕಣ್ಣಿನ ಗಾಯ ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ ಏಳು ಮಕ್ಕಳು ಮತ್ತು 10 ವಯಸ್ಕರು ಸೇರಿದ್ದಾರೆ. ನಾಲ್ಕು ಪ್ರಕರಣಗಳನ್ನು ಗಂಭೀರ ಎಂದು ವರ್ಗೀಕರಿಸಲಾಗಿದ್ದು, ಅವರಿಗೆ ಭಾಗಶಃ ದೃಷ್ಟಿ ನಷ್ಟವಾಗಿದೆ. ಬಿಜ್ಲಿ ಪಟಾಕಿಗಳು, ಹೂ ಕುಂಡಗಳು ಮತ್ತು ಆಟಮ್ ಬಾಂಬ್‌ಗಳೇ ಹೆಚ್ಚಿನ ಗಾಯಗಳಿಗೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಪಟಾಕಿ ಅಕ್ರಮ ಮಾರಾಟಗಾರರ ವಿರುದ್ಧ 31 ಪ್ರಕರಣ ದಾಖಲು

ನಗರದಾದ್ಯಂತ ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಬೆಂಗಳೂರು ಪೊಲೀಸರು 31 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್ 18, 19 ಮತ್ತು 20 ರಂದು ನಡೆಸಿದ ದಾಳಿಗಳಲ್ಲಿ 4 ಲಕ್ಷ ರೂ. ಮೌಲ್ಯದ 1,200 ಪಟಾಕಿ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More
Next Story