ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ | ಬಿಜೆಪಿ ದೂರು: ಪ್ರಿಯಾಂಕ್‌ ಖರ್ಗೆ ಆಪ್ತ ರಾಜು ಕಪನೂರ ವಿರುದ್ಧ ಎಫ್‌ಐಆರ್‌
x
ಗುತ್ತಿಗೆದಾರ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ರಾಜು ಕಪನೂರ

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ | ಬಿಜೆಪಿ ದೂರು: ಪ್ರಿಯಾಂಕ್‌ ಖರ್ಗೆ ಆಪ್ತ ರಾಜು ಕಪನೂರ ವಿರುದ್ಧ ಎಫ್‌ಐಆರ್‌

ಬಿಜೆಪಿ ನಾಯಕರ ದೂರಿನ ಅನ್ವಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರಾದ ರಾಜು ಕಪನೂರ ಮತ್ತು ಆತನ ಆರು ಮಂದಿ ಸಹಚರರ ವಿರುದ್ಧ ಕಲಬುರಗಿಯ ಸ್ಟೇಷನ್‌ ಬಜಾರ್ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.


ಬೀದರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಲ್(26) ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಬಿಜೆಪಿ ಮುಖಂಡರ ಕೊಲೆಗೂ ಸಂಚು ನಡೆದಿರುವ ಉಲ್ಲೇಖ ಕುರಿತಂತೆ ಬಿಜೆಪಿ ನಾಯಕರು ನೀಡಿದ ದೂರಿಗೆ ಕೊನೆಗೂ ಪೊಲೀಸರು ಮಣಿದಿದ್ದಾರೆ.

ಬಿಜೆಪಿ ನಾಯಕರ ದೂರಿನ ಅನ್ವಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರಾದ ರಾಜು ಕಪನೂರ ಮತ್ತು ಆತನ ಆರು ಮಂದಿ ಸಹಚರರ ವಿರುದ್ಧ ಕಲಬುರಗಿಯ ಸ್ಟೇಷನ್‌ ಬಜಾರ್ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಬಿಜೆಪಿ ಶಾಸಕ ಹಾಗೂ ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ನಡೆಸಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ದೂರು ನೀಡಿದ್ದರು. ಆದರೆ, ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದರು. ಪೊಲೀಸರು ಧೋರಣೆ ಖಂಡಿಸಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಬೆಳಿಗ್ಗೆ ಪೊಲೀಸ್‌ ಠಾಣೆ ಎದುರು ಪ್ರತಿಭಟಿಸಿದ್ದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ನಾಯಕರ ಮಧ್ಯೆ ವಾಗ್ವಾದವೂ ನಡೆಯಿತು.

ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಬಿಜೆಪಿ ನಾಯಕರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ ವಿಚಲಿತರಾದ ಪೊಲೀಸರು ಕೊನೆಗೂ ರಾಜು ಕಪನೂರ ಹಾಗೂ ತಂಡದವರ ಮೇಲೆ ಪ್ರಕರಣ ದಾಖಲಿಸಿದರು.

ಆರೋಪಿತರಾದ ರಾಜು ಕಪನೂರ, ನಂದಕುಮಾರ್ ನಾಗಭುಜಂಗೆ ಸೇರಿದಂತೆ ಆರು ಜನರ ವಿರುದ್ಧ ಬಿಎನ್ಎಸ್ ಸೆಕ್ಷನ್ 351 (2) ಅಡಿ ಪ್ರಕರಣ ದಾಖಲಾಗಿದೆ.

ಉನ್ನತ ಮಟ್ಟದ ತನಿಖೆಗೆ ಆಗ್ರಹ

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈ ಬಿಟ್ಟು, ಬಂಧಿಸುವಂತೆ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಗುತ್ತಿಗೆದಾರ ಬರೆದಿರುವ ಡೆತ್‌ನೋಟ್‌ನಲ್ಲಿ ಬಿಜೆಪಿ ಮುಖಂಡರ ಹತ್ಯೆಗೂ ಸಂಚು ರೂಪಿಸಿರುವ ಪ್ರಸ್ತಾಪವಿದೆ. ಕಲಬುರಗಿಯಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಪ್ರಿಯಾಂಕ್‌ ಖರ್ಗೆ ಹೇಳಿದಂತೆ ಪೊಲೀಸರು ಕೇಳುತ್ತಿದ್ದು, ರಿಪಬ್ಲಿಕ್‌ ಆಫ್‌ ಕಲಬುರಗಿ ಆಗಿದೆ. ಸಚಿವರು ತಮ್ಮ ಸಹಚರರ ಮೂಲಕ ಮರಳು ದಂಧೆ, ಟೈಲ್ಸ್, ಸಿಮೆಂಟ್ ಫ್ಯಾಕ್ಟರಿ ಸೇರಿದಂತೆ ಎಲ್ಲಾ ರೀತಿಯ ದಂಧೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಯುವ ಗುತ್ತಿಗೆದಾರ ಸಚಿನ್ ಮಾನಪ್ಪ ಪಂಚಾಲ್ ಗುರುವಾರ ಏಳು ಪುಟಗಳ ಡೆತ್‌ನೋಟ್ ಬರೆದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್‌ನಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್, ಆಂದೋಲ ಸ್ವಾಮಿ, ಚಂದು ಪಾಟೀಲ್, ಮಣಿಕಂಠ ಸೇರಿದಂತೆ ನಾಲ್ಕು ಜನರ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ಉಲ್ಲೇಖವಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ನಾಯಕರು ರಾಜು ಕಪನೂರ ಹಾಗೂ ಗ್ಯಾಂಗ್ ವಿರುದ್ಧ ದೂರು ನೀಡಿದ್ದರು. ಈ ಹಿಂದೆ ಆರೋಪಿ ರಾಜು ಕಪನೂರ ಸ್ವದೇಶಿ ನಿರ್ಮಿತ ಪಿಸ್ತೂಲ್ ಹಾಗೂ 30 ಗುಂಡುಗಳನ್ನು ಖರೀದಿ ಮಾಡಿದ್ದ ಪ್ರಕರಣದಲ್ಲೂ ಬಂಧನಕ್ಕೆ ಒಳಗಾಗಿದ್ದರು. ಈಗ ಗುತ್ತಿಗೆದಾರನಿಗೆ ಬೆದರಿಕೆ ಹಾಕಿ ಆತ್ಮಹತ್ಯೆಗೆ ಕಾರಣರಾಗಿದ್ದಾರೆ. ಕೂಡಲೇ ರಾಜು ಕಪನೂರ ಹಾಗೂ ಆತನ ಸಹಚರರನ್ನು ಬಂಧಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಈ ಮಧ್ಯೆ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಸಂಬಂಧ ಬೀದರ್ನ ಧನ್ನೋರ ಪೊಲೀಸ್ ಠಾಣೆಯಲ್ಲೂ ಗುತ್ತಿಗೆದಾರ ಸಚಿವ ಸೋದರಿ ಸವಿತಾ ನೀಡಿರುವ ದೂರಿನ ಮೇರೆಗೆ ರಾಜು ಕಪನೂರ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

Read More
Next Story