ಅಜ್ಞಾತ ಸ್ಥಳದಿಂದ ಪ್ರಜ್ವಲ್ ವಿಡಿಯೋ ಬಿಡುಗಡೆ; ನೈಜತೆ ಬಗ್ಗೆ ಪೊಲೀಸ್ ತನಿಖೆ
ಲೈಂಗಿಕ ಹಗರಣದಲ್ಲಿ ಭಾಗಿಯಾಗಿ ದೇಶ ಬಿಟ್ಟು ಪರಾರಿಯಾಗಿದ್ದ ಅರೋಪಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಒಂದು ತಿಂಗಳ ಬಳಿಕ ಅಜ್ಞಾತ ಸ್ಥಳದಿಂದ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ಮೇ 31 (ಶುಕ್ರವಾರ) ಬೆಂಗಳೂರಿಗೆ ಬಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ ಹಾಜರಾಗುವುದಾಗಿ ಹೇಳಿಕೆ ನೀಡಿದ್ದಾರೆ.
ತಂದೆ, ತಾಯಿ ಹಾಗೂ ತಾತನ ಬಳಿ ನಾನು ಕ್ಷಮೆ ಕೇಳುತ್ತೇನೆ. ನಮ್ಮ ಕುಮಾರಣ್ಣ, ನಾಡಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಕ್ಷಮೆ ಕೇಳಿದ್ದಾರೆ.
ಹಗರಣ ನಡೆದ ಒಂದು ತಿಂಗಳ ನಂತರ, ಅವರು ಸಾಮಾಜಿಕ ಮಾಧ್ಯಮದ ಮೂಲಕ ಈ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಅವರು ಎಲ್ಲಿ, ಯಾವ ದೇಶದಲ್ಲಿ ಆಶ್ರಯ ಪಡೆದಿದ್ದಾರೆ ಎಂಬುದರ ಕುರಿತು ಹಾಗೂ ಹಗರಣದ ಬಗ್ಗೆ ವಿವರವಾಗಿ ಪ್ರತಿಕ್ರಿಯಿಸಲಿಲ್ಲ. ಮೇ 30 ರಂದು ಜನಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ʼಹೋರಾಟದ ನಡಿಗೆ, ಹಾಸನದ ಕಡೆಗೆʼ ಎಂಬ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದು, ಸಾವಿರಾರು ಮಂದಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಮತ್ತು ಸಂತ್ರಸ್ತೆಯರಿಗೆ ಧೈರ್ಯ ತುಂಬಲು ಹಾಸನದಲ್ಲಿ ಸಭೆ ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮರುದಿನ ಅಂದರೆ ಮೇ 31 ರಂದು ಎಸ್‌ಐಟಿ ಮುಂದೆ ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ. ಪ್ರಜ್ವಲ್ ಅವರ ತಾತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಚಿಕ್ಕಪ್ಪ ಎಚ್.ಡಿ. ಕುಮಾರಸ್ವಾಮಿ ಅವರೂ ಪ್ರಜ್ವಲ್‌ಗೆ ಪ್ರತ್ಯೇಕವಾಗಿ ಮನವಿ ಮಾಡಿ ಬೆಂಗಳೂರಿಗೆ ಹಿಂದಿರಿಗಿ ತನಿಖೆಗೆ ಹಾಜರಾಗಲು ತಿಳಿಸಿದ್ದರು. ದೇವೇಗೌಡರಂತೂ ತನ್ನ ಅಂತಿಮ ಎಚ್ಚರಿಕೆ ಎಂದು ಹೇಳಿಕೆ ನೀಡಿದ್ದರು.
ಪೊಲೀಸರ ಶಂಕೆ
ಆದಾಗ್ಯೂ, ವೀಡಿಯೊ ಮತ್ತು ಅದರ ಸತ್ಯಾಸತ್ಯತೆಯ ಬಗ್ಗೆ ಎಸ್‌ಐಟಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅದು ನಕಲಿಯಾಗಿರಬಹುದು ಮತ್ತು ಫೊರೆನ್ಸಿಕ್ ತಂಡವು ಅದನ್ನು ಪರಿಶೀಲಿಸಲಿದೆ ಎಂದು ತಿಳಿಸಿದ್ದಾರೆ. "ಈ ವೀಡಿಯೊ ಪ್ರಜ್ವಲ್ ಅವರದೇ ಅಥವಾ ಅವರದೇ ದನಿಯೇ ಎನ್ನುವುದನ್ನು ಪತ್ತೆ ಮಾಡಬೇಕಿದೆ. ಮೇ 31 ರಂದು ಅವರು ಹಿಂದಿರುಗುವುದು ಇನ್ನೂ ಅನುಮಾನವಾಗಿದೆ. ವೀಡಿಯೊದ ಮೊದಲ ಭಾಗದಲ್ಲಿ, ಅವರು, ವಿದೇಶಿ ಪ್ರವಾಸವು ಪೂರ್ವ ಯೋಜಿತವಾಗಿತ್ತು ಮತ್ತು ಈ ವಿಷಯದ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಅವರ ಚಾಲಕ ಕಾರ್ತಿಕ್ ವಿರುದ್ಧ ಸ್ವತಃ ಪ್ರಕರಣ ದಾಖಲಿಸಿರುವ ಅವರಿಗೆ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ನಂಬಲಸಾಧ್ಯ”ಎಂದು ಅಧಿಕಾರಿ ಹೇಳಿದ್ದಾರೆ.
