ಪ್ರಜ್ವಲ್ ವಿರುದ್ಧ ಮತ್ತೊಂದು ದೂರು: ಧೈರ್ಯವಾಗಿ ಮುಂದೆ ಬನ್ನಿ ಎಂದು ಮಹಿಳೆಯರಿಗೆ ಗೃಹ ಸಚಿವ ಪರಮೇಶ್ವರ್ ಕರೆ
ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಬೆದರಿಕೆಯೊಡ್ಡಿರುವ ಆರೋಪದಡಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಗುರುವಾರ ಮತ್ತೊಂದು ದೂರು ದಾಖಲಾಗಿದೆ.
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ʻʻಪ್ರಜ್ವಲ್ ವಿರುದ್ಧ ಮತ್ತೊಬ್ಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹೊಸ ದೂರಿನ ತನಿಖೆಯನ್ನೂ ಎಸ್ ಐಟಿ ಕೈಗೆತ್ತಿಕೊಂಡಿದೆ. ಇದು ಎರಡನೇ ದೂರು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರು ಧೈರ್ಯವಾಗಿ ಬಂದು ದೂರು ನೀಡಬಹುದು. ಸಂತ್ರಸ್ತ ಮಹಿಳೆಯರಿಗೆ ಸರ್ಕಾರ ಎಲ್ಲ ರೀತಿಯ ಭದ್ರತೆ ನೀಡಲಿದೆʼʼ ಎಂದು ತಿಳಿಸಿದರು.
ಮನೆ ಕೆಲಸದ ಮಹಿಳೆ ಹಾಗೂ ಅವರ ಮಗಳ ವಿಷಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣದಡಿ ಶಾಸಕ ಹೆಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಅದೇ ದೂರಿನ ಮೇಲೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ನಡುವೆ ಪ್ರಜ್ವಲ್ ವಿರುದ್ಧ ಮತ್ತೊಬ್ಬ ಮಹಿಳೆ ದೂರು ನೀಡಿದ್ದಾರೆ. ಈ ದೂರಿನ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿದೆ.
ಈ ನಡುವೆ, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ, ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಗುರುವಾರ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.