
ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ ವೇಳೆಯ ಚಿತ್ರ (ಚಿತ್ರಕೃಪೆ- ಶ್ರೀರಾಮುಲು ಅವರ ಎಕ್ಸ್ ಪೋಸ್ಟ್)
ಶ್ರೀರಾಮುಲುಗೆ ಸಂಕಷ್ಟ: ಪೋಕ್ಸೋ ಸಂತ್ರಸ್ತೆಯ ಗುರುತು ಬಹಿರಂಗ; ಕೇಸ್ ದಾಖಲು
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರ ಅಥವಾ ಮಹಿಳೆಯರ ಹೆಸರು, ವಿಳಾಸ ಅಥವಾ ಅವರನ್ನು ಗುರುತಿಸಬಹುದಾದ ಯಾವುದೇ ಮಾಹಿತಿ ಬಹಿರಂಗಪಡಿಸುವುದು ಪೋಕ್ಸೋ ಕಾಯ್ದೆ ಅಡಿ ಅಪರಾಧ.
ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರಿಗೆ ಇದೀಗ ಕಾನೂನಿನ ಸರಪಳಿ ಸುತ್ತಿಕೊಂಡಿದೆ. ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ ಆರೋಪದ ಮೇರೆಗೆ ಶ್ರೀರಾಮುಲು ವಿರುದ್ಧ ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಸಂತ್ರಸ್ತೆಯ ಗುರುತು ಬಹಿರಂಗಪಡಿಸಬಾರದು ಎಂಬ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಹಾಗೂ ಪೋಕ್ಸೋ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಜನವರಿ 17 ರಂದು ಬಳ್ಳಾರಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಶ್ರೀರಾಮುಲು ಅವರು ಅತ್ಯಾಚಾರಕ್ಕೊಳಗಾದ ಬಾಲಕಿಯ ಪ್ರಸ್ತಾಪ ಮಾಡಿದ್ದರು. ಭಾಷಣದ ವೇಳೆ ಆವೇಶದಲ್ಲಿ ಸಂತ್ರಸ್ತೆಯ ಹೆಸರು ಮತ್ತು ವಿವರಗಳನ್ನು ವೇದಿಕೆಯ ಮೇಲೆಯೇ ಬಹಿರಂಗಪಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಕಾನೂನು ಹೇಳುವುದೇನು?
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರ ಅಥವಾ ಮಹಿಳೆಯರ ಹೆಸರು, ವಿಳಾಸ ಅಥವಾ ಅವರನ್ನು ಗುರುತಿಸಬಹುದಾದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದು ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅಡಿ ಅಪರಾಧ. ಸಂತ್ರಸ್ತೆಯ ಗೌಪ್ಯತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದ್ದು, ಇದನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ ಎಂದು ಕಾನೂನು ಹೇಳುತ್ತದೆ.
ಈ ನಿಯಮವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಬಳ್ಳಾರಿ ಮಹಿಳಾ ಠಾಣೆಯ ಪೊಲೀಸರು ಶ್ರೀರಾಮುಲು ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮಾಜಿ ಸಚಿವರ ನಡೆಗೆ ಸಾರ್ವಜನಿಕ ವಲಯದಲ್ಲೂ ಆಕ್ಷೇಪ ವ್ಯಕ್ತವಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಗಳು ಹೇಗೆ ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.