"ಅವರು ವೀಡಿಯೊದಲ್ಲಿ ಹಣೆಯ ಮೇಲೆ ಸಿಂಧೂರವನ್ನು ಧರಿಸಿದ್ದಾರೆ, ಅದರ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ್ದಾರೆ. ಅವರು ಎಂದಿಗೂ ಲೈಂಗಿಕ ಹಗರಣದ ವಿಡಿಯೋಗಳ ನೈಜತೆ ಬಗ್ಗೆ ಹೇಳಿಕೆ ನೀಡಿಲ್ಲ. ಅವರ ತಂದೆ ಎಚ್.ಡಿ. ರೇವಣ್ಣ ಅವರ ಮೇಲಿದ್ದ ಅಪಹರಣ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬರ ವಿಡಿಯೋ ಕೂಡಾ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿತ್ತು. ಹಾಗಾಗಿ ಗಮನವನ್ನು ಬೇರೆಡೆಗೆ ಸೆಳೆಯಲು ಸಾಮಾಜಿಕ ಮಾಧ್ಯಮಗಳ ಮೂಲಕ ರೆಕಾರ್ಡ್ ಮಾಡಿ ಕಳುಹಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಆ ವಿಡಿಯೋ ನಿಜವೇ ಆಗಿದ್ದರೆ ಮತ್ತು ಪ್ರಜ್ವಲ್ ತನಿಖೆಗೆ ಹಾಜರಾದರೆ ಪ್ರಕರಣದ ತನಿಖೆ ದೃಷ್ಟಿಯಲ್ಲಿ ಒಳ್ಳೆಯದೇ" ಎಂದು ಅಧಿಕಾರಿ ಹೇಳಿದ್ದಾರೆ.
ವಿಡಿಯೋದಲ್ಲಿರುವ ಪ್ರಜ್ವಲ್ ಹೇಳಿಕೆಯ ಪೂರ್ಣಪಾಠ ಇಲ್ಲಿದೆ
"ಎಲ್ಲರಿಗೂ ನಮಸ್ಕಾರ. ತಂದೆ, ತಾಯಿ ಹಾಗೂ ತಾತನ ಬಳಿ ನಾನು ಕ್ಷಮೆ ಕೇಳುತ್ತೇನೆ. ನಮ್ಮ ಕುಮಾರಣ್ಣ, ನಾಡಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ. ನಾನು ವಿದೇಶದಲ್ಲಿ ಎಲ್ಲಿರುವುದಾಗಿ ಸರಿಯಾದ ಮಾಹಿತಿ ನೀಡುವುದಕ್ಕೆ ಬಂದಿದ್ದೇನೆ. ಏಪ್ರಿಲ್ ೨೬ ರಾತ್ರಿ ಚುನಾವಣೆ ನಡೆಯುವ ಸಂದರ್ಭದಲ್ಲಿ ನನ್ನ ಮೇಲೆ ಯಾವುದೇ ರೀತಿಯ ದೂರು ದಾಖಲಾಗಿರಲಿಲ್ಲ. ಎಸ್ಐಟಿ ಕೂಡಾ ರಚನೆಯಾಗಿರಲಿಲ್ಲ. ಏಪ್ರಿಲ್ ೨೬ರಂದು ವಿದೇಶಕ್ಕೆ ಹೋಗುವ ನಿರ್ಧಾರ ಈ ಹಿಂದೆಯೇ (ಪ್ರೀ ಪ್ಲಾನ್) ಮಾಡಲಾಗಿತ್ತು. ಹಾಗಾಗಿ ನಾನು ವಿದೇಶಕ್ಕೆ ಹೊರಟೆ."
"ಹೊರಟ ಮೇಲೆ ಮೂರ್ನಾಲ್ಕು ದಿನಗಳ ನಂತರ ಯೂಟ್ಯೂಬ್ ನೋಡುವ ಸಂದರ್ಭದಲ್ಲಿ ಈ ಮಾಹಿತಿ ದೊರೆಯಿತು. ಎಸ್‌ಐಟಿ ಕೂಡಾ ನೊಟೀಸ್ ಕೊಟ್ಟಿತು. ಬಳಿಕ ನನ್ನ ಲಾಯರ್ ಮೂಲಕ ಏಳು ದಿನ ಕಾಲಾವಕಾಶ ಕೇಳಿದೆ. ಮಾರನೇ ದಿನ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಾಹುಲ್ ಗಾಂಧಿ ಅವರು ಮತ್ತು ಎಲ್ಲ ಹಿರಿಯ ನಾಯಕರು ಬಹಿರಂಗ ಸಭೆಗಳಲ್ಲಿ ಈ ವಿಚಾರ ಚರ್ಚೆ ಮಾಡಲು ಶುರು ಮಾಡಲು ಆರಂಭಿಸದರು. ಈ ಮೂಲಕ ಪಿತೂರಿ ಮಾಡಿದ್ದಾರೆ."
"ಇವೆಲ್ಲವನ್ನೂ ನೋಡಿದ ಬಳಿಕ ನಾನು ಖಿನ್ನತೆ (ಡಿಪ್ರೆಷನ್)ಗೆ ಒಳಗಾಗಿ ಏಕಾಂತ (ಐಸೋಲೇಷನ್)ಕ್ಕೆ ಹೋಗುವಂತಾಯಿತು. ಹಾಗಾಗಿ ನಾನು ನಿಮ್ಮೆಲ್ಲರ ಬಳಿ ಕ್ಷಮೆ ಕೋರುತ್ತೇನೆ. ಕ್ಷಮಿಸಬೇಕು. ಹಾಸನದಲ್ಲೂ ಕೆಲವು ಶಕ್ತಿಗಳು ಒಟ್ಟಿಗೆ ಸೇರಿಕೊಂಡು ಇವತ್ತು ನನ್ನ ಮೇಲೆ ರಾಜಕೀಯ ಪಿತೂರಿ ಮಾಡುವ ಕೆಲಸ ಮಾಡಿವೆ. ರಾಜಕೀಯವಾಗಿ ನಾನು ಬೆಳೆಯುತ್ತಿದ್ದುದನ್ನು ಮುಗಿಸಬೇಕೆಂದು ಅವರೆಲ್ಲರೂ ಭಾಗಿಯಾಗಿದ್ದಾರೆ. ಇವೆಲ್ಲವನ್ನೂ ನೋಡಿದ ಸಂದರ್ಭದಲ್ಲಿ ಆಘಾತಕ್ಕೀಡಾಗಿ ನಾನು ದೂರ ಉಳಿಯಲು ತೀರ್ಮಾನ ಮಾಡಿದೆ. ಹಾಗಾಗಿ ಯಾರೂ ಈ ಬಗ್ಗೆ ತಪ್ಪು ತಿಳಿಯಬಾರದು."
"ನಾನೇ ಖುದ್ದಾಗಿ ಶುಕ್ರವಾರ 31ಕ್ಕೆ ತಾರೀಕಿನಂದು ಬೆಳಿಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ಬಂದು ನಾನು ಸಂಪೂರ್ಣ ತನಿಖೆಗೆ ಸಹಕಾರ ನೀಡುವ ಮೂಲಕ ನಾನು ಸರಿಯಾದ ರೀತಿಯಲ್ಲಿ ಉತ್ತರ ಕೊಡಲು ನಿರ್ಧರಿಸಿದ್ದೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿ ನಾನು ಈ ಸುಳ್ಳಿನ ಪ್ರಕರಣಗಳಿಂದ ಆಚೆ ಬರುವ ಕೆಲಸವನ್ನು ನ್ಯಾಯಾಲಯದ ಮೂಲಕ ಮಾಡಿಕೊಳ್ಳುತ್ತೇನೆ ಎನ್ನುವ ನಂಬಿಕೆ ನನ್ನದು. ದೇವರ ಆಶೀರ್ವಾದ, ಕುಟುಂಬದ ಆಶೀರ್ವಾದ ಹಾಗೂ ಜನರ ಆಶೀರ್ವಾದ ನನ್ನ ಮೇಲಿರಲಿ. ಖಂಡಿತವಾಗಿಯೂ ಎಸ್‌ಐಟಿ ಮುಂದೆ ಬಂದು ಎಲ್ಲಕ್ಕೂ ತೆರೆ ಎಳೆಯುವ ಕೆಲಸ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ ಕೋರಿಕೊಳುತ್ತಿದ್ದೇನೆ. "
"ಲೋಕಸಭಾ ಚುನಾವಣೆ ಹೊತ್ಲ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಿಂದ ಮೈತ್ರಿ ನಾಯಕರು ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬ ತೀವ್ರ ಮುಜುಗರವನ್ನ ಅನುಭವಿಸ್ದು, ತಾತಾ ಕೊಟ್ಟ ಎಚ್ಚರಿಕೆ ಬಳಿಕ ಮಂಡ್ಯ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಸ್ ಆಗುವ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ."