ನೀಟ್ ಪರೀಕ್ಷೆಯಲ್ಲೂ ಜನಿವಾರ ತೆರವು; ಇಬ್ಬರು ಸಿಬ್ಬಂದಿ ವಿರುದ್ಧ ಎಫ್‌ಐಆರ್‌
x

ನೀಟ್ ಪರೀಕ್ಷೆಯಲ್ಲೂ ಜನಿವಾರ ತೆರವು; ಇಬ್ಬರು ಸಿಬ್ಬಂದಿ ವಿರುದ್ಧ ಎಫ್‌ಐಆರ್‌

ಜನಿವಾರ ತೆಗೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಪರೀಕ್ಷಾ ಸಿಬ್ಬಂದಿ ಶರಣಗೌಡ ಮತ್ತು ಗಣೇಶ್ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ.


ಕಲಬುರಗಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET) ಯಲ್ಲಿ ಮತ್ತೆ ವಿದ್ಯಾರ್ಥಿಯೊಬ್ಬರ ಜನಿವಾರ ತೆಗೆಸಿದ ಪ್ರಸಂಗ ನಡೆದಿದ್ದು, ಇಬ್ಬರು ಪರೀಕ್ಷಾ ಸಿಬ್ಬಂದಿಗಳ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಕಲಬುರಗಿಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ ಶ್ರೀಪಾದ್ ಅವರ ಜನಿವಾರವನ್ನು ಅಧಿಕಾರಿಗಳು ತೆಗೆಸಿದ್ದರು. ವಿದ್ಯಾರ್ಥಿ ತನ್ನ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದ. ಈ ವಿಷಯ ತಿಳಿದ ಬ್ರಾಹ್ಮಣ ಸಮಾಜದ ಮುಖಂಡರು ಪರೀಕ್ಷಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಯ ಜನಿವಾರ ತೆಗೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಬಳಿಕ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರದ ಮುಂದೆಯೇ ಶಾಸ್ತ್ರೋಕ್ತವಾಗಿ ಜನಿವಾರ ದಾರಣೆ ಮಾಡಲಾಯಿತು. ಘಟನೆಗೆ ಸಂಬಂಧಿಸಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಪರೀಕ್ಷಾ ಸಿಬ್ಬಂದಿಗಳಾದ ಶರಣಗೌಡ ಮತ್ತು ಗಣೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

381 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ

ದೇಶದಲ್ಲಿ ಏಕಕಾಲಕ್ಕೆ ನಡೆದ ಈ ಪರೀಕ್ಷೆಗಾಗಿ ರಾಜ್ಯದಲ್ಲಿ 381 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಒಟ್ಟು 1.49 ಲಕ್ಷ ವಿದ್ಯಾರ್ಥಿಗಳು ನೀಟ್​ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.

ಕೆಲ ದಿನಗಳ ಹಿಂದೆ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಹಾಜರಾಗಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆದು ಪರೀಕ್ಷೆ ಬರೆಯುವಂತೆ ಸಿಬ್ಬಂದಿ ಸೂಚಿಸಿದ್ದರು. ಆದರೆ, ಆತ ಜನಿವಾರ ತೆಗೆಯಲು ನಿರಾಕರಿಸಿ ಪರೀಕ್ಷೆಯನ್ನೇ ಬರೆದಿರಲಿಲ್ಲ. ಅದೇ ರೀತಿ ಶಿವಮೊಗ್ಗದ ಆದಿಚುಂಚನಗಿರಿ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಮೂವರು ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿ ಪರೀಕ್ಷೆ ಬರೆಸಿದ್ದರು. ಈ ಎರಡೂ ಪ್ರಕರಣಗಳು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದವು.

Read More
Next Story