ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 26 ರೋಗಿಗಳು ಸುರಕ್ಷಿತ
x

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 26 ರೋಗಿಗಳು ಸುರಕ್ಷಿತ

ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. "ಕೋಡ್ ರೆಡ್" ಎನ್ನುವ ಹೆಸರಿನಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡು, ಎಲ್ಲಾ ರೋಗಿಗಳನ್ನು ತಕ್ಷಣವೇ ಹತ್ತಿರದ ಹೆಚ್ ಬ್ಲಾಕ್‌ಗೆ ಸ್ಥಳಾಂತರಿಸಿದ್ದಾರೆ.


ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ಸ್ ವಾರ್ಡ್‌ನಲ್ಲಿ (ಸುಟ್ಟ ಗಾಯಗಳ ವಾರ್ಡ್​ನಲ್ಲಿ) ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಿಂದ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸ್ವಿಚ್ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಬರ್ನ್ಸ್ ವಾರ್ಡ್‌ನ ಸೆಮಿನಾರ್ ಕೊಠಡಿಗೆ ವ್ಯಾಪಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಘಟನೆ ನಡೆದಾಗ ವಾರ್ಡ್‌ನಲ್ಲಿ ಒಟ್ಟು 26 ರೋಗಿಗಳು (14 ಪುರುಷರು, 5 ಮಹಿಳೆಯರು ಮತ್ತು 7 ಮಕ್ಕಳು) ಚಿಕಿತ್ಸೆ ಪಡೆಯುತ್ತಿದ್ದರು. ಬೆಂಕಿ ಮತ್ತು ದಟ್ಟ ಹೊಗೆ ಆವರಿಸುತ್ತಿದ್ದಂತೆ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. "ಕೋಡ್ ರೆಡ್" ಎನ್ನುವ ಹೆಸರಿನಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡು, ಎಲ್ಲಾ ರೋಗಿಗಳನ್ನು ತಕ್ಷಣವೇ ಹತ್ತಿರದ ಹೆಚ್ ಬ್ಲಾಕ್‌ಗೆ ಸ್ಥಳಾಂತರಿಸಿದ್ದಾರೆ.

ಬರ್ನ್ಸ್ ವಾರ್ಡ್‌ನ ಮೊದಲ ಮಹಡಿಯಲ್ಲಿದ್ದ ಸೆಮಿನಾರ್ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ, ಪಕ್ಕದಲ್ಲೇ ಐವರು ರೋಗಿಗಳು ಐಸಿಯುನಲ್ಲಿದ್ದರು. ಆಸ್ಪತ್ರೆಯ ಅಧೀಕ್ಷಕರು, ವೈದ್ಯರು ಮತ್ತು ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತ್ವರಿತ ನಿರ್ಧಾರದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಸ್ಥಳಾಂತರಿಸಲಾದ ಎಲ್ಲಾ ರೋಗಿಗಳು ಸುರಕ್ಷಿತವಾಗಿದ್ದಾರೆ.

Read More
Next Story