
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಕೈದಿಗಳ ಮೋಜು ಮಸ್ತಿ| ಪರಪ್ಪ ಅಗ್ರಹಾರದ ನಾಲ್ವರು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲು
ಜೈಲಿನ ಕೊಠಡಿಯೊಳಗೆ ಕೆಲ ವಿಚಾರಣಾಧೀನ ಕೈದಿಗಳು ಮದ್ಯ ಸೇವಿಸಿ ನೃತ್ಯ ಮಾಡುತ್ತಿರುವ ವಿಡಿಯೊ ಇತ್ತೀಚೆಗೆ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜೈಲಿನ ಕೊಠಡಿಯೊಳಗೆ ಕೆಲವು ವಿಚಾರಣಾಧೀನ ಕೈದಿಗಳು ಮದ್ಯ ಸೇವಿಸಿ ನೃತ್ಯ ಮಾಡುತ್ತಿರುವ ವಿಡಿಯೊ ಇತ್ತೀಚೆಗೆ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ಕಂಡು ಬಂದಿರುವ ನಾಲ್ವರು ಕೈದಿಗಳಾದ ಕಾರ್ತಿಕ್ ಅಲಿಯಾಸ್ ಚಿಟ್ಟೆ, ಧನಂಜಯ್, ಮಂಜುನಾಥ್ ಮತ್ತು ಬಿ. ಚರಣ್ ರಾವ್ ವಿರುದ್ಧ ಜೈಲು ನಿಯಮಾವಳಿ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆ ಮತ್ತು ಇತರೆ ವಿಡಿಯೊಗಳಲ್ಲಿ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಮತ್ತು ಸರಣಿ ಕೊಲೆ ಅಪರಾಧಿ ಉಮೇಶ್ ರೆಡ್ಡಿ ಸೇರಿದಂತೆ ಹಲವು ಹೈಪ್ರೊಫೈಲ್ ಕೈದಿಗಳು ಮೊಬೈಲ್ ಬಳಸುತ್ತಿರುವುದು ಮತ್ತು ಟಿ.ವಿ. ವೀಕ್ಷಣೆ ಮಾಡುತ್ತಿರುವುದು ಬಹಿರಂಗಗೊಂಡ ನಂತರ ಜೈಲು ಆಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಉನ್ನತ ಮಟ್ಟದ ಸಭೆ ನಡೆಸಿ, ಜೈಲು ಅಧೀಕ್ಷಕ ಇಮಾಮ್‌ಸಾಬ್ ಮ್ಯಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಅಮಾನತು ಮಾಡಿದ್ದರು. ಮುಖ್ಯ ಅಧೀಕ್ಷಕರನ್ನು ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ತನಿಖೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಕೆಲ ವಿಡಿಯೊಗಳು ಹಳೆಯವು ಎಂದು ಗೃಹ ಸಚಿವರು ತಿಳಿಸಿದ್ದಾರೆ. ಜೈಲಿನಲ್ಲಿನ ಅಕ್ರಮಗಳ ಬಗ್ಗೆ ಆಂತರಿಕ ತನಿಖೆ ಮುಂದುವರೆದಿದೆ.

