
FIR against Simha | ಅಲ್ಪಸಂಖ್ಯಾತರ ನಿಂದನೆ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್
ಉದಯಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕೊಟ್ಟಿದ್ದ ವಿವಾದಿತ ಹೇಳಿಕೆಯಿಂದ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿವಾದಿತ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಮೈಸೂರು ಗಲಾಟೆಗೆ ಸಂಬಂಧಿಸಿದಂತೆ ಕೊಟ್ಟಿದ್ದ ಅವಹೇಳನಕಾರಿ ಹೇಳಿಕೆ ಅವರಿಗೆ ಸಂಕಷ್ಟ ತಂದಿದೆ. ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್ ನೀಡಿದ್ದ ದೂರು ಆಧರಿಸಿ ಉದಯಗಿರಿ ಪೋಲಿಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ. 20 ರಂದು ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ‘ದೇಶ ಇಬ್ಭಾಗ ಆದಾಗಲೇ ಮುಸ್ಲಿಮರು ಈ ದೇಶವನ್ನು ಬಿಟ್ಟು ತೊಲಗಬೇಕಿತ್ತು. ಆದರೆ ಇಲ್ಲಿ ಉಳಿದುಕೊಂಡು ಮಕ್ಕಳನ್ನು ಹುಟ್ಟಿಸುವುದು ಬಿಟ್ಟು ಬೇರೇನು ಮಾಡುತ್ತಿದ್ದಾರೆ ಹೇಳಿ?’ ಎಂದಿದ್ದರು. ಪ್ರತಾಪ್ ಸಿಂಹ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೇ ಹೇಳಿಕೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.
ಮುಸ್ಲಿಮರು ಹಾಗೂ ಹಿಂದೂ ಸಮುದಾಯದ ಮಧ್ಯೆ ಕೋಮು ಘರ್ಷಣೆ ಉಂಟುಮಾಡುವ ರೀತಿಯಲ್ಲಿ ಸಿಂಹ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಸಮುದಾಯದ ಜನರನ್ನು ನಿಂದಿಸುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದಾರೆ. ಹೀಗಾಗಿ ಪ್ರತಾಪ್ ಸಿಂಹ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್ ದೂರು ನೀಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಮಾಡಿದ್ದ ಒಂದು ಪೋಸ್ಟ್ ಮುಸ್ಲಿಮ್ ಸಮುದಾಯವನ್ನು ಕೆರಳಿಸಿತ್ತು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಸಂಸದ ರಾಹುಲ್ ಗಾಂಧಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಮೂವರು ನಾಯಕರ ವಿವಸ್ತ್ರಗೊಳಿಸಿದ ಭಾವಚಿತ್ರಕ್ಕೆ ತಲೆ ಮೇಲೆ ಮುಸ್ಲಿಮರು ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆ ಉರ್ದು ಭಾಷೆಯ ಪದಗಳನ್ನು ಬರೆದು ಪೋಸ್ಟ್ ಮಾಡಿದ್ದ. ಇದರಿಂದಾಗಿ ಮುಸ್ಲಿಂ ಸಮುದಾಯದವರು ಕೆರಳಿದ್ದರು.
ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಗುಂಪು ಉದಯಗಿರಿ ಪೊಲೀಸ್ ಠಾಣೆ ಎದುರು ಜಮಾಯಿಸಿ, ಗಲಾಟೆ ಮಾಡಿ, ಕಲ್ಲು ತೂರಿದ್ದರು. ಆಗ ಪೊಲೀಸರು ಅಶ್ರುವಾಯು ಸಿಡಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಪೊಲೀಸ್ ಠಾಣೆ ಎದುರು ಗಲಾಟೆಗೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.